ನವದೆಹಲಿ: ವಿರಾಟ್ ಕೊಹ್ಲಿ ಟಿ20 ನಾಯಕತ್ವ ತ್ಯಜಿಸಿದ್ದು, ವಿರಾಟ್ ಕೊಹ್ಲಿ ಅವರಿಂದ ಓಡಿಐ ನಾಯಕತ್ವ ಕಸಿದುಕೊಂಡಿದ್ದು ಇದು ಟೀಮ್ ಇಂಡಿಯಾದ ವಾತಾವರಣವನ್ನು ರಾಡಿಗೊಳಿಸಿದೆ. ಯಾರದ್ದೋ ವೈಯಕ್ತಿಕ ಪ್ರತಿಷ್ಠೆಗೆ ಭಾರತದ ಕ್ರಿಕೆಟ್ ನಲುಗುತ್ತಿರುವಂತೆ ತೋರುತ್ತಿದೆ. ವಿರಾಟ್ ಕೊಹ್ಲಿ ಮೊನ್ನೆ ಪತ್ರಿಕಾಗೋಷ್ಠಿ ನಡೆಸಿ ತಮಗೆ ಸಂಬಂಧಿಸಿದ ವಿದ್ಯಮಾನಗಳ ಬಗ್ಗೆ ನೇರವಾಗಿ ಮಾತನಾಡಿದ್ದರು. ತಾನು ಟಿ20 ತಂಡದ ನಾಯಕತ್ವ ಬಿಟ್ಟುಕೊಡುವ ನಿರ್ಧಾರ ಕೈಗೊಂಡಾಗ ಯಾರೂ ಬೇಡ ಎನ್ನಲಿಲ್ಲ. ಓಡಿಐ ನಾಯಕತ್ವ ಕಿತ್ತುಹಾಕುವ ಒಂದೂವರೆ ಗಂಟೆ ಮುಂಚೆಯಷ್ಟೇ ನನಗೆ ಮಾಹಿತಿ ನೀಡಲಾಗಿತ್ತು ಎಂಬೆರಡು ಸ್ಫೋಟಕ ಸಂಗತಿಗಳನ್ನ ಹೊರಗೆಡವಿದ್ದರು. ಸ್ಫೋಟಕ ಸಂಗತಿ ಯಾಕೆಂದರೆ, ಕೆಲ ದಿನಗಳ ಹಿಂದಷ್ಟೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವ್ಯತಿರಿಕ್ತ ಹೇಳಿಕೆ ನೀಡಿದ್ದರು. ವಿರಾಟ್ ಕೊಹ್ಲಿ ಅವರ ಹಠಮಾರಿತನವೇ ಕಾರಣ ಎಂಬಂತೆ ಗಂಗೂಲಿ ಅವರ ಹೇಳಿಕೆ ಬಿಂಬಿಸಿತ್ತು.
ವಿರಾಟ್ ಕೊಹ್ಲಿ ಟಿ20 ನಾಯಕ ಸ್ಥಾನವನ್ನ ಬಿಟ್ಟುಕೊಡುವ ನಿರ್ಧಾರಕ್ಕೆ ಬಂದಾಗ ತಾನೇ ವೈಯಕ್ತಿಕವಾಗಿ ಕೊಹ್ಲಿ ಜೊತೆ ಮಾತನಾಡಿ ಆ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಹೇಳಿದ್ದೆ. ಆದರೂ ಅವರು ಕೇಳಿರಲಿಲ್ಲ. ಅದಾದ ಬಳಿಕ ಓಡಿಐ ಮತ್ತು ಟಿ20 ಎರಡಕ್ಕೆ ಇಬ್ಬಿಬ್ಬರು ನಾಯಕರಿರುವುದು ತರವಲ್ಲ, ಒಬ್ಬರೇ ನಾಯಕರಿರಬೇಕು ಎಂಬ ತೀರ್ಮಾನಕ್ಕೆ ಬಿಸಿಸಿಐ ಬಂದಿತು. ಓಡಿಐ ತಂಡದ ನಾಯಕತ್ವ ಬಿಟ್ಟುಕೊಡಬೇಕೆಂದು ಕೊಹ್ಲಿಗೆ ತಿಳಿಸಲಾಗಿತ್ತು. ಆದರೂ ಅವರು ಬಿಟ್ಟುಕೊಟ್ಟಿರಲಿಲ್ಲ ಎಂದು ಸೌರವ್ ಗಂಗೂಲಿ ಹೇಳಿದ್ದರು. ಆದರೆ, ಮೊನ್ನೆ ಪತ್ರಿಕಾಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಸುನೀಲ್ ಗವಾಸ್ಕರ್ ಬೇಸರ:
ಇದು ಸುಮ್ಮನೆ ವಿವಾದವಾಗಿದೆ. ಬಿಸಿಸಿಐ ಸರಿಯಾದ ರೀತಿಯಲ್ಲಿ ಸಂವಹನ ನಡೆಸಿ ಎಲ್ಲಾ ಅನುಮಾನಗಳನ್ನ ಬಗೆಹರಿಸಬೇಕು ಎಂದು ಗವಾಸ್ಕರ್ ಒತ್ತಾಯಿಸಿದ್ಧಾರೆ.
ಇದನ್ನೂ ಓದಿ: ವಿರಾಟ್ ಕೊಹ್ಲಿ ನೀಡಿದ್ದ ಆವತ್ತಿನ ಒಂದು ಹೇಳಿಕೆ ಯಡವಟ್ಟಾಗಿರಬಹುದು: ಗವಾಸ್ಕರ್
“ವಿರಾಟ್ ಕೊಹ್ಲಿ ನೀಡಿರುವ ಹೇಳಿಕೆಯಲ್ಲಿ ಬಿಸಿಸಿಐ ಬರುವುದಿಲ್ಲ. ಕೊಹ್ಲಿಗೆ ಸಂದೇಶ ರವಾನಿಸಿದ್ದೆ ಎಂದು ಒಬ್ಬ ವ್ಯಕ್ತಿ ಹೇಳಿದ್ದು ಕೇಂದ್ರಬಿಂದುವಾಗಿದೆ. ಆ ವ್ಯಕ್ತಿಯಾದ ಸೌರವ್ ಗಂಗೂಲಿ ಅವರೇ ಇದಕ್ಕೆ ಸ್ಪಷ್ಟೀಕರಣ ಕೊಡಬೇಕು. ಕೊಹ್ಲಿಗೆ ಅವರು ಏನು ಹೇಳಿದ್ದರು, ಅವರಿಗೆ ಕೊಹ್ಲಿ ಏನು ಹೇಳಿದ್ದರು ಎಂಬುದನ್ನ ಗಂಗೂಲಿ ಅವರೇ ತಿಳಿಸಬೇಕು” ಎಂದು ಗವಾಸ್ಕರ್ ಹೇಳಿದ್ದಾರೆ.
ಸೌರವ್ ಗಂಗೂಲಿ ಸ್ಪಷ್ಟನೆ:
ವಿರಾಟ್ ಕೊಹ್ಲಿ ಪತ್ರಿಕಾಗೋಷ್ಠಿ ಬಳಿಕ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇಂದು ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಈ ವಿಚಾರದ ಬಗ್ಗೆ ತಾನು ಪ್ರತಿಕ್ರಿಯೆ ಕೊಡುವುದಿಲ್ಲ. ಬಿಸಿಸಿಐ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.
“ನೋ ಕಮೆಂಟ್ಸ್. ಬಿಸಿಸಿಐ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದೆ. ನಾನು ಯಾವ ಪ್ರತಿಕ್ರಿಯೆಯನ್ನೂ ಕೊಡೋದಿಲ್ಲ ಎಂದು ಹೇಳುತ್ತಿದ್ದೇನೆ. ಈ ಸಮಯದಲ್ಲಿ ನಾನು ಏನನ್ನೂ ಹೇಳೊಲ್ಲ” ಎಂದು ಮಾಧ್ಯಮಗಳ ಪ್ರಶ್ನೆಗೆ ಸೌರವ್ ಗಂಗೂಲಿ ಈ ರೀತಿ ಉತ್ತರಿಸಿದ್ದಾರೆ.
ಕ್ಯಾಪ್ಟನ್ಸಿ ತೆಗೆದುಹಾಕಿದ್ದು ವಿವಾದಾಸ್ಪದವಲ್ಲ ಎಂದ ಗವಾಸ್ಕರ್:
ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ಅವರ ತದ್ವಿರುದ್ಧ ಹೇಳಿಕೆಗಳೇ ವಿವಾದ ಆಗಿರುವುದು ಹೊರತು ವಿರಾಟ್ ಕೊಹ್ಲಿಯನ್ನ ಓಡಿಐ ತಂಡದ ನಾಯಕಸ್ಥಾನದಿಂದ ತೆಗೆದುಹಾಕುವ ನಿರ್ಧಾರ ವಿವಾದಾಸ್ಪದವಲ್ಲ ಎಂದು ಸುನೀಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ರೋಹಿತ್ ಜೊತೆ ಮುನಿಸು ಇಲ್ಲ ಅಂತ ನಂಗೂ ಹೇಳಿ ಹೇಳಿ ಸಾಕಾಗಿದೆ: ವಿರಾಟ್ ಕೊಹ್ಲಿ
“ತಂಡದ ಆಯ್ಕೆ ವಿಚಾರದಲ್ಲಿ ಆಯ್ಕೆಗಾರರ ಸಮಿತಿಯ ಅಧ್ಯಕ್ಷರ ನಿರ್ಧಾರವೇ ಅಂತಿಮ. ನಾಯಕ ಇಲ್ಲಿ ನಾಮಕಾವಸ್ತೆ ಮಾತ್ರ. ಓಡಿಐ ಕ್ಯಾಪ್ಟನ್ಸಿ ನಿಮಗೆ ಇಲ್ಲ ಎಂದು ನಾಯಕನಿಗೆ ಆಯ್ಕೆಗಾರರು ಹೇಳಿದ್ದಾರೆ. ಕ್ಯಾಪ್ಟನ್ಗೆ ತಿಳಿಸಲಾಗಿದ್ದರೆ ಆ ನಿರ್ಧಾರದಲ್ಲಿ ಯಾವ ತಪ್ಪೂ ಇ ಲ್ಲ” ಎಂಬುದು ಸುನೀಲ್ ಗವಾಸ್ಕರ್ ಅನಿಸಿಕೆ.
ಹಾಗೆಯೇ, ನಾಯಕಸ್ಥಾನವನ್ನು ಯಾಕೆ ನೀಡಲಾಗಿದೆ, ಅಥವಾ ನಾಯಕಸ್ಥಾನವನ್ನು ಯಾಕೆ ಹಿಂಪಡೆಯಲಾಗಿದೆ ಎಂಬುದನ್ನು ಆಯ್ಕೆಗಾರರ ಸಮಿತಿ ಅಧ್ಯಕ್ಷರು ನಾಯಕನಿಗೆ ತಿಳಿಸಿದರೆ ಯಾವ ಅಪಾರ್ಥಕ್ಕೂ ಎಡೆಯಾಗದು. ಬಿಸಿಸಿಐ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡು ಶೀಘ್ರದಲ್ಲೇ ವಿವಾದಕ್ಕೆ ತೆರೆ ಎಳೆಯಬೇಕು ಎಂದು ಗವಾಸ್ಕರ್ ಒತ್ತಾಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ