ಸೌರವ್ ಗಂಗೂಲಿ ಜೀವನಾಧಾರಿತ ಕಥೆಯುಳ್ಳ ಸಿನಿಮಾವನ್ನು ಲವ್ ಫಿಲಂಸ್ ಸಂಸ್ಥೆ ನಿರ್ಮಿಸಲಿದೆ. ಈ ವಿಚಾರವನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರೇ ಖುದ್ದು ಇವತ್ತು ಬಹಿರಂಗಪಡಿಸಿದ್ದಾರೆ. ನನ್ನ ಕ್ರಿಕೆಟ್ ಯಾನದ ಬಯೋಪಿಕ್ ಅನ್ನು ಲವ್ ಫಿಲಂಸ್ ನಿರ್ಮಿಸುತ್ತಿರುವುದು ಖುಷಿಯಾಗಿದೆ ಎಂದು ಸೌರವ್ ಗಂಗೂಲಿ ಅವರು ಇಂದು ಮಧ್ಯಾಹ್ನ ಟ್ವೀಟ್ ಮಾಡಿದ್ದಾರೆ. “ಕ್ರಿಕೆಟ್ ನನ್ನ ಉಸಿರಾಗಿದೆ. ನಾನು ತಲೆ ಎತ್ತಿ ಮುನ್ನಡೆಯಲು ಬೇಕಾದ ಆತ್ಮವಿಶ್ವಾಸ ಮತ್ತು ಸಾಮರ್ಥ್ಯವನ್ನು ಕ್ರಿಕೆಟ್ ನನಗೆ ನೀಡಿದೆ. ಈ ಪ್ರಯಾಣ ಅವಿಸ್ಮರಣೀಯ… ನನ್ನ ಪ್ರಯಾಣದ ಮೇಲೆ ಸಿನಿಮಾ ತಯಾರಾಗುತ್ತಿದ್ದು ಲವ್ ಫಿಲಂಸ್ ನಿರ್ಮಾಣ ಮಾಡುತ್ತಿರುವುದು ಸಂತಸ ತಂದಿದೆ. ನನ್ನ ಜೀವನದ ಕಥೆ ಬೆಳ್ಳಿ ಪರದೆ ಮೇಲೆ ಜೀವತಳೆದು ಬರಲಿದೆ” ಎಂದು ಗಂಗೂಲಿ ಹರ್ಷ ವ್ಯಕ್ತಪಡಿಸಿದ್ದಾರೆ.
ತಮ್ಮ ಈ ಟ್ವೀಟ್ನಲ್ಲಿ ಅವರು ಪ್ರೊಡಕ್ಷನ್ ಕಂಪನಿಯಾದ ಲವ್ ಫಿಲಂಸ್ ಹಾಗೂ ನಿರ್ಮಾಪಕರಾದ ಅಂಕುರ್ ಗರ್ಗ್, ಲವ್ ರಂಜನ್ ಹಾಗೂ ಕ್ರಿಕೆಟ್ ಬರಹಗಾರರಾದ ಸಂಜಯ್ ದಾಸ್ ಅವರ ಟ್ವಿಟ್ಟರ್ ಅಕೌಂಟ್ಗಳನ್ನ ಟ್ಯಾಗ್ ಮಾಡಿದ್ದಾರೆ. ಪ್ಯಾರ್ ಕಾ ಪಂಚ್ನಾಮ, ಆಕಾಶ್ ವಾಣಿ, ಸೋನು ಕೇ ಟೀಟು ಕೀ ಸ್ವೀಟಿ ಎಂಬ ಚಿತ್ರಗಳನ್ನ ನಿರ್ದೇಶನ ಮಾಡಿರುವ ಲವ್ ರಂಜನ್ ಅವರು ಗಂಗೂಲಿ ಬಯೋಪಿಕ್ನ ನಿರ್ದೇಶಕರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
Cricket has been my life, it gave confidence and ability to walk forward with my head held high, a journey to be cherished.
Thrilled that Luv Films will produce a biopic on my journey and bring it to life for the big screen 🏏🎥@LuvFilms @luv_ranjan @gargankur @DasSanjay1812
— Sourav Ganguly (@SGanguly99) September 9, 2021
ತಮ್ಮ ಬಯೋಪಿಕ್ ನಿರ್ಮಾಣ ಆಗಲಿರುವ ವಿಚಾರವನ್ನು ಸೌರವ್ ಗಂಗೂಲಿ ಅವರೇ ಖುದ್ದಾಗಿ ಕಳೆದ ತಿಂಗಳು ಖಚಿತಪಡಿಸಿದ್ದರು. ಚಿತ್ರಕ್ಕೆ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದೆ ಎಂದು ಆಗಸ್ಟ್ ಮೊದಲ ವಾರ ಅವರು ಹೇಳಿದ್ದರು. “ನನ್ನ ಜೀವನಚರಿತ್ರೆಯ ಸಿನಿಮಾಕ್ಕಾಗಿ ಒಪ್ಪಿಗೆ ನೀಡಿದ್ದೇನೆ. ಅದು ಹಿಂದಿಯಲ್ಲಿ ಇರಲಿದೆ. ನಿರ್ದೇಶಕರು ಯಾರೆಂದು ಈಗ ಬಹಿರಂಗಪಡಿಸಲು ಸಾಧ್ಯವಿಲ್ಲ. ಎಲ್ಲವನ್ನೂ ವ್ಯವಸ್ಥೆ ಮಾಡಲು ಇನ್ನೂ ಕೆಲ ದಿನಗಳು ಬೇಕಾಗಬಹುದು” ಎಂದು ನ್ಯೂಸ್18ಗೆ ಗಂಗೂಲಿ ಮಾಹಿತಿ ನೀಡಿದ್ದರು.
ಇದನ್ನೂ ಓದಿ: Happy Birthday Akshay Kumar: ಈ ಬಾಲಿವುಡ್ ಸ್ಟಾರ್ ನಟ-ನಟಿಯರೊಂದಿಗೆ ಅಕ್ಷಯ್ ಕುಮಾರ್ಗೆ ಮುನಿಸೇಕೆ?!
ನಿರ್ದೇಶಕರ ಆಯ್ಕೆ ಆಗಲೇ ಆಗಿದೆ. ಇವತ್ತು ಗಂಗೂಲಿ ಅವರು ನಿರ್ಮಾಪಕರ ಹೆಸರು ಬಹಿರಂಗಪಡಿಸಿದ್ದಾರೆ. ಆದರೆ, ಚಿತ್ರಕಥೆ ಮುಗಿದು ನಿರ್ಮಾಣ ಕಾರ್ಯ ಆರಂಭವಾಗಿದೆಯಾ ಗೊತ್ತಿಲ್ಲ. ಯಾವಾಗ ಸಿನಿಮಾ ಬಿಡುಗಡೆ ಮಾಡಬೇಕೆಂಬ ಗುರಿ ಇದೆ ಗೊತ್ತಿಲ್ಲ. ಚಿತ್ರದಲ್ಲಿ ಗಂಗೂಲಿ ಜೀವನದ ಯಾವ ಮಜಲುಗಳನ್ನ ಕಥೆಯಲ್ಲಿ ಬಳಸಿಕೊಳ್ಳಲಾಗಿದೆ ಎಂಬುದು ಗೊತ್ತಾಗಬೇಕಿದೆ. ರಣಬೀರ್ ಕಪೂರ್ ಅವರು ಗಂಗೂಲಿ ಪಾತ್ರ ಮಾಡುವ ಸಾಧ್ಯತೆ ಇದೆ. ಇನ್ನೂ ಇಬ್ಬರು ಖ್ಯಾತ ನಟರನ್ನ ಈ ಪಾತ್ರಕ್ಕಾಗಿ ಪರಾಮರ್ಶೆ ನಡೆಸಲಾಗುತ್ತಿರುವುದು ಕಳೆದ ತಿಂಗಳು ಸಿಕ್ಕ ಮಾಹಿತಿ.
ಭಾರತದಲ್ಲಿ ಇತ್ತೀಚೆಗೆ ಯಶಸ್ವಿ ಕ್ರೀಡಾ ಸಾಧಕರ ಜೀವನ ಚರಿತ್ರೆಗಳನ್ನ ಆಧರಿಸಿ ಸಿನಿಮಾ ಮಾಡುವ ಟ್ರೆಂಡ್ ಹುಟ್ಟಿಕೊಂಡಿದೆ. ಫ್ಲೈಯಿಂಗ್ ಸಿಖ್ ಎಂದೇ ಖ್ಯಾತರಾಗಿರುವ ಮಿಲ್ಕಾ ಸಿಂಗ್, ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್, ಕುಸ್ತಿಪಟು ಗೀತಾ ಫೋಗಾಟ್, ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್, ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ಮೊಹಮ್ಮದ್ ಅಜರುದ್ದೀನ್, ಹಾಕಿ ಆಟಗಾರ ಸಂದೀಪ್ ಸಿಂಗ್ ಮೊದಲಾದವರ ಬಯೋಪಿಕ್ಗಳು ಬಾಲಿವುಡ್ನಲ್ಲಿ ನಿರ್ಮಾಣವಾಗಿ ಗಮನ ಸೆಳೆದಿವೆ. ಈಗ ಸೌರವ್ ಗಂಗೂಲಿ ಅವರ ಬಯೋಪಿಕ್ ಸರದಿಯಲ್ಲಿದೆ. ಭಾರತ ಕ್ರಿಕೆಟ್ ಲೋಕದ ಅತ್ಯಂತ ಯಶಸ್ವಿ ನಾಯಕರಲ್ಲೊಬ್ಬರೆನಿಸಿರುವ ಸೌರವ್ ಗಂಗೂಲಿ ಅವರ ಬಯೋಪಿಕ್ ದೊಡ್ಡ ಬಜೆಟ್ನ ಚಿತ್ರವಾಗಿರುವುದಂತೂ ನಿಶ್ಚಿತ ಎಂಬ ಮಾತು ಕೇಳಿಬರುತ್ತಿದೆ. ಗಂಗೂಲಿ ಅವರ ಮಗಳು ಸನಾ ಗಂಗೂಲಿ ಅವರೂ ಕೂಡ ಈ ಸಿನಿಮಾ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ