Sourav Ganguly- ವಿರಾಟ್ ಕೊಹ್ಲಿ ಟಿ20 ಕ್ಯಾಪ್ಟನ್ಸಿ ವಿದಾಯಕ್ಕೆ ಸೌರವ್ ಗಂಗೂಲಿ ಪ್ರತಿಕ್ರಿಯೆ

Virat Kohli T20 Captaincy- ಟಿ20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ಅವರು ಟಿ20 ಟೀಮ್ ಇಂಡಿಯಾದ ನಾಯಕಸ್ಥಾನದಿಂದ ವಿಮುಕ್ತಗೊಳ್ಳುವುದಾಗಿ ನಿರ್ಧಾರ ಪ್ರಕಟಿಸಿದ್ದಾರೆ. ಇದಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯಿಸಿ ಕೊಹ್ಲಿಗೆ ಶುಭಹಾರೈಸಿದ್ದಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

 • Cricketnext
 • Last Updated :
 • Share this:
  ಭಾರತದ ಕ್ರಿಕೆಟ್ ಕ್ಷೇತ್ರಕ್ಕೆ ವಿರಾಟ್ ಕೊಹ್ಲಿ ನೈಜ ಆಸ್ತಿ ಎನಿಸಿದ್ದಾರೆ. ಅದ್ವಿತೀಯ ರೀತಿಯಲ್ಲಿ ತಂಡಗಳನ್ನ ಮುನ್ನಡೆಸಿದ್ದಾರೆ. ಎಲ್ಲಾ ಮಾದರಿ ಕ್ರಿಕೆಟ್​ಗಳಲ್ಲೂ ಅವರು ಯಶಸ್ವಿ ಕ್ಯಾಪ್ಟನ್ ಎನಿಸಿದ್ದಾರೆ ಎಂದು ಮಾಜಿ ಕ್ಯಾಪ್ಟನ್ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ಭಾರತ ತಂಡದ ನಾಯಕತ್ವದಿಂದ ಕೆಳಗಿಳಿಯಲು ವಿರಾಟ್ ಕೊಹ್ಲಿ ಕೈಗೊಂಡ ನಿರ್ಧಾರದ ಬಗ್ಗೆ ಅವರು ಈ ರೀತಿಯಲ್ಲಿ ಪ್ರತಿಕ್ರಿಯಿಸಿದ್ಧಾರೆ. ಭವಿಷ್ಯದ ದೃಷ್ಟಿಯಿಂದ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಬಿಸಿಸಿಐ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ ಗಂಗೂಲಿ, ಟಿ20 ಕ್ಯಾಪ್ಟನ್ ಆಗಿ ವಿರಾಟ್ ಅವರದ್ದು ಅದ್ಭುತ ಪ್ರದರ್ಶನವಾಗಿತ್ತು. ಮುಂಬರುವ ವಿಶ್ವಕಪ್​ಗೆ ಅವರಿಗೆ ಆಲ್ ದ ಬೆಸ್ಟ್. ಭಾರತಕ್ಕೆ ಅವರು ಇನ್ನೂ ಬಹಳಷ್ಟು ರನ್​ಗಳ ಕೊಡುಗೆ ನೀಡಲಿ ಶುಭ ಹಾರೈಸಿದ್ದಾರೆ.

  ವಿರಾಟ್ ಕೊಹ್ಲಿ ಅವರು ಟಿ20 ಕ್ರಿಕೆಟ್ ತಂಡದ ನಾಯಕತ್ವಕ್ಕೆ ಮಾತ್ರ ವಿದಾಯ ಹೇಳುತ್ತಿದ್ದಾರೆ. ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ತಂಡಗಳಿಗೆ ಅವರು ಕ್ಯಾಪ್ಟನ್ ಆಗಿ ಮುಂದುವರಿಯಲಿದ್ಧಾರೆ. ನವೆಂಬರ್​ನಲ್ಲಿ ಅಂತ್ಯವಾಗುವ ಟಿ20 ವಿಶ್ವಕಪ್ ಅವರ ಕೊನೆಯ ಟಿ20 ಕ್ಯಾಪ್ಟನ್ಸಿ ಆಗಿರಲಿದೆ. ಕೋಚ್ ರವಿಶಾಸ್ತ್ರಿ, ಸಹ ಆಟಗಾರ ರೋಹಿತ್ ಶರ್ಮಾ ಹಾಗೂ ತಮ್ಮ ಆಪ್ತರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ವಿರಾಟ್ ಕೊಹ್ಲಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೆ ಕೊಟ್ಟಿದ್ದಾರೆ.

  ಇದನ್ನೂ ಓದಿ: ಭಾರತದ ಕಿವೀಸ್ ಪ್ರವಾಸ ಮುಂದೂಡಿಕೆ; ಮುಂದಿನ ವರ್ಷಾಂತ್ಯದವರೆಗೂ ಕಾಲಿಡಲ್ಲ ಟೀಮ್ ಇಂಡಿಯಾ

  ರೋಹಿತ್ ಶರ್ಮಾ ಅವರು ಟಿ20 ತಂಡದ ನಾಯಕತ್ವ ವಹಿಸುವ ಸಾಧ್ಯತೆ ಇದೆ. ಅದಿನ್ನೂ ಅಧಿಕೃತವಾಗಿ ಪ್ರಕಟವಾಗಬೇಕಷ್ಟೇ. ಕೊಹ್ಲಿ ಮತ್ತು ರೋಹಿತ್ ಅವರು ನಾಯಕತ್ವ ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ದಟ್ಟವಾಗಿತ್ತು. ಈ ಕುರಿತು ಕೆಲ ದಿನಗಳ ಹಿಂದೆ ಕೆಲ ಮಾಧ್ಯಮಗಳಲ್ಲಿ ಸುದ್ದಿ ಕೂಡ ಪ್ರಕಟವಾಗಿತ್ತು. ಅದೀಗ ನಿಜವಾಗಿದೆ.

  “ಟೀಮ್ ಇಂಡಿಯಾಗೆ ಒಂದು ಸ್ಪಷ್ಟ ಮಾರ್ಗವನ್ನ ಹಾಕಿದ್ದೇವೆ. ಸದ್ಯದ ಕಾರ್ಯದೊತ್ತಡಗಳನ್ನ ಗಮನದಲ್ಲಿಟ್ಟುಕೊಂಡು ಹಾಗೂ ನಾಯಕತ್ವ ಬದಲಾವಣೆ ಪ್ರಕ್ರಿಯೆ ಸರಾಗವಾಗಿ ಆಗುವ ದೃಷ್ಟಿಯಿಂದ ವಿರಾಟ್ ಕೊಹ್ಲಿ ಅವರು ಟಿ20 ವಿಶ್ವಕಪ್ ಬಳಿಕ ಟಿ20 ಟೀಮ್ ಇಂಡಿಯಾದ ನಾಯಕ ಸ್ಥಾನದಿಂದ ಹಿಂದಕ್ಕೆ ಸರಿಯಲು ನಿರ್ಧರಿಸಿದ್ದಾರೆ. ಕಳೆದ 6 ತಿಂಗಳಿಂದ ವಿರಾಟ್ ಕೊಹ್ಲಿ ಹಾಗೂ ನಾಯಕತ್ವ ತಂಡದೊಂದಿಗೆ ಚರ್ಚೆ ನಡೆಸುತ್ತಲೇ ಇದ್ದೇನೆ. ಇದು ಬಹಳ ಯೋಚಿಸಿಯೇ ತೆಗೆದುಕೊಂಡ ನಿರ್ಧಾರವಾಗಿದೆ” ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.

  ಇದನ್ನೂ ಓದಿ: Virat Kohli- ಟಿ20 ವಿಶ್ವಕಪ್ ಬಳಿಕ ನಾಯಕತ್ವದಿಂದ ಇಳಿಯಲಿರುವ ವಿರಾಟ್ ಕೊಹ್ಲಿ

  ಮಹೇಂದ್ರ ಸಿಂಗ್ ಧೋನಿ ಬಳಿಕ ಭಾರತದ ಟಿ20 ತಂಡದ ನಾಯಕತ್ವ ವಹಿಸಿದ ವಿರಾಟ್ ಕೊಹ್ಲಿ ಅವರ ಯಶಸ್ಸು ಏಕದಿನ ಕ್ರಿಕೆಟ್​ನಷ್ಟು ಸಿಕ್ಕಿಲ್ಲ. 2017ರಿಂದ 45 ಟಿ20 ಪಂದ್ಯಗಳನ್ನ ಅವರ ನಾಯಕತ್ವದಲ್ಲಿ ಭಾರತ ಆಡಿದೆ. ಅದರಲ್ಲಿ 27ರಲ್ಲಿ ಭಾರತ ಗೆದ್ದಿದೆ. ಆದರೆ, ಏಕದಿನ ಅಥವಾ ಟಿ20 ಕ್ರಿಕೆಟ್ ಆಗಲೀ ಕೊಹ್ಲಿ ನಾಯಕತ್ವದಲ್ಲಿ ಭಾರತಕ್ಕೆ ಒಂದೂ ವಿಶ್ವಕಪ್ ಗೆಲ್ಲಲು ಆಗಿಲ್ಲ. ಕೊಹ್ಲಿ ನೇತೃತ್ವದ ಆರ್​ಸಿಬಿ ತಂಡ ಕೂಡ ಒಮ್ಮೆಯೂ ಐಪಿಎಲ್ ಟೂರ್ನಿ ಗೆದ್ದಿಲ್ಲ. ಕೊಹ್ಲಿ ಒಬ್ಬ ಆಟಗಾರನಾಗಿ ಯಶಸ್ವಿಯಾಗಿದ್ದಾರೆ. ಆದರೆ, ಟಿ20 ಕ್ಯಾಪ್ಟನ್ ಆಗಿ ನಿರೀಕ್ಷಿತ ಸಾಧನೆ ತೋರಲು ವಿಫಲರಾಗಿದ್ಧಾರೆ ಎಂಬ ಟೀಕೆ ಸದಾ ಅವರಿಗೆ ಅಂಟಿಕೊಂಡೇ ಇರುತ್ತದೆ.
  Published by:Vijayasarthy SN
  First published: