ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಇದೀಗ ಅವರ ಸ್ಥಾನವನ್ನು ತುಂಬಬಲ್ಲ ಆಟಗಾರರ ಹುಡುಕಾಟದಲ್ಲಿದೆ ಬಿಸಿಸಿಐ. ಈಗಾಗಲೇ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ತಂಡದಲ್ಲಿ ಸ್ಥಾನ ಪಡೆಯಲು ಯುವ ಆಟಗಾರರ ದಂಡೇ ಕ್ಯೂನಲ್ಲಿದೆ. ಅದರಲ್ಲೂ ಇತ್ತೀಚೆಗೆ ಐಪಿಎಲ್ನಲ್ಲೂ ಭಾರತೀಯ ವಿಕೆಟ್ ಕೀಪರ್ ಬ್ಯಾಟ್ಸ್ಮನ್ಗಳು ಮಿಂಚಿದ್ದಾರೆ. ಹೀಗಾಗಿಯೇ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಸ್ಥಾನಕ್ಕೆ ಭರ್ಜರಿ ಪೈಪೋಟಿ ಏರ್ಪಟ್ಟಿದೆ.
ಸದ್ಯ ವಿಕೆಟ್ ಕೀಪರ್ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಕೆಎಲ್ ರಾಹುಲ್, ರಿಷಭ್ ಪಂತ್, ಸಂಜು ಸ್ಯಾಮ್ಸನ್ ಹಾಗೂ ವೃದ್ಧಿಮಾನ್ ಸಾಹ ಮುಂಚೂಣಿಯಲ್ಲಿದ್ದಾರೆ. ಇವರಲ್ಲಿ ಎಲ್ಲರೂ ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಆಯ್ಕೆಯಾಗಿರುವುದು ವಿಶೇಷ. ಇದಾಗ್ಯೂ ಮುಂದಿನ ದಿನಗಳಲ್ಲಿ ಯಾರು ತಂಡದಲ್ಲಿ ಖಾಯಂ ಆಗಿ ಉಳಿಯಲಿದ್ದಾರೆ ಎಂಬ ಕುತೂಹಲ ಕೂಡ ಹಲವರಲ್ಲಿದೆ.
ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಪ್ರಸಕ್ತ ಅತ್ಯುತ್ತಮ ವಿಕೆಟ್ ಕೀಪರ್, ಬ್ಯಾಟ್ಸ್ಮನ್ಗಳನ್ನು ಹೆಸರಿಸಿದ್ದಾರೆ. ನನ್ನ ಪ್ರಕಾರ ತಂಡದಲ್ಲಿ ಈಗಿರುವ ಆಟಗಾರರಲ್ಲಿ ರಿಷಭ್ ಪಂತ್ ಹಾಗೂ ವೃದ್ಧಿಮಾನ್ ಸಾಹ ಅತ್ಯುತ್ತಮ ಆಟಗಾರರು ಎಂದು ದಾದಾ ತಿಳಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ವೈಫಲ್ಯದ ಹೊರತಾಗಿಯೂ ಪಂತ್ ಅವರನ್ನು ಬೆಂಬಲಿಸಲು ಕಾರಣ ತಿಳಿಸಿದ ಗಂಗೂಲಿ, ಆತ ಪ್ರತಿಭಾವಂತ. ಖಂಡಿತವಾಗಿಯೂ ಅತ್ಯುತ್ತಮವಾಗಿಯೇ ಕಂಬ್ಯಾಕ್ ಮಾಡಲಿದ್ದಾನೆ. ಅವರಿನ್ನೂ ಯುವ ಕ್ರಿಕೆಟಿಗ, ಅವರಿಗೆ ಉತ್ತಮ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದು ತಿಳಿಸಿದರು.
ಇದೇ ವೇಳೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಸಾಹ ಹಾಗೂ ಪಂತ್ ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿ ಯಾರಿಗೆ ಅವಕಾಶ ಸಿಗಲಿದೆ ಎಂಬ ಪ್ರಶ್ನೆಗೆ ಯಾರು ಉತ್ತಮ ಲಯದಲ್ಲಿರುತ್ತಾರೋ ಅವರು ಆಡಲಿದ್ದಾರೆ. ಒಬ್ಬರಿಗೆ ಮಾತ್ರ ಅವಕಾಶ ಸಿಗಲಿದೆ ಎಂದು ಸೌರವ್ ಗಂಗೂಲಿ ಹೇಳಿದರು.
ಅತ್ತ ಟೆಸ್ಟ್ನಲ್ಲಿ ಸಾಹ ಹಾಗೂ ಪಂತ್ ನಡುವೆ ಪೈಪೋಟಿ ಏರ್ಪಟ್ಟಿದ್ದರೆ, ಇತ್ತ ಟಿ20 ಟೀಮ್ ಇಂಡಿಯಾದಲ್ಲಿ ಸಂಜು ಸ್ಯಾಮ್ಸನ್ ಹಾಗೂ ಕೆಎಲ್ ರಾಹುಲ್ ನಡುವೆ ಪೈಪೋಟಿ ಶುರುವಾಗಿದೆ. ಇದಾಗ್ಯೂ ಕೆಎಲ್ಆರ್ ಟೀಮ್ ಇಂಡಿಯಾ ಉಪನಾಯಕ ಆಗಿರುವುದರಿಂದ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವುದು ಬಹುತೇಕ ಖಚಿತ. ಆದರೆ ಅದು ಕೀಪರ್ ಗ್ಲೌಸ್ ಧರಿಸಿನಾ ಎಂಬುದನ್ನು ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ