BCCI ಅಧ್ಯಕ್ಷರಾಗುತ್ತಾರಾ ಟೀಂ ಇಂಡಿಯಾದ ಈ ದಿಗ್ಗಜ ಆಟಗಾರ!


Updated:August 11, 2018, 8:27 PM IST
BCCI ಅಧ್ಯಕ್ಷರಾಗುತ್ತಾರಾ ಟೀಂ ಇಂಡಿಯಾದ ಈ ದಿಗ್ಗಜ ಆಟಗಾರ!

Updated: August 11, 2018, 8:27 PM IST
ನ್ಯೂಸ್​ 18 ಕನ್ನಡ

ಕೋಲ್ಕತ್ತಾ(ಆ.11): ಟೀಂ ಇಂಡಿಯಾದ ಮಾಜಿ ನಾಯಕ ಸೌರವ್​ ಗಂಗೂಲಿ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯ ನೂತನ ಅಧ್ಯಕ್ಷರಾಗುವ ಸಾಧ್ಯತೆಗಳಿವೆ. ಈವರೆಗೂ ಲಭ್ಯವಾದ ಮಾಹಿತಿ ಅನ್ವಯ ಲೋಧಾ ಸಮಿತಿ ಮಾಡಿರುವ ಶಿಫಾರಸ್ಸುಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಿ ರಚಿಸಿರುವ ಹೊಸ ಸಂವಿಧಾನಕ್ಕೆ ಸುಪ್ರೀಂ ಕೋರ್ಟ್​ ಹಸಿರು ನಿಶಾನೆ ನೀಡಿದ ಬಳಿಕ ಸೌರವ್​ ಗಂಗೂಲಿ ಅಧ್ಯಕ್ಷರಾಗುವ ಎಲ್ಲಾ ದಾರಿಗಳು ತೆರೆದುಕೊಂಡಿವೆ ಎನ್ನಲಾಗಿದೆ.

ಕಳೆದ ಕೆಲ ಸಮಯದಿಂದ ಬಿಸಿಸಿಐ ಆಡಳಿತ ಮಂಡಳಿಗೆ ಸಂಬಂಧಿಸಿದಂತೆ ಹಲವಾರು ವಿವಾದಗಳಾಗಿವೆ. ಸದ್ಯ ಮಂಡಳಿಯನ್ನು ಉತ್ತಮವಾಗಿ ಮುನ್ನಡೆಸುವುದರೊಂದಿಗೆ, ಸುಪ್ರೀಂ ಕೋರ್ಟ್​ನ ಎಲ್ಲಾ ನಿರೀಕ್ಷೆಗಳನ್ನು ಪೂರೈಸುವ ಸೂಕ್ತ ವ್ಯಕ್ತಿಯ ಹುಡುಕಾಟದಲ್ಲಿದೆ ಬಿಸಿಸಿಐ. ಇಷ್ಟೇ ಅಲ್ಲದೇ ಆಡಳಿತ ಮಂಡಳಿಯನ್ನೂ ತನ್ನದೇ ಧಾಟಿಯಲ್ಲಿ ಮುನ್ನಡೆಸುವ ಕ್ಷಮತೆಯೂ ಇವರಲ್ಲಿರಬೇಕೆಂಬುವುದು ಬಿಸಿಸಿಐ ಆಕಾಂಕ್ಷೆಯಾಗಿದೆ.

ಮಂಡಳಿಯು ನೂತನ ಅಧ್ಯಕ್ಷರ ನೇಮಕಕ್ಕಾಗಿ ಬಂಗಾಳ ಕ್ರಿಕೆಟ್​ ಅಸೋಸಿಯೇಷನ್​ನ ಹಾಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಸೌರವ್​ ಗಂಗೂಲಿ ಹೆಸರನ್ನು ಪಟ್ಟಿಗೆ ಸೇರಿಸಿಕೊಂಡಿದೆ. ಬಿಸಿಸಿಐನ ಮಾಜಿ ಅಧ್ಯಕ್ಷರಾಗಿದ್ದ ಜಗಮೋಹನ್​ ಡಾಲ್ಮಿಯಾರವರ ಆತ್ಮೀಯರಾಗಿದ್ದ ಸೌರವ್​ ಗಂಗೂಲಿ ಬಂಗಾಳ ಕ್ರಿಕೆಟ್​ ಅಸೋಸಿಯೇಷನ್​ನೊಂದಿಗೆ ಮೂರನೇ ಅವಧಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಷ್ಟೇ ಅಲ್ಲದೇ ಗಂಗೂಲಿಯವರಿಗೆ ಬಿಸಿಸಿಐನ ತಾಂತ್ರಿಕ ಸಮಿತಿ, ಕ್ರಿಕೆಟ್​ ಸಲಹಾ ಸಮಿತಿ ಹಾಗೂ ಐಪಿಎಲ್​ನ ಆಡಳಿತ ಮಂಡಳಿಯೊಂದಿಗೂ ಕಾರ್ಯ ನಿರ್ವಹಿಸಿರುವ ಅನುಭವವಿದೆ. ಅಂದರೆ 'ಪ್ರಿನ್ಸ್​ ಆಫ್​ ಕೋಲ್ಕತ್ತಾ' ಕಳೆದ ನಾಲ್ಕು ವರ್ಷಗಳಿಂದ ಕ್ರಿಕೆಟ್​ ಆಡಳಿತ ವರ್ಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನೂತನ ಸಂವಿಧಾನದ ಅನ್ವಯ ಕೂಲಿಂಗ್​ ಆಫ್​ ಪೀರಿಯಡ್​ನಿಂದಾಗಿ ಹಲವಾರು ಹಾಲಿ ಹಾಗೂ ಮಾಜಿ ಕಾರ್ಯ ನಿರ್ವಾಹಕರು ಬಿಸಿಸಿಐನ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಹೀಗಿರುವಾದ 'ದಾದಾ' ಸೌರವ್​ ಗಂಗೂಲಿ ಬಲಶಾಲಿ ಸ್ಪರ್ಧಿಯಾಗಿ ಕಂಡು ಬರುತ್ತಿದ್ದಾರೆ. ಆದರೆ ಇವರು ಇದಕ್ಕಾಗಿ ಬಂಗಾಳ ಕ್ರಿಕೆಟ್​ ಅಸೋಸಿಯೇಷನ್​ನ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಬೇಕಾಗುತ್ತದೆ.
First published:August 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ