ಆಸ್ಟ್ರೇಲಿಯದ ಕ್ರಿಕೆಟ್ ಆಟಗಾರ್ತಿ ಮೆಗನ್ ಸ್ಕಟ್ ಹಾಗೂ ಸಂಗಾತಿ ಜೆಸ್ ಹಾಲಿಯೋಕ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇವರಿಬ್ಬರೂ ಜೊತೆಯಾಗಿ ಅತ್ಯದ್ಭುತ ಫೋಟೋಗಳನ್ನು ಜೊತೆಯಾಗಿ ತೆಗೆಸಿಕೊಂಡಿದ್ದು ಸಂಭ್ರಮದ ಕ್ಷಣಗಳನ್ನು ಬಣ್ಣಿಸಿಕೊಂಡಿದ್ದಾರೆ. ಸಾಮಾಜಿಕ ತಾಣದಲ್ಲಿ ತಮ್ಮ ಖುಷಿ ಹಾಗೂ ಕಾತರ ಹಂಚಿಕೊಂಡಿರುವ ಮೇಗನ್ ಫೋಟೋಶೂಟ್ನ ಕೆಲವೊಂದು ಮೆಚ್ಚಿನ ತುಣುಕುಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನಂ. 3 ಸ್ಕಟ್ ಎಂದು ಬರೆದಿರುವ ಜೆರ್ಸಿಯನ್ನು ಕೈಯಲ್ಲಿ ಹಿಡಿದುಕೊಂಡು ಇಬ್ಬರೂ ಸಂಗಾತಿಗಳು ಪ್ರೀತಿಯಲ್ಲಿ ಆಳವಾಗಿ ಮೈಮರೆತು ಪರಸ್ಪರ ಚುಂಬಿಸಿರುವ ಫೋಟೋ ಇವರ ನಿಷ್ಕಲ್ಮಷ ಪ್ರೀತಿಗೆ ಸಾಕ್ಷಿಯಾಗಿದೆ. ಮೆಗನ್ ಸ್ವೆಟರ್ ಹಾಗೂ ಜೀನ್ಸ್ ಧರಿಸಿದ್ದು ಆಕೆಯ ಗರ್ಭಿಣಿ ಪತ್ನಿ ದೇಹಕ್ಕೊಪ್ಪುವ ಉಡುಗೆಯಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. ಇನ್ನೊಂದು ಫೋಟೋದಲ್ಲಿ ಪುಟ್ಟ ಗುಲಾಬಿ ಬಣ್ಣದ ಶೂಗಳು ಹಾಗೂ ಜೋಡಿಗಳ ನೆಚ್ಚಿನ ನಾಯಿ ಎಡ್ಡಿಯನ್ನು ಕಾಣಬಹುದಾಗಿದೆ. ಇನ್ನು ಕೊನೆಯ ಫೋಟೋದಲ್ಲಿ ಕಪ್ಪು ಬಿಳುಪಿನ ಫೋಟೋದಲ್ಲಿ ಜೆಸ್ಸಿ ತನ್ನ ಸುತ್ತಲೂ ಸುತ್ತುವರಿದ ಅರಣ್ಯದ ಹಿನ್ನಲೆಯಲ್ಲಿ ತಮ್ಮ ಬೇಬಿ ಬಂಪ್ ತೋರಿಸಿದ್ದಾರೆ.
ಇನ್ನು ಆಸ್ಟ್ರೇಲಿಯಾದ ಆಲ್-ರೌಂಡರ್ ಜೆಸ್ಸಿ ಜೊನಾಸನ್ ಹಾಗೂ ಭಾರತೀಯ ಬ್ಯಾಟ್ಸ್ಮನ್ ಮೋನಾ ಮೆಶ್ರಾಮ್ ಪ್ರೀತಿಯಿಂದ ಶುಭಾಶಯಗಳನ್ನು ಕೋರುತ್ತಿದ್ದು ತಂದೆ ತಾಯಿಗಳಾಗುತ್ತಿರುವ ಜೋಡಿಗಳಿಗೆ ಶುಭ ಹಾರೈಸಿದ್ದಾರೆ. ಮೇ ತಿಂಗಳಿನಲ್ಲಿ ಮೆಗನ್ ಹಾಗೂ ಜೆಸ್ ತಮ್ಮ ಮೊದಲ ಮಗುವಿನ ಸುದ್ದಿ ಘೋಷಿಸಿದ್ದರು. ಐವಿಎಫ್ ಮೂಲಕ 28ರ ಹರೆಯದ ಜೆಸ್ ತಾಯ್ತನದ ಖುಷಿಯನ್ನು ಅನುಭವಿಸಿದ್ದಾರೆ. ಜೆಸ್ ಮತ್ತು ನಾನು ಈ ಖುಷಿಯ ಭಾಗವಾಗಿರುವುದಕ್ಕೆ ಆನಂದದಿಂದಿದ್ದೇವೆ. ಜೆಸ್ ನನ್ನ ಪುಟ್ಟ ರೂಪವನ್ನು ಉದರದಲ್ಲಿ ಹೊತ್ತಿದ್ದಾಳೆ. ಹೆಣ್ಣು ಮಗು ಈಗಾಗಲೇ ಹೊರಬರಲು ತವಕಿಸುತ್ತಿದೆ ಎಂದು ಮೆಗನ್ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
View this post on Instagram
ಮೆಗನ್ ಇನ್ಸ್ಟಾದಲ್ಲಿ ಹಂಚಿಕೊಂಡ ಸುಂದರ ಕೇಕ್ವೊಂದರ ಫೋಟೋ ಕಾಣಬಹುದಾಗಿದ್ದು ಮಗುವಿನ ಭ್ರೂಣ ಯಾವುದು ಎಂಬ ಸುದ್ದಿಯನ್ನು ಈ ಪೋಸ್ಟ್ ಮೂಲಕ ಅರುಹಿದ್ದಾರೆ. ಆಸ್ಟ್ರೇಲಿಯಾದ ವೇಗಿ ಮೆಗನ್, ಜೆಸ್ ಅವರನ್ನು ಬ್ರಿಸ್ಬೇನ್ನ ರಾಷ್ಟ್ರೀಯ ಕ್ರಿಕೆಟ್ ಕೇಂದ್ರದಲ್ಲಿ ಭೇಟಿಯಾಗಿದ್ದರು. 2019ರಲ್ಲಿ ಇವರಿಬ್ಬರೂ ವಿವಾಹವಾಗಿದ್ದರು. ವಿವಾಹವಾದ ಒಡನೆಯೇ ಮಗುವನ್ನು ಹೊಂದಲು ಇವರಿಬ್ಬರೂ ನಿಶ್ಚಯಿಸಿದ್ದರು. ಇಬ್ಬರೂ ಒಂದೇ ಲಿಂಗದವರಾದ್ದರಿಂದ ಅವರ ಮಗುವನ್ನು ಪಡೆಯಲು ಆಯ್ಕೆಗಳು ಸೀಮಿತವಾಗಿತ್ತು. ಹೀಗಾಗಿ ಇಬ್ಬರೂ ಪ್ರನಾಳ ಶಿಶುವನ್ನು ಪಡೆಯುವ ನಿರ್ಧಾರಕ್ಕೆ ಬಂದರು. ಈ ವಿಧಾನದಲ್ಲಿ ಒಬ್ಬ ಸಂಗಾತಿ ಅಂಡಾಣುವನ್ನು ಬಿಡುಗಡೆ ಮಾಡುತ್ತಾರೆ ಹಾಗೂ ಇನ್ನೊಬ್ಬ ಸಂಗಾತಿ ಭ್ರೂಣ ಪಡೆಯುತ್ತಾರೆ.
ಮೆಗನ್ ಆಸ್ಟ್ರೇಲಿಯ ತಂಡದ ಬಲಗೈ ವೇಗಿಯಾಗಿ ಖ್ಯಾತರಾಗಿದ್ದು ಸ್ಪಿನ್ ಆಟಗಾರರಾಗಿ ಪ್ರಖ್ಯಾತಿ ಪಡೆದಿದ್ದಾರೆ. ನ್ಯೂಜಿಲ್ಯಾಂಡ್ಗೆ ತೆರಳಿದ ಆಸ್ಟ್ರೇಲಿಯಾದ ತಂಡದಲ್ಲಿ ಕೊನೆಯದಾಗಿ ಕಂಡುಬಂದಿದ್ದರು. ಮೊದಲ ಏಕದಿನ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಕೀರ್ತಿ ಮೆಗನ್ರದ್ದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ