Aus-India: ಭಾರತ-ಆಸ್ಟ್ರೇಲಿಯಾ ಪಿಂಕ್ ಬಾಲ್ ಟೆಸ್ಟ್; ಮಳೆಯ ನಡುವೆ ಮಂಧನಾ ಭರ್ಜರಿ ಆಟ

Smriti Mandhana Great Innings- ಆತಿಥೇಯ ಆಸ್ಟ್ರೇಲಿಯನ್ನರ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತದ ಮಹಿಳಾ ತಂಡ ಮೊದಲ ದಿನದ ಗೌರವ ಸಂಪಾದಿಸಿದೆ. ಸ್ಮೃತಿ ಮಂಧನಾ ಚೊಚ್ಚಲ ಟೆಸ್ಟ್ ಶತಕದತ್ತ ದಾಪುಗಾಲಿಡುತ್ತಿದ್ದಾರೆ.

ಸ್ಮೃತಿ ಮಂಧನಾ

ಸ್ಮೃತಿ ಮಂಧನಾ

  • Cricketnext
  • Last Updated :
  • Share this:
    ಕ್ವೀನ್ಸ್​ಲ್ಯಾಂಡ್, ಸೆ. 30: ಇಲ್ಲಿನ ಕರಾರ ಓವಲ್ ಗ್ರೌಂಡ್​ನಲ್ಲಿ ಇಂದು ಆರಂಭಗೊಂಡ ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವಿನ ಡೇ ನೈಟ್ ಟೆಸ್ಟ್ ಪಂದ್ಯದ ಮೊದಲ ದಿನ ಮಳೆಯಿಂದ ಅಡಚಣೆಗೊಂಡು ಅರ್ಧ ದಿನ ಮಾತ್ರ ಆಟ ಸಾಧ್ಯವಾಯಿತು. ಮಳೆ, ಕೆಟ್ಟ ಹವಾಮಾನದ ಅಡಚಣೆ ಮಧ್ಯೆಯೂ ಭಾರತದ ವನಿತೆಯರ ತಂಡ ಮೊದಲ ದಿನ ಗೌರವ ಪಡೆಯಿತು. ಮಳೆಯಿಂದಾಗಿ ಆಗಾಗ ನಿಂತು ಆಟ ಸಾಗಿ ಕೊನೆಗೆ 44 ಓವರ್ ಮಾತ್ರ ಆಟ ಸಾಧ್ಯವಾಯಿತು. ಸ್ಮೃತಿ ಮಂಧನಾ ಚೊಚ್ಚಲ ಶತಕದತ್ತ ದಾಪುಗಾಲಿಕ್ಕುತ್ತಿದ್ದಾರೆ. ಮಂಧನಾ 144 ಬಾಲ್​ನಲ್ಲಿ ಅಜೇಯ 80 ರನ್ ಗಳಿಸಿದ್ಧಾರೆ.

    ಸ್ಮೃತಿ ಮಂಧನಾ ಮತ್ತು ಶಫಾಲಿ ವರ್ಮಾ ಮೊದಲ ವಿಕೆಟ್​ಗೆ 93 ರನ್ ಸೇರಿಸಿದರು. ಆಕರ್ಷಕ ಬ್ಯಾಟುಗಾರ್ತಿ ಶಫಾಲಿ 64 ಬಾಲ್​ನಲ್ಲಿ 31 ರನ್ ಗಳಿಸಿ ಔಟಾದರು. ಪೂನಂ ರಾವತ್ ಮತ್ತು ಸ್ಮೃತಿ ಮಂಧನಾ 2ನೇ ವಿಕೆಟ್​ಗೆ 39 ರನ್​ಗಳ ಮುರಿಯದ ಜೊತೆಯಾಟ ಆಡುತ್ತಿದ್ದಾರೆ. ಇದು ಭಾರತ ಮತ್ತು ಆತಿಥೇಯ ಆಸ್ಟ್ರೇಲಿಯಾ ಮಧ್ಯೆ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯವಾಗಿದೆ. ಡೇ ನೈಟ್ ಪಂದ್ಯವಾದ್ದರಿಂದ ಪಿಂಕ್ ಬಾಲ್ ಟೆಸ್ಟ್ ಎಂದೂ ಕರೆಯಲಾಗುತ್ತಿದೆ. ಭಾರತದ ಮಹಿಳಾ ತಂಡಕ್ಕೆ ಇದು ಎರಡನೇ ಪಿಂಕ್ ಬಾಲ್ ಟೆಸ್ಟ್ ಆಗಿದೆ. ಇಂಗ್ಲೆಂಡ್ ವಿರುದ್ಧ ಕೆಲ ತಿಂಗಳ ಹಿಂದೆ ಡೇ ನೈಟ್ ಟೆಸ್ಟ್ ಪಂದ್ಯವಾಡಿದ್ದ ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಹೊನಲು ಬೆಳಕಿನ ಪಂದ್ಯ ಇದಾಗಿದೆ.

    ಇವತ್ತಿನ ಎರಡನೇ ಸೆಷನ್ ಆಟ ಬಹುತೇಕ ಮಳೆಗೆ ಆಹುತಿ ಆಯಿತು. ಇದರ ಮಧ್ಯೆ ಸ್ಮೃತಿ ಮಂಧನಾ ಅವರ ಆಕರ್ಷಕ ಆಟ ಕ್ರಿಕೆಟ್ ರಸಿಕರನ್ನ ಸಂತೃಪ್ತಿಗೊಳಿಸಿತು. ಆಫ್​ಸೈಡ್​ನಲ್ಲಿ ಅವರ ಶಾಟ್​ಗಳು ಮನಮೋಹಕವಾಗಿದ್ದವು. ನಾಲ್ಕನೇ ಟೆಸ್ಟ್ ಪಂದ್ಯ ಆಡುತ್ತಿರುವ ಸ್ಮೃತಿ ಮಂಧನಾಗೆ ಇದು ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ. ಈ ಹಿಂದೆ 78 ರನ್ ಗಳಿಸಿದ್ದು ಅವರ ಗರಿಷ್ಠ ಸ್ಕೋರ್ ಆಗಿತ್ತು. 80 ರನ್ ಗಳಿಸಿ ಅಜೇಯರಾಗಿ ಉಳಿದಿರುವ ಅವರು ನಾಳೆ 20 ರನ್ ಸೇರಿಸಿದರೆ ಚೊಚ್ಚಲ ಶತಕದ ಸಂಭ್ರಮ ಹೊಂದಿರಲಿದ್ದಾರೆ.

    ಇದನ್ನೂ ಓದಿ: Strange Out- ಕ್ರಿಕೆಟ್​ನಲ್ಲಿ ಹೀಗೂ ಔಟ್ ಆಗ್ತಾರ? ವಿಚಿತ್ರವಾಗಿ ಔಟ್ ಆದ ಆಫ್ರಿಕಾದ ಆಟಗಾರ

    ಏಕದಿನ ಕ್ರಿಕೆಟ್ ಸರಣಿಯಲ್ಲಿ ಭಾರತದ ಮಹಿಳೆಯರು ಅದ್ಭುತ ಪ್ರದರ್ಶನ ತೋರಿದ್ದರು. ಸರಣಿ ಆಸ್ಟ್ರೇಲಿಯಾದ ವಶವಾದರೂ ಎರಡು ಪಂದ್ಯಗಳಲ್ಲಿ ಭಾರತೀಯರು ಆಡಿದ ರೀತಿ ಬಹಳ ಪ್ರಶಂಸೆಗೆ ಪಾತ್ರವಾಗಿದೆ. ಮೊದಲ ಪಂದ್ಯವನ್ನ ಸುಲಭವಾಗಿ ಸೋತಿದ್ದ ಭಾರತ, ಎರಡನೇ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ದುರದೃಷ್ಟಕರ ರೀತಿಯಲ್ಲಿ ಸೋಲನುಭವಿಸಿದ್ದರು. ಅನುಭವಿ ಬೌಲರ್ ಝುಲನ್ ಗೋಸ್ವಾಮಿ ಅವರು ಕೊನೆಯ ಎಸೆತದಲ್ಲಿ ನೋಬಾಲ್ ಹಾಕಿ ಸೋಲಿಗೆ ಕಾರಣರಾಗಿದ್ದರು. ಆದರೆ, ಮೂರನೇ ಏಕದಿನ ಪಂದ್ಯದಲ್ಲಿ ಭಾರತದ ಮಹಿಳೆಯರು ಆಸ್ಟ್ರೇಲಿಯಾದ ದೊಡ್ಡ ಮೊತ್ತದ ಸವಾಲನ್ನು ಚೇಸ್ ಮಾಡಿ ಐತಿಹಾಸಿಕ ಜಯ ಸಾಧಿಸಿದ್ದರು. ಅದೇ ಆತ್ಮವಿಶ್ವಾಸದಲ್ಲಿ ಈಗ ಟೆಸ್ಟ್ ಪಂದ್ಯವನ್ನು ಭಾರತೀಯರು ಆಡುತ್ತಿದ್ಧಾರೆ.

    ವಿಶ್ವದ ಅತ್ಯಂತ ವೇಗದ ಮಹಿಳಾ ಬೌಲರ್ ಆಗಿರುವ ಝೂಲನ್ ಗೋಸ್ವಾಮಿ ಅವರಿಗೆ ಇದೇ ಕೊನೆಯ ಟೆಸ್ಟ್ ಪಂದ್ಯವಾಗಲಿದೆ. ಈಗಾಗಲೇ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿರುವ ಅವರು ಟೆಸ್ಟ್ ಕ್ರಿಕೆಟ್​ಗೂ ವಿದಾಯ ಘೋಷಿಸಿದ್ದಾರೆ. ಹೀಗಾಗಿ, ಝೂಲನ್ ಅವರಿಗೆ ಇದು ಬೀಳ್ಕೊಡುಗೆ ಟೆಸ್ಟ್ ಪಂದ್ಯವಾಗಿದೆ.

    ಸ್ಕೋರು ವಿವರ (ಮೊದಲ ದಿನಾಂತ್ಯಕ್ಕೆ):

    ಭಾರತ ಮಹಿಳಾ ತಂಡ 44.1 ಓವರ್ 132/1
    (ಸ್ಮೃತಿ ಮಂಧನಾ ಅಜೇಯ 80, ಶಫಾಲಿ ವರ್ಮಾ 31, ಪೂನಮ್ ರಾವತ್ ಅಜೇಯ 16 ರನ್)
    Published by:Vijayasarthy SN
    First published: