T20- ಕರ್ನಾಟಕಕ್ಕೆ ಸತತ ಎರಡನೇ ಜಯ; ಕಾರ್ಯಪ್ಪ, ಶರತ್ ಗೆಲುವಿನ ರೂವಾರಿ

Syed Mushtaq Ali Trophy T20- ಮುಂಬೈ ವಿರುದ್ಧ ಮೊದಲ ಪಂದ್ಯ ಗೆದ್ದಿದ್ದ ಕರ್ನಾಟಕ ಇಂದು ಎರಡನೇ ಪಂದ್ಯದಲ್ಲ ಛತ್ತೀಸ್​ಗಡ ವಿರುದ್ಧ 4 ವಿಕೆಟ್​ಗಳಿಂದ ಸೋಲಿಸಿ ಅಂಕಪಟ್ಟಿಯಲ್ಲಿ ಮುನ್ನಡೆ ಸಾಧಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಗುವಾಹಟಿ, ನ. 05: ಕರ್ನಾಟಕ ಕ್ರಿಕೆಟ್ ತಂಡ (Karnataka Cricket Team) ಸಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 (Syed Mushtaq Ali Trophy T20) ಕ್ರಿಕೆಟ್ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಸಾಧಿಸಿದೆ. ನಿನ್ನೆ ಮುಂಬೈ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದ ಕರ್ನಾಟಕ ಇಂದು ಛತ್ತೀಸ್​ಗಡ ವಿರುದ್ಧ 4 ವಿಕೆಟ್​ಗಳಿಂದ ರೋಚಕ ಗೆಲುವು ಪಡೆಯಿತು. ಗೆಲ್ಲಲು 146 ರನ್ ಗುರಿ ಪಡೆದ ಕರ್ನಾಟಕ 3 ಎಸೆತ ಇರುವಂತೆ ಬೆನ್ನತ್ತಿತು. ಕೆಸಿ ಕಾರ್ಯಪ್ಪ (K C Cariappa) ಮತ್ತು ಬಿಆರ್ ಶರತ್ (B R Sharath) ಅವರು ಕರ್ನಾಟಕ ಗೆಲುವಿನ ರೂವಾರಿಗಳೆನಿಸದರು. ಕಾರ್ಯಪ್ಪ ಆಲ್​ರೌಂಡ್ ಆಟ ಪ್ರಮುಖ ಕಾರಣವಾಯಿತು. ಛತ್ತೀಸ್​ಗಡದ ಶಶಾಂಕ್ ಸಿಂಗ್ (Shashank Singh of Chhattisgarh) ಅವರ ಅದ್ಭುತ ಆಲ್​ರೌಂಡ್ ಆಟ ಅವರ ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲ.

    ಮೊದಲು ಬ್ಯಾಟ್ ಮಾಡಿದ ಛತ್ತೀಸ್​​ಗಡ ತಂಡ 20 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿತು. ಶಶಾಂಕ್ ಸಿಂಗ್ ಅವರ ಅಜೇಯ ಅರ್ಧಶತಕ ಛತ್ತೀಸ್​ಗಡ ಇನ್ನಿಂಗ್ಸ್​ನ ಹೈಲೈಟ್. ಅವರಿಲ್ಲದೇ ಹೋಗಿದ್ದರೆ ಛತ್ತೀಸ್​ಗಡ ಇನ್ನಿಂಗ್ಸ್ 130 ರನ್ ಗಡಿ ಕೂಡ ಮುಟ್ಟಲು ಅಸಾಧ್ಯವಿತ್ತು. ಶಶಾಂಕ್ ಸಿಂಗ್ 27 ಬಾಲ್​ನಲ್ಲಿ ಅಜೇಯ 52 ರನ್ ಭಾರಿಸಿದರು.

    ಕರ್ನಾಟಕದ ಮಿಸ್ಟರಿ ಬೌಲರ್ ಕೆಸಿ ಕಾರ್ಯಪ್ಪ 14 ರನ್ನಿತ್ತು 2 ವಿಕೆಟ್ ಪಡೆದರು. ಕೆ ಗೌತಮ್ ಕೂಡ 26 ರನ್​ಗೆ 2 ವಿಕೆಟ್ ಪಡೆದರು.

    ಶಶಾಂಕ್ ಸಿಂಗ್ ಮಾರಕ ಬೌಲಿಂಗ್ ಮಧ್ಯೆ ಕರ್ನಾಟಕ ದಿಟ್ಟ ಹೋರಾಟ: 

    ಗೆಲ್ಲಲು 146 ರನ್ ಗುರಿ ಪಡೆದ ಕರ್ನಾಟಕ ಉತ್ತಮ ಆರಂಭವೇನೋ ಪಡೆಯಿತು. ದೇವದತ್ ಪಡಿಕ್ಕಲ್ ಮತ್ತು ಮಯಂಕ್ ಅಗರ್ವಾಲ್ ಮೊದಲ ವಿಕೆಟ್​ಗೆ 52 ರನ್ ಜೊತೆಯಾಟ ಆಡಿದರು. ಆದರೆ, ಆ ನಂತರ ತಂಡ ದಿಢೀರ್ ಪತನ ಕಂಡಿತು. 26 ರನ್ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡು ಕರ್ನಾಟಕ ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಬಿಆರ್ ಶರತ್ ಮತ್ತು ಕಾರ್ಯಪ್ಪ ಜೊತೆಯಾದರು. ಆಗ ಕರ್ನಾಟಕ ತಂಡ 31 ಬಾಲ್​ನಲ್ಲಿ 68 ರನ್ ಗಳಿಸಬೇಕಾದ ಕಠಿಣ ಸವಾಲು ಮುಂದಿತ್ತು.

    ಇದನ್ನೂ ಓದಿ: R Ashwin- ಆರ್ ಅಶ್ವಿನ್ ಯಶಸ್ಸಿನ ಗುಟ್ಟೇನು? ಟಿ20 ಬೌಲರ್ ಆಗಿ ರೂಪುಗೊಂಡ ಕಥೆ ರೋಚಕ

    ಶಶಾಂಕ್ ಸಿಂಗ್ ಕೇವಲ 4 ರನ್​ಗೆ 3 ವಿಕೆಟ್ ಪಡೆದು ಕರ್ನಾಟಕವನ್ನು ಅಲುಗಾಡಿಸಿದ್ದರು. ಆದರೆ. ಶರತ್ ಮತ್ತು ಕಾರ್ಯಪ್ಪ ಧೈರ್ಯಗುಂದದೆ ಆಡಿದರು. ಶರತ್ 26 ಬಾಲ್​ನಲ್ಲಿ ಅಜೇಯ 42 ರನ್ ಗಳಿಸಿದರು. ಕಾರ್ಯಪ್ಪ 10 ಎಸೆತದಲ್ಲಿ 21 ರನ್ ಚಚ್ಚಿದರು. ಕಾರ್ಯಪ್ಪ ಅವರ ಈ ಸ್ಫೋಟಕ ಇನಿಂಗ್ಸಲ್ಲಿ 3 ಸಿಕ್ಸರ್ ಇದ್ದವು. ಇನ್ನು 3 ಎಸೆತ ಬಾಕಿ ಇರುವಂತೆ ತಂಡವನ್ನ ಗೆಲುವಿನ ದಡ ಮುಟ್ಟಿಸಿದರು.

    ಇವತ್ತಿನ ಇತರ ಪಂದ್ಯಗಳಲ್ಲಿ ಮಹಾರಾಷ್ಟ್ರ, ರಾಜಸ್ಥಾನ್, ಮಧ್ಯ ಪ್ರದೇಶ, ಮೇಘಾಲಯ, ಮಣಿಪುರ, ಸೌರಾಷ್ಟ್ರ, ದೆಹಲಿ ತಂಡಗಳು ಗೆಲುವು ಸಾಧಿಸಿವೆ. ಕರ್ನಾಟಕ ಸದ್ಯ ಸತತ ಎರಡು ಗೆಲುವುಗಳೊಂದಿಗೆ ಬಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ.

    ನಾಳೆಯ ಪಂದ್ಯ:

    ನಾಳೆ ಮೂರನೇ ದಿನದಂದು ಕರ್ನಾಟಕ ತಂಡ ಸರ್ವಿಸ್ ಸವಾಲನ್ನು ಎದುರಿಸಲಿದೆ. ಈ ಪಂದ್ಯವೂ ಗುವಾಹಟಿಯಲ್ಲೇ ನಡೆಯಲಿದೆ.

    ಸ್ಕೋರು ವಿವರ:

    ಛತ್ತೀಸ್​ಗಡ 20 ಓವರ್ 145/5
    (ಶಶಾಂಕ್ ಸಿಂಗ್ ಅಜೇಯ 52, ಅಖಿಲ್ ಹೆರ್ವಾಡ್ಕರ್ 32, ಅಮಂದೀಪ್ ಖರೆ 23 ರನ್- ಕೆ ಸಿ ಕಾರ್ಯಪ್ಪ 14/2, ಕೆ ಗೌತಮ್ 26/2)

    ಕರ್ನಾಟಕ 19.3 ಓವರ್ 146/6
    (ಬಿಆರ್ ಶರತ್ ಅಜೇಯ 42, ದೇವದತ್ ಪಡಿಕ್ಕಲ್ 42, ಮಯಂಕ್ ಅಗರ್ವಾಲ್ 23, ಕೆ ಸಿ ಕಾರ್ಯಪ್ಪ ಅಜೇಯ 21 ರನ್ – ಶಶಾಂಕ್ ಸಿಂಗ್ 4/3, ಶುಭಂ ಅಗರ್ವಾಲ್ 34/2)
    Published by:Vijayasarthy SN
    First published: