ಕಾನಪುರ್, ನ. 28: ಭಾರತದ ಶ್ರೇಯಸ್ ಅಯ್ಯರ್ ಮೊನ್ನೆ ಪದಾರ್ಪಣೆ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್ ಶತಕ ಭಾರಿಸಿದ 16ನೇ ಭಾರತೀಯ ಎನಿಸಿದ್ದರು. ಇದೀಗ ಎರಡನೇ ಇನ್ನಿಂಗ್ಸಲ್ಲಿ ಅರ್ಧಶತಕ ಭಾರಿಸಿ ಹೊಸ ದಾಖಲೆ ಸ್ಥಾಪಿಸಿದ್ದಾರೆ. ಪದಾರ್ಪಣೆ ಪಂದ್ಯದಲ್ಲಿ ಶತಕ ಮತ್ತು ಅರ್ಧಶತಕ ಭಾರಿಸಿದ ಮೊದಲ ಭಾರತೀಯ ಎಂಬ ದಾಖಲೆ ಬರೆದಿದ್ದಾರೆ. ವಿಶ್ವ ಕ್ರಿಕೆಟ್ನಲ್ಲಿ ಇದಕ್ಕೆ ಮುನ್ನ ಈ ದಾಖಲೆ ಮಾಡಿದವರು ಕೇವಲ 15 ಮಂದಿ ಮಾತ್ರ.
ಶ್ರೇಯಸ್ ಅಯ್ಯರ್ ಅವರ ಈ ಅಮೋಘ ಆಟವು ನ್ಯೂಜಿಲೆಂಡ್ನ ಅದ್ವಿತೀಯ ಬೌಲಿಂಗ್ ಶಕ್ತಿಯ ಎದುರು ಬಂದಿದೆ. ಭಾರತ ಎರಡನೇ ಇನ್ನಿಂಗ್ಸಲ್ಲಿ 51 ರನ್ಗೆ 4 ವಿಕೆಟ್ ಕಳೆದುಕೊಂಡಿದ್ದ ಸಂಕಷ್ಟದ ಸ್ಥಿತಿಯಲ್ಲಿ ಶ್ರೇಯಸ್ ಅಯ್ಯರ್ ಅರ್ಧಶತಕ ಬಹಳ ನೆರವಿಗೆ ಬಂದಿತು. ಆರ್ ಅಶ್ವಿನ್ ಮತ್ತು ವೃದ್ಧಿಮಾನ್ ಸಾಹಾ ಜೊತೆ ಶ್ರೇಯಸ್ ಅಯ್ಯರ್ ಆಡಿದ ಜೊತೆಯಾಟ ಭಾರತಕ್ಕೆ ಮೇಲುಗೈ ಸಿಗುವಂತಾಗಲು ಕಾರಣವಾಯಿತು.
ಪದಾರ್ಪಣೆ ಟೆಸ್ಟ್ ಪಂದ್ಯದಲ್ಲಿ ಶತಕ ಮತ್ತು ಅರ್ಧಶತಕ ಭಾರಿಸಿದವರಿವರು:
1) ರಂಜಿತ್ಸಿನ್ಹಜಿ, ಇಂಗ್ಲೆಂಡ್: 1896
2) ಜಾರ್ಜ್ ಗುನ್, ಇಂಗ್ಲೆಂಡ್: 1907
3) ಹರ್ಬರ್ಟ್ ಕಾಲಿನ್ಸ್, ಆಸ್ಟ್ರೇಲಿಯಾ: 1920
4) ಪೌಲ್ ಗಿಬ್, ಇಂಗ್ಲೆಂಡ್: 1938
5) ಲಾರೆನ್ಸ್ ರೋವ್, ವೆಸ್ಟ್ ಇಂಡೀಸ್: 1972
6) ರಾಡ್ನಿ ರೆಡ್ಮಂಡ್, ನ್ಯೂಜಿಲೆಂಡ್: 1973
7) ಗಾರ್ಡನ್ ಗ್ರೀನಿಡ್ಜ್, ವೆಸ್ಟ್ ಇಂಡೀಸ್: 1974
8) ಅಜರ್ ಮಹಮೂದ್, ಪಾಕಿಸ್ತಾನ್: 1997
9) ಲೋ ವಿನ್ಸೆಂಟ್, ನ್ಯೂಜಿಲೆಂಡ್: 2001
10) ಸ್ಕಾಟ್ ಸ್ಟೈರಿಸ್, ನ್ಯೂಜಿಲೆಂಡ್: 2002
11) ಯಾಸಿರ್ ಹಮೀದ್, ಪಾಕಿಸ್ತಾನ: 2003
12) ಆಂಡ್ರ್ಯೂ ಸ್ಟ್ರಾಸ್, ಇಂಗ್ಲೆಂಡ್: 2004
13) ಅಲಸ್ಟೇರ್ ಕುಕ್, ಇಂಗ್ಲೆಂಡ್: 2006
14) ಉಮರ್ ಅಕ್ಮಲ್, ಪಾಕಿಸ್ತಾನ: 2009
15) ಫಾಫ್ ಡುಪ್ಲೆಸಿ, ಸೌತ್ ಆಫ್ರಿಕಾ: 2012
16: ಶ್ರೇಯಸ್ ಅಯ್ಯರ್, ಭಾರತ: 2021
ಇದನ್ನೂ ಓದಿ: Shreyas Iyer- ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಭಾರಿಸಿದ ಅಯ್ಯರ್; ಈ ಸಾಧನೆ ಮಾಡಿದ ಕೆಲವೇ ಆಟಗಾರರ ಪಟ್ಟಿ
ಶ್ರೇಯಸ್ ಅಯ್ಯರ್ಗೆ ದ್ರಾವಿಡ್ ಸಲಹೆ:
ಭಾರತ ಸಂಕಷ್ಟದ ಸ್ಥಿತಿಯಲ್ಲಿರುವ ಶ್ರೇಯಸ್ ಅಯ್ಯರ್ ಇಂಥ ಇನ್ನಿಂಗ್ಸ್ ಆಡಲು ಅವರೊಳಗಿನ ಹುಟ್ಟಾ ಹೋರಾಟಗಾರನ ಅಭಿವ್ಯಕ್ತಿಯಾಗಿದೆ. ಇದರ ಜೊತೆಗೆ ತಂಡದ ನೂತನ ಕೋಚ್ ರಾಹುಲ್ ದ್ರಾವಿಡ್ ಅವರ ಸಲಹೆಯೂ ಭಾಗಶಃ ಕಾರಣವಾಗಿದೆ. ಈ ಬಗ್ಗೆ ಶ್ರೇಯಸ್ ಅಯ್ಯರ್ ಹೇಳಿದ್ದು ಇದು: “ಸಾಧ್ಯವಾದಷ್ಟು ಚೆಂಡುಗಳನ್ನ ಆಡುವಂತೆ ರಾಹುಲ್ ಸಾರ್ ನನಗೆ ತಿಳಿಸಿದರು. ನಾನು ಅದೇ ರೀತಿ ಆಡಲು ಬದ್ಧನಾಗಿದ್ದೆ”.
ಪದಾರ್ಪಣೆ ಟೆಸ್ಟ್ನಲ್ಲಿ ಶತಕ ಮತ್ತು ಅರ್ಧಶತಕ ದಾಖಲೆ ಸ್ಥಾಪಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅಯ್ಯರ್, “ಆ ದಾಖಲೆ ಬಗ್ಗೆ ನನಗೆ ಅರಿವಿತ್ತು. ಬೇರೆ ತಂಡಗಳ ಹಲವರು ಈಗಾಗಲೇ ಆ ಮೈಲಿಗಲ್ಲು ಮುಟ್ಟಿದ್ದರು. ಆದರೆ, ಭಾರತದವರು ಯಾರೂ ಮಾಡಿಲ್ಲ ಎಂದು ಗೊತ್ತಾಯಿತು. ನಮ್ಮ ತಂಡ ಈ ಪಂದ್ಯ ಗೆದ್ದರೆ ನನ್ನ ಇನ್ನಿಂಗ್ಸ್ಗೆ ಸಾರ್ಥಕತೆ ಬರುತ್ತದೆ” ಎಂದಿದ್ದಾರೆ.
ಇದನ್ನೂ ಓದಿ: ನಿಮ್ಮ ಬಾಲ್ ಎಡ್ಜ್ ಆಗುತ್ತದೆ, ನನಗೆ ಯಾಕೆ ಆಗಲ್ಲ ಎಂದು ಅಕ್ಷರ್ ಪಟೇಲ್ರನ್ನು ಅಶ್ವಿನ್ ಕೇಳಿದಾಗ…
ಭಾರತ ಡಿಕ್ಲೇರ್ ಮಾಡಿಕೊಳ್ಳಲು ವಿಳಂಬ ಮಾಡಿದ್ದೇಕೆ?
“ಭಾರತ 250 ರನ್ಗಳ ಒಟ್ಟಾರೆ ಮುನ್ನಡೆ ಪಡೆಯುವುದು ಗುರಿಯಾಗಿತ್ತು. ಇವತ್ತು ಪಿಚ್ ಬೇರೆ ರೀತಿಯಲ್ಲಿ ವರ್ತಿಸುತ್ತಿತ್ತು. ಚೆಂಡು ಹೆಚ್ಚು ಪುಟಿಯುತ್ತಿರಲಿಲ್ಲ. ಒಳ್ಳೆಯ ಮೊತ್ತ ಕಲೆಹಾಕುವುದು ನಮ್ಮ ಉದ್ದೇಶವಾಗಿತ್ತು. ಈಗ ನಾವು ಗಳಿಸಿರುವ ಮುನ್ನಡೆ ನಿಜಕ್ಕೂ ದೊಡ್ಡದೆ. ನಮ್ಮ ಸ್ಪಿನ್ ಶಕ್ತಿಯಿಂದ ನಾಳೆ ಪಂದ್ಯವನ್ನ ಗೆಲ್ಲಬಲ್ಲೆವು” ಎಂದು ಶ್ರೇಯಸ್ ಅಯ್ಯರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತ ಇಂದು ಎರಡನೇ ಇನ್ನಿಂಗ್ಸಲ್ಲಿ 7 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ನ್ಯೂಜಿಲೆಂಡ್ಗೆ ಗೆಲ್ಲಲು 284 ರನ್ ಗುರಿ ನೀಡಿತು. ದಿನದ ಕೊನೆಯಲ್ಲಿ ನ್ಯೂಜಿಲೆಂಡ್ 4 ಓವರ್ಗಳನ್ನ ಎದುರಿಸಿ ಒಂದು ವಿಕೆಟ್ ಕಳೆದುಕೊಂಡಿದೆ. ಮೊದಲ ಇನ್ನಿಂಗ್ಸಲ್ಲಿ 89 ರನ್ ಗಳಿಸಿದ್ದ ವಿಲ್ ಯಂಗ್ ಅವರನ್ನ ಆರ್ ಅಶ್ವಿನ್ ಔಟ್ ಮಾಡಿದ್ದಾರೆ.
ನಾಳೆ ಪಂದ್ಯದ ಕೊನೆಯ ದಿನವಾಗಿದ್ದು, ಭಾರತದ ಸ್ಪಿನ್ನರ್ಗಳು ಕಿವೀಸ್ ಪಡೆ ಬ್ಯಾಟುಗಾರರ ಮೇಲೆ ಪ್ರಾಬಲ್ಯ ಸಾಧಿಸುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ