T20 World Cup- ಅಕ್ಷರ್​ಗೆ ಕೊಕ್; ಶಾರ್ದೂಲ್ ಎಂಟ್ರಿ; ಭಾರತ ಟಿ20 ವಿಶ್ವಕಪ್ ತಂಡದಲ್ಲಿ ಬದಲಾವಣೆ

Shardul Thakur Replaces Axar Patel- ಐಪಿಎಲ್​ನಲ್ಲಿ ದೊಡ್ಡ ಮಟ್ಟದಲ್ಲಿ ಛಾಪು ಮೂಡಿಸಲು ಯಶಸ್ವಿಯಾಗದ ಅಕ್ಷರ್ ಪಟೇಲ್ ಅವರನ್ನ 15 ಮಂದಿ ಆಟಗಾರರ ಟಿ20 ವಿಶ್ವಕಪ್​ನ ಟೀಮ್ ಇಂಡಿಯಾದಿಂದ ಕೈಬಿಡಲಾಗಿದೆ. ಅವರ ಬದಲು ಶಾರ್ದೂಲ್ ಠಾಕೂರ್ ಅವರನ್ನ ಸೇರಿಸಿಕೊಳ್ಳಲಾಗಿದೆ.

ಶಾರ್ದೂಲ್ ಠಾಕೂರ್

ಶಾರ್ದೂಲ್ ಠಾಕೂರ್

 • Share this:
  ದುಬೈ, ಅ. 13: ಇದೇ 24ರಿಂದ ಟಿ20 ವಿಶ್ವಕಪ್ ಅಭಿಯಾನ ಪ್ರಾರಂಭಿಸಲಿರುವ ಭಾರತ ತಂಡದಲ್ಲಿ ಒಂದು ಬದಲಾವಣೆ ಆಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಲ್​ರೌಂಡರ್ ಅಕ್ಷರ್ ಪಟೇಲ್ ಅವರ ಬದಲು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್​ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನ 15 ಮಂದಿ ಆಟಗಾರರ ಟೀಮ್ ಇಂಡಿಯಾಗೆ ಸೇರಿಸಿಕೊಳ್ಳಲಾಗಿದೆ. ಇಂದು ಬುಧವಾರ ಬಿಸಿಸಿಐ ಈ ನಿರ್ಧಾರವನ್ನು ಪ್ರಕಟಿಸಿದೆ. “ಟೀಮ್ ಮ್ಯಾನೇಜ್ಮೆಂಟ್ ಜೊತೆ ಚರ್ಚೆ ನಡೆಸಿದ ಬಳಿಕ ಅಖಿಲ ಭಾರತ ಹಿರಿಯ ಆಯ್ಕೆ ಸಮಿತಿಯು ಭಾರತದ ತಂಡಕ್ಕೆ ಶಾರ್ದೂಲ್ ಠಾಕೂರ್ ಅವರನ್ನ ಆಯ್ಕೆ ಮಾಡಿದೆ. ಈ ಹಿಂದೆ ಪ್ರಕಟವಾಗಿದ್ದ 15 ಮಂದಿ ಆಟಗಾರರ ಪಟ್ಟಿಯಲ್ಲಿದ್ದ ಆಲ್​ರೌಂಡರ್ ಅಕ್ಷರ್ ಪಟೇಲ್ ಅವರು ಸ್ಟ್ಯಾಂಡ್​ಬೈ ಆಟಗಾರರ ಪಟ್ಟಿಯಲ್ಲಿ ಇರಲಿದ್ದಾರೆ” ಎಂದು ಬಿಸಿಸಿಐ ಹೇಳಿಕೆ ನೀಡಿದೆ.

  ವಿಶ್ವಕಪ್ ತಂಡದಲ್ಲಿ ಬದಲಾವಣೆ ಮಾಡಲು ಭಾರತಕ್ಕೆ ನಾಳೆಯವರೆಗೆ ಅವಕಾಶ ಇದೆ. ಈಗ ಕೊನೆಯ ಕ್ಷಣದಲ್ಲಿ ತಂಡದಲ್ಲಿ ಬದಲಾವಣೆ ಮಾಡಲು ಕಾರಣ ಏನೆಂದು ಬಿಸಿಸಿಐ ಸ್ಪಷ್ಟಪಡಿಸಿಲ್ಲ. ಮೂಲಗಳು ಹೇಳುವ ಪ್ರಕಾರ, ಹಾರ್ದಿಕ್ ಪಾಂಡ್ಯ ಅವರು ಇನ್ನೂ ಪೂರ್ಣಪ್ರಮಾಣದಲ್ಲಿ ಚೇತರಿಸಿಕೊಂಡಿರುವುದು ಅನುಮಾನ ಇದೆ. ಹೀಗಾಗಿ, ವೇಗದ ಬೌಲಿಂಗ್ ಮತ್ತು ಬ್ಯಾಟಿಂಗ್ ಮಾಡಬಲ್ಲ ಆಲ್​ರೌಂಡರ್​ವೊಬ್ಬರ ಅಗತ್ಯ ತಂಡಕ್ಕೆ ಇದೆ. ಈ ಕಾರಣಕ್ಕೆ ಶಾರ್ದೂಲ್ ಠಾಕೂರ್ ಅವರನ್ನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಧೋನಿ ಅವರ ಸಲಹೆ ಮೇರೆಗೆ ಠಾಕೂರ್ ಅವರನ್ನ ಸೇರಿಸಿಕೊಂಡಿರುವ ಸಾಧ್ಯತೆಯೂ ಇದೆ. ಶಾರ್ದೂಲ್ ಠಾಕೂರ್ ಅವರು ಟಿ20 ವಿಶ್ವಕಪ್ ತಂಡದಲ್ಲಿ ಇದ್ದರಾದರೂ ಮೀಸಲು ಆಟಗಾರರ ಪಟ್ಟಿಯಲ್ಲಿದ್ದರು. ಈಗ ಅವರು 15 ಆಟಗಾರರ ಮುಖ್ಯ ತಂಡಕ್ಕೆ ಸೇರ್ಪಡೆಯಾಗಿದ್ಧಾರೆ. ಅಕ್ಷರ್ ಪಟೇಲ್ ಮೀಸಲು ಆಟಗಾರರ ಪಟ್ಟಿಗೆ ತಳ್ಳಲ್ಪಟ್ಟಿದ್ಧಾರೆ. ಸಿಎಸ್​ಕೆ ತಂಡದ ದೀಪಕ್ ಚಾಹರ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶ್ರೇಯಸ್ ಅಯ್ಯರ್ ಅವರೂ ಮೀಸಲು ಆಟಗಾರರ ಪಟ್ಟಿಯಲ್ಲಿದ್ದಾರೆ.

  ಶಾರ್ದೂಲ್ ಠಾಕೂರ್ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ವಿಭಾಗದ ಆಧಾರ ಸ್ತಂಭವಾಗಿದ್ದಾರೆ. ಆ ತಂಡದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಬೌಲರ್ ಅವರು. 18 ವಿಕೆಟ್​ಗಳನ್ನ ಪಡೆದಿದ್ದಾರೆ. ಜೊತೆಗೆ ಉತ್ತಮ ಬ್ಯಾಟರ್ ಕೂಡ ಹೌದಾದರೂ ಈ ಐಪಿಎಲ್​ನಲ್ಲಿ ಅವರು ಹೆಚ್ಚು ಪಂದ್ಯದಲ್ಲಿ ಬ್ಯಾಟಿಂಗ್​ಗೆ ಅವಕಾಶವೇ ಸಿಕ್ಕಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅವರನ್ನ ಬಡ್ತಿ ನೀಡಿ ಬ್ಯಾಟಿಂಗ್​ಗೆ ಕಳುಹಿಸಲಾಯಿತಾದರೂ ರನ್ ಗಳಿಸಲು ವಿಫಲರಾಗಿದ್ದರು. ಇವರ ಬ್ಯಾಟಿಂಗ್ ಝಳಕು ಪರೀಕ್ಷಿಸಲೆಂದೇ ಆಡಲು ಬೇಗ ಕಳುಹಿಸಲಾಗಿತ್ತು ಎಂದು ಹೇಳಲಾಗುತ್ತಿದೆ.

  ಇದನ್ನೂ ಓದಿ: Sunil Narine- ವೆಸ್ಟ್ ಇಂಡೀಸ್ ಟಿ20 ವಿಶ್ವಕಪ್ ತಂಡದಲ್ಲಿ ಸುನೀಲ್ ನರೈನ್​ಗೆ ಇಲ್ಲ ಸ್ಥಾನ; ಕಾರಣ ಏನು?

  ಬ್ಯಾಟಿಂಗ್​ನಲ್ಲಿ ಛಾಪು ಮೂಡಿಸದ ಶಾರ್ದೂಲ್:

  ಶಾರ್ದೂಲ್ ಅವರು ವೃತ್ತಿಜೀವನದಲ್ಲಿ ಒಂದೂ ಶತಕ ಭಾರಿಸಿಲ್ಲ. ನಾಲ್ಕು ಟೆಸ್ಟ್ ಪಂದ್ಯಗಳಿಂದ 38 ರನ್ ಸರಾಸರಿಯಲ್ಲಿ 190 ರನ್ ಗಳಿಸಿದ್ಧಾರೆ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 66 ಪಂದ್ಯಗಳಿಂದ 1,444 ರನ್ ಭಾರಿಸಿದ್ದು 9 ಅರ್ಧಶತಕಗಳನ್ನ ದಾಖಲಿಸಿದ್ಧಾರೆ. ಆದರೆ, ಹಾರ್ದಿಕ್ ಪಟೇಲ್ ಅವರಂತೆ ಬ್ಯಾಟಿಂಗ್​ನಲ್ಲಿ ಇವರು ಇನ್ನೂ ಛಾಪು ಮೂಡಿಸಿಲ್ಲ. ಬ್ಯಾಟಿಂಗ್ ದೌರ್ಬಲ್ಯ ಹೊರತುಪಡಿಸಿದರೆ ಶಾರ್ದೂಲ್ ಠಾಕೂರ್ ಒಬ್ಬ ಅಪ್ಪಟ ಬೌಲಿಂಗ್ ಪ್ರತಿಭೆ. ಅದ್ಭುತವಾಗಿ ಸ್ವಿಂಗ್ ಮಾಡಬಲ್ಲ ಬೌಲರ್. ಒಬ್ಬ ಬೌಲರ್ ಆಗಿಯೇ ಇವರು ತಂಡಕ್ಕೆ ಆಯ್ಕೆ ಆಗಬಲ್ಲವರು.

  ಅಕ್ಷರ್ ಪಟೇಲ್ ನಿರಾಸೆ:

  ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಕ್ಷರ್ ಪಟೇಲ್ ಜೂನಿಯರ್ ಕ್ರಿಕೆಟ್​ನಿಂದಲೂ ಭಾರೀ ಭರವಸೆ ಮೂಡಿಸಿರುವ ಪ್ರತಿಭೆ. ಆದರೆ, ನಿರೀಕ್ಷೆಗೆ ತಕ್ಕಷ್ಟು ಮಟ್ಟದಲ್ಲಿ ಅವರು ಯಶಸ್ಸು ಕಾಣುತ್ತಿಲ್ಲ. ಈ ಐಪಿಎಲ್​ನಲ್ಲಿ 15 ವಿಕೆಟ್ ಪಡೆದಿದ್ದಾರಾದರೂ ಇಂಪ್ಯಾಕ್ಟ್ ಕಡಿಮೆ. ಬ್ಯಾಟಿಂಗ್​ನಲ್ಲಿ 5 ಇನಿಂಗ್ಸ್ ಆಡಿರುವ ಇವರು ಗಳಿಸಿರುವುದು ಕೇವಲ 36 ರನ್ ಮಾತ್ರ. ಫಾರ್ಮ್​ನಲ್ಲಿ ಇಲ್ಲದ ಇವರನ್ನ ವಿಶ್ವಕಪ್ ತಂಡದಿಂದ ಕೈಬಿಡುವಂತೆ ಹಲವರು ಒತ್ತಾಯಿಸುತ್ತಾ ಬಂದಿದ್ದರು.

  ಟಿ20 ವಿಶ್ವಕಪ್​ಗೆ ಭಾರತ ತಂಡ:

  ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿ.ಕೀ.) ಇಶಾನ್ ಕಿಶನ್ (ವಿ.ಕೀ.), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಾಹರ್, ಆರ್ ಅಶ್ವಿನ್, ವರುಣ್ ಚಕ್ರವರ್ತಿ, ಜಸ್​ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ.
  ಮೀಸಲು ಆಟಗಾರರು (Stand-by Players): ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ದೀಪಕ್ ಚಾಹರ್
  Published by:Vijayasarthy SN
  First published: