ಐಪಿಎಲ್ ಕ್ರಿಕೆಟ್ ಕದನ ಶುರುವಾಗಲು ಇನ್ನು ಕೇವಲ ದಿನಗಳು ಮಾತ್ರ ಉಳಿದಿವೆ. ಇತ್ತ ಆರ್ಸಿಬಿ ತಂಡ ಚೆನ್ನೈನಲ್ಲಿ ಭರ್ಜರಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರೆ, ಅತ್ತ ಕನ್ನಡಿಗರನ್ನು ಒಳಗೊಂಡಿರುವ ಪಂಜಾಬ್ ಕಿಂಗ್ಸ್ ಮುಂಬೈನಲ್ಲಿ ಪ್ರಾಕ್ಟೀಸ್ ಶುರು ಮಾಡಿಕೊಂಡಿದೆ. ಈ ಬಾರಿ ಕೂಡ ಪಂಜಾಬ್ ತಂಡವನ್ನು ಕೆಎಲ್ ರಾಹುಲ್ ಮುನ್ನಡೆಸಿದರೆ, ಕೋಚ್ ಆಗಿ ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ಅನಿಲ್ ಕುಂಬ್ಳೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರಂತೆ ಕುಂಬ್ಳೆ ಗರಡಿಯಲ್ಲಿ ಯುವ ಕ್ರಿಕೆಟಿಗರು ಬೆವರಿಳಿಸುತ್ತಿದ್ದಾರೆ. ಅಲ್ಲದೆ ಪ್ರತಿಯೊಬ್ಬ ಆಟಗಾರರ ಸಾಮರ್ಥ್ಯವನ್ನು ಕೋಚ್ ಗಮನಿಸುತ್ತಿದ್ದು, ಇದೇ ವೇಳೆ ಕುಂಬ್ಳೆ ಹೇಳಿದ ಮಾತೊಂದು ಎಲ್ಲರ ಗಮನ ಸೆಳೆದಿದೆ.
ಹೌದು, ಪಂಜಾಬ್ ಕಿಂಗ್ಸ್ ತಂಡದಲ್ಲಿ ಸ್ಥಾನ ಪಡೆದಿರುವ ಯುವ ಬ್ಯಾಟ್ಸ್ಮನ್ ಶಾರುಖ್ ಖಾನ್ ಅವರನ್ನು ಪ್ರಶಂಸಿಸುತ್ತಾ ಆತನನ್ನು ವೆಸ್ಟ್ ಇಂಡೀಸ್ ಆಲ್ರೌಂಡರ್ ಕೀರನ್ ಪೊಲಾರ್ಡ್ಗೆ ಹೋಲಿಸಿದ್ದಾರೆ. ಟಿ20 ಕ್ರಿಕೆಟ್ನ ಅಪಾಯಕಾರಿ ಬ್ಯಾಟ್ಸ್ಮನ್ ಎಂದು ಗುರುತಿಸಿಕೊಂಡಿರುವ ಪೊಲಾರ್ಡ್ ಅವರಂತೆಯೇ ಶಾರುಖ್ ಖಾನ್ ಕೂಡ ಬ್ಯಾಟ್ ಬೀಸುತ್ತಿದ್ದಾರೆ. ಈತನ ಆಟವು ನನಗೆ ಸ್ವಲ್ಪ ಪೊಲಾರ್ಡ್ನನ್ನು ನೆನಪಿಸುತ್ತಿದೆ. ನಾನು ಮುಂಬೈ ಇಂಡಿಯನ್ಸ್ ಜೊತೆಗಿದ್ದಾಗ, ನೆಟ್ಸ್ ಗಳಲ್ಲಿ ಪೊಲಾರ್ಡ್ ಅಪಾಯಕಾರಿಯಾಗಿ ಬ್ಯಾಟ್ ಬೀಸುತ್ತಿದ್ದರು. ನಾನು ಕೂಡ ಪೊಲಾರ್ಡ್ಗೆ ಬೌಲಿಂಗ್ ಮಾಡುತ್ತಿದ್ದೆ. ಹೀಗಾಗಿ ಕೀರನ್ ಪೊಲಾರ್ಡ್ ಏನು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ.
ಇದೀಗ ಶಾರುಖ್ ಖಾನ್ ಬ್ಯಾಟಿಂಗ್ ಶೈಲಿ ನೋಡಿದ್ರೆ ನನಗೆ ಪೊಲಾರ್ಡ್ ಅವರ ನೆನಪಾಗುತ್ತೆ. ಆತನಂತೆ ಈತ ಕೂಡ ಬಿರುಸಿನ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾನೆ ಎಂದು ಕುಂಬ್ಳೆ ತಿಳಿಸಿದ್ದಾರೆ. ಈ ಮೂಲಕ ಪಂಜಾಬ್ ಕಿಂಗ್ಸ್ನಲ್ಲಿ ಇಂಡಿಯನ್ ಪೊಲಾರ್ಡ್ ಇದ್ದಾನೆ ಕಾಯ್ತಾ ಇರಿ ಎಂಬ ಸಣ್ಣ ಸೂಚನೆಯನ್ನು ನೀಡಿದ್ದಾರೆ ಕುಂಬ್ಳೆ.
ಇನ್ನು ಶಾರುಖ್ ಖಾನ್ ಬಗ್ಗೆ ಹೇಳುವುದಾದರೆ, ಈತ ತಮಿಳುನಾಡು ಮೂಲದ ಕ್ರಿಕೆಟಿಗ. ಆರಂಭಿಕ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಈತ ಬಿರುಸಿನ ಬ್ಯಾಟಿಂಗ್ಗೆ ಹೆಸರುವಾಸಿ. ತಮಿಳುನಾಡು ಈ ಬಾರಿಯ ಸೈಯದ್ ಮುಷ್ತಾಕ್ ಟ್ರೋಫಿ ಗೆಲ್ಲುವಲ್ಲಿ ಶಾರುಖ್ ಖಾನ್ ಪಾತ್ರ ಕೂಡ ಇತ್ತು. ಹೀಗಾಗಿಯೇ ಈ ಯುವ ದಾಂಡಿಗನನ್ನು ಪಂಜಾಬ್ ಕಿಂಗ್ಸ್ ಈ ಬಾರಿ ಬರೋಬ್ಬರಿ 5.25 ಕೋಟಿಗೆ ಖರೀದಿಸಿತ್ತು.
ಈಗಾಗಲೇ ಪಂಜಾಬ್ ಕಿಂಗ್ಸ್ನಲ್ಲಿ ಕೆಎಲ್ ರಾಹುಲ್, ನಿಕೋಲಸ್ ಪೂರನ್, ಕ್ರಿಸ್ ಗೇಲ್, ಡೇವಿಡ್ ಮಲಾನ್ನಂತಹ ಸ್ಪೋಟಕ ಬ್ಯಾಟ್ಸ್ಮನ್ಗಳಿದ್ದಾರೆ. ಇವರ ಜೊತೆ ಈ ಬಾರಿ ಪೊಲಾರ್ಡ್ನಂತಹ ಮತ್ತೊಬ್ಬ ಬ್ಯಾಟ್ಸ್ಮನ್ ರೆಡಿಯಾಗುತ್ತಿದ್ದಾರೆ ಎಂಬ ಎಚ್ಚರಿಕೆ ಎಂಬ ಸಂದೇಶವನ್ನು ಕುಂಬ್ಳೆ ರವಾನಿಸಿದ್ದಾರೆ.
ಪಂಜಾಬ್ ಕಿಂಗ್ಸ್: ಕೆ.ಎಲ್. ರಾಹುಲ್, ಕ್ರಿಸ್ ಗೇಲ್, ಮಾಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್, ಮಂದೀಪ್ ಸಿಂಗ್, ಸರ್ಫರಾಜ್ ಖಾನ್, ದೀಪಕ್ ಹೂಡಾ, ಸಿಮ್ರಾನ್ ಸಿಂಗ್, ಮೊಹಮ್ಮದ್ ಶಮಿ, ಕ್ರಿಸ್ ಜೋರ್ಡಾನ್, ದರ್ಶನ್ ನಲ್ಕಂಡೆ, ರವಿ ಬಿಷ್ಣೋಯ್, ಮುರುಗನ್ ಅಶ್ವಿನ್, ಅರ್ಷ್ದೀಪ್ ಸಿಂಗ್ , ಡೇವಿಡ್ ಮಲನ್, ಜೇ ರಿಚರ್ಡ್ಸನ್, ಶಾರುಖ್ ಖಾನ್, ರಿಲೆ ಮೆರೆಡಿತ್, ಮೊಯಿಸಸ್ ಹೆನ್ರಿಕ್ಸ್, ಜಲಜ್ ಸಕ್ಸೇನಾ, ಉತ್ಕರ್ಶ್ ಸಿಂಗ್, ಫ್ಯಾಬಿಯನ್ ಅಲೆನ್, ಸುಮಿತ್ ಕುಮಾರ್