ದುಬೈ: ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಕ್ರಿಕೆಟ್ ಪಂದ್ಯ ಎಂದರೆ ಅದರ ರೋಚಕತೆಯೇ ಬೇರೆ. ಭಾರತ ಮತ್ತು ಪಾಕಿಸ್ತಾನದ ದೇಶಗಳ ಕ್ರಿಕೆಟ್ ಪ್ರೇಮಿಗಳ ಎದೆಯಲ್ಲಿ ತುಡಿತ ಹೆಚ್ಚುತ್ತದೆ. ತಮ್ಮ ತಂಡ ಸೋತರೆ ಆಟಗಾರರನ್ನ ಟ್ರಾಲ್ ಮಾಡುವ ವಿಚಿತ್ರ ಅಭಿಮಾನಿಗಳ ಬಳಗವೂ ಇದೆ. ಇದೆಲ್ಲದರ ಮಧ್ಯೆ ಭಾರತ ಮತ್ತು ಪಾಕಿಸ್ತಾನ ತಂಡಗಳ ಆಟಗಾರರಿಗೆ ಒತ್ತಡ ಬಹಳಷ್ಟಿರುತ್ತದೆ. ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದಿರುವ ಅನೇಕ ಹಣಾಹಣಿಗಳಲ್ಲಿ ಹೆಚ್ಚಿನ ಪಂದ್ಯಗಳನ್ನ ಪಾಕಿಸ್ತಾನವೇ ಗೆದ್ದಿದೆ. ಆದರೆ, ಟಿ20 ವಿಶ್ವಕಪ್ ಸೇರಿ ಐಸಿಸಿಯ ಯಾವುದೇ ವಿಶ್ವಕಪ್ ಟೂರ್ನಿಗಳಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದದ್ದೇ ಇಲ್ಲ. ವಿಶ್ವಕಪ್ಗಳಲ್ಲಿ ಪಾಕಿಸ್ತಾನ ವಿರುದ್ಧ ಭಾರತ 12 ಪಂದ್ಯಗಳಲ್ಲಿ ಗೆದ್ದಿದೆ. ಪಾಕಿಸ್ತಾನಕ್ಕೆ ಒಂದೂ ಜಯ ಸಿಕ್ಕಿಲ್ಲ. 50 ಓವರ್ಗಳ ವಿಶ್ವಕಪ್ಗಳಲ್ಲಿ ಏಳು ಪಂದ್ಯಗಳು ಹಾಗೂ ಟಿ20 ವಿಶ್ವಕಪ್ಗಳಲ್ಲಿ ಐದು ಪಂದ್ಯಗಳಲ್ಲಿ ಪಾಕಿಸ್ತಾನದ ಎದುರು ಭಾರತ ಗೆದ್ದಿದೆ.
ಈಗ ಟಿ20 ವಿಶ್ವಕಪ್ಗೆ ದಿನಗಣನೆ ಶುರುವಾಗಿದೆ. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಅ. 24ರಂದು ನಡೆಯಲಿದೆ. ಈ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಗೆಲುವು ಖಚಿತ ಎಂದು ಅಲ್ಲಿನ ಹಲವು ಕ್ರಿಕೆಟಿಗರು ಆತ್ಮವಿಶ್ವಾಸದಲ್ಲಿದ್ದಾರೆ. ಈ ಬಗ್ಗೆ ಪಾಕಿಸ್ತಾನದ ಮಾಜಿ ಕ್ಯಾಪ್ಟನ್ ಶಾಹಿದ್ ಅಫ್ರಿದಿ ಮಾತನಾಡಿದ್ಧಾರೆ. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆಯುವ ಪಂದ್ಯ ಯಾವಾಗಲೂ ಒತ್ತಡದಿಂದ ಇರುತ್ತದೆ. ಈ ಒತ್ತಡವನ್ನ ಆ ದಿನ ಯಾರು ಚೆನ್ನಾಗಿ ನಿಭಾಯಿಸುತ್ತಾರೋ ಆ ತಂಡಕ್ಕೆ ಗೆಲುವಿನ ಅವಕಾಶ ಜಾಸ್ತಿ ಎಂದು ಅಫ್ರಿದಿ ಹೇಳಿದ್ಧಾರೆ.
“ನೋಡಿ, ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯ ಯಾವಾಗಲೂ ತೀವ್ರ ಒತ್ತಡದಿಂದ ಕೂಡಿರುತ್ತದೆ. ಈ ಒತ್ತಡವನ್ನ ಚೆನ್ನಾಗಿ ನಿಭಾಯಿಸುವ ತಂಡ ಪಂದ್ಯ ಗೆಲ್ಲುತ್ತದೆ. ಅತೀ ಕಡಿಮೆ ತಪ್ಪುಗಳನ್ನ ಮಾಡುವ ತಂಡಕ್ಕೆ ಗೆಲುವಿನ ಅವಕಾಶ ಹೆಚ್ಚಿರುತ್ತದೆ” ಎಂದು ಅಫ್ರಿದಿ ತಮ್ಮ ಯೂಟ್ಯೂಬ್ ವಿಡಿಯೋದಲ್ಲಿ ಮಾತನಾಡುತ್ತಾ ತಿಳಿಸಿದ್ಧಾರೆ.
ಇದನ್ನೂ ಓದಿ: MS Dhoni- ಟಿ20 ವಿಶ್ವಕಪ್ ತಂಡದ ಮೆಂಟರಿಂಗ್ ಆಗಿ ಧೋನಿ ಕೆಲಸವೇನು, ಸಂಭಾವನೆ ಎಷ್ಟು?
ಭಯೋತ್ಪಾದನೆ ಹಾಗೂ ರಾಜಕೀಯ ಕಾರಣಕ್ಕೆ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಇತ್ತೀಚಿನ ವರ್ಷಗಳಿಂದ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳು ನಡೆದಿಲ್ಲ. 2013ರಲ್ಲಿ ಭಾರತ ಪ್ರವಾಸಕ್ಕೆ ಬಂದು ಸರಣಿಯನ್ನ 2-1ರಿಂದ ಪಾಕಿಸ್ತಾನ ಗೆದ್ದಿತ್ತು. ಆ ಬಳಿಕ ಈ ಎರಡು ತಂಡಗಳ ಮಧ್ಯೆ ಯಾವುದೇ ಸರಣಿ ನಡೆದಿಲ್ಲ. ತಟಸ್ಥ ಸ್ಥಳಗಳಲ್ಲಿ ಯಾವುದಾದರೂ ಟೂರ್ನಿಗಳಲ್ಲಿ ಎರಡೂ ತಂಡಗಳು ಸಂಧಿಸುತ್ತವೆ ಅಷ್ಟೇ. ಹೀಗಾಗಿ, ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯಗಳು ಅಪರೂಪವಾಗಿವೆ. ಈಗ ಟಿ20 ವಿಶ್ವಕಪ್ನಲ್ಲಿ ಎರಡೂ ತಂಡಗಳು ಮುಖಾಮುಖಿಯಾಗುತ್ತಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ದುಬೈನಲ್ಲಿ ಅ. 24ರಂದು ನಡೆಯುವ ಈ ಹೈ ವೋಲ್ಟೇಜ್ ಪಂದ್ಯಕ್ಕೆ ಎರಡೇ ದಿನದಲ್ಲಿ ಟಿಕೆಟ್ಗಳೆಲ್ಲವೂ ಮಾರಾಟವಾಗಿ ಸೋಲ್ಡ್ ಔಟ್ ಆಗಿವೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯ ಎಂದರೆ ಅನೇಕ ಅವಿಸ್ಮರಣೀಯ ಕ್ಷಣಗಳು, ಘಟನೆಗಳು ನೆನಪಿಗೆ ಬರುತ್ತವೆ. ಚೇತನ್ ಶರ್ಮಾ ಬೌಲಿಂಗ್ನಲ್ಲಿ ಕೊನೆಯ ಬಾಲ್ನಲ್ಲಿ ಜಾವೆದ್ ಮಿಯಂದಾದ್ ಸಿಕ್ಸರ್ ಸಿಡಿಸಿದ್ದು, ಕಿರಣ್ ಮೋರೆ ಜಾವೇದ್ ಮಿಯಂದಾದ್ ಜಟಾಪಟಿ, ವೆಂಕಟೇಶ್ ಪ್ರಸಾದ್ ಆಮಿರ್ ಸೊಹೇಲ್ ಜಟಾಪಟಿ, ಮುಲ್ತಾನ್ನಲ್ಲಿ ಸೆಹ್ವಾಗ್ ತ್ರಿಶತಕ, ಆಕಿಬ್ ಜಾವೇದ್ ಹ್ಯಾಟ್ರಿಕ್, ಚೆನ್ನೈನಲ್ಲಿ ಸಚಿನ್ ತೆಂಡೂಲ್ಕರ್ ಶತಕ ಹೀಗೆ ಬಹಳಷ್ಟು ಸ್ವಾರಸ್ಯಕರ ಮತ್ತು ಅವಿಸ್ಮರಣೀಯ ಕ್ಷಣಗಳನ್ನ ಭಾರತ ಮತ್ತು ಪಾಕಿಸ್ತಾನದ ಪಂದ್ಯಗಳು ನೀಡಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ