Ind vs Pak- ನಾನು ಕಂಡ ಅತ್ಯುತ್ತಮ ಎಸೆತಗಳವು: ಆ ಸೂಪರ್ ಓವರ್​ಗೆ ಹೇಡನ್ ಫುಲ್ ಮಾರ್ಕ್ಸ್

T20 World Cup: ಭಾರತ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಅವರನ್ನ ಬಲಿತೆಗೆದುಕೊಂಡ ಶಾಹೀನ್ ಅಫ್ರಿದಿಯ ಆ ಎರಡು ಎಸೆತಗಳು ಅತ್ಯುತ್ತಮ ಎನಿಸಿವೆ ಎಂದು ಮ್ಯಾಥ್ಯೂ ಹೇಡನ್ ಅಭಿಪ್ರಾಯಪಟ್ಟಿವೆ.

ಶಾಹೀನ್ ಅಫ್ರಿದಿ

ಶಾಹೀನ್ ಅಫ್ರಿದಿ

 • Share this:
  ದುಬೈ: ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಸೋಲಲು ಕಾರಣವಾದ ಒಂದು ಅಂಶದ ಬಗ್ಗೆ ಆ ತಂಡದ ಬ್ಯಾಟಿಂಗ್ ಕೋಚ್ ಮ್ಯಾಥ್ಯೂ ಹೇಡನ್ ಬೆಳಕು ಚೆಲ್ಲಿದ್ದಾರೆ. ಪಾಕಿಸ್ತಾನದ ಪ್ರಬಲ ಬೌಲಿಂಗ್ ದಾಳಿಯನ್ನು ಸಮರ್ಪಕವಾಗಿ ಎದುರಿಸಲು ಭಾರತದ ಟಾಪ್ ಆರ್ಡರ್ ಬ್ಯಾಟುಗಾರರು ವಿಫಲರಾಗಿದ್ದು ಪ್ರಮುಖ ಕಾರಣ ಎಂದು ಮಾಜಿ ಆಸ್ಟ್ರೇಲಿಯಾ ಆಟಗಾರ ಅಭಿಪ್ರಾಯಪಟ್ಟಿದ್ದಾರೆ. ಪಾಕಿಸ್ತಾನದ ಬೌಲಿಂಗ್ ದಾಳಿಯನ್ನು ಭಾರತದ ಬ್ಯಾಟರ್ಸ್ ಸರಿಯಾಗಿ ಎದುರಿಸಲು ವಿಫಲರಾಗಲು ಏನು ಕಾರಣ ಎಂದೂ ಹೇಡನ್ ಎತ್ತಿ ತೋರಿಸಿದ್ದಾರೆ.

  ಭಾರತದ ಬ್ಯಾಟುಗಾರರು ಈ ವಿಶ್ವಕಪ್​ಗೆ ಮುನ್ನ ಇದೇ ಪಿಚ್​ಗಳಲ್ಲಿ ಐಪಿಎಲ್ ಪಂದ್ಯಗಳನ್ನ ಆಡಿದ್ದರು. ಇಲ್ಲಿನ ಅನುಭವ ವಿಶ್ವಕಪ್​ನಲ್ಲಿ ತಮ್ಮ ಅಭಿಯಾನಕ್ಕೆ ಸುಲಭವಾಗುತ್ತದೆ ಎಂದು ಟೀಮ್ ಇಂಡಿಯಾ ನಿರೀಕ್ಷಿಸಿತ್ತು. ಮ್ಯಾಥ್ಯೂ ಹೇಡನ್ ಪ್ರಕಾರ ಈ ಅನುಭವವೇ ಭಾರತಕ್ಕೆ ಮುಳುವಾಗಿದೆ. ಹೇಗಂತೀರಾ? ಯುಎಇಯ ಪಿಚ್​ಗಳು ನಿಧಾನಗತಿಯದ್ದೆಂದು ಭಾವಿಸಿ ಐಪಿಎಲ್ ಬೌಲರ್​ಗಳು 130 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದರು. ಈ ಮಧ್ಯಮ ವೇಗಕ್ಕೆ ಭಾರತದ ಬ್ಯಾಟುಗಾರರು ಹೊಂದಿಕೊಂಡಿದ್ದರು. ಆದರೆ, ಪಾಕಿಸ್ತಾನ ಬೌಲರ್​ಗಳ ರಣವೇಗಕ್ಕೆ ಭಾರತದ ಬ್ಯಾಟರ್ಸ್ ಪರದಾಡಬೇಕಾಯಿತು. ಶಾಹೀನ್ ಅಫ್ರಿದಿಯ ವೇಗದ ಬೌಲಿಂಗ್​ಗೆ ಭಾರತದ ಬ್ಯಾಟುಗಾರರಿಂದ ಉತ್ತರ ಬರಲಿಲ್ಲ. ಈ ಅಂಶವನ್ನು ಮ್ಯಾಥ್ಯೂ ಹೇಡನ್ ಒತ್ತಿ ಹೇಳಿದ್ದಾರೆ.

  ಆ ಎರಡು ಬಾಲ್ ನಾನು ಕಂಡ ಅತ್ಯುತ್ತಮ ಎಸೆತ:

  ಅ. 24ರಂದು ದುಬೈನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ 10 ವಿಕೆಟ್​ಗಳಿಂದ ಭಾರತವನ್ನು ಪರಾಭವಗೊಳಿಸಿತು. ಶಾಹೀನ್ ಅಫ್ರಿದಿ ತಮ್ಮ ಮೊದಲೆರಡು ಓವರ್​ನಲ್ಲಿ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರನ್ನ ಔಟ್ ಮಾಡಿದರು. ಆ ಬಗ್ಗೆ ಮಾತನಾಡಿದ ಮ್ಯಾಥ್ಯೂ ಹೇಡನ್, ಕಳೆದ ಐದು ವಾರದಲ್ಲಿ ನಾನು ಕಂಡ ಎರಡು ಅತ್ಯುತ್ತಮ ಬಾಲ್​ಗಳು ಅವಾಗಿದ್ದವು ಎಂದು ಶಾಹೀನ್ ಎಸೆತಕ್ಕೆ ಪೂರ್ಣಾಂಕ ಕೊಟ್ಟರು.

  ಇದನ್ನೂ ಓದಿ: Pakistan coach- ವಿಶ್ವದ ಅತ್ಯುತ್ತಮ ಕೋಚ್ ಪಾಕಿಸ್ತಾನದ ಮುಂದಿನ ಕೋಚ್?

  ಮೊದಲ ಓವರ್​ನಲ್ಲಿ ರೋಹಿತ್ ಶರ್ಮಾ ಅವರಿಗೆ ಶಾಹೀನ್ ವೇಗವಾಗಿ ಎಸೆದ ಚೆಂಡು ಇನ್​ಸ್ವಿಂಗ್ ಯಾರ್ಕರ್ ಆಗಿತ್ತು. ರೋಹಿತ್​ಗೆ ಅದನ್ನು ಆಡಲು ಸಾಧ್ಯವಾಗಲೇ ಇಲ್ಲ. “ಪವರ್ ಪ್ಲೇನಲ್ಲಿ ಹೊಸ ಚೆಂಡಿನಲ್ಲಿ ರೋಹಿತ್ ಶರ್ಮಾ ಅವರಿಗೆ ಆ ಎಸೆತ ಹಾಕಲು ಗಂಡೆದೆ ಬೇಕು” ಎಂದು ಶಾಹೀನ್ ಅಫ್ರಿದಿಯ ಆತ್ಮವಿಶ್ವಾಸಕ್ಕೆ ಹೇಡನ್ ಮೆಚ್ಚುಗೆ ಸೂಚಿಸಿದರು.

  ಇನ್ನು, ಒಳ್ಳೆಯ ಫಾರ್ಮ್​ನಲ್ಲಿದ್ದ ಕೆಎಲ್ ರಾಹುಲ್ ಅವರಿಗೆ ಇನ್-ಡಿಪ್ಪರ್ (ಒಳಬರುವ ಚೆಂಡು) ಹಾಕಿ ಔಟ್ ಮಾಡಿದರು. ಇದೂ ಕೂಡ ಅತ್ಯುತ್ತಮ ಎಸೆತವಾಗಿತ್ತು ಎನ್ನುತ್ತಾರೆ ಪಾಕ್ ಬ್ಯಾಟಿಂಗ್ ಕೋಚ್.

  “ಕಳೆದ ಐದು ವಾರದಲ್ಲಿ ಯಾವುದೇ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರ ಬ್ಯಾಟ್​ನ ಮಧ್ಯ ಭಾಗಕ್ಕೆ ಚೆಂಡು ಏರಿದ್ದು ನಾನು ನೋಡಲಿಲ್ಲ. ಆದರೆ, ಪಾಕಿಸ್ತಾನ ವಿರುದ್ಧ ಅವರು ಅಂತಹದ್ದೊಂದು ಎಸೆತವನ್ನು ಎದುರಿಸಬೇಕಾಯಿತು. ಪವರ್ ಪ್ಲೇನಲ್ಲಿ ಭಾರತಕ್ಕೆ ಹಿನ್ನಡೆ ತಂದ ಎರಡು ಪಂಚ್​ಗಳಾಗಿದ್ದವು ಅವು” ಎಂದು ಹೇಡನ್ ಹೇಳಿದ್ಧಾರೆ.

  ಇದನ್ನೂ ಓದಿ: Ind vs NZ- ನ್ಯೂಜಿಲೆಂಡ್​ನ ದೊಡ್ಡ ಶಕ್ತಿ ಯಾವುದು ಗೊತ್ತಾ? ಭಾರತಕ್ಕೆ ಜಹೀರ್ ಎಚ್ಚರಿಕೆ ಕರೆಗಂಟೆ

  ಭಾರತದ ಸೋಲಿಗೆ ಮುನ್ನುಡಿ ಬರೆದಿದ್ದ ಅಫ್ರಿದಿ:

  ಪಾಕಿಸ್ತಾನದ ಎಡಗೈ ವೇಗದ ಬೌಲರ್ ಶಾಹೀನ್ ಅಫ್ರಿದಿ ವಿಶ್ವ ಕ್ರಿಕೆಟ್​​ನ ಭವಿಷ್ಯದ ತಾರೆ ಎಂದೇ ಪರಿಗಣಿತವಾಗಿದ್ದಾರೆ. ಇವರು ತಮ್ಮ ಮೊದಲ ಓವರ್​ನಲ್ಲೇ ವಿಕೆಟ್​ಗಳನ್ನ ಕೀಳುವ ಛಾತಿ ಹೊಂದಿದ್ದಾರೆ. ಮೂರು ಪಂದ್ಯಗಳಲ್ಲಿ ಸರಾಸರಿ ಒಮ್ಮೆಯಾದರೂ ಇವರು ಮೊದಲ ಓವರ್​ನಲ್ಲಿ ವಿಕೆಟ್ ಪಡೆದಿರುವುದುಂಟು. ಭರ್ಜರಿ ಫಾರ್ಮ್​ನಲ್ಲಿದ್ದ ಕೆಎಲ್ ರಾಹುಲ್, ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರು ಆರಂಭದಲ್ಲೇ ಔಟ್ ಆಗಿದ್ದು ಭಾರತಕ್ಕೆ ಭಾರೀ ಹಿನ್ನಡೆ ತಂದಿತ್ತು. ಅದೃಷ್ಟಕ್ಕೆ ವಿರಾಟ್ ಕೊಹ್ಲಿ ಜವಾಬ್ದಾರಿಯುತ ಅಟವಾಡಿ ಭಾರತಕ್ಕೆ ಗೌರವಯುತ ಮೊತ್ತ ದೊರಕುವಂತೆ ಮಾಡಿದರು.

  ಭಾರತ-ನ್ಯೂಜಿಲೆಂಡ್ ಹಣಾಹಣಿ:

  ಇದೇ ಭಾನುವಾರ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನ ಎದುರಿಸಲಿದೆ. ಇದೇ ಪಾಕಿಸ್ತಾನ ವಿರುದ್ಧ ಸೋತಿರುವ ನ್ಯೂಜಿಲೆಂಡ್ ತಂಡವೂ ಗಾಯಗೊಂಡ ಹುಲಿಯಂತಾಗಿದೆ. ಎರಡೂ ತಂಡಕ್ಕೂ ಇದು ಡೂ ಆರ್ ಡೈ ಪಂದ್ಯ. ಈ ಪಂದ್ಯದ ಬಳಿಕ ಎರಡೂ ತಂಡಗಳಿಗೂ ತುಸು ಸುಲಭ ಎದುರಾಳಿಗಳಿದ್ದು. ಗೆಲ್ಲುವ ನಿರೀಕ್ಷೆ ಇದೆ. ಹೀಗಾಗಿ, ಭಾನುವಾರ ನಡೆಯುವ ಫಲಿತಾಂಶವು ಸೆಮಿಫೈನಲ್ ಪ್ರವೇಶಕ್ಕೆ ನಿರ್ಣಾಯಕ ಎನಿಸಬಹುದು.
  Published by:Vijayasarthy SN
  First published: