HOME » NEWS » Sports » CRICKET SHAFALI VERMA BECOMES YOUNGEST WOMAN TO HIT TWO HALF CENTURIES IN DEBUT TEST ZP

Shafali Verma: ಬ್ಯಾಕ್ ಟು ಬ್ಯಾಕ್ ಹಾಫ್ ಸೆಂಚುರಿ: ಹೊಸ ಇತಿಹಾಸ ನಿರ್ಮಿಸಿದ ಶಫಾಲಿ..!

1984ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಗಾರ್ಗಿ ಬ್ಯಾನರ್ಜಿ ಹಾಗೂ ಸಂಧ್ಯಾ ಅಗರ್ವಾಲ್ ಮೊದಲ ವಿಕೆಟ್​ಗೆ 153 ರನ್​ಗಳ ಜೊತೆಯಾಟ ಆಡಿದ್ದರು. ಇದೀಗ ಈ ದಾಖಲೆಯನ್ನ ಸ್ಮೃತಿ ಹಾಗೂ ಶಫಾಲಿ ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ.

news18-kannada
Updated:June 19, 2021, 8:18 PM IST
Shafali Verma: ಬ್ಯಾಕ್ ಟು ಬ್ಯಾಕ್ ಹಾಫ್ ಸೆಂಚುರಿ: ಹೊಸ ಇತಿಹಾಸ ನಿರ್ಮಿಸಿದ ಶಫಾಲಿ..!
Shafali Verma
  • Share this:
ಭಾರತ ಮಹಿಳಾ ತಂಡದ ಯುವ ಆಟಗಾರ್ತಿ ಶಫಾಲಿ ವರ್ಮಾ ಚೊಚ್ಚಲ ಪಂದ್ಯದಲ್ಲೇ ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಇಂಗ್ಲೆಂಡ್​ ವಿರುದ್ದದ ಈ ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲಿ ಎರಡೂ ಇನಿಂಗ್ಸ್​ನಲ್ಲಿ ಅರ್ಧಶತಕ ಬಾರಿಸಿ ಹೊಸ ಸಾಧನೆ ಮೆರೆದಿದ್ದಾರೆ. ಮೊದಲ ಇನಿಂಗ್ಸ್​ನಲ್ಲಿ 96 ರನ್ ಬಾರಿಸಿದರೂ ಕೇವಲ 4 ರನ್​ಗಳಿಂದ ಚೊಚ್ಚಲ ಶತಕದಿಂದ ವಂಚಿತರಾಗಿದ್ದರು. ಇದಾಗಿ 2ನೇ ಇನಿಂಗ್ಸ್​ನಲ್ಲೂ ಉತ್ತಮವಾಗಿ ಬ್ಯಾಟ್ ಬೀಸಿದ ಲೇಡಿ ಸೆಹ್ವಾಗ್ ಶಫಾಲಿ 63 ರನ್ ಬಾರಿಸಿದರು.

ಈ ಮೂಲಕ ಮೊದಲ ಟೆಸ್ಟ್​ ಪಂದ್ಯದ ಎರಡೂ ಇನಿಂಗ್ಸ್​ನಲ್ಲೂ ಅರ್ಧಶತಕ ಬಾರಿಸಿದ ಕಿರಿಯ ಆಟಗಾರ್ತಿ ಎನಿಸಿಕೊಂಡರು. ಅಷ್ಟೇ ಅಲ್ಲದೆ ಟೆಸ್ಟ್ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ 2ನೇ ಅತ್ಯಂತ ಕಿರಿಯ ಪ್ಲೇಯರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ 17 ವರ್ಷ 107 ದಿನದವರಿದ್ದಾಗ ಎರಡೂ ಇನಿಂಗ್ಸ್​ನಲ್ಲಿ ಅರ್ಧಶತಕ ಬಾರಿಸಿ ದಾಖಲೆ ಬರೆದಿದ್ದರು. ಇದೀಗ ಶಫಾಲಿ ವರ್ಮಾಗೆ 17 ವರ್ಷ 139 ದಿನ ಪ್ರಾಯದಲ್ಲಿ ಈ ಸಾಧನೆ ಮಾಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಆರಂಭಿಕಳಾಗಿ ಕಣಕ್ಕಿಳಿದ 17 ವರ್ಷ ಪ್ರಾಯದ ಶಫಾಲಿ ವರ್ಮಾ ತಮ್ಮ ಚೊಚ್ಚಲ ಪಂದ್ಯದಲ್ಲಿ 96 ರನ್​ಗಳನ್ನು ಬಾರಿಸಿದರು. ಈ ಮೂಲಕ ಮೊದಲ ಪಂದ್ಯದಲ್ಲಿಯೇ ಅತೀ ಹೆಚ್ಚು ರನ್​ ಗಳಿಸಿದ ಭಾರತೀಯ ಆಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾದರು. ಇದಕ್ಕೂ ಮುನ್ನ ಈ ದಾಖಲೆ ಚಂದೇರ್​ಕಾಂತಾ ಕೌಲ್​ ಅವರ ಹೆಸರಿನಲ್ಲಿತ್ತು. ಕೌಲ್ ಅವರು 1995ರಲ್ಲಿ ನ್ಯೂಜಿಲೆಂಡ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ 75 ರನ್​ಗಳನ್ನು ಬಾರಿಸಿದ್ದು, ಇದುವರೆಗಿನ ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಶಫಾಲಿ ತಮ್ಮದಾಗಿಸಿಕೊಂಡಿದ್ದಾರೆ.

ಹಾಗೆಯೇ ಈ ಪಂದ್ಯದಲ್ಲಿ 2 ಸಿಕ್ಸ್​ ಸಿಡಿಸುವ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ ಭಾರತದ ಪರ ಎರಡು ಸಿಕ್ಸರ್ ಬಾರಿಸಿದ ಮೊದಲ ಆಟಗಾರ್ತಿ ಎನಿಸಿಕೊಂಡರು. ಅಲ್ಲದೆ ಚೊಚ್ಚಲ ಪಂದ್ಯದಲ್ಲೇ ಟೆಸ್ಟ್​ನಲ್ಲಿ ಸಿಕ್ಸ್​ ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್​ವುಮೆನ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಅಷ್ಟೇ ಅಲ್ಲದೆ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ (78) ಜೊತೆಗೂಡಿ ಮೊದಲ ವಿಕೆಟ್​ಗೆ 167 ರನ್​ಗಳ ಜೊತೆಯಾಟ ಆಡುವ ಮೂಲಕ ಭಾರತದ ಪರ ಟೆಸ್ಟ್​​ನಲ್ಲಿ ಅತೀ ಹೆಚ್ಚು ರನ್​ ಜೊತೆಯಾಟವಾಡಿದ ಆರಂಭಿಕ ಜೋಡಿ ಎನಿಸಿಕೊಂಡರು. ಈ ದಾಖಲೆ ಈ ಹಿಂದೆ ಗಾರ್ಗಿ ಬ್ಯಾನರ್ಜಿ ಹಾಗೂ ಸಂಧ್ಯಾ ಅಗರ್ವಾಲ್​ ಹೆಸರಿನಲ್ಲಿತ್ತು.
Youtube Video

1984ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಗಾರ್ಗಿ ಬ್ಯಾನರ್ಜಿ ಹಾಗೂ ಸಂಧ್ಯಾ ಅಗರ್ವಾಲ್ ಮೊದಲ ವಿಕೆಟ್​ಗೆ 153 ರನ್​ಗಳ ಜೊತೆಯಾಟ ಆಡಿದ್ದರು. ಇದೀಗ ಈ ದಾಖಲೆಯನ್ನ ಸ್ಮೃತಿ ಹಾಗೂ ಶಫಾಲಿ ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
Published by: zahir
First published: June 19, 2021, 8:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories