ವಿರಾಟ್ ಕೊಹ್ಲಿ ಬಗ್ಗೆ ಟೀಮ್ ಇಂಡಿಯಾದ ಒಬ್ಬ ಆಟಗಾರನಿಂದ ಬಿಸಿಸಿಐಗೆ ದೂರು: ಯಾರು ಆತ?

Complaint against Virat Kohli: ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ವೇಳೆ ಒಬ್ಬ ಸೀನಿಯರ್ ಆಟಗಾರನ ಆಟದ ಬಗ್ಗೆ ಕೊಹ್ಲಿ ಟೀಕೆ ಮಾಡಿದ್ದರು. ಆ ಆಟಗಾರ ಕೊಹ್ಲಿ ವಿರುದ್ಧ ಬಿಸಿಸಿಐ ಕಾರ್ಯದರ್ಶಿಗೆ ದೂರು ನೀಡಿದ್ದರೆನ್ನಲಾಗಿದೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

 • Cricketnext
 • Last Updated :
 • Share this:
  ಮುಂಬೈ, ಸೆ. 27: ಭಾರತದ ಓಡುವ ಕುದುರೆ, ರನ್ ಮೆಷೀನ್, ಸರ್ವಶ್ರೇಷ್ಠ ನಾಯಕ ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ವಿರಾಟ್ ಕೊಹ್ಲಿ (Virat Kohli) ಅವರ ಗ್ರಹಗತಿ ಇತ್ತೀಚಿನ ದಿನಗಳಿಂದ ಚೆನ್ನಾಗಿದ್ದಂತಿಲ್ಲ. ಇಂಗ್ಲೆಂಡ್ ಟೆಸ್ಟ್ ಸರಣಿ ಬಳಿಕ ಅವರು ದಿಢೀರ್ ಎಂದು ಟಿ20 ಕ್ರಿಕೆಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ (Step down from T20 Team India captaincy) ನೀಡುವುದಾಗಿ ಘೋಷಿಸಿದರು. ಬಳಿಕ ಐಪಿಎಲ್ ಟೂರ್ನಿ ನಂತರ ಆರ್​​ಸಿಬಿ ತಂಡಕ್ಕೂ ರಾಜೀನಾಮೆ ಕೊಡುವುದಾಗಿ ಹೇಳಿದರು. ಇವುಗಳ ಮಧ್ಯೆ ಎಂಎಸ್ ಧೋನಿ ಟೀಮ್ ಇಂಡಿಯಾ ಮೆಂಟರ್ ಆಗಿ ಬಂದದ್ದು, ರವಿಶಾಸ್ತ್ರಿ ಟಿ20 ವಿಶ್ವಕಪ್ ನಂತರ ಕೋಚ್ ಸ್ಥಾನದಲ್ಲಿ ಮುಂದುವರಿಯುವುದು ಅನುಮಾನ ಎಂದು ಹೇಳಿದ್ದು, ಅನಿಲ್ ಕುಂಬ್ಳೆ ಕೋಚ್ ಸ್ಥಾನಕ್ಕೆ ಪ್ರಯತ್ನಿಸುತ್ತಿರುವುದು, ಇವೆಲ್ಲವೂ ಬಿಸಿಸಿಐ ಮತ್ತು ತಂಡದ ನಾಯಕ ವಿರಾಟ್ ಕೊಹ್ಲಿ ಮಧ್ಯೆ ಏನೋ ನಡೆಯುತ್ತಿದೆ ಎಂಬ ಅನುಮಾನ ಬಾರದೇ ಇರದು. ಮೂಲಗಳ ಪ್ರಕಾರ, ಟೀಮ್ ಇಂಡಿಯಾದ ಹಿರಿಯ ಆಟಗಾರನೊಬ್ಬ ವಿರಾಟ್ ಕೊಹ್ಲಿ ಧೋರಣೆ ಬಗ್ಗೆ ಅಸಮಾಧಾನಗೊಂಡು ಬಿಸಿಸಿಐನಲ್ಲಿ ದೂರು ಕೊಟ್ಟಿದ್ದರೆಂಬ ಮಾತು ಕೇಳಿಬರುತ್ತಿದೆ.

  ವಿರಾಟ್ ಕೊಹ್ಲಿ ಟಿ20 ತಂಡಕ್ಕೆ ರಾಜೀನಾಮೆ ಕೊಡುವುದಾಗಿ ನಿರ್ಧಾರ ಪ್ರಕಟಿಸುವ ಹಲವು ದಿನಗಳ ಮೊದಲೇ ಸ್ಪ್ಲಿಟ್ ಕ್ಯಾಪ್ಟನ್ಸಿ (Split Captaincy) ಬಗ್ಗೆ ಕೆಲ ಮಾಧ್ಯಮಗಳಲ್ಲಿ ವರದಿ ಬಂದಿತ್ತು. ಟೀಮ್ ಇಂಡಿಯಾದಲ್ಲಿ ಒಂದೊಂದು ಮಾದರಿ ಕ್ರಿಕೆಟ್​ಗೂ ಬೇರೆ ಬೇರೆ ನಾಯಕರಿರಲಿದ್ದಾರೆ. ನಾಯಕತ್ವ ಹಂಚಿಕೆಯಾಗುತ್ತದೆ. ವಿರಾಟ್ ಕೊಹ್ಲಿ ಒಂದು ಅಥವಾ ಎರಡು ಮಾದರಿಯ ಕ್ರಿಕೆಟ್​ಗೆ ಮಾತ್ರ ನಾಯಕರಾಗಿರುತ್ತಾರೆ ಎಂಬಂತಹ ಸುದ್ದಿ ಇತ್ತು. ಹಾಗೆಯೇ, ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಬಿಸಿಸಿಐ ಅಸಮಾಧಾನಗೊಂಡಿದೆ ಎಂಬ ಸುದ್ದಿಯೂ ಹರಿದಾಡಿತು. ಬಳಿಕ ಬಿಸಿಸಿಐ ಅಧಿಕಾರಿ ಅನಿಲ್ ಧುಮಲ್ ಅವರು ಈ ವರದಿಗಳನ್ನೆಲ್ಲಾ ಸಾರಾಸಗಟಾಗಿ ತಿರಸ್ಕರಿಸಿದ್ದರು. ಅವರು ಹಾಗೆ ತಿರಸ್ಕಾರ ಮಾಡಿದ ಮರುದಿನವೇ ವಿರಾಟ್ ಕೊಹ್ಲಿ ಅವರು ಮುಂಬರುವ ಟಿ20 ವಿಶ್ವಕಪ್ ಬಳಿಕ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ನಿರ್ಧಾರ ತಿಳಿಸಿದರು. ಕೆಲ ದಿನಗಳಿಂದಲೂ ಊಹಾಪೋಹದ ಸುದ್ದಿ ಹರಿದಾಡುತ್ತಿದ್ದರೂ ವಿರಾಟ್ ಕೊಹ್ಲಿ ಅವರ ಈ ನಿರ್ಧಾರ ಸಾಕಷ್ಟು ಜನರಿಗೆ ಅಚ್ಚರಿ ಮೂಡಿಸಿತು. ಬಿಸಿಸಿಐ ಮತ್ತು ವಿರಾಟ್ ಕೊಹ್ಲಿ ಮಧ್ಯೆ ಅಂಥದ್ದೇನು ಭಿನ್ನಾಭಿಪ್ರಾಯ ಸೃಷ್ಟಿಯಾಗಿತ್ತು ಎಂಬ ಕುತೂಹಲವೂ ಮನೆ ಮಾಡಿತು.

  ಮೂಲಗಳಿಂದ ನ್ಯೂಸ್18ಗೆ ಸಿಕ್ಕ ಮಾಹಿತಿಯಂತೆ ಕಳೆದ ಆರು ತಿಂಗಳಿಂದಲೂ ಕೊಹ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಬಿಸಿಸಿಐನಲ್ಲಿ ಆಂತರಿಕವಾಗಿ ನಡೆದಿತ್ತಂತೆ. ಅಂದರೆ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ನಲ್ಲಿ ಭಾರತ ಸೋತಾಗಿನಿಂದಲೂ ಬಿಸಿಸಿಐ ಕಣ್ಣು ಕೊಹ್ಲಿ ಮೇಲೆ ನೆಟ್ಟಿತ್ತು. ಈ ಸುದ್ದಿಯನ್ನ ತಳ್ಳಿಹಾಕಲು ಯಾಕೆ ಸಾಧ್ಯವಿಲ್ಲವೆಂದರೆ, ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿ ಬಿಡುವ ನಿರ್ಧಾರ ಪ್ರಕಟವಾದ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು, ಕಳೆದ ಕೆಲ ತಿಂಗಳಿಂದಲೂ ನಾಯಕತ್ವ ವಿಚಾರದಲ್ಲಿ ವಿರಾಟ್ ಕೊಹ್ಲಿ ಜೊತೆ ಚರ್ಚಿಸಿದ್ದಾಗಿ ತಿಳಿಸಿದ್ದರು.

  ಇದನ್ನೂ ಓದಿ: Virat Kohli- ಟಿ20 ಕ್ರಿಕೆಟ್​ನಲ್ಲಿ ಕೊಹ್ಲಿ 10,000 ರನ್; ಇಲ್ಲಿದೆ ವಿಶ್ವದ ಐವರು ಸಾಧಕರ ಪಟ್ಟಿ

  ಸೀನಿಯರ್ ಆಟಗಾರನಿಂದ ದೂರು?

  ವಿರಾಟ್ ಕೊಹ್ಲಿ ಅವರು ಬ್ಯಾಟಿಂಗ್​ನಲ್ಲಿ ಸತತ ವೈಫಲ್ಯ ಅನುಭವಿಸಿರುವುದು ಅವರಿಗೆ ಪಂದ್ಯಗಳಲ್ಲಿ ಗಟ್ಟಿಯಾದ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದಂತೆ ಮಾಡಿದೆ. ಇದು ತಂಡದ ಕೆಲ ಆಟಗಾರರ ಜೊತೆಗಿನ ಸಂಬಂಧ ಹಳಸುವಂತೆ ಮಾಡಿದೆ ಎಂಬ ಮಾತು ಕೇಳಿಬರುತ್ತಿದೆ. ಈ ಹಂತದಲ್ಲಿ ಒಬ್ಬ ಆಟಗಾರ ಬಿಸಿಸಿಐ ಕಾರ್ಯದರ್ಶಿಗೆ ದೂರು ಕೂಡ ಕೊಟ್ಟಿದ್ದಾರೆ. ವಿರಾಟ್ ಕೊಹ್ಲಿಯಿಂದಾಗಿ ತನಗೆ ಅಭದ್ರತೆ ಕಾಡುತ್ತಿದೆ ಎಂದು ಆರೋಪಿಸಿದ್ದರೆನ್ನಲಾಗಿದೆ. ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದಲ್ಲಿ ಹಿರಿಯ ಆಟಗಾರನೊಬ್ಬನ ವಿರುದ್ಧ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿ, ಆತನಿಗೆ ಯಾವುದೇ ಉದ್ದೇಶ ಇಲ್ಲ ಎಂದು ಟೀಕಿಸಿದ್ದರಂತೆ. ಇದು ಆ ಆಟಗಾರನಿಗೆ ಮಾನಸಿಕವಾಗಿ ಘಾಸಿ ಮಾಡಿ, ಬಿಸಿಸಿಐ ಕಾರ್ಯದರ್ಶಿಗೆ ದೂರು ನೀಡುವಂತೆ ಮಾಡಿತೆನ್ನಲಾಗಿದೆ.

  ಮೂಲಗಳು ಹೇಳುವ ಪ್ರಕಾರ, ಆ ಘಾಸಿಗೊಂಡ ಆಟಗಾರ ಬಹುಶಃ ಆರ್ ಅಶ್ವಿನ್ ಇರಬೇಕು ಎನ್ನುತ್ತಾರೆ. ಆದರೆ ಅದು ಖಚಿತವಾಗಿ ಗೊತ್ತಿಲ್ಲ. ವಿರಾಟ್ ಕೊಹ್ಲಿ ಮತ್ತು ಆರ್ ಅಶ್ವಿನ್ ನಡುವಿನ ಸಂಬಂಧ ಚೆನ್ನಾಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುವ ವಿಷಯ. ಭಾರತದ ಬೆಸ್ಟ್ ಸ್ಪಿನ್ನರ್ ಆಗಿದ್ದರೂ ಆರ್ ಅಶ್ವಿನ್ ಅವರನ್ನ ಇಂಗ್ಲೆಂಡ್ ಪ್ರವಾಸದಲ್ಲಿ ಒಂದೂ ಪಂದ್ಯದಲ್ಲಿ ಆಡಿಸಲಿಲ್ಲ. ರವಿಶಾಸ್ತ್ರಿ ಸೇರಿದಂತೆ ಹಲವರು ಅಶ್ವಿನ್ ಅವರನ್ನ ಟೆಸ್ಟ್ ಪಂದ್ಯದಲ್ಲಿ ಆಡಿಸಬೇಕೆಂದು ಸಲಹೆ ನೀಡಿದರೂ ಕೊಹ್ಲಿ ಅದನ್ನ ತಿರಸ್ಕರಿಸಿದ್ದರಂತೆ.

  ಇದಾದ ಬಳಿಕ ಎಂಎಸ್ ಧೋನಿಯನ್ನು ಟಿ20 ವಿಶ್ವಕಪ್​ಗೆ ಭಾರತ ತಂಡದ ಮೆಂಟರ್ ಆಗಿ ಬಿಸಿಸಿಐ ಆಯ್ಕೆ ಮಾಡಿತು. ಈ ವಿಚಾರವನ್ನು ವಿರಾಟ್ ಕೊಹ್ಲಿಗೆ ತಿಳಿಸಿಯೇ ಇರಲಿಲ್ಲ ಎನ್ನಲಾಗಿದೆ. ಹಾಗೆಯೇ, ಟಿ20 ವಿಶ್ವಕಪ್​ಗೆ ಪ್ರಕಟವಾದ ಭಾರತ ತಂಡದಲ್ಲಿ ಕೊಹ್ಲಿ ಇಷ್ಟಕ್ಕೆ ವಿರುದ್ಧವಾಗಿ ಆರ್ ಅಶ್ವಿನ್ ಅವರನ್ನ ಆಯ್ಕೆ ಮಾಡಲಾಯಿತು. ಆರ್ ಅಶ್ವಿನ್ ಬದಲು ಆರ್​​ಸಿಬಿ ಆಟಗಾರ ಯುಜವೇಂದ್ರ ಚಹಲ್ ಅವರನ್ನ ಸೇರಿಸಬೇಕೆನ್ನುವುದು ಕೊಹ್ಲಿ ಆಶಯವಾಗಿತ್ತು. ಇದು ಬಿಸಿಸಿಐ ಮತ್ತು ಕೊಹ್ಲಿ ಮಧ್ಯೆ ಏನೋ ಗಂಭೀರ ಸ್ವರೂಪದ ಭಿನ್ನಾಭಿಪ್ರಾಯ ಇರುವುದನ್ನು ಸೂಚಿಸುತ್ತದೆ.
  Published by:Vijayasarthy SN
  First published: