4/4 wickets- ನಾಲ್ಕು ಬಾಲ್​ಗೆ 4 ವಿಕೆಟ್: ರೋಚಕ ಗೆಲುವು ಸಾಧಿಸಿದ ಜಿಂಬಾಬ್ವೆ

Scotland Lose 2nd T20i- ಜಿಂಬಾಬ್ವೆಯ 136 ರನ್​ಗೆ ಪ್ರತಿಯಾಗಿ ಸ್ಕಾಟ್​ಲೆಂಡ್ 126 ರನ್ಗೆ ಆಲೌಟ್ ಆಯಿತು. ಕೊನೆಯ 4 ವಿಕೆಟ್​ಗಳು ನಾಲ್ಕು ಬಾಲ್ ಅಂತರದಲ್ಲಿ ಪತನಗೊಂಡವು. ವಿಲಿಯಮ್ಸ್ ಮತ್ತು ಮಸಾಕಟ್ಜಾ ಅವರು ಜಿಂಬಾಬ್ವೆ ಗೆಲುವಿನ ರೂವಾರಿಯಾದರು.

ಜಿಂಬಾಬ್ವೆ ಕ್ರಿಕೆಟ್ ತಂಡ

ಜಿಂಬಾಬ್ವೆ ಕ್ರಿಕೆಟ್ ತಂಡ

  • Cricketnext
  • Last Updated :
  • Share this:
    ಎಡಿನ್​ಬರ್ಗ್: ಆತಿಥೇಯ ಸ್ಕಾಟ್​ಲೆಂಡ್ ವಿರುದ್ಧದ 2ನೇ ಟಿ20 ಕ್ರಿಕೆಟ್ ಪಂದ್ಯದಲ್ಲಿ ಜಿಂಬಾಬ್ವೆ ರೋಚಕ ಗೆಲುವು ಸಾಧಿಸಿದೆ. ಸ್ಕಾಟ್​ಲೆಂಡ್ ತಂಡಕ್ಕೆ ಜಿಂಬಾಬ್ವೆ ವಿರುದ್ಧ ಮೊತ್ತಮೊದಲ ಬಾರಿಗೆ ಟಿ20 ಸರಣಿ ಗೆಲ್ಲುವ ಸುವರ್ಣಾವಕಾಶ (Scotland lose to Zimbabwe in 2nd T20I) ಕೈತಪ್ಪಿತು. ಕೈಯಲ್ಲಿ 4 ವಿಕೆಟ್ ಇರುವಂತೆಯೇ ಕೊನೆಯ ಎರಡು ಓವರ್​ನಲ್ಲಿ 17 ರನ್ ಗಳಿಸುವ ಗುರಿ ಇದ್ದ ಸ್ಕಾಟ್​ಲೆಂಡ್ ದಿಢೀರ್ ಕುಸಿತು ಸೋಲಪ್ಪಿತು. ಜಿಂಬಾಬ್ವೆ ತಂಡ 10 ರನ್​ಗಳಿಂದ ಗೆದ್ದು ಸರಣಿಯನ್ನ 1-1ರಿಂದ ಸಮ ಮಾಡಿಕೊಂಡಿತು. ಈ ಪಂದ್ಯದಲ್ಲಿ ಸ್ಕಾಟ್​ಲೆಂಡ್​ನ ಕೊನೆಯ ನಾಲ್ಕು ವಿಕೆಟ್​ಗಳು ನಾಲ್ಕು ಬಾಲ್ ಅಂತರದಲ್ಲಿ ಬಿದ್ದದ್ದು ಹೈಲೈಟ್ ಆಗಿದೆ.

    ಜಿಂಬಾಬ್ವೆ ಮೊದಲು ಬ್ಯಾಟ್ ಮಾಡಿ 20 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿತು. ಅನುಭವಿ ಹಾಗೂ ಹಿರಿಯ ಆಟಗಾರ ಶಾನ್ ವಿಲಿಯಮ್ಸ್ ಅಜೇಯ 60 ರನ್ ಗಳಿಸಿದ ಪರಿಣಾಮ ಜಿಂಬಾಬ್ವೆ ಒಂದು ಗೌರವಯುತವಾದ ಮೊತ್ತ ದಾಖಲಿಸಲು ಶಕ್ಯವಾಯಿತು. ವಿಲಿಯಮ್ಸ್ 52 ಬಾಲ್​ನಲ್ಲಿ 60 ರನ್ ಗಳಿಸಿದರು. ಗೆಲ್ಲಲು 137 ರನ್ ಗುರಿಯನ್ನ ಚೇಸ್ ಮಾಡಿದ ಸ್ಕಾಟ್​ಲೆಂಡ್ ಆರಂಭಿಕ ಕುಸಿತ ಕಂಡು 16 ರನ್​ಗೆ 4 ವಿಕೆಟ್ ಕಳೆದುಕೊಂಡರೂ ರಿಚೀ ಬೆರಿಂಗ್ಟನ್, ಮ್ಯಾಥ್ಯೂ ಕ್ರಾಸ್ ಮತ್ತು ಮಿಖೇಲ್ ಲೀಸ್ಕ್ ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ಚೇತರಿಸಿಕೊಂಡಿತು. ಒಂದು ಹಂತದಲ್ಲಿ ಸ್ಕಾಟ್​ಲೆಂಡ್ ಸುಲಭವಾಗಿ ಗೆಲುವಿನ ದಡ ಮುಟ್ಟುವ ಸಾಧ್ಯತೆ ದಟ್ಟವಾಗಿತ್ತು.

    ಎರಡು ಓವರ್​ನಲ್ಲಿ ಗೆಲ್ಲಲು ಕೇವಲ 17 ರನ್ ಗಳಿಸಬೇಕಿತ್ತು. 19ನೇ ಓವರ್​ನಲ್ಲಿ ಕೇವಲ 4 ರನ್ ಬಂದವು. ಕೊನೆಯ ಓವರ್​ನಲ್ಲಿ 13 ರನ್ ಬೇಕಿತ್ತು. ಕೈಯಲ್ಲಿ ಇನ್ನೂ 4 ವಿಕೆಟ್ ಇದ್ದವು. ಗೆಲುವು ಕಷ್ಟಸಾಧ್ಯವಿರಲಿಲ್ಲ. ಮಸಾಕಜ್ಜಾ ಅವರದ್ದು ಕೊನೆಯ ಓವರ್ ಬೌಲಿಂಗ್. ಆ ಓವರ್​ನ ಮೊದಲ ನಾಲ್ಕು ಎಸೆತದಲ್ಲೇ ಸ್ಕಾಟ್​ಲೆಂಡ್​ನ ಕೊನೆಯ ನಾಲ್ಕು ವಿಕೆಟ್​ಗಳು ಪತನಗೊಂಡವು. ಮೈಕೇಲ್ ಲೀಸ್ಕ್, ಸಫ್ಯಾನ್ ಷರೀಫ್, ಮಾರ್ಕ್ ವ್ಯಾಟ್ ಮತ್ತು ಅಲಸ್ಡೇರ್ ಇವಾನ್ಸ್ ಔಟಾದರು. ಅವರಲ್ಲಿ ಇಬ್ಬರು ರನ್ ಔಟ್ ಆದರು. ಅಂತಿಮವಾಗಿ ಜಿಂಬಾಬ್ವೆ 10 ರನ್​ಗಳಿಂದ ಗೆಲುವಿನ ನಗೆ ಬೀರಿತು.

    ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಸ್ಕಾಟ್​ಲೆಂಡ್ 7 ರನ್​ಗಳಿಂದ ಗೆಲುವು ಸಾಧಿಸಿತ್ತು. ಈಗ ಜಿಂಬಾಬ್ವೆ ಗೆಲುವಿನೊಂದಿಗೆ ಸರಣಿ 1-1ರಿಂದ ಸಮಬಲಗೊಂಡಿದೆ. ಇನ್ನೊಂದು ಪಂದ್ಯ ಬಾಕಿ ಇದೆ. ಸರಣಿ ಗೆಲ್ಲಲು ಆತಿಥೇಯ ಸ್ಕಾಟ್​ಲೆಂಡ್ ತಂಡಕ್ಕೆ ಇನ್ನೂ ಅವಕಾಶ ಇದೆ. ನಾಳೆ ಭಾನುವಾರ ಮೂರನೇ ಟಿ20 ಪಂದ್ಯ ನಡೆಯಲಿದೆ.

    ಇದನ್ನೂ ಓದಿ: Kumble vs Kohli- ಕುಂಬ್ಳೆ ಜೊತೆ ಹಿಂದೆ ನಡೆದ ಜಟಾಪಟಿ ಕೊಹ್ಲಿಗೆ ಮುಳುವಾಯ್ತೆ? ಇಲ್ಲಿದೆ ವಿವರ

    ಟಿ20 ವಿಶ್ವಕಪ್​ನಲ್ಲಿ ಸ್ಕಾಟ್ಲೆಂಡ್:

    ಸ್ಕಾಟ್​ಲೆಂಡ್ ತಂಡಕ್ಕೆ ಈ ಸರಣಿ ಮುಂಬರುವ ವಿಶ್ವಕಪ್​ಗೆ ಒಳ್ಳೆಯ ಅಭ್ಯಾಸ ಒದಗಿಸಿದೆ. ಜಿಂಬಾಬ್ವೆ ವಿರುದ್ಧ ಮೊದಲ ಬಾರಿಗೆ ಟಿ20 ಸರಣಿ ಗೆದ್ದು ಆತ್ಮವಿಶ್ವಾಸದಿಂದ ವಿಶ್ವಕಪ್​ನಲ್ಲಿ ಮುಂದಡಿ ಇಡುವ ಅವಕಾಶ ಸಿಕ್ಕಿದೆ. ಒಂದು ಕಾಲದಲ್ಲಿ ಬಾಂಗ್ಲಾದೇಶದಂತೆ ಪ್ರಬಲ ಕ್ರಿಕೆಟ್ ಶಕ್ತಿಯಾಗುವ ಕುರುಹು ತೋರಿದ್ದ ಜಿಂಬಾಬ್ವೆ ಇದೀಗ ಟಿ20 ವಿಶ್ವಕಪ್ ಅರ್ಹತಾ ಸುತ್ತಿಗೂ ಅರ್ಹತೆ ಗಿಟ್ಟಿಸಲು ವಿಫಲವಾಗಿದೆ.

    ಸ್ಕಾಟ್​ಲೆಂಡ್ ತಂಡ ಜಿಂಬಾಬ್ವೆ ವಿರುದ್ಧದ ಟಿ20 ಸರಣಿ ಬಳಿಕ ಮುಂದಿನ ಪಂದ್ಯ ಆಡುವುದು ವಿಶ್ವಕಪ್​ನಲ್ಲೇ. ಅಕ್ಟೋಬರ್ 17ರಂದು ಓಮನ್​ನ ಮಸ್ಕಟ್ ನಗರದಲ್ಲಿ ಬಾಂಗ್ಲಾದೇಶದ ವಿರುದ್ಧ ಸ್ಕಾಟ್​ಲೆಂಡ್​ನ ಟಿ20 ವಿಶ್ವಕಪ್ ಅಭಿಯಾನ ಶುರುವಾಗುತ್ತದೆ. ಬಿ ಗುಂಪಿನಲ್ಲಿರುವ ಸ್ಕಾಟ್​​ಲೆಂಡ್ ತಂಡ ಮುಂದಿನ ಪಂದ್ಯಗಳಲ್ಲಿ ಆತಿಥೇಯ ಓಮನ್ ಮತ್ತು ಪಪುವಾ ನ್ಯೂ ಗಿನಿಯಾ ವಿರುದ್ಧ ಪಂದ್ಯಗಳನ್ನ ಆಡಲಿದೆ. ಈ ಗುಂಪಿನಲ್ಲಿ ಮೊದಲೆರಡು ಸ್ಥಾನ ಗಳಿಸಿದ ತಂಡಗಳು ಸೂಪರ್-12 ಹಂತಕ್ಕೆ ಪ್ರವೇಶ ಪಡೆಯಲಿವೆ. ಬಿ ಗುಂಪಿನಲ್ಲಿ ಬಾಂಗ್ಲಾದೇಶದ ನಂತರ ಎರಡನೇ ದೊಡ್ಡ ಶಕ್ತಿಯುತ ತಂಡ ಸ್ಕಾಟ್​ಲೆಂಡ್ ಆಗಿದೆ. ಈ ಗುಂಪಿನಲ್ಲಿ ಬಾಂಗ್ಲಾ ಮತ್ತು ಸ್ಕಾಟ್​ಲೆಂಡ್ ತಂಡಗಳು ಸೂಪರ್-12 ಪ್ರವೇಶಿಸಲು ನೆಚ್ಚಿನ ತಂಡಗಳಾಗಿವೆ.
    Published by:Vijayasarthy SN
    First published: