Sarah Taylor- ಪುರುಷರ ಕ್ರಿಕೆಟ್​ಗೆ ಮಹಿಳೆ ಲಗ್ಗೆ; ಟೀಮ್ ಅಬುಧಾಬಿ ಕೋಚ್ ಸಾರಾ ಟೇಲರ್ ಕನಸಿದು

Woman as coach of Men’s Cricket team- ಸಸೆಕ್ಸ್ ಕೌಂಟಿ ಟೀಮ್​ನಲ್ಲಿ ವಿಕೆಟ್ ಕೀಪಿಂಗ್ ಕೋಚ್ ಆಗಿದ್ದ 32 ವರ್ಷದ ಮಾಜಿ ಇಂಗ್ಲೆಂಡ್ ಆಟಗಾರ್ತಿ ಸಾರಾ ಟೇಲರ್ ಇದೀಗ ಅಬುಧಾಬಿ ಟಿ10 ಲೀಗ್​ನ ತಂಡವೊಂದಕ್ಕೆ ಅಸಿಸ್ಟೆಂಟ್ ಕೋಚ್ ಆಗಿ ಇತಿಹಾಸ ನಿರ್ಮಿಸಿದ್ಧಾರೆ.

ಸಾರಾ ಟೇಲರ್

ಸಾರಾ ಟೇಲರ್

 • Share this:
  ಅಬುಧಾಬಿ, ಅ. 31: ಇಂಗ್ಲೆಂಡ್​ನ ಮಾಜಿ ಕ್ರಿಕೆಟ್ ಆಟಗಾರ್ತಿ 32 ವರ್ಷದ ಸಾರಾ ಟೇಲರ್ ಅವರು ಹೊಸ ಇತಿಹಾಸ ಬರೆಯುತ್ತಿದ್ದಾರೆ. ಪುರುಷರ ಟಿ10 ಲೀಗ್​ನ ಟೀಮ್ ಅಬುಧಾಬಿ ತಂಡಕ್ಕೆ ಸಾರಾ ಸಹಾಯಕ ಕೋಚ್ ಆಗಿ ನೇಮಕವಾಗಿದ್ದಾರೆ. ಇದರೊಂದಿಗೆ ಪುರುಷರ ಕ್ರಿಕೆಟ್ ತಂಡವೊಂದಕ್ಕೆ ಕೋಚ್ ಆದ ಮೊದಲ ಮಹಿಳೆ ಎಂಬ ದಾಖಲೆ ಬರೆದಿದ್ದಾರೆ ಸಾರಾ ಟೇಲರ್. ಈ ಬೆಳವಣಿಗೆಯೊಂದಿಗೆ ಪುರುಷರ ಕ್ರಿಕೆಟ್​ನಲ್ಲಿ ಮಹಿಳೆಯರ ಪಾತ್ರ ಪ್ರಾರಂಭವಾಗುವ ಹೊಸ ಶಕೆ ಆರಂಭವಾಗುವ ನಿರೀಕ್ಷೆ ಇದೆ. ಮಹಿಳಾ ಕ್ರಿಕೆಟ್ ಕ್ಷೇತ್ರದಲ್ಲಿ ಮಹಿಳಾ ಕೋಚ್​ಗಳು ನಗಣ್ಯ ಎನ್ನುವ ಸಂದರ್ಭದಲ್ಲಿ ಪುರುಷರ ತಂಡಕ್ಕೆ ಮಹಿಳೆ ಕೋಚ್ ಆಗುವುದು ಸಾಮಾನ್ಯವಲ್ಲ.

  ವಿಶ್ವದ ಕೆಲ ಪುರುಷರ ಫುಟ್ಬಾಲ್ ತಂಡಗಳಲ್ಲಿನ ಕೋಚಿಂಗ್ ವಿಭಾಗದಲ್ಲಿ ಮಹಿಳೆಯರಿದ್ಧಾರೆ. ಆದರೆ, ಪುರುಷರ ಕ್ರಿಕೆಟ್​ನಲ್ಲಿ ಮಹಿಳಾ ಕೋಚ್ ನೇಮಕವಾಗಿರುವುದು ಬಹುಶಃ ಇದೇ ಮೊದಲು ಎನ್ನಲಾಗಿದೆ. ಆಸ್ಟ್ರೇಲಿಯಾದ ವುಮೆನ್ ಬಿಗ್ ಬ್ಯಾಷ್ ಕ್ರಿಕೆಟ್ ಲೀಗ್​ನಲ್ಲಿರುವ ಬ್ರಿಸ್ಬೇನ್ ಹೀಟ್ಸ್ ತಂಡದಲ್ಲಿ ಜೂಲಿಯಾ ಪ್ರೈಸ್ ಅವರು ಸಹಾಯಕ ಕೋಚ್ ಆಗಿದ್ದರು.  ಕುತೂಹಲವೆಂದರೆ ಸಾರಾ ಟೇಲರ್ ಅವರು ಇಂಗ್ಲೆಂಡ್ ಕ್ರಿಕೆಟ್​ನ ಸಸೆಕ್ಸ್ ಪುರುಷರ ತಂಡಕ್ಕೆ ವಿಕೆಟ್ ಕೀಪಿಂಗ್ ಕೋಚ್ ಆಗಿ ಕೆಲ ತಿಂಗಳ ಹಿಂದಿನಿಂದಲೂ ಕೆಲಸ ಮಾಡಿದ್ದಾರೆ. ಆದರೆ, ಪುರುಷರ ತಂಡದಲ್ಲಿ ಪೂರ್ಣಪ್ರಮಾಣದ ಕೋಚಿಂಗ್ ಆಗಿ ಕೆಲಸ ಮಾಡುವುದು ಇದೇ ಮೊದಲು.

  ಪುರುಷರ ತಂಡಕ್ಕೆ ಮಹಿಳಾ ಕೋಚ್ ಆಗುವುದು ಸಾಮಾನ್ಯವಾಗಲಿ:

  “ಇದು ಮುಂದಿನ ಹಾದಿಗೆ ಎಡೆ ಮಾಡಿಕೊಡಲಿ ಎಂಬುದು ನನ್ನ ಆಶಯ. ಈ ತರಹದ ಕೆಲಸಗಳು ಮಹಿಳೆಯರಿಗೆ ಸಿಗುವುದು ತೀರಾ ಸಾಮಾನ್ಯ ಎನಿಸಬಹುದು. ಮಹಿಳೆಯರಿಗೆ ಕೆಲಸಗಳು ಸಿಗುವುದು ಮುಂದುವರಿಯುತ್ತದೆ ಎಂದು ನಿರೀಕ್ಷಿಸಿದ್ದೇನೆ. ನನ್ನನ್ನ ಒಬ್ಬ ಮಹಿಳಾ ಕೋಚ್ ಆಗಿ ನೋಡದೇ ಬರೀ ಕೋಚ್ ಆಗಿ ನೋಡಬೇಕು” ಎಂದು ಭಾನುವಾರ ನಡೆದ ಸಂವಾದವೊಂದರಲ್ಲಿ ಟೇಲರ್ ಹೇಳಿದ್ದಾರೆ.

  “ನನಗೆ ಕೋಚಿಂಗ್ ಕೆಲಸದ ಅವಕಾಶ ಅರಸಿ ಬಂದಾಗ ನನಗೆ ಶಾಕ್ ಆಯಿತು. ಅಬುಧಾಬಿಗೆ ಹೋಗುವ ದಿನಗಳಿಗಾಗಿ ಎದಿರುನೋಡುತ್ತಿದ್ಧೇನೆ. ನಾನೊ ಒಬ್ಬ ಒಳ್ಳೆಯ ಕೋಚ್ ಆಗಿ ಹೆಸರು ಮಾಡುವ ಆಸೆ ಇದೆ” ಎಂದು ಇಂಗ್ಲೆಂಡ್ ಮಹಿಳಾ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಕೂಡ ಆಗಿದ್ದ ಸಾರಾ ಟೇಲರ್ ಇಚ್ಛೆ ವ್ಯಕ್ತಪಡಿಸಿದ್ದಾರೆ.

  ಲಾನ್ಸ್ ಕ್ಲೂಸ್ನರ್ ಜೊತೆ ಸಾರಾ ಕೆಲಸ:

  ನವೆಂಬರ್ 19ರಿಂದ ಅಬು ಧಾಬಿ ಟಿ10 ಕ್ರಿಕೆಟ್ ಲೀಗ್ ಆರಂಭವಾಗುತ್ತದೆ. ಹತ್ತು ಓವರ್ ಪಂದ್ಯಗಳ ಈ ಲೀಗ್​ನಲ್ಲಿ ಒಟ್ಟು 8 ಫ್ರಾಂಚೈಸಿಗಳು ಸ್ಪರ್ಧಿಸಿವೆ. ಅದರಲ್ಲಿ ಟೀಮ್ ಅಬುಧಾಬಿಯೂ ಒಂದು. ಈ ಫ್ರಾಂಚೈಸಿಗೆ ಪೌಲ್ ಫಾರ್​ಬ್ರೇಸ್ ಅವರು ಮುಖ್ಯ ಕೋಚ್ ಆಗಿದ್ದಾರೆ. ಇವರ ಕೋಚಿಂಗ್ ತಂಡದಲ್ಲಿ ಸಾರಾ ಟೇಲರ್ ಜೊತೆಗೆ ದಕ್ಷಿಣ ಆಫ್ರಿಕಾದ ಮಾಜಿ ಆಲ್​ರೌಂಡರ್ ಲ್ಯಾನ್ಸ್ ಕ್ಲೂಸ್ನರ್ ಅವರೂ ಇರಲಿದ್ದಾರೆ.

  ಇದನ್ನೂ ಓದಿ: ವಿಶ್ವಕಪ್ ಮಧ್ಯದಲ್ಲೇ ಕ್ರಿಕೆಟ್​ಗೆ ಅಫ್ಘಾನ್ ವಿದಾಯ; ನಮೀಬಿಯಾ ಆಟಗಾರರಿಂದ ಗಾರ್ಡ್ ಆಫ್ ಆನರ್

  ಕೌಂಟಿ ಕ್ರಿಕೆಟ್​ನಲ್ಲಿನ ಅನುಭವ:

  ಸಸೆಕ್ಸ್ ತಂಡದಲ್ಲಿ ವಿಕೆಟ್ ಕೀಪಿಂಗ್ ಕೋಚಿಂಗ್ ಆಗಿ ಕೆಲಸ ಮಾಡಿದ ಅನುಭವ ತಮಗೆ ಬಹಳ ನೆರವಿಗೆ ಬಂದಿರುವುದನ್ನು ಸಾರಾ ಟೇಲರ್ ಈ ವೇಳೆ ಉಲ್ಲೇಖಿಸಿದ್ಧಾರೆ. “ಸಸೆಕ್ಸ್​ನಲ್ಲಿ ಕೆಲಸ ಮಾಡಿದ್ದು ಕಲಿಯಲು ಒಳ್ಳೆಯ ಅವಕಾಶ ಒದಗಿಸಿತು. ಜನರನ್ನ ನಿಭಾಯಿಸುವ ರೀತಿ ಹೇಗೆಂದು ತಿಳಿದುಕೊಂಡೆ. ಅದು ನನ್ನ ಮೊದಲ ಕೋಚಿಂಗ್ ಕೆಲಸ. ಅದರಿಂದ ಬಹಳಷ್ಟು ಕಲಿತಿದ್ದೇನೆ. ನನಗೆ ಬಹಳ ಒಳ್ಳೆಯ ಮೆಂಟಾರ್​ಗಳಿದ್ದು ಬಹಳ ನೆರವು ಕೊಟ್ಟಿದ್ಧಾರೆ” ಎಂದು ಸಾರಾ ತಿಳಿಸಿದ್ಧಾರೆ.

  ಅತ್ಯುತ್ತಮ ವಿಕೆಟ್ ಕೀಪರ್:

  ನಿವೃತ್ತರಾಗುವ ಮುನ್ನ 32 ವರ್ಷದ ಸಾರಾ ಟೇಲರ್ ಅಪ್ರತಿಮ ವಿಕೆಟ್ ಕೀಪರ್ ಆಗಿದ್ದರು. ವಿಶ್ವದ ಅತ್ಯುತ್ತಮ ಮಹಿಳಾ ವಿಕೆಟ್ ಕೀಪರ್​ಗಳಲ್ಲಿ ಒಬ್ಬರೆನಿಸಿದ್ದರು. ಹಾಗೆಯೇ ಒಳ್ಳೆಯ ಬ್ಯಾಟರ್ ಎನಿಸಿದ್ದರು. ಈಗ ಕೋಚಿಂಗ್ ಕೆಲಸದ ಬಗ್ಗೆ ಮಾತನಾಡಿರುವ ಅವರು, ತಮಗೆ ಕೋಚಿಂಗ್ ಒಂದು ಪ್ಯಾಷನ್ ಆಗಿದೆ, ಕನಸು ಆಗಿದೆ. ಮುಂದಿನ ದಿನಗಳಲ್ಲಿ ಕೋಚಿಂಗ್ ಆಗಿಯೇ ಮುಂದುರಿಯುವ ಇರಾದೆ ಇದೆ. ಅಬು ಧಾಬಿ ಟಿ10 ಲೀಗ್​ನಲ್ಲಿನ ಅನುಭವ ನನ್ನ ಮುಂದಿನ ಹೆಜ್ಜೆಗೆ ಅನುಕೂಲ ಆಗಲಿದೆ ಎಂದು ಹೇಳಿದ್ಧಾರೆ.

  ಇದನ್ನೂ ಓದಿ: Babar Azam- ಅಲ್ಲಿ ವೆಂಟಿಲೇಟರ್​ನಲ್ಲಿ ಅಮ್ಮ; ಇಲ್ಲಿ ವಿಶ್ವಕಪ್; ಸಂಕಷ್ಟದಲ್ಲೂ ದೃತಿಗೆಡದ ಬಾಬರ್

  ಟಿ10 ಲೀಗ್​ನಲ್ಲಿರುವ ತಂಡಗಳು:

  ಅಬು ಧಾಬಿ ಟಿ10 ಲೀಗ್​ನಲ್ಲಿ ಟೀಮ್ ಅಬುಧಾಬಿ ಸೇರಿ ಎಂಟು ತಂಡಗಳಿವೆ. ಕ್ರಿಸ್ ಗೇಲ್ ಅವರಂಥ ಆಟಗಾರರು ಟೀಮ್ ಅಬುಧಾಬಿಯಲ್ಲಿದ್ದಾರೆ. ಮರಾಠ ಅರೇಬಿಯನ್ಸ್, ಬಾಂಗ್ಲಾ ಟೈಗರ್ಸ್, ದಿ ಚೆನ್ನೈ ಬ್ರೇವ್ಸ್, ಡೆಕನ್ ಗ್ಲೇಡಿಯೇಟರ್ಸ್, ಡೆಲ್ಲಿ ಬುಲ್ಸ್ ಮತ್ತು ನಾರ್ತರ್ನ್ ವಾರಿಯರ್ಸ್ ತಂಡಗಳೂ ಈ ಟಿ10 ಲೀಗ್​ನಲ್ಲಿವೆ.

  ಭಾರತೀಯ ಆಟಗಾರರು: ಕರ್ನಾಟಕದ ಅಭಿಮನ್ಯು ಮಿಥುನ್, ಕೌನೇನ್ ಅಬ್ಬಾಸ್ ಅವರಲ್ಲದೇ ಯೂಸುಫ್ ಪಠಾಣ್, ವೈ ಮಹೇಶ್, ನವ್ ಪಬ್ರೇಜಾ ಅವರು ಟಿ10 ಲೀಗ್​ನಲ್ಲಿ ಆಡುತ್ತಿರುವ ಭಾರತೀಯ ಕ್ರಿಕೆಟಿಗರಾಗಿದ್ದಾರೆ.
  Published by:Vijayasarthy SN
  First published: