Sanjay Bangar- ಟೀಮ್ ಇಂಡಿಯಾ ಮಾಜಿ ಕೋಚ್ ಸಂಜಯ್ ಬಂಗಾರ್ ಈಗ ಆರ್​ಸಿಬಿ ಮುಖ್ಯ ಕೋಚ್

RCB head coach: ಆರ್​ಸಿಬಿಯ ಬ್ಯಾಟಿಂಗ್ ಕನ್ಸಲ್ಟೆಂಟ್ ಆಗಿದ್ದ ಸಂಜಯ್ ಬಂಗಾರ್ ಅವರನ್ನ ಆ ತಂಡದ ಮುಖ್ಯ ಕೋಚ್ ಆಗಿ ಬಡ್ತಿ ಕೊಡಲಾಗಿದೆ. ಐಪಿಎಲ್ ಪ್ರಶಸ್ತಿಯ ಗುರಿಯೊಂದಿಗೆ ಆರ್​ಸಿಬಿಯ ರೂಪುರೇಷೆ ಸಿದ್ಧವಾಗುತ್ತಿದ್ದು, ಅದರ ಭಾಗವಾಗಿ ಬಂಗಾರ್ ಕೋಚ್ ಆಗಿದ್ದಾರೆ.

ಸಂಜಯ್ ಬಂಗಾರ್

ಸಂಜಯ್ ಬಂಗಾರ್

 • Share this:
  ಬೆಂಗಳೂರು, ನ. 9: ಟೀಮ್ ಇಂಡಿಯಾ ಮಾಜಿ ಆಟಗಾರ ಮತ್ತು ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ (Sanjay Bangar) ಅವರನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕೋಚ್ (RCB head coach) ಆಗಿ ಆಯ್ಕೆ ಮಾಡಲಾಗಿದೆ. ಆರ್​ಸಿಬಿಯ ಟ್ವಿಟ್ಟರ್ ಅಕೌಂಟ್​ನಲ್ಲಿ ಈ ವಿಚಾರವನ್ನು ಇಂದು ಪ್ರಕಟಿಸಲಾಗಿದೆ. ಈ ಬಾರಿಯ ಐಪಿಎಲ್​ನಲ್ಲಿ ಪ್ಲೇ ಆಫ್​ವರೆಗೂ ಪ್ರವೇಶಿಸಿದ್ದ ಬೆಂಗಳೂರು ತಂಡವನ್ನ ಮುಂದಿನ ಬಾರಿ ಚಾಂಪಿಯನ್ ಆಗುವ ಸಮರ್ಥ ತಂಡವಾಗಿ ರೂಪಿಸುವ ನಿಟ್ಟಿನಲ್ಲಿ ಹೆಜ್ಜೆಗಳನ್ನ ಇಡಲಾಗುತ್ತಿದೆ. ಅದರ ಭಾಗವಾಗಿ ಸಂಜಯ್ ಬಂಗಾರ್ ಅವರನ್ನ ಹೆಡ್ ಕೋಚ್ ಆಗಿ ಪ್ರೊಮೋಟ್ ಮಾಡಲಾಗಿದೆ ಎಂದು ಫ್ರಾಂಚೈಸಿಯ ಹೇಳಿಕೆಯಿಂದ ತಿಳಿದುಬಂದಿದೆ.

  ನ್ಯೂಜಿಲೆಂಡ್ ತಂಡದ ಮಾಜಿ ಕೋಚ್ ಮೈಕ್ ಹೆಸ್ಸಾನ್ (Mike Hesson) ಅವರು ಆರ್​ಸಿಬಿಯ ಕ್ರಿಕೆಟ್ ಆಪರೇಷನ್ಸ್​ನ ಡೈರೆಕ್ಟರ್ (Director of Cricket Operations) ಆಗಿರುವುದರ ಜೊತೆಗೆ ಹೆಚ್ಚುವರಿಯಾಗಿ ಕೋಚ್ ಜವಾಬ್ದಾರಿಯನ್ನೂ ನಿಭಾಯಿಸಿದ್ದರು. ಈಗ ಸಂಜಯ್ ಬಂಗಾರ್ ಅವರನ್ನ ಪೂರ್ಣಾವಧಿಯಾಗಿ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ಮೈಕ್ ಹೆಸ್ಸಾನ್ ಅವರು ಕ್ರಿಕೆಟ್ ಆಪರೇಷನ್ಸ್​ನ ಡೈರೆಕ್ಟರ್ ಜವಾಬ್ದಾರಿಯನ್ನ ಮುಂದುವರಿಸಲಿದ್ದಾರೆ.

  ಆಟಗಾರನಾಗಿ ಸಂಜಯ್ ಬಂಗಾರ್:

  ಸಂಜಯ್ ಬಂಗಾರ್ ಅವರು ಆಟಗಾರನಾಗಿದ್ದಕ್ಕಿಂತ ಕೋಚ್ ಆಗಿ ಹೆಚ್ಚು ಗಮನ ಸೆಳೆದಿದ್ದಾರೆ. ಮಹಾರಾಷ್ಟ್ರದವರಾದ 49 ವರ್ಷದ ಸಂಜಯ್ ಬಂಗಾರ್ ಉತ್ತಮ ಆಲ್​ರೌಂಡರ್ ಎನಿಸಿದ್ದರು. ಟೀಮ್ ಇಂಡಿಯಾ ಪರ ಅವರು 2001ರಿಂದ 2004ರವರೆಗೆ 12 ಟೆಸ್ಟ್ ಹಾಗು 15 ಏಕದಿನ ಪಂದ್ಯಗಳನ್ನ ಆಡಿದ್ದಾರೆ. ಮಹಾರಾಷ್ಟ್ರ ಸಂಜಾತರಾದರೂ ಅವರು ದೇಶೀಯ ಕ್ರಿಕೆಟ್​ನಲ್ಲಿ ರೈಲ್ವೇಸ್ ಕ್ರಿಕೆಟ್ ಟೀಮ್​ನಲ್ಲಿ ಆಡಿ 8 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

  ಕೋಚ್ ಆಗಿ ಸಂಜಯ್ ಬಂಗಾರ್:

  2008 ಮತ್ತು 2009ರಲ್ಲಿ ಅವರು ಐಪಿಎಲ್​ನಲ್ಲೂ ಆಡಿದ್ದಾರೆ. 2013ರಲ್ಲಿ ಅವರು ಕ್ರಿಕೆಟ್ ಆಟಗಾರನಾಗಿ ನಿವೃತ್ತರಾದರು. ಅವರು ನಿವೃತ್ತಿ ಘೋಷಿಸುವ ಮೂರು ವರ್ಷಗಳ ಮೊದಲೇ ಕೋಚಿಂಗ್ ವೃತ್ತಿಗಿಳಿದು ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದರು. 2010ರಲ್ಲಿ ಕೊಚ್ಚಿ ಟಸ್ಕರ್ಸ್ ತಂಡದ ಬ್ಯಾಟಿಂಗ್ ಕೋಚ್ ಆದರು. ಪಂಜಾಬ್ ಕಿಂಗ್ಸ್ ಇಲವೆನ್ ತಂಡದ ಸಹಾಯಕ ಕೋಚ್ ಆದರು.

  ಇದನ್ನೂ ಓದಿ: IND vs PAK Match- ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ವೀಕ್ಷಣೆ ಕಂಡ ಪಂದ್ಯ

  2014ರಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ಅದರು. 2016ರಲ್ಲಿ ಅವರು ಟೀಮ್ ಇಂಡಿಯಾದ ಜಿಂಬಾಬ್ವೆ ಪ್ರವಾಸದಲ್ಲಿ ಮುಖ್ಯ ಕೋಚ್ ಆಗಿಯೂ ಕೆಲಸ ಮಾಡಿದ್ದಾರೆ.

  ಅನಿಲ್ ಕುಂಬ್ಳೆ ಟೀಮ್ ಇಂಡಿಯಾ ಕೋಚ್ ಆದಾಗ ಸಂಜಯ್ ಬಂಗಾರ್ ಬ್ಯಾಟಿಂಗ್ ಕೋಚ್ ಕೆಲಸ ಮಾಡಿದ್ದರು. ರವಿಶಾಸ್ತ್ರಿ ಮುಖ್ಯ ಕೋಚ್ ಆದಾಗ ಬಂಗಾರ್ ಅವರು ಸಹಾಯಕ ಕೋಚ್ ಆಗಿ 2019ರವರೆಗೂ ಕೆಲಸ ಮಾಡಿದ್ದರು.

  ಟೀಮ್ ಇಂಡಿಯಾ ಬ್ಯಾಟಿಂಗ್ ಶಕ್ತಿ ವೃದ್ಧಿಗೆ ಬಂಗಾರ್ ಕಾರಣ?

  ಸಂಜಯ್ ಬಂಗಾರ್ ಹಲವು ವರ್ಷ ಕಾಲ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ಆಗಿ ಕೆಲಸ ಮಾಡಿದ್ದಾರೆ. ಇವರ ಅವಧಿಯಲ್ಲಿ ಭಾರತ ತಂಡದ ಬ್ಯಾಟಿಂಗ್ ಶಕ್ತಿ ಗಮನಾರ್ಹ ರೀತಿಯಲ್ಲಿ ವೃದ್ಧಿಯಾಗಿದೆ ಎಂದು ತಜ್ಞರು ಹೇಳುತ್ತಾರೆ. ಅಂಕಿ ಅಂಶವೂ ಅದಕ್ಕೆ ಪೂರಕವಾಗಿದೆ. ಭಾರತದ ಕೆಳಗಿನ ಕ್ರಮಾಂಕದ ಆಟಗಾರರು ಹೆಚ್ಚು ರನ್ ಗಳಿಸಲು ಸಾಧ್ಯವಾಗಿದ್ದು ಬಂಗಾರ್ ಅವರ ನೆರವಿನಿಂದ ಎನ್ನಲಾಗಿದೆ.

  ಇದನ್ನೂ ಓದಿ: Shoaib Akhtar- ನಾನು ಹೋರಾಟಗಾರ, ಸೋಲಲ್ಲ: ಪಾಕ್ ಚಾನಲ್​ನ ಮಾನನಷ್ಟ ಮೊಕದ್ದಮೆಗೆ ಅಖ್ತರ್ ಪ್ರತಿಕ್ರಿಯೆ

  ಇವರ ಅವಧಿಯಲ್ಲಿ ಭಾರತದ ಆಟಗಾರರು 150ಕ್ಕೂ ಹೆಚ್ಚು ಶತಕಗಳನ್ನ ಗಳಿಸಿರುವುದೇ ಇವರ ಕಾರ್ಯದಕ್ಷತೆಗೆ ಕೈಗನ್ನಡಿ ಆಗಿದೆ. 52 ಟೆಸ್ಟ್ ಪಂದ್ಯಗಳ ಪೈಕಿ ಭಾರತ 30ರಲ್ಲಿ ಗೆಲುವು ಸಾಧಿಸಿದೆ. 120 ಏಕದಿನ ಪಂದ್ಯಗಳಲ್ಲಿ 82 ಮ್ಯಾಚ್ ಗಳಲ್ಲಿ ಭಾರತ ಗೆಲ್ಲಲು ಸಂಜಯ್ ಬಂಗಾರ್ ಪಾತ್ರ ಇಲ್ಲದೇ ಇಲ್ಲ.

  ಇಷ್ಟೆಲ್ಲಾ ಸಾಧನೆ ಮಾಡಿರುವ ಸಂಜಯ್ ಬಂಗಾರ್ ಈಗ ಆರ್​ಸಿಬಿಯ ಮುಖ್ಯ ಕೋಚ್ ಆಗಿ ಬಡ್ತಿ ಹೊಂದಿರುವುದು ನಮ್ಮ ಬೆಂಗಳೂರಿನ ಚೊಚ್ಚಲ ಐಪಿಎಲ್ ಟ್ರೋಫಿ ಕನಸನ್ನ ನನಸು ಮಾಡುವ ನಿರೀಕ್ಷೆಯನ್ನಂತೂ ಮತ್ತೊಮ್ಮೆ ಹುಟ್ಟಿಸಿದೆ.
  Published by:Vijayasarthy SN
  First published: