ಒಂದೆಡೆ ಅನುಭವಿ ರೋಹಿತ್ ಶರ್ಮಾ ಅವರ ಅಲಭ್ಯತೆ, ಮತ್ತೊಂದೆಡೆ ಯುವ ಪಡೆಯನ್ನು ಒಳಗೊಂಡಿರುವ ಟೀಮ್ ಇಂಡಿಯಾ. ಇನ್ನೊಂದೆಡೆ ಬಲಿಷ್ಠ ಆಸ್ಟ್ರೇಲಿಯಾ. ಹೀಗಾಗಿ ಹೊಸ ಲೆಕ್ಕಚಾರಗಳೊಂದಿಗೆ ಕಣಕ್ಕಿಳಿಯಬೇಕಾದ ಅನಿವಾರ್ಯತೆಯಲ್ಲಿದ್ದಾರೆ ತಂಡದ ನಾಯಕ ವಿರಾಟ್ ಕೊಹ್ಲಿ. ಅದರಲ್ಲೂ ಹಿಟ್ಮ್ಯಾನ್ ಅನುಪಸ್ಥಿತಿಯಲ್ಲಿ ಶಿಖರ್ ಧವನ್ ಜೊತೆ ಆರಂಭಿಕರಾಗಿ ಕಣಕ್ಕಿಳಿಯುವುದು ಯಾರು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕದಿನ, ಟಿ20 ಪಂದ್ಯಗಳಲ್ಲಿ ಕೆಎಲ್ ರಾಹುಲ್ ಆರಂಭಿಕನ ಸ್ಥಾನ ತುಂಬಬಲ್ಲ ಆಟಗಾರ. ಆದರೆ ಟೆಸ್ಟ್ ಕ್ರಿಕೆಟ್ನಲ್ಲಿ ಯಾರಾಗಲಿದ್ದಾರೆ ಓಪನರ್ ಎಂಬ ಕುತೂಹಲಕಾರಿ ಪ್ರಶ್ನೆಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಉತ್ತಮ ಆಯ್ಕೆಯೊಂದನ್ನು ತಿಳಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಸಚಿನ್ , ಟೆಸ್ಟ್ ಸರಣಿಯಲ್ಲಿ ಮಯಾಂಕ್ ಅಗರ್ವಾಲ್ ಆರಂಭಿಕನಾಗಿ ಬ್ಯಾಟಿಂಗ್ ಮಾಡುವುದು ಬಹುತೇಕ ಖಚಿತ. ಒಂದು ವೇಳೆ ರೋಹಿತ್ ಶರ್ಮಾ ತಂಡಕ್ಕೆ ಮರಳಿದರೂ ಮಯಾಂಕ್ ಅವರೇ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಏಕೆಂದರೆ ಈ ಹಿಂದೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಯುವ ಆಟಗಾರ ದೊಡ್ಡ ಮೊತ್ತ ಕಲೆಹಾಕಿದ್ದಾರೆ ಎಂದು ಮಾಸ್ಟರ್ ಬ್ಲಾಸ್ಟರ್ ತಿಳಿಸಿದರು.
ಇದಾಗ್ಯೂ, ಪೃಥ್ವಿ ಶಾ ಅಥವಾ ಕೆ.ಎಲ್ ರಾಹುಲ್ ಅವರಲ್ಲಿ ಒಬ್ಬರನ್ನು ಆರಂಭಿಕನಾಗಿ ಆಡಿಸುವುದು ತಂಡದ ವ್ಯವಸ್ಥಾಪಕರ ಆಯ್ಕೆಯಾಗಿರುತ್ತದೆ. ಏಕೆಂದರೆ ಅವರಿಗೆ ಫಾರ್ಮ್ನಲ್ಲಿ ಇರುವವರು ಯಾರು ಎಂಬುದು ತಿಳಿದಿರುತ್ತದೆ ಎಂದು ಸಚಿನ್ ತಿಳಿಸಿದರು.
ಇದೇ ವೇಳೆ ಟೀಮ್ ಇಂಡಿಯಾಗಿಂತ ಆಸ್ಟ್ರೇಲಿಯಾ ತಂಡವು ಬ್ಯಾಟಿಂಗ್ನಲ್ಲಿ ಬಲಿಷ್ಠವಾಗಿದೆ ಎಂದು ತಿಳಿಸಿದ ಸಚಿನ್, ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ತಂಡಕ್ಕೆ ಮರಳಿರುವುದು ಬ್ಯಾಟಿಂಗ್ ವಿಭಾಗಕ್ಕೆ ಇನ್ನಷ್ಟು ಬಲ ನೀಡಿದೆ. ಹಾಗೆಯೇ ಮಾರ್ನಸ್ ಲಾಬುಶೇನ್ ಕೂಡ ತಂಡದಲ್ಲಿರುವುದು ಆಸ್ಟ್ರೇಲಿಯಾ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ ಎಂದು ಅಭಿಪ್ರಾಯಪಟ್ಟರು.
ಇನ್ನು ಮೊದಲ ಟೆಸ್ಟ್ ಪಂದ್ಯದ ಬಳಿಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತವರಿಗೆ ವಾಪಾಸಾಗಲಿದ್ದು, ಇದು ಉಳಿದ ಮೂರು ಟೆಸ್ಟ್ ಪಂದ್ಯಗಳ ಮೇಲೆ ಪರಿಣಾಮ ಬೀರಲಿದೆ. ಅದರೊಂದಿಗೆ ಕೊಹ್ಲಿ ಅನುಪಸ್ಥಿತಿಯಲ್ಲಿ ಬೇರೆ ಆಟಗಾರರಿಗೆ ಪ್ರತಿಭೆಯನ್ನು ತೋರಿಸಲು ಉತ್ತಮ ಅವಕಾಶ ದೊರೆಯಲಿದೆ ಎಂದು ಸಚಿನ್ ತೆಂಡೂಲ್ಕರ್ ತಿಳಿಸಿದರು.
ಇದನ್ನೂ ಓದಿ: ರಾಹುಲ್, ಪಂತ್, ಸಂಜು, ಸಾಹ ಇವರಲ್ಲಿ ಇಬ್ಬರು ಬೆಸ್ಟ್ ಕೀಪರ್ಗಳನ್ನು ಹೆಸರಿಸಿದ ಗಂಗೂಲಿ..! ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ