ಕ್ರಿಕೆಟ್ ಪಾಠ ಹೇಳಿಕೊಟ್ಟ ಹೋಟೆಲ್ ಮಾಣಿಗಾಗಿ ಸಚಿನ್ ಹುಡುಕಾಟ: ಮಾಸ್ಟರ್ ಬ್ಲಾಸ್ಟರ್ ಆಸೆ ಈಡೇರಿಸಿದ ನ್ಯೂಸ್ 18

Sachin Tendulkar: ಇದು ಕೇಳಿದಾಗ ಆಶ್ಚರ್ಯವಾಯಿತು, ಏಕೆಂದರೆ ಅದಕ್ಕೂ ಮೊದಲು ಇದರ ಬಗ್ಗೆ ಯಾರೂ ಮಾತನಾಡಿರಲಿಲ್ಲ. ಅವರ ಸಲಹೆಯಂತೆ ತಮ್ಮ ಆರ್ಮ್ ಗಾರ್ಡ್​ ಅನ್ನು ಮರುವಿನ್ಯಾಸಗೊಳಿಸಿದೆ. ಅದರಂತೆ ಬ್ಯಾಟಿಂಗ್​ನಲ್ಲೂ ವ್ಯತ್ಯಾಸಗಳು ಕಾಣಿಸಲಾರಂಭಿಸಿತು.

zahir | news18-kannada
Updated:December 15, 2019, 2:42 PM IST
ಕ್ರಿಕೆಟ್ ಪಾಠ ಹೇಳಿಕೊಟ್ಟ ಹೋಟೆಲ್ ಮಾಣಿಗಾಗಿ ಸಚಿನ್ ಹುಡುಕಾಟ: ಮಾಸ್ಟರ್ ಬ್ಲಾಸ್ಟರ್ ಆಸೆ ಈಡೇರಿಸಿದ ನ್ಯೂಸ್ 18
ಸಚಿನ್
  • Share this:
ಕ್ರಿಕೆಟ್​ ದಿಗ್ಗಜ, ಲಿಟ್ಲ್ ಮಾಸ್ಟರ್​​ ಸಚಿನ್​ ತೆಂಡೂಲ್ಕರ್ ವಿಶೇಷ ವ್ಯಕ್ತಿಯೊಬ್ಬರನ್ನು ಹುಡುಕುತ್ತಿರುವುದಾಗಿ ತಿಳಿಸಿದ್ದರು. ಟ್ವೀಟ್ ಮಾಡಿ 19 ವರ್ಷಗಳ ಹಿಂದಿನ ಕಹಾನಿ ತಿಳಿಸಿದ್ದ ಸಚಿನ್, ಮಾಣಿಯ ಹುಡುಕಾಟಕ್ಕಾಗಿ ನೆಟ್ಟಿಗರ ಸಹಾಯ ಕೋರಿದ್ದರು.  ಇದೀಗ ಕ್ರಿಕೆಟ್​ ದೇವರ ಮನವಿಯನ್ನು ನ್ಯೂಸ್ 18 ತಂಡ ಪೂರೈಸಿದೆ.

ಹೌದು, 19 ವರ್ಷಗಳ ಹಿಂದೆ ನನಗೆ ಬ್ಯಾಟಿಂಗ್ ಟಿಪ್ಸ್ ನೀಡಿದ್ದ ಹೋಟೆಲ್ ವೇಟರ್​ನನ್ನು ನಾನು ಹುಡುಕುತ್ತಿರುವುದಾಗಿ ಸಚಿನ್ ತಿಳಿಸಿದ್ದರು. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮಾಸ್ಟರ್ ಬ್ಲಾಸ್ಟರ್, ಚೆನ್ನೈನ ಹೋಟೆಲ್​ವೊಂದರಲ್ಲಿ ನಾನು ಕಾಫಿ ಆರ್ಡರ್ ಮಾಡಿದ್ದೆ. ಆಗ ನನಗೆ ಕಾಫಿ ನೀಡಲು ಬಂದ ಮಾಣಿ ನನ್ನ ದೊಡ್ಡ ಅಭಿಮಾನಿ ಎಂದು ಹೇಳಿದ್ದರು.

ನನ್ನ ಪ್ರತಿ ಪಂದ್ಯವನ್ನು ವೀಕ್ಷಿಸುವುದಾಗಿ ತಿಳಿಸಿದ ಆತ, ನಿಮ್ಮೊಂದಿಗೆ ಬ್ಯಾಟಿಂಗ್ ಶೈಲಿ ಬಗ್ಗೆ ಮಾತನಾಡಬಹುದೇ ಎಂದು ಕೇಳಿದ್ದರು. ನಾನು ಕೂಡ ಒಕೆ ಹೇಳಿ ಅಂದೆ. ಈ ವೇಳೆ ನನ್ನ ಬ್ಯಾಟಿಂಗ್​ನಲ್ಲಿನ ತಪ್ಪುಗಳನ್ನು ತಿಳಿಸಿದ್ದರು. ನೀವು ಧರಿಸುವ ಮೊಣಕೈ ಸೇಫ್ ಗಾರ್ಡ್​ ಸರಿಯಿಲ್ಲ. ಇದರಿಂದ ನಿಮ್ಮ ಬ್ಯಾಟಿಂಗ್​ ಶೈಲಿ ಮೇಲೆ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು.

ಮಾತು ಮುಂದುವರೆಸಿದ ಆತ, ನೀವು ಬಳಸುವ ಆರ್ಮ್ ಗಾರ್ಡ್​ನಿಂದ ಫ್ರಿಯಾಗಿ ಬ್ಯಾಟ್ ಬೀಸಲಾಗುತ್ತಿಲ್ಲ. ಇದು ನಿಮ್ಮ ಫುಟ್ ವರ್ಕ್​ ಮೇಲೂ ಇದು ಪ್ರಭಾವ ಬೀರುತ್ತಿದೆ. ಇದರಿಂದ ನೀವು ಔಟಾಗುವ ಸಾಧ್ಯತೆಯೇ ಹೆಚ್ಚು ಎಂದು ತಿಳಿಸಿದ್ದರು. ನಾನು 5-7 ಬಾರಿ ರಿವೈಂಡ್ ಮಾಡಿ ನೋಡಿದ್ದೇನೆ. ಆರ್ಮ್​ ಗಾರ್ಡ್​ನಿಂದಾಗಿ ನಿಮ್ಮ ಬ್ಯಾಟ್‌ನ ಸ್ವಿಂಗ್ ಬದಲಾಗುತ್ತದೆ ಎಂದರು.

ಇದು ಕೇಳಿದಾಗ ಆಶ್ಚರ್ಯವಾಯಿತು, ಏಕೆಂದರೆ ಅದಕ್ಕೂ ಮೊದಲು ಇದರ ಬಗ್ಗೆ ಯಾರೂ ಮಾತನಾಡಿರಲಿಲ್ಲ. ಅವರ ಸಲಹೆಯಂತೆ ತಮ್ಮ ಆರ್ಮ್ ಗಾರ್ಡ್​ ಅನ್ನು ಮರುವಿನ್ಯಾಸಗೊಳಿಸಿದೆ. ಅದರಂತೆ ಬ್ಯಾಟಿಂಗ್​ನಲ್ಲೂ ವ್ಯತ್ಯಾಸಗಳು ಕಾಣಿಸಲಾರಂಭಿಸಿತು. ಇಂತಹದೊಂದು ದೊಡ್ಡ ತಪ್ಪನ್ನು ಗುರುತಿಸಿ ಸಲಹೆ ನೀಡಿದ ವಿಶ್ವದ ಏಕೈಕ ವ್ಯಕ್ತಿ ಮಾಣಿ ಎಂದು ಸಂದರ್ಶನದಲ್ಲಿ ಸಚಿನ್ ಹೇಳಿದ್ದರು.


ಈ ವಿಡಿಯೋವನ್ನು ಟ್ವೀಟ್ ಮಾಡಿದ ಸಚಿನ್, ನನಗೆ ಸಲಹೆ ನೀಡಿದ ಆ ಮಾಣಿಯನ್ನು ಹುಡುಕುತ್ತಿರುವುದಾಗಿ ತಿಳಿಸಿದರು. ಅಲ್ಲದೆ ನನ್ನ ಹುಡುಕಾಟಕ್ಕೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದರು. 19 ವರ್ಷಗಳ ಹಿಂದೆ ಸಚಿನ್ ಬ್ಯಾಟಿಂಗ್​ ಶೈಲಿಯ ನೂನ್ಯತೆ ತಿಳಿಸಿದ್ದ  ಮಾಣಿಯನ್ನು ನ್ಯೂಸ್ 18 ತಮಿಳುನಾಡು ಚಾನೆಲ್ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.

ಮಾಸ್ಟರ್ ಬ್ಲಾಸ್ಟರ್​ಗೆ ಸಲಹೆ ನೀಡಿದ ವ್ಯಕ್ತಿಯನ್ನು ಗುರು ಪ್ರಸಾದ್ ಎಂದು ಗುರುತಿಸಲಾಗಿದೆ. 19 ವರ್ಷಗಳ ಹಿಂದೆ ಟೀಂ ಇಂಡಿಯಾ ಟೆಸ್ಟ್ ಸರಣಿ ಆಡಲು ಚೆನ್ನೈಗೆ ಬಂದಿದ್ದರು. ಈ ವೇಳೆ ಸಚಿನ್ ತಾಜ್ ಕೋರಮಂಡಲ್‌ ಹೋಟೆಲ್​​ನಲ್ಲಿದ್ದರು. ಆ ವೇಳೆ ಸಚಿನ್ ಅವರ ಆಟೋಗ್ರಾಫ್ ಪಡೆದು ನಾನು ಆರ್ಮ್ ಗಾರ್ಡ್ ಬಗ್ಗೆ ಸಲಹೆ ನೀಡಿದ್ದೆ. ಆ ಬಳಿಕ ಅದನ್ನು ಸರಿಪಡಿಸಿದ ಸಚಿನ್ ದ್ವಿಶತಕವನ್ನು ಬಾರಿಸಿದ್ದರು ಎಂದು ಗುರು ಪ್ರಸಾದ್ ತಿಳಿಸಿದ್ದಾರೆ.

ಇದೀಗ ಲಿಟ್ಲ್​ ಬ್ಲಾಸ್ಟರ್ ಅವರನ್ನು ಭೇಟಿಯಾಗುವ ಖುಷಿಯಲ್ಲಿರುವ ಗುರು ಪ್ರಸಾದ್, ಸಚಿನ್ ತೆಂಡುಲ್ಕರ್ ಮಾಸ್ಟರ್ ಬ್ಲಾಸ್ಟರ್ ಎಂಬುದಕ್ಕೆ ಅವರ ಈ ನಡೆಯೇ ಸಾಕ್ಷಿ. ಒಬ್ಬ ಸಾಧಾರಣ ಅಭಿಮಾನಿಯ ಮಾತು ಕೇಳಿ, ತಮ್ಮ ಬ್ಯಾಟಿಂಗ್ ಶೈಲಿಯನ್ನು ಪರಿಶೀಲಿಸಿ, ಇಂದಿಗೂ ಅದನ್ನು ನೆನಪಿನಲ್ಲಿಟ್ಟುಕೊಂಡಿದ್ದಾರೆ. ಅದರಲ್ಲೂ ನನ್ನನ್ನು ಭೇಟಿಯಾಗಬೇಕು ಎಂದು ಬಯಸಿದ್ದಾರೆ. ಒಬ್ಬ ಅಭಿಮಾನಿಗೆ ಇದಕ್ಕಿಂತ ಇನ್ನೇನು ಬೇಕು ಎಂದು ಗುರು ಪ್ರಸಾದ್ ಸಂತೋಷ ಹಂಚಿಕೊಂಡಿದ್ದಾರೆ.

First published:December 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ