HOME » NEWS » Sports » CRICKET RR VS MI RAJASTHAN ROYALS BEAT MUMBAI INDIANS BY 5 WICKETS

RR vs MI: ಸ್ಮಿತ್ ಆಕರ್ಷಕ ಅರ್ಧಶತಕ: ರಾಯಲ್ಸ್​ ವಿರುದ್ಧ ಮತ್ತೆ ಮಂಡಿಯೂರಿದ ಮುಂಬೈ

ಇದಕ್ಕೂ ಮುನ್ನ ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಮುಂಬೈ ಇಂಡಿಯನ್ಸ್​ಗೆ ಕನ್ನಡಿಗ ಶ್ರೇಯಸ್ ಗೋಪಾಲ್ ಆರಂಭಿಕ ಆಘಾತ ನೀಡಿದ್ದರು.

zahir | news18
Updated:April 20, 2019, 9:20 PM IST
RR vs MI: ಸ್ಮಿತ್ ಆಕರ್ಷಕ ಅರ್ಧಶತಕ: ರಾಯಲ್ಸ್​ ವಿರುದ್ಧ ಮತ್ತೆ ಮಂಡಿಯೂರಿದ ಮುಂಬೈ
ಸ್ಮಿತ್
  • News18
  • Last Updated: April 20, 2019, 9:20 PM IST
  • Share this:
ಜೈಪುರದ ಸವಾಯ್ ಮಾನ್​​ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 36ನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ವಿರುದ್ಧ ರಾಜಸ್ಥಾನ್​ ರಾಯಲ್ಸ್​ 5 ವಿಕೆಟ್​ಗಳ ಜಯಭೇರಿ ಬಾರಿಸಿದೆ. ಇಂದಿನ ಪಂದ್ಯದ ಮೂಲಕ ರಾಜಸ್ಥಾನ್​ ತಂಡದ ನಾಯಕತ್ವವನ್ನು ವಹಿಸಿಕೊಂಡ ಸ್ಟೀವ್​ ಸ್ಮಿತ್​ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಟೂರ್ನಿಯಲ್ಲಿ 3ನೇ ಗೆಲುವನ್ನು ಸಾಧಿಸಿತು.

ಇದಕ್ಕೂ ಮುನ್ನ ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಮುಂಬೈ ಇಂಡಿಯನ್ಸ್​ಗೆ ಕನ್ನಡಿಗ ಶ್ರೇಯಸ್ ಗೋಪಾಲ್ ಆರಂಭಿಕ ಆಘಾತ ನೀಡಿದ್ದರು. ಮೂರನೇ ಓವರ್ ಬೌಲ್​ ಮಾಡಿದ ಶ್ರೇಯಸ್, ರೋಹಿತ್​ ಶರ್ಮಾ(5) ರನ್ನು ಗೂಗ್ಲಿ ಎಸೆತದಲ್ಲಿ ಕ್ಯಾಚ್​ ನೀಡುವಂತೆ ಮಾಡಿ ರಾಜಸ್ಥಾನ್​ಗೆ ಮೊದಲ ಯಶಸ್ಸು ತಂದುಕೊಟ್ಟರು.

ಆದರೆ ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಲು ಪಣತೊಟ್ಟ ಕ್ವಿಂಟನ್ ಡಿ ಕೊಕ್ ಹಾಗೂ ಒನ್​ಡೌನ್​ ಬಳಿಕ ಕ್ರೀಸ್​ಗೆ ಆಗಮಿಸಿದ ಸೂರ್ಯಕುಮಾರ್ ಇನಿಂಗ್ಸ್​ ಕಟ್ಟುವ ಜವಾಬ್ದಾರಿವಹಿಸಿಕೊಂಡರು. ಎಚ್ಚರಿಕೆಯ ಆಟದೊಂದಿಗೆ ರನ್​ಗತಿ ಏರಿಸಿದ ಈ ಜೋಡಿ 97 ರನ್​ಗಳ ಅತ್ಯುತ್ತಮ ಜೊತೆಯಾಟ ಆಡಿದರು.

ತಂಡದ ಮೊತ್ತ 108 ಆಗಿದ್ದ ವೇಳೆ ಸ್ಟುವರ್ಟ್​ ಬಿನ್ನಿ ಎಸೆತವನ್ನು ಸಿಕ್ಸರ್​ಗೆ ಅಟ್ಟುವ ತವಕದಲ್ಲಿ ಸೂರ್ಯಕುಮಾರ್ ಯಾದವ್(34) ಕುಲಕರ್ಣಿಗೆ ಕ್ಯಾಚಿತ್ತು ನಿರ್ಗಮಿಸಿದರು. ಮತ್ತೊಂದೆಡೆ ಜೋಫ್ರಾ ಆರ್ಚರ್​ ನೀಡಿದ ಜೀವದಾನದಿಂದ ಆಕರ್ಷಕ ಅಧರ್ಶತಕ ಸಿಡಿಸಿದ ಡಿ ಕೊಕ್, ಬಿರುಸಿನ ಆಟವಾಡಿ 6 ಬೌಂಡರಿ ಹಾಗೂ 2 ಸೂಪರ್ ಸಿಕ್ಸರ್​ಗಳನ್ನು ಸಿಡಿಸಿ ಮಿಂಚಿದ್ದರು. ವೈಯುಕ್ತಿಕ ಮೊತ್ತ 65 ರನ್​ ಇದ್ದಾಗ ಶ್ರೇಯಸ್​ ಎಸೆತದಲ್ಲಿ ಡಿ ಕೊಕ್ ಬೌಂಡರಿಯಲ್ಲಿ ಕ್ಯಾಚ್ ನೀಡಿ ಪೆವಿಲಿಯನತ್ತ ಹೆಜ್ಜೆ ಹಾಕಿದರು.

ಡಿ ಕೊಕ್ ವಿಕೆಟ್ ಪಡೆಯುತ್ತಿದ್ದಂತೆ ಲಯಕ್ಕೆ ಮರಳಿದ ರಾಜಸ್ಥಾನ್ ಬೌಲರ್​ಗಳು ನಂತರ ಬಂದ ಬ್ಯಾಟ್ಸ್​ಮನ್​ಗಳನ್ನು ಕಾಡಿದರು. ಈ ಹಂತದಲ್ಲಿ ಜತೆಗೂಡಿದ್ದ ಪೊಲಾರ್ಡ್​ ಹಾಗೂ ಹಾರ್ದಿಕ್ ಪಾಂಡ್ಯರಿಂದ ಸ್ಪೋಟಕ ಆಟವನ್ನು ನಿರೀಕ್ಷಿಸಲಾಗಿತ್ತದರೂ, ರಾಜಸ್ಥಾನ್ ತಂಡದ ನಿಖರ​ ದಾಳಿಯಿಂದ ದಾಂಡಿಗರು ಕಂಗೆಟ್ಟಿದ್ದರು. ಪೊಲಾರ್ಡ್​ ಕೇವಲ 10 ರನ್​ಗಳಿಸಿ ಉನಾದ್ಕಟ್​ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ನಿರಾಸೆ ಮೂಡಿಸಿದರೆ, ಇತ್ತ ಹಾರ್ದಿಕ್ ಪಾಂಡ್ಯ ಭರ್ಜರಿ ಹೊಡೆತಕ್ಕಾಗಿ ಪರದಾಡಿದರು. ಇದೇ ವೇಳೆ ಜೋಫ್ರಾ ಆರ್ಚರ್ ಪಾಂಡ್ಯರ ಎರಡು ಕ್ಯಾಚ್​ಗಳನ್ನು ಕೈ ಚೆಲ್ಲಿದರೂ, ಈ ಜೀವದಾನವನ್ನು ಸರಿಯಾಗಿ ಬಳಸಿಕೊಳ್ಳಲು ಹಾರ್ದಿಕ್​ಗೆ ಸಾಧ್ಯವಾಗಲಿಲ್ಲ.

ಕೊನೆ ಓವರ್​ನಲ್ಲಿ ಒಂದಷ್ಟು ರನ್​ಗಳ ಸುರಿಮಳೆಯನ್ನು ನಿರೀಕ್ಷಿಸಿದ್ದ ಮುಂಬೈ ಪಾಳಯಕ್ಕೆ ಹಾರ್ದಿಕ್ ಪಾಂಡ್ಯ ಮೊದಲ ಎಸೆತದಲ್ಲೇ ಶಾಕ್ ನೀಡಿದರು. 15 ಎಸೆತಗಳನ್ನು ಎದುರಿಸಿದ್ದ ಪಾಂಡ್ಯ 2 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ 23 ರನ್​ಗೆ ನಿರ್ಗಮಿಸಿದರು. ಇತ್ತ ಬೆನ್ ಕಟ್ಟಿಂಗ್ ಹಾಗೂ ಕೃನಾಲ್ ಪಾಂಡ್ಯ ಜತೆಗೂಡಿದರೂ ಯಾವುದೇ ಜಾದು ನಡೆಯಲಿಲ್ಲ. ಕಟ್ಟಿಂಗ್ ಕೊನೆಯ ಎಸೆತದಲ್ಲಿ ಸಿಕ್ಸ್​ ಬಾರಿಸಿದ ಪರಿಣಾಮ 20 ಓವರ್​ಗೆ ಮುಂಬೈ 5 ವಿಕೆಟ್ ಕಳೆದುಕೊಂಡು 161 ರನ್ ಕಲೆಹಾಕಿತು. ರಾಜಸ್ಥಾನ್​ ಪರ ಶ್ರೇಯಸ್ ಗೋಪಾಲ್ 2 ವಿಕೆಟ್ ಕಿತ್ತರೆ, ಸ್ಟುವರ್ಟ್​ ಬಿನ್ನಿ, ಜೋಫ್ರಾ ಆರ್ಚೆರ್ ಹಾಗೂ ಉನಾದ್ಕಟ್ ತಲಾ 1 ವಿಕೆಟ್ ಪಡೆದರು.

162 ರನ್​ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್‌ಗೆ ರಹಾನೆ ಹಾಗೂ ಸಂಜು ಸ್ಯಾಮ್ಸನ್ ಬಿರುಸಿನ ಆರಂಭ ಒದಗಿಸಿದರು. 4ನೇ ಓವರ್​ನಲ್ಲೇ ತಂಡವನ್ನು 39 ರ ಗಡಿ ತಲುಪಿಸಿದ್ದ ಈ ಜೋಡಿಯನ್ನು ಬೇರ್ಪಡಿಸಲು ಯುವ ಸ್ಪಿನ್ನರ್ ರಾಹುಲ್ ಚಾಹರ್ ಯಶಸ್ವಿಯಾದರು. ಚಾಹರ್​ ಎಸೆದ ಸ್ಪಿನ್ ಮೋಡಿಯನ್ನು ಅರಿಯದ ರಹಾನೆ 12 ರನ್​ಗಳಿಸಿ ಸೂರ್ಯಕುಮಾರ್​ಗೆ ಕ್ಯಾಚಿತ್ತು ಹೊರ ನಡೆದರು.ಸಂಜು ಸ್ಯಾಮ್ಸನ್​ರೊಂದಿಗೆ ಇನಿಂಗ್ಸ್​ ಕಟ್ಟಿದ ನಾಯಕ ಸ್ಟೀವ್​ ಸ್ಮಿತ್ ಆಕರ್ಷಕ ಹೊಡೆತಗಳ ಮೂಲಕ ಗಮನ ಸೆಳೆದರು. ಅದರಲ್ಲೂ ಅಬ್ಬರ ಬ್ಯಾಟಿಂಗ್ ನಡೆಸಿದ ಸಂಜು ಸ್ಯಾಮ್ಸನ್ ಕೇವಲ 19 ಎಸೆತಗಳಲ್ಲಿ 35 ರನ್​ ಬಾರಿಸಿದರು. ಇದೇ ವೇಳೆ ಚೆಂಡನ್ನು ಸ್ಟೇಡಿಯಂನತ್ತ ನುಗ್ಗಿಸುವ ಪ್ರಯತ್ನವು ಪೊಲಾರ್ಡ್​ ಕೈ ಸೇರುವ ಮೂಲಕ ಸ್ಯಾಮ್ಸನ್ ನಿರ್ಗಮಿಸಿದರು. ಇದರ ಬೆನ್ನಲ್ಲೇ ಬೆನ್​ ಸ್ಟೋಕ್ಸ್ ಸೊನ್ನೆ ಸುತ್ತಿ ಮತ್ತೊಮ್ಮೆ ಕಳಪೆ ಆಟ ಪ್ರದರ್ಶಿಸಿದರು.

ಈ ವೇಳೆ ಬಡ್ತಿಯೊಂದಿಗೆ ಕ್ರೀಸ್​ಗೆ ಆಗಮಿಸಿದ ಯುವ ಆಟಗಾರ ರಿಯಾನ್ ಪರಾಗ್ ಸ್ಮಿತ್​ಗೆ ಬೆನ್ನೆಲುಬಾಗಿ ನಿಂತರು. ಅತ್ಯುತ್ತಮ ಹೊಡೆತಗಳ ಮೂಲಕ ತನ್ನ ಪ್ರತಿಭೆ ಧಾರೆಯೆರೆದ ಪರಾಗ್ 29 ಎಸೆತಗಳಲ್ಲಿ ಬಿರುಸಿನ 43 ರನ್​ಗಳಿಸಿದರು. ಇದರಲ್ಲಿ ಐದು ಭರ್ಜರಿ ಬೌಂಡರಿ ಹಾಗೂ ಒಂದು ಅಮೋಘ ಸಿಕ್ಸರ್ ಒಳಗೊಂಡಿತ್ತು. ಅರ್ಧಶತಕದ ಹೊಸ್ತಿಲಲ್ಲಿದ್ದ ಪರಾಗ್ ಎರಡು ರನ್​ ಕಲೆಹಾಕಲು ಹೋಗಿ ರನೌಟ್ ಆಗಿ ನಿರಾಸೆ ಮೂಡಿಸಿದರು.

ನಾಯಕನೊಂದಿಗೆ 70 ರನ್​ಗಳ ಅಮೋಘ ಜೊತೆಯಾಟ ಆಡಿದ ರಿಯಾನ್ ಪರಾಗ್ ಬ್ಯಾಟಿಂಗ್ ಮೂಲಕ ಮಿಂಚಿ ರಾಜಸ್ಥಾನ್​ಗೆ ಹೊಸ ಭರವಸೆ ಮೂಡಿಸಿದರು. ಇನ್ನು ಎಚ್ಚರಿಕೆಯ ಹೊಡೆತಗಳ ಮೂಲಕ ಆಕರ್ಷಕ ಅರ್ಧಶತಕ ಸಿಡಿಸಿ ಸ್ಟೀವ್​ ಸ್ಮಿತ್ ತಂಡಕ್ಕೆ 3ನೇ ಗೆಲುವು ತಂದುಕೊಟ್ಟರು. 48 ಎಸೆತಗಳನ್ನು ಎದುರಿಸಿದ್ದ ಸ್ಮಿತ್ ಅಜೇಯ 59 ರನ್​ಗಳಿಸಿದರು. ಇದರ ಪರಿಣಾಮ ರಾಜಸ್ಥಾನ್​ ರಾಯಲ್ಸ್​ 19.1 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 162 ರನ್ ಪೂರೈಸಿ ಗೆಲುವಿನ ನಗೆ ಬೀರಿತು. ಮುಂಬೈ ಪರ ರಾಹುಲ್ ಚಾಹರ್ 3 ವಿಕೆಟ್ ಕಬಳಿಸಿ ಗಮನ ಸೆಳೆದರು. ಅಜೇಯ ಅರ್ಧಶತಕದೊಂದಿಗೆ ನಾಯಕ ಆಟವಾಡಿದ ಸ್ಟೀವ್ ಸ್ಮಿತ್​ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

First published: April 20, 2019, 9:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories