Ind vs Aus - ಸಿಡ್ನಿ ಟೆಸ್ಟ್: ಆಸ್ಟ್ರೇಲಿಯಾ ವಿರುದ್ಧ 3ನೇ ಪಂದ್ಯಕ್ಕೆ ಭಾರತ ತಂಡ ಪ್ರಕಟ; ಸೈನಿ ಪದಾರ್ಪಣೆ

ಫಾರ್ಮ್ ಕಳೆದುಕೊಂಡಿರುವ ಮಯಂಕ್ ಅಗರ್ವಾಲ್ ಅವರನ್ನ ಆಸ್ಟ್ರೇಲಿಯಾ ವಿರುದ್ಧದ 3ನೇ ಪಂದ್ಯಕ್ಕೆ ಕೈಬಿಡಲಾಗಿದೆ. ಅವರ ಬದಲು ರೋಹಿತ್ ಶರ್ಮಾ ಬ್ಯಾಟ್ ಮಾಡಲಿದ್ದಾರೆ. ಗಾಯಾಳು ಉಮೇಶ್ ಯಾದವ್ ಬದಲು ನವದೀಪ್ ಸೈನಿ ಫಾಸ್ಟ್ ಬೌಲಿಂಗ್ ಮಾಡಲಿದ್ದಾರೆ.

ನವದೀಪ್ ಸೈನಿ

ನವದೀಪ್ ಸೈನಿ

 • Share this:
  ಸಿಡ್ನಿ(ಜ. 06): ನಾಳೆ ಇಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಕರ್ನಾಟಕದ ಮಯಂಕ್ ಅಗರ್ವಾಲ್ ಬದಲು ರೋಹಿತ್ ಶರ್ಮಾ ಅವರು ಆಡಲಿದ್ದಾರೆ. ಗಾಯಗೊಂಡಿರುವ ಉಮೇಶ್ ಯಾದವ್ ಬದಲು ನವದೀಪ್ ಸೈನಿ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲವೆನ್​ನಲ್ಲಿ ಸ್ಥಾನ ಪಡೆದಿದ್ಧಾರೆ. ಸೈನಿ ಅವರಿಗೆ ಇದು ಮೊದಲ ಟೆಸ್ಟ್ ಪಂದ್ಯ ಆಗಲಿದೆ. ಇದು ಬಿಟ್ಟರೆ ಮೆಲ್ಬೋರ್ನ್​ನಲ್ಲಿ ಕಾಂಗರೂಗಳ ಪಡೆ ಮೇಲೆ ದಿಗ್ವಿಜಯ ಸಾಧಿಸಿದ್ದ ಟೀಮ್ ಇಂಡಿಯಾದಲ್ಲಿ ಬೇರೆ ಬದಲಾವಣೆ ಆಗಿಲ್ಲ.

  ರೋಹಿತ್ ಶರ್ಮಾ ಒಂದು ವರ್ಷದ ನಂತರ ಟೆಸ್ಟ್ ಪಂದ್ಯ ಆಡುತ್ತಿದ್ದಾರೆ. 2019ರ ನವೆಂಬರ್​ನಲ್ಲಿ. ಹಾಗೆಯೇ, ವಿದೇಶದ ಪಿಚ್​ನಲ್ಲಿ ಅವರು ಕೊನೆಯ ಬಾರಿ ಆಡಿದ್ದು 2018ರಲ್ಲಿ. ಅದೂ ಮೆಲ್ಬೋರ್ನ್​ನ ಎಂಸಿಜಿಯಲ್ಲಿ. ಆ ವರ್ಷ ತಮ್ಮ ಮಗು ನೋಡಲು ಆಸ್ಟ್ರೇಲಿಯಾ ಸರಣಿಯಿಂದ ಮಧ್ಯದಲ್ಲೇ ತವರಿಗೆ ವಾಪಸ್ ಬಂದಿದ್ದ ರೋಹಿತ್ ಶರ್ಮಾ 2019ರವರೆಗೂ ಭಾರತದಲ್ಲಿ ನಡೆದ 5 ಟೆಸ್ಟ್ ಪಂದ್ಯಗಳಲ್ಲಿ 3 ಭರ್ಜರಿ ಶತಕ ದಾಖಲಿಸಿದ್ದರು. ಮಿಡ್ಲ್ ಆರ್ಡರ್ ಬಿಟ್ಟು ಓಪನರ್ ಆಗಿಯೂ ಟೆಸ್ಟ್ ಕ್ರಿಕೆಟ್​ನಲ್ಲಿ ತಮ್ಮ ಛಾಪು ಮೂಡಿಸಿದ್ದರು. ಆ ನಂತರ ಗಾಯದ ಸಮಸ್ಯೆಯಿಂದಾಗಿ ಟೆಸ್ಟ್ ಕ್ರಿಕೆಟ್​ನಿಂದ ದೂರ ಉಳಿಯಬೇಕಾಯಿತು.

  ಆರಂಭಿಕ ಟೆಸ್ಟ್ ಬ್ಯಾಟ್ಸ್​ಮನ್ ಆಗಿ ಯಶಸ್ವಿಯಾಗಿರುವ ರೋಹಿತ್ ಶರ್ಮಾ ಅವರು ಮಯಂಕ್ ಸ್ಥಾನವನ್ನು ತುಂಬುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ನಿರಾಸೆಯ ಪ್ರದರ್ಶನ ನೀಡಿದ್ದ ಮಯಂಕ್ ಅವರು ಹೊರಗುಳಿಯುವುದು ಅನಿವಾರ್ಯ ಎಂಬಂತಿತ್ತು. ದುರ್ಬಲಗೊಂಡಂತಿದ್ದ ಅಗ್ರಕ್ರಮಾಂಕಕ್ಕೆ ರೋಹಿತ್ ಎಂಟ್ರಿಯಿಂದ ಬಲ ಸಿಕ್ಕಂತಾಗಿದೆ. ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ರೋಹಿತ್ ಶರ್ಮಾ ಉಪನಾಯಕರಾಗಿ ಜವಾಬ್ದಾರಿ ನಿಭಾಯಿಸಲಿದ್ಧಾರೆ. ಮೆಲ್ಬೋರ್ನ್ ಟೆಸ್ಟ್ ಮುಗಿಯುತ್ತಲೇ ಆಸ್ಟ್ರೇಲಿಯಾಗೆ ಧಾವಿಸಿ ಬಂದ ರೋಹಿತ್ ಶರ್ಮಾ ಅವರು ನೆಟ್ ಪ್ರಾಕ್ಟೀಸ್ ಭರ್ಜರಿಯಾಗಿ ಮಾಡಿದ್ದಾರೆ.

  ಇದನ್ನೂ ಓದಿ: 100ನೇ ಶತಕ ಸಿಡಿಸಿ ಅಂದು ಸಚಿನ್ ಹೇಳಿದ್ದೇನು? ಮೈದಾನದ ಅವಿಸ್ಮರಣೀಯ ಕ್ಷಣ ಬಿಚ್ಚಿಟ್ಟ ಸುರೇಶ್ ರೈನಾ..!

  ಇನ್ನು, ಆರ್​ಸಿಬಿ ಹುಡುಗ ಮತ್ತು ದೆಹಲಿಯ ವೇಗದ ಬೌಲರ್ ನವದೀಪ್ ಸೈನಿ ಅವರು ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಲಿದ್ದಾರೆ. ದೇಶೀಯ ಕ್ರಿಕೆಟ್ ಮತ್ತು ಐಪಿಎಲ್​ನಲ್ಲಿ ಅವರೀಗಾಗಲೇ ತಮ್ಮ ಛಾಪು ಮೂಡಿಸಿದ್ದಾರೆ. ಭಾರತ ಎ ತಂಡದ ಪರವಾಗಿಯೂ ಅವರ ಬೌಲಿಂಗ್ ಪ್ರದರ್ಶನ ಎದುರಾಳಿ ಬ್ಯಾಟುಗಾರರಿಗೆ ಮಾರಕವೆನಿಸಿದೆ.

  ಆಸ್ಟ್ರೇಲಿಯಾ ಮತ್ತು ಭಾರತ ಕ್ರಿಕೆಟ್ ಸರಣಿಗಳು ಹಲವು ಕೌತುಕ ಮತ್ತು ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಮೊದಲು ನಡೆದ ಏಕದಿನ ಪಂದ್ಯಗಳ ಸರಣಿಯನ್ನು ಆಸ್ಟ್ರೇಲಿಯಾ 2-1ರಿಂದ ಗೆದ್ದುಕೊಂಡಿತು. ನಂತರ ನಡೆದ ಟಿ20 ಸರಣಿ ಅದೇ ಅಂತರದಿಂದ ಭಾರತದ ವಶವಾಯಿತು. ಈಗ 4 ಟೆಸ್ಟ್ ಪಂದ್ಯಗಳ ಸರಣಿ ನಡೆಯುತ್ತಿದೆ. ಅಡಿಲೇಡ್​ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನ ಆಸ್ಟ್ರೇಲಿಯಾ ರೋಚಕವಾಗಿ ಜಯಿಸಿತು. ನಂತರ ಮೆಲ್ಬೋರ್ನ್​ನಲ್ಲಿ ನಡೆದ 2ನೇ ಪಂದ್ಯದಲ್ಲಿ ಭಾರತ ತಿರುಗೇಟು ನೀಡಿತು. ಸದ್ಯ 1-1ರಿಂದ ಸಮವಾಗಿದೆ. ನಾಳೆಯದ್ದು ಸೇರಿ ಇನ್ನೂ ಎರಡು ಪಂದ್ಯಗಳು ಬಾಕಿ ಇವೆ.

  ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ:

  ಅಜಿಂಕ್ಯ ರನಾನೆ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶುಭ್ಮನ್ ಗಿಲ್, ಚೇತೇಶ್ವರ್ ಪೂಜಾರ, ಗಗನ್ ಹನುಮ ವಿಹಾರಿ, ರಿಷಭ್ ಪಂತ್ (ವಿ.ಕೀ.), ರವೀಂದ್ರ ಜಡೇಜಾ, ಆರ್ ಅಶ್ವಿನ್, ಜಸ್​ಪ್ರೀತ್ ಬುಮ್ರಾ, ನವದೀಪ್ ಸೈನಿ ಮತ್ತು ಮೊಹಮ್ಮದ್ ಸಿರಾಜ್.

  (ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಜ. 7 ಬೆಳಗ್ಗೆ 5ಗಂಟೆಗೆ ಪ್ರಾರಂಭವಾಗಲಿದೆ.)
  Published by:Vijayasarthy SN
  First published: