IND vs NZ- ಇನ್ಮುಂದೆ ಕೊಹ್ಲಿ ಪಾತ್ರ ಏನು? ಕ್ಯಾಪ್ಟನ್ಸಿ ಬಗ್ಗೆ 9 ವರ್ಷದ ಹಿಂದಿನ ರೋಹಿತ್ ಟ್ವೀಟ್ ವೈರಲ್

Rohit Sharma speaks on Virat Kohli- ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಆಟಗಾರರ ಪಾತ್ರ ಬದಲಾಗುತ್ತದೆ. ಅದಕ್ಕೆ ಕೊಹ್ಲಿ ಸೇರಿದಂತೆ ಎಲ್ಲಾ ಆಟಗಾರರು ಬದ್ಧರಾಗಿರಬೇಕು ಎಂದು ಹೊಸ ಟಿ20 ಕ್ಯಾಪ್ಟನ್ ರೋಹಿತ್ ಶರ್ಮಾ ಹೇಳಿದ್ದಾರೆ.

ರೋಹಿತ್ ಶರ್ಮಾ

ರೋಹಿತ್ ಶರ್ಮಾ

  • Share this:
ಜೈಪುರ, ನ. 17: ಇಂದಿನಿಂದ ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ಟಿ20 ಸರಣಿ (India vs New Zealand T20 Series) ನಡೆಯಲಿದೆ. ಟಿ20 ವಿಶ್ವಕಪ್​ನ ಫೈನಲ್​ವರೆಗೂ ತಲುಪಿ ಬಳಲಿಹೋಗಿರುವ ಕಿವೀಸ್ ಪಡೆಗೆ ಭಾರತದ ತಾಜಾ ಐಪಿಎಲ್ ಸ್ಟಾರ್​ಗಳ ಪಡೆ ಸವಾಲು ಒಡ್ಡಿದೆ. ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ಟೀಮ್ ಇಂಡಿಯಾ ಹೊಸ ಮಗ್ಗುಲು ಕಂಡುಕೊಳ್ಳುವ ಪ್ರಯತ್ನದಲ್ಲಿ ಮೊದಲ ಹೆಜ್ಜೆ ಇದಾಗಿದೆ. ಟೀಮ್ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ (Rahul Dravid as Team India Coach) ಅವರ ಮೊದಲ ಅಗ್ನಿ ಪರೀಕ್ಷೆ ಇದಾಗಿದೆ. ಜೈಪುರದ ಸವಾಲ್ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊತ್ತಮೊದಲ ಅಂತರರಾಷ್ಟ್ರೀಯ ಟಿ20 ಪಂದ್ಯವೂ ಇದಾಗಿದೆ. ಬಹುಶಃ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್ ಸರಣಿಯೂ ಇದಾಗಿರಬಹುದು.

ಪಂದ್ಯಕ್ಕೆ ಮುನ್ನ ಹೊಸ ನಾಯಕ ರೋಹಿತ್ ಶರ್ಮಾ ಮತ್ತು ಹೊಸ ಕೋಚ್ ರಾಹುಲ್ ದ್ರಾವಿಡ್ ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿ ಟೀಮ್ ಇಂಡಿಯಾ ಟಿ20 ಕ್ರಿಕೆಟ್​ನ ಮುಂದಿನ ಹಾದಿ ಮತ್ತು ರೂಪುರೇಖೆಗಳ ಬಗ್ಗೆ ಒಂದಷ್ಟು ಮಾಹಿತಿ ಬಿಚ್ಚಿಟ್ಟರು. ನಾಯಕ ಸ್ಥಾನದಿಂದ ಕೆಳಗಿಳಿದ ವಿರಾಟ್ ಕೊಹ್ಲಿಗೆ ಆಟಗಾರನಾಗಿ ತಂಡದಲ್ಲಿ ಎಂಥ ಸ್ಥಾನ ಇರಬಹುದು ಎಂಬುದರ ಸುಳಿವನ್ನೂ ಈ ಸಂದರ್ಭದಲ್ಲಿ ಕ್ಯಾಪ್ಟನ್ ನೀಡಿದರು. ವಿರಾಟ್ ಕೊಹ್ಲಿ ಭಾರತ ಟಿ20 ತಂಡದಲ್ಲಿ ಈಗಲೂ ಪ್ರಮುಖ ಸದಸ್ಯರಾಗಿಯೇ ಇರಲಿದ್ದಾರೆ ಎಂದು ಹೇಳಿದ ರೋಹಿತ್, ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಕೊಹ್ಲಿಯ ಪಾತ್ರದಲ್ಲಿ ಬದಲಾವಣೆ ಮಾಡಲಾಗುವುದು ಎಂದೂ ಸ್ಪಷ್ಟಪಡಿಸಿದರು.

ಪಾತ್ರ ಬದಲಾವಣೆಗೆ ಕೊಹ್ಲಿಯೂ ಬದ್ಧರಾಗಿರಬೇಕು:

“ಇದು ಬಹಳ ಸರಳ. ತಂಡದಲ್ಲಿ ವಿರಾಟ್ ಕೊಹ್ಲಿ ಅವರು ಇದೂವರೆಗೂ ಏನು ಮಾಡಿಕೊಂಡು ಬಂದಿದ್ದರೋ ಅದು ಹಾಗೇ ಮುಂದುವರಿಯುತ್ತದೆ. ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಪ್ರತಿಯೊಬ್ಬ ಆಟಗಾರನ ಪಾತ್ರವೂ ಬದಲಾಗುತ್ತದೆ. ಕೊಹ್ಲಿಯೂ ಒಳಗೊಂಡಂತೆ ಎಲ್ಲಾ ಆಟಗಾರರಿಗೂ ಇದು ಅನ್ವಯ ಆಗುತ್ತದೆ.

ಇದನ್ನೂ ಓದಿ: 29 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಮೊದಲ ಗ್ಲೋಬಲ್ ಟೂರ್ನಿ; 8 ಐಸಿಸಿ ಟ್ರೋಫಿಗಳ ವೇಳಾಪಟ್ಟಿ ಪ್ರಕಟ

”ನೀವು ಮೊದಲು ಬ್ಯಾಟಿಂಗ್ ಮಾಡುವಾಗ ಪಾತ್ರ ಬೇರೆಯೇ ಇರುತ್ತದೆ. ಸೆಕೆಂಡ್ ಬ್ಯಾಟಿಂಗ್ ಮಾಡುವಾಗ ಬೇರೆ ಇರುತ್ತದೆ. ನಾನು ಆಡುವ ಪಂದ್ಯದ ಆಧಾರದ ಮೇಲೆ ಪ್ರತಿಯೊಬ್ಬರ ಪಾತ್ರವೂ ಬದಲಾಗುತ್ತಾ ಹೋಗುತ್ತದೆ. ವಿರಾಟ್ ಕೊಹ್ಲಿ ಅವರಿಗಿರುವ ಅನುಭವ ಮತ್ತು ಅಗಾಧ ಬ್ಯಾಟಿಂಗ್ ಶಕ್ತಿಯ ಕಾರಣದಿಂದ ಅವರು ತಂಡದ ಬಲ ಹೆಚ್ಚಿಸುವುದರಲ್ಲಿ ಸಂಶಯ ಇಲ್ಲ” ಎಂದು ರೋಹಿತ್ ಶರ್ಮಾ ಹೇಳಿದರು.

ಬೇರೆ ತಂಡಗಳ ತಂತ್ರ ಅನುಸರಿಸುವುದರಲ್ಲಿ ಅರ್ಥ ಇಲ್ಲ:

“ನಮ್ಮ ತಂಡದಲ್ಲಿರುವ ಕೆಲ ಹುಳುಕುಗಳನ್ನ ಮುಚ್ಚುವ ಕೆಲಸ ಸದ್ಯ ದೊಡ್ಡ ಸವಾಲಿನದ್ದಾಗಿದೆ. ಬೇರೆ ತಂಡಗಳ ಶೈಲಿಯನ್ನ ನಾನು ಅನುಸರಿಸುತ್ತೇವೆಂದು ಹೇಳುವುದಿಲ್ಲ. ಆದರೆ ನಮಗೆ ಯಾವುದು ಸೂಕ್ತವೋ ಆ ಶೈಲಿಯನ್ನ ಅಳವಡಿಸಿಕೊಳ್ಳಬಹುದು. ಸಯದ್ ಮುಷ್ತಾಕ್ ಅಲಿ ಟೂರ್ನಿ, ಐಪಿಎಲ್ ಮತ್ತು ಟೀಮ್ ಇಂಡಿಯಾದಲ್ಲಿ ಆಟಗಾರರು ಬೇರೆ ಬೇರೆ ಪಾತ್ರ ಹೊಂದಿರುತ್ತಾರೆ. ನಾವು ಆಟಗಾರರಿಗೆ ಪಾತ್ರವನ್ನು ನಿರ್ದಿಷ್ಟಪಡಿಸುವ ಅಗತ್ಯವಿದೆ” ಎಂದು ರೋಹಿತ್ ಶರ್ಮಾ ಅಭಿಪ್ರಾಯಪಟ್ಟರು.

9 ವರ್ಷಗಳ ಹಿಂದಿನ ಟ್ವೀಟ್ ವೈರಲ್:

ಟೀಮ್ ಇಂಡಿಯಾ ಕ್ಯಾಪ್ಟನ್ ಆಗಿ ಜೈಪುರದಲ್ಲಿ ಮೊದಲ ಪಂದ್ಯಕ್ಕೆ ರೋಹಿತ್ ಶರ್ಮಾ ಅಣಿಯಾಗುತ್ತಿದ್ದಾರೆ. ಇದೇ ವೇಳೆ 9 ವರ್ಷಗಳ ಹಿಂದೆ, ಅಂದರೆ 2012ರಲ್ಲಿ ರೋಹಿತ್ ಅವರು ಮಾಡಿದ್ದ ಒಂದು ಟ್ವೀಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: IND vs NZ- ಭಾರತ ವಿರುದ್ಧ ಟಿ20 ಸರಣಿಗೆ ನ್ಯೂಜಿಲೆಂಡ್ ನಾಯಕ ಕೇನ್ ಅಲಭ್ಯ; ಟಿಮ್ ಸೌದಿ ಕ್ಯಾಪ್ಟನ್

“ಜೈಪುರ್​ಗೆ ಬಂದಿಳಿದ್ದೇನೆ. ತಂಡವನ್ನು ನಾನು ಮುನ್ನಡೆಸಲಿದ್ದೇನೆ. ಈ ಹೆಚ್ಚುವರಿ ಜವಾಬ್ದಾರಿ ನಿಭಾಯಿಸಲು ಎದುರು ನೋಡುತ್ತಿದ್ದೇನೆ” ಎಂದು ಅಂದು ರೋಹಿತ್ ಶರ್ಮಾ ಟ್ವೀಟ್ ಮಾಡಿದ್ದರು.


ಆದರೆ, ಆಗ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ಆಗಿ ಮಾಡಿದ ಟ್ವೀಟ್ ಅದಾಗಿತ್ತು. ಈಗ ಅವರು ಮುಂಬೈ ಇಂಡಿಯನ್ಸ್ ಜೊತೆಗೆ ಟೀಮ್ ಇಂಡಿಯಾ ಕ್ಯಾಪ್ಟನ್ ಆಗಿ ಹೆಚ್ಚುವರಿ ಜವಾಬ್ದಾರಿ ಹೊಂದಿದ್ದಾರೆ. ಹೀಗಾಗಿ, 2012ರ ಅವರ ಆ ಟ್ವೀಟ್ ಈಗಲೂ ಬಹಳ ಪ್ರಸ್ತುತವಾಗಿದೆ.

ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ಇಂದು ಜೈಪುರದಲ್ಲಿ ಮೊದಲ ಟಿ20 ಪಂದ್ಯ ನಡೆಯುತ್ತದೆ. ನ. 19ರಂದು ರಾಂಚಿಯಲ್ಲಿ ಎರಡನೇ ಪಂದ್ಯ, ಹಾಗೂ ನ. 21ರಂದು ಕೋಲ್ಕತಾದಲ್ಲಿ ಮೂರನೇ ಪಂದ್ಯ ಇದೆ. ಟಿ20 ಸರಣಿ ಬಳಿ ಎರಡು ಟೆಸ್ಟ್ ಪಂದ್ಯಗಳು ನಡೆಯಲಿವೆ. ರೋಹಿತ್ ಶರ್ಮಾ ಟೆಸ್ಟ್ ಸರಣಿಗೆ ಅಲಭ್ಯರಿದ್ಧಾರೆ. ವಿರಾಟ್ ಕೊಹ್ಲಿ ಟಿ20 ಸರಣಿಗೆ ಅಲಭ್ಯರಿದ್ಧಾರೆ. ಮೊದಲ ಟೆಸ್ಟ್ ಪಂದ್ಯದಲ್ಲೂ ಕೊಹ್ಲಿ ಆಡುತ್ತಿಲ್ಲ. ಡಿ. 3ರಂದು ಆರಂಭವಾಗುವ ಎರಡನೇ ಟೆಸ್ಟ್ ಪಂದ್ಯಕ್ಕೆ ಕೊಹ್ಲಿ ನಾಯಕರಾಗಿ ಕಂಬ್ಯಾಕ್ ಮಾಡಲಿದ್ದಾರೆ.
Published by:Vijayasarthy SN
First published: