Virat Kohli: ಕೊಹ್ಲಿ ನಾಯಕತ್ವಕ್ಕೆ ಕುತ್ತು, ರೋಹಿತ್‌ಗೆ ಪಟ್ಟದ ಕೂಗು..!

ಈ ಹಿಂದೆ ಕೂಡ ಮೂರು ಸ್ವರೂಪ ಪಂದ್ಯಗಳಿಗೆ ಮೂವರು ನಾಯಕರನ್ನು ಪರಿಚಯಿಸುವ ಸಲಹೆಯೊಂದು ಆಯ್ಕೆ ಸಮಿತಿ ಮುಂದಿತ್ತು. ಹೀಗಾಗಿ ಆರಂಭದಲ್ಲಿ ರೋಹಿತ್​ರನ್ನು ಟೀ-20 ಅಥವಾ ಏಕದಿನ ಪಂದ್ಯಕ್ಕೆ ನಾಯಕನ್ನಾಗಿಸಲು ಬಿಸಿಸಿಐ ಸಹ ಉತ್ಸುಕವಾಗಿದೆ ಎಂಬ ಸುದ್ದಿಯೊಂದು ಹರಿದಾಡಿತ್ತು.

virat kohli - rohit sharma

virat kohli - rohit sharma

  • Share this:
    ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ಬೆನ್ನಲ್ಲೇ ಇದೀಗ ಟೀಮ್ ಇಂಡಿಯಾ ಚರ್ಚೆಗಳು ಶುರುವಾಗಿದೆ. ಅದು ಕೂಡ ನಾಯಕತ್ವದ ವಿಷಯದಲ್ಲಿ ಎಂಬುದು ವಿಶೇಷ. ಈ ಹಿಂದೆ 2019ರ ವಿಶ್ವಕಪ್ ಬಳಿಕ ಭಾರತ ತಂಡದ ನಾಯಕತ್ವ ಬದಲಾವಣೆ ಆಗಬೇಕೆಂಬ ಕೂಗುಗಳು ಕೇಳಿ ಬಂದಿದ್ದವು. ಆದರೆ ಈ ಬಾರಿ ಐಪಿಎಲ್​ ಬೆನ್ನಲ್ಲೇ ಟೀಮ್ ಇಂಡಿಯಾ ಸಾರಥಿಯ ಬದಲಾವಣೆ ಅನಿವಾರ್ಯ ಎಂಬ ಮಾತುಗಳು ಕೇಳಿ ಬರುತ್ತಿರುವುದು ವಿಶೇಷ.

    ಹೌದು, ಮುಂಬೈ ಇಂಡಿಯನ್ಸ್ ತಂಡವನ್ನು 8 ವರ್ಷಗಳ ಕಾಲ ಮುನ್ನಡೆಸಿರುವ ರೋಹಿತ್ ಶರ್ಮಾ ಐದು ಬಾರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಇತ್ತ ಅಷ್ಟೇ ಬಾರಿ ಆರ್​ಸಿಬಿ ತಂಡದ ನಾಯಕರಾಗಿ ಕಣಕ್ಕಿಳಿದಿರುವ ವಿರಾಟ್ ಕೊಹ್ಲಿ ಒಂದು ಬಾರಿ ಫೈನಲ್ ಪಂದ್ಯವನ್ನಾಡಿರುವುದು ಮಾತ್ರ ಸಾಧನೆ. ಈ ಅಂಕಿ ಅಂಶಗಳೊಂದಿಗೆ ಇದೀಗ ಮೂರು ಸ್ವರೂಪಗಳಲ್ಲೂ ಕೊಹ್ಲಿಯನ್ನು ಟೀಮ್ ಇಂಡಿಯಾ ನಾಯಕರನ್ನಾಗಿ ಮುಂದುವರೆಸಬೇಕಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

    ಸಿಕ್ಕ ಅವಕಾಶಗಳಲ್ಲಿ ಯಶಸ್ವಿ ನಾಯಕ ಎಂದು ನಿರೂಪಿಸಿರುವ ರೋಹಿತ್ ಶರ್ಮಾ ಸೀಮಿತ ಓವರ್​ಗಳಲ್ಲಿ ಉಪನಾಯಕರಾಗಿದ್ದಾರೆ. ಆದರೆ ಅವರನ್ನು ಇದುವರೆಗೆ ಏಕದಿನ ಅಥವಾ ಟಿ20 ಕ್ರಿಕೆಟ್​ನಲ್ಲಿ ಪೂರ್ಣ ಪ್ರಮಾಣದ ನಾಯಕರನ್ನಾಗಿ ಆರಿಸಿಲ್ಲ. ಟಿ20 ಕ್ರಿಕೆಟ್​ನಲ್ಲಿ ಮುಂಬೈ ತಂಡವನ್ನು ಅದ್ಭುತವಾಗಿ ಮುನ್ನಡೆಸಿರುವ ಹಿಟ್​ಮ್ಯಾನ್​ಗೆ ಇನ್ನಾದರೂ ಟೀಮ್ ಇಂಡಿಯಾ ನಾಯಕತ್ವ ನೀಡದಿದ್ದರೆ ಅದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ ಎಂದು ಟೀಮ್ ಇಂಡಿಯಾ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಬಹಿರಂಗವಾಗಿ ಹೇಳಿದ್ದಾರೆ.

    ಇದರ ಬೆನ್ನಲ್ಲೇ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಸಹ ರೋಹಿತ್ ಶರ್ಮಾ ಅವರಿಗೆ ಭಾರತ ಟಿ20 ತಂಡದ ಮುಂದಾಳತ್ವ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ತಂಡವನ್ನು ಹೇಗೆ ಮುನ್ನಡೆಸಬೇಕು ಎಂಬುದು ರೋಹಿತ್‌ ಶರ್ಮಾಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ವಿರಾಟ್ ಕೊಹ್ಲಿ ಬದಲಿಗೆ ನಾಯಕನ ಸ್ಥಾನ ಹಿಟ್​ಮ್ಯಾನ್​ಗೆ ನೀಡಬೇಕು ಎಂದು ವಾನ್ ತಿಳಿಸಿದರು.

    ರೋಹಿತ್‌ ಶರ್ಮಾ ಅವರಿಗೆ ಟಿ20 ನಾಯಕತ್ವವನ್ನು ನೀಡಿದರೆ, ವಿರಾಟ್‌ ಕೊಹ್ಲಿ ಇನ್ನಷ್ಟು ಸ್ವತಂತ್ರವಾಗಿ ಬ್ಯಾಟಿಂಗ್‌ ಸಹ ಮಾಡಬಹುದಾಗಿದೆ. ಹೀಗಾಗಿ ಇದು ಮೂರು ಸ್ವರೂಪಗಳಲ್ಲಿ ಏಕ ನಾಯಕನ ಜವಾಬ್ದಾರಿಯನ್ನು ಬದಲಿಸಿ, ಚುಟುಕು ಕ್ರಿಕೆಟ್​ಗೆ ರೋಹಿತ್​ರನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ ಎಂದು ಇಂಗ್ಲೆಂಡ್ ಮಾಜಿ ನಾಯಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇತ್ತ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಹಾಗೂ ಟಿ20 ಪಂದ್ಯಗಳಿಂದ ರೋಹಿತ್ ಶರ್ಮಾ ಹೊರಗುಳಿದಿದ್ದು, ಟೆಸ್ಟ್ ಆರಂಭದ ವೇಳೆ ತಂಡವನ್ನು ಕೂಡಿಕೊಳ್ಳಲಿದ್ದಾರೆ. ವಿರಾಟ್ ಕೊಹ್ಲಿ ಮೊದಲ ಟೆಸ್ಟ್​ಗೆ ಮಾತ್ರ ಲಭ್ಯರಿದ್ದು, ಪಿತೃತ್ವ ರಜೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಮರಳಲಿದ್ದಾರೆ. ಇನ್ನು ಕೊಹ್ಲಿ ಅನುಪಸ್ಥಿತಿಯಲ್ಲಿ ಟೆಸ್ಟ್ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ.

    ಈ ಹಿಂದೆ ಕೂಡ ಮೂರು ಸ್ವರೂಪ ಪಂದ್ಯಗಳಿಗೆ ಮೂವರು ನಾಯಕರನ್ನು ಪರಿಚಯಿಸುವ ಸಲಹೆಯೊಂದು ಆಯ್ಕೆ ಸಮಿತಿ ಮುಂದಿತ್ತು. ಹೀಗಾಗಿ ಆರಂಭದಲ್ಲಿ ರೋಹಿತ್​ರನ್ನು ಟೀ-20 ಅಥವಾ ಏಕದಿನ ಪಂದ್ಯಕ್ಕೆ ನಾಯಕನ್ನಾಗಿಸಲು ಬಿಸಿಸಿಐ ಸಹ ಉತ್ಸುಕವಾಗಿದೆ ಎಂಬ ಸುದ್ದಿಯೊಂದು ಹರಿದಾಡಿತ್ತು. ಇದೀಗ ಮತ್ತೊಮ್ಮೆ ಮಾಜಿ ಕ್ರಿಕೆಟರುಗಳು ಐಪಿಎಲ್ ಚಾಂಪಿಯನ್ ತಂಡದ ನಾಯಕ ಟೀಮ್ ಇಂಡಿಯಾವನ್ನು ಮುನ್ನಡೆಸಲು ಸೂಕ್ತ ವ್ಯಕ್ತಿ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ಸರಣಿಯ ಫಲಿತಾಂಶಗಳು ಕೊಹ್ಲಿ ಕ್ಯಾಪ್ಟನ್ಸಿಗೆ ಕುತ್ತು ತರಲಿದೆಯಾ ಕಾದು ನೋಡಬೇಕಿದೆ.



    ಇದನ್ನೂ ಓದಿ: Yuvraj Singh: ಈತ ಭವಿಷ್ಯದ ವಿಶೇಷ ಆಟಗಾರ: ಯುವರಾಜ್ ಸಿಂಗ್
    Published by:zahir
    First published: