2 ಸೆಮಿ ಫೈನಲ್ಸ್​, 5 ಸಾರ್ವಕಾಲಿಕ ದಾಖಲೆ: ರೋಹಿತ್, ರೂಟ್, ಸ್ಟಾರ್ಕ್, ಕ್ಯಾರಿ ಮುಂದಿದೆ ವಿಶ್ವ ದಾಖಲೆ..!

World Cup 2019: ಈ ಹಿಂದೆ ವಿಶ್ವಕಪ್​ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಟಿಂಗ್ 11 ಕ್ಯಾಚ್​ಗಳನ್ನು ಪಡೆದಿದ್ದರು. ಇದೀಗ ಅಷ್ಟೇ ಸಂಖ್ಯೆಯ ಕ್ಯಾಚ್ ಹಿಡಿಯುವ ಮೂಲಕ ಪಾಟಿಂಗ್ ದಾಖಲೆಯನ್ನು ರೂಟ್ ಸರಿಗಟ್ಟಿದ್ದಾರೆ.

zahir | news18
Updated:July 8, 2019, 7:01 PM IST
2 ಸೆಮಿ ಫೈನಲ್ಸ್​, 5 ಸಾರ್ವಕಾಲಿಕ ದಾಖಲೆ: ರೋಹಿತ್, ರೂಟ್, ಸ್ಟಾರ್ಕ್, ಕ್ಯಾರಿ ಮುಂದಿದೆ ವಿಶ್ವ ದಾಖಲೆ..!
World cup 2019
  • News18
  • Last Updated: July 8, 2019, 7:01 PM IST
  • Share this:
ವಿಶ್ವಕಪ್ ಕ್ರಿಕೆಟ್ ಟೂರ್ನಿ​ ಅಂತಿಮ ಹಂತಕ್ಕೆ ಬಂದು ನಿಂತಿದೆ. ಕ್ರಿಕೆಟ್ ಕಾಶಿ ಲಾರ್ಡ್ಸ್​ನಲ್ಲಿ ನಡೆಯಲಿರುವ ಫೈನಲ್​ನಲ್ಲಿ ಈ ಬಾರಿಯ ವಿಶ್ವ ಚಾಂಪಿಯನ್ ಯಾರೆಂಬುದು ನಿರ್ಧಾರವಾಗಲಿದೆ. ಅದಕ್ಕೂ ಮುನ್ನ ನಡೆಯುವ ಎರಡು ಸೆಮಿ ಫೈನಲ್​ನಲ್ಲಿ ವಿಶ್ವಕಪ್ ಕ್ರಿಕೆಟ್​ನ ಸಾರ್ವಕಾಲಿಕ ದಾಖಲೆಗಳು ಬದಿಗೆ ಸರಿಯುವ ಸಾಧ್ಯತೆಯಿದೆ. ಮೊದಲ ಸೆಮಿ ಫೈನಲ್​ ಜು.9 ರಂದು ಭಾರತ ಮತ್ತು ನ್ಯೂಜಿಲೆಂಡ್​ ವಿರುದ್ದ ನಡೆಯಲಿದ್ದು, ದ್ವಿತೀಯ ಸೆಮಿಯಲ್ಲಿ ಅತಿಥೇಯ ಇಂಗ್ಲೆಂಡ್ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ವಿಶ್ವಕಪ್ ಇತಿಹಾಸದ 5 ದಾಖಲೆಗಳು ಇದೀಗ ಈ ನಾಲ್ಕು ತಂಡಗಳಲ್ಲಿರುವ ಆಟಗಾರರ ಮುಂದಿದೆ. ಹೀಗಾಗಿ ಸೆಮಿ ಫೈನಲ್ ಅಥವಾ ಫೈನಲ್ ಮೂಲಕ ಆಟಗಾರರು ಹೊಸ ದಾಖಲೆಯೊಂದಿಗೆ ವರ್ಲ್ಡ್​ಕಪ್​ಗೆ ವಿದಾಯ ಹೇಳಲಿದ್ದಾರೆ.

ವಿಶ್ವಕಪ್ ಆವೃತ್ತಿಯ ಅತೀ ಹೆಚ್ಚು ರನ್​ಗಳು- 673

2003 ರ ವಿಶ್ವಕಪ್​ ಟೂರ್ನಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ನಿರ್ಮಿಸಿದ್ದ 673 ರನ್​ಗಳ ದಾಖಲೆಯನ್ನು ಮುರಿಯಲು ಇದೀಗ ಇಬ್ಬರು ಆಟಗಾರರು ತುದಿಗಾಲಲ್ಲಿ ನಿಂತಿದ್ದಾರೆ. ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ-647 ಹಾಗೂ ಆಸ್ಟ್ರೇಲಿಯಾ ಡೇವಿಡ್ ವಾರ್ನರ್-638 ರನ್​ಗಳೊಂದಿಗೆ ಸಚಿನ್ ದಾಖಲೆಯ ಹಿಂದಿದ್ದಾರೆ. ಹಾಗೆಯೇ 2007ರಲ್ಲಿ ಮ್ಯಾಥ್ಯೂ ಹೇಡನ್ ನಿರ್ಮಿಸಿದ್ದ 659 ರನ್​ಗಳ ದ್ವಿತೀಯ ಸ್ಥಾನವನ್ನು ಅಲಂಕರಿಸಲು ಈ ಇಬ್ಬರು ಆಟಗಾರರು ತುಸು ದೂರದಲ್ಲಿದ್ದಾರೆ. ಹೀಗಾಗಿ ಸೆಮಿ ಫೈನಲ್ ಪಂದ್ಯದಲ್ಲಿ ಮಾಥ್ಯೂ ಹೇಡನ್ ಅಥವಾ ಸಚಿನ್ ಅವರ ಸಾರ್ವಕಾಲಿಕ ರನ್​ ದಾಖಲೆ ಸೈಡಾಗುವ ಸಾಧ್ಯಯೆ ಹೆಚ್ಚಿದೆ.

ಅತ್ಯಧಿಕ ವಿಶ್ವಕಪ್ ಶತಕಗಳು- 6
2015ರ ವಿಶ್ವಕಪ್​ನಲ್ಲಿ 1 ಶತಕ ಬಾರಿಸಿದ್ದ ರೋಹಿತ್ ಶರ್ಮಾ ಪ್ರಸಕ್ತ ಟೂರ್ನಿಯಲ್ಲಿ 5 ಶತಕಗಳನ್ನು ಸಿಡಿಸಿದ್ದಾರೆ. ಈ ಮೂಲಕ ವಿಶ್ವಕಪ್ ಇತಿಹಾಸದಲ್ಲಿ 6 ಶತಕ ಸಿಡಿಸಿದ ದಾಖಲೆಯನ್ನು ಸಚಿನ್ ತೆಂಡೂಲ್ಕರ್ ಜತೆ ಹಿಟ್​ಮ್ಯಾನ್ ಹಂಚಿಕೊಂಡಿದ್ದಾರೆ. ಇನ್ನು ರೋಹಿತ್ ಒಂದು ಸೆಂಚುರಿ ಬಾರಿಸಿದರೆ ವಿಶ್ವಕಪ್​ನಲ್ಲಿ ಅತ್ಯಧಿಕ ಶತಕ ಬಾರಿಸಿದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಹಾಗೆಯೇ ಈ ಪಟ್ಟಿಯಲ್ಲಿ 4 ಶತಕಗಳೊಂದಿಗೆ ಡೇವಿಡ್ ವಾರ್ನರ್​ ಸಹ ಇದ್ದು, ಸೆಮಿ ಫೈನಲ್ ಹಾಗೂ ಫೈನಲ್​ನಲ್ಲಿ ಆಸೀಸ್​ ಆಟಗಾರ ಸೆಂಚುರಿ ಸಿಡಿಸಿದರೆ ಸಚಿನ್ ದಾಖಲೆಯನ್ನು ಸರಿಗಟ್ಟಲಿದ್ದಾರೆ.

ವಿಶ್ವಕಪ್ ಆವೃತ್ತಿಯಲ್ಲಿ ಅತೀ ಹೆಚ್ಚು ವಿಕೆಟ್‌- 26ಪ್ರಸಕ್ತ ವಿಶ್ವಕಪ್​ನಲ್ಲಿ ಬೌಲಿಂಗ್ ಪರಾಕ್ರಮ ಮೆರೆಯುತ್ತಿರುವ ಆಸ್ಟ್ರೇಲಿಯಾ ತಂಡದ ಮಿಚೆಲ್ ಸ್ಟಾರ್ಕ್​ ಸದ್ಯ 26 ವಿಕೆಟ್​ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಇನ್ನು ಒಂದು ವಿಕೆಟ್ ಉರುಳಿಸಿದರೆ ವಿಶ್ವಕಪ್ ಟೂರ್ನಿಯೊಂದರಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಆಟಗಾರ ಎಂಬ ಖ್ಯಾತಿ ಸ್ಟಾರ್ಕ್​ ಪಾಲಾಗಲಿದೆ. ಈ ಹಿಂದೆ ಆಸ್ಟ್ರೇಲಿಯಾದ ಗ್ಲೆನ್ ಮೆಕ್​ಗ್ರಾಥ್ ವಿಶ್ವಕಪ್ ಆವೃತ್ತಿಯೊಂದರಲ್ಲಿ 26 ವಿಕೆಟ್ ಪಡೆದಿದ್ದರು. ಬೌಲಿಂಗ್ ದಿಗ್ಗಜನೊಂದಿಗೆ ಈ ಸಾರ್ವಕಾಲಿಕ ದಾಖಲೆಯನ್ನು ಹಂಚಿಕೊಂಡಿರುವ ಸ್ಟಾರ್ಕ್​ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ವಿಶ್ವಕಪ್ ಆವೃತ್ತಿಯಲ್ಲಿ ಅತ್ಯಧಿಕ ಕ್ಯಾಚ್​ಗಳು - 11
2019ರ ವಿಶ್ವಕಪ್ ಹಲವು ರೋಚಕ ಕ್ಯಾಚ್​ಗಳಿಗೆ ಸಾಕ್ಷಿಯಾಗಿವೆ. ಅದರಲ್ಲೂ ಇಂಗ್ಲೆಂಡ್ ತಂಡದ ಜೋ ರೂಟ್ ಅದ್ಭುತ ಫೀಲ್ಡಿಂಗ್ ಮೂಲಕ ಅನೇಕರಿಗೆ ಪೆವಿಲಿಯನ್ ಹಾದಿ ತೋರಿಸಿದ್ದರು. ಈ ಹಿಂದೆ ವಿಶ್ವಕಪ್​ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಟಿಂಗ್ 11 ಕ್ಯಾಚ್​ಗಳನ್ನು ಪಡೆದಿದ್ದರು. ಇದೀಗ ಅಷ್ಟೇ ಸಂಖ್ಯೆಯ ಕ್ಯಾಚ್ ಹಿಡಿಯುವ ಮೂಲಕ ಪಾಟಿಂಗ್ ದಾಖಲೆಯನ್ನು ರೂಟ್ ಸರಿಗಟ್ಟಿದ್ದಾರೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್ ಫೀಲ್ಡರ್ ರೂಟ್ ಒಂದು ಕ್ಯಾಚ್ ಪಡೆದರೂ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಾಣವಾಗಲಿದೆ.

ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಕೀಪಿಂಗ್ ಔಟ್ - 21
ಆಸ್ಟ್ರೇಲಿಯಾದ ತಂಡದ ಅಲೆಕ್ಸ್​ ಕ್ಯಾರಿ ಹೆಸರು ಈ ವಿಶ್ವಕಪ್​ನಲ್ಲಿ ಕೇಳಿ ಬಂದದ್ದು ವಿರಳ. ಬ್ಯಾಟಿಂಗ್​ನಲ್ಲಿ ವಿಫಲರಾಗಿದ್ದ ಕ್ಯಾರಿ ವಿಕೆಟ್ ಕೀಪಿಂಗ್ ಮೂಲಕ ಕೈಚಳಕ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚೊಚ್ಚಲ ವಿಶ್ವಕಪ್ ಪಂದ್ಯವಾಡುತ್ತಿರುವ ಆಸೀಸ್ ಆಟಗಾರ ಈಗಾಗಲೇ 19 ಕೀಪಿಂಗ್ ಬಲಿ ಪಡೆದುಕೊಂಡಿದ್ದಾರೆ. ಇನ್ನು ನಾಲ್ಕು ಸ್ಟಂಪ್ ಅಥವಾ ಕ್ಯಾಚ್ ಪಡೆದರೆ ವಿಶ್ವ ದಾಖಲೆಯೊಂದು ಕ್ಯಾರಿ ಹೆಸರಿಗೆ ಸೇರ್ಪಡೆಯಾಗಲಿದೆ. 2003 ರ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ಕೀಪರ್ ಆ್ಯಡಂ ಗಿಲ್​ಕ್ರಿಸ್ಟ್​ 21 ಬಲಿ ಪಡೆಯುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದ್ದರು. ಈ ದಾಖಲೆ ಮುರಿಯುವ ಅವಕಾಶ ಇದೀಗ ಅಲೆಕ್ಸ್ ಕ್ಯಾರಿ ಮುಂದಿದೆ.
First published:July 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading