Ind vs Eng- ಇಂಗ್ಲೆಂಡ್ ಪಿಚ್​ಗಳಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್ ಸಾಧನೆ ಮತ್ತು ದಾಖಲೆ

England vs India Pataudi Trophy 4th Match - ನಾನು ಒಂದು ಇನ್ನಿಂಗ್ಸಲ್ಲಿ 250 ಎಸೆತ ಆಡಬಲ್ಲೆ ಎಂದು ಸಮಾಧಾನ ಸಿಕ್ಕಿದೆ. ಈ ಸರಣಿಯಲ್ಲಿ ನಾನು ಆಡಿದ ಎಲ್ಲಾ ಇನ್ನಿಂಗ್ಸಲ್ಲೂ ಕನಿಷ್ಠ 100 ಎಸೆತಗಳನ್ನ ಎದುರಿಸಿದ್ಧೇನೆ ಎಂದು ರೋಹಿತ್ ಶರ್ಮಾ ಹೇಳಿದ್ಧಾರೆ.

ರೋಹಿತ್ ಶರ್ಮಾ ಮತ್ತು ಚೇತೇಶ್ವರ್ ಪೂಜಾರ

ರೋಹಿತ್ ಶರ್ಮಾ ಮತ್ತು ಚೇತೇಶ್ವರ್ ಪೂಜಾರ

  • News18
  • Last Updated :
  • Share this:
    ಲಂಡನ್: ಇಲ್ಲಿಯ ದಿ ಓವಲ್ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯ ಕುತೂಹಲದ ಘಟ್ಟಕ್ಕೆ ಹೋಗುತ್ತಿದೆ. ಸೋಲಿನ ಛಾಯೆಯಿಂದ ಹೊರಬಂದಿರುವ ಭಾರತ ಸದ್ಯ 7 ವಿಕೆಟ್ ಕೈಲಿರುವಂತೆ 171 ರನ್ ಮುನ್ನಡೆ ಗಳಿಸಿಕೊಂಡಿದೆ. ರೋಹಿತ್ ಶರ್ಮಾ ಅಮೋಘ ಶತಕ ಭಾರಿಸಿದರೆ, ಚೇತೇಶ್ವರ್ ಪೂಜಾರ ಅರ್ಧಶತಕ ಗಳಿಸಿದರು. ಇವರಿಬ್ಬರು 2ನೇ ವಿಕೆಟ್​ಗೆ 153 ರನ್ ಜೊತೆಯಾಟ ಆಡಿದ್ದು ಭಾರತದ ಎರಡನೇ ಇನ್ನಿಂಗ್ಸ್​ಗೆ ಭದ್ರ ಅಡಿಪಾಯ ಹಾಕಿತು. ಆದರೆ, ಒಂದು ರನ್ ಅಂತರದಲ್ಲಿ ಇವರಿಬ್ಬರೂ ಔಟಾಗಿದ್ದು ಭಾರತೀಯ ಪಾಳಯದಲ್ಲಿ ಆತಂಕ ಮನೆಮಾಡುವಂತೆ ಮಾಡಿತ್ತು. ಸದ್ಯ ನಾಯಕ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಕ್ರೀಸ್​ನಲ್ಲಿದ್ದಾರೆ. ಮುಂಬರುವ ಬ್ಯಾಟ್ಸ್​ಮನ್​ಗಳ ಪೈಕಿ ಶಾರ್ದೂಲ್ ಠಾಕೂರ್ ಅವರು ಮೊದಲ ಇನ್ನಿಂಗ್ಸಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ಅಜಿಂಕ್ಯ ರಹಾನೆ ಮತ್ತು ರಿಷಭ್ ಪಂತ್ ಅವರು ಫಾರ್ಮ್​ನಲ್ಲಿಲ್ಲದಿರುವುದು ಭಾರತಕ್ಕೆ ತಲೆನೋವಂತೂ ಇದೆ. ಮೂರನೇ ಟೆಸ್ಟ್ ಪಂದ್ಯದಲ್ಲಾದಂತೆ ನಾಲ್ಕನೇ ದಿನದಾಟದಲ್ಲಿ ಭಾರತದ ದೋಣಿ ಮಗುಚಿ ಬೀಳುವ ಸಾಧ್ಯತೆ ಇಲ್ಲದಿಲ್ಲ.

    ನಿನ್ನೆ ಮೂರನೇ ದಿನದಾಟದಲ್ಲಿ ರೋಹಿತ್ ಶರ್ಮಾ 256 ಬಾಲ್ ಎದುರಿಸಿ 127 ರನ್ ಗಳಿಸಿದರು. ಇದು ಅವರ 7ನೇ ಟೆಸ್ಟ್ ಶತಕ. ಇಂಗ್ಲೆಂಡ್ ಪಿಚ್​ಗಳಲ್ಲಿ ಒಂದೇ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್​ಮನ್​ಗಳು ಇಷ್ಟು ಚೆಂಡುಗಳನ್ನ ಎದುರಿಸುವುದು ಅಪರೂಪ. ಈ ಶತಮಾನದಲ್ಲಿ ಭಾರತೀಯ ಆರಂಭಿಕ ಆಟಗಾರನೊಬ್ಬ ಇಂಗ್ಲೆಂಡ್​ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ಚೆಂಡು ಎದುರಿಸಿದ ಮೂರನೇ ಆಟಗಾರ ಎನಿಸಿದ್ದಾರೆ. ರಾಹುಲ್ ದ್ರಾವಿಡ್ ಮತ್ತು ಮುರಳಿ ವಿಜಯ್ ಅವರು ಈ ಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿದ್ದಾರೆ.

    ಇದನ್ನೂ ಓದಿ: Petrol Prices- ಪೆಟ್ರೋಲ್ ಬೆಲೆ ಬಳ್ಳಾರಿಯಲ್ಲಿ ಗರಿಷ್ಠ; ಮಂಗಳೂರಲ್ಲಿ ಕನಿಷ್ಠ- ಇಲ್ಲಿದೆ ಜಿಲ್ಲಾವಾರು ಪಟ್ಟಿ

    ತೃಪ್ತಿ ಇದೆ ಎಂದ ರೋಹಿತ್:

    ರೋಹಿತ್ ಶರ್ಮಾ ಕೂಡ ತಮ್ಮ ಆಟಕ್ಕೆ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ನಾನು ಒಂದು ಇನ್ನಿಂಗ್ಸಲ್ಲಿ 250 ಎಸೆತವನ್ನು ಆಡಬಲ್ಲೆ ಎಂದು ಸಮಾಧಾನ ಸಿಕ್ಕಿದೆ. ಈ ಸರಣಿಯಲ್ಲಿ ನಾನು ಆಡಿದ ಎಲ್ಲಾ ಇನ್ನಿಂಗ್ಸಲ್ಲೂ ಕನಿಷ್ಠ 100 ಎಸೆತಗಳನ್ನ ಎದುರಿಸಿದ್ಧೇನೆ. ಆದಷ್ಟೂ ಹೆಚ್ಚು ಬಾಲ್​ಗಳನ್ನ ಫೇಸ್ ಮಾಡುವುದು ನನ್ನ ಗುರಿಯಾಗಿತ್ತು. ಕ್ರೀಸ್​ನಲ್ಲಿ ಆದಷ್ಟೂ ಹೆಚ್ಚು ಕಾಲ ಉಳಿದುಕೊಂಡು ಪರಿಸ್ಥಿತಿಯನ್ನ ಅವಲೋಕಿಸಿ ರನ್ ಗಳಿಸುವ ಉದ್ದೇಶ ನನ್ನದು. ಈ ಸರಣಿಯಲ್ಲಿ ನಾನು ಆ ಗುರಿ ಸಾಧಿಸಿದೆ ಎಂದು ರೋಹಿತ್ ಶರ್ಮಾ ಹೇಳುತ್ತಾರೆ.

    ರೋಹಿತ್ ಶರ್ಮಾ ಈ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 856 ಬಾಲ್​ಗಳನ್ನ ಆಡಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ಭಾರತೀಯ ಓಪನ್​ಗಳ ಪೈಕಿ ಅತಿ ಹೆಚ್ಚು ಬಾಲ್ ಆಡಿದವರಲ್ಲಿ ಸುನೀಲ್ ಗವಾಸ್ಕರ್ ಮತ್ತು ಮರುಳಿ ವಿಜಯ್ ಬಿಟ್ಟರೆ ರೋಹಿತ್ ಶರ್ಮಾ ಅವರದೇ ದಾಖಲೆ. ಈ ದಾಖಲೆಯನ್ನೂ ರೋಹಿತ್ ಮುರಿಯಲು ಅವಕಾಶ ಇದೆ.

    ಇವತ್ತು ಪಂದ್ಯದ 4ನೇ ದಿನದಾಟ ಇದೆ. ಮೊದಲ ದಿನದಂದು ಬ್ಯಾಟಿಂಗ್​ಗೆ ಬಹಳ ಕಠಿಣವಾಗಿದ್ದ ಪಿಚ್ ಈಗ ಹೋಗಹೋಗುತ್ತಾ ಸುಲಭ ಆಗಿದೆ. ಇವತ್ತು ಇಡೀ ದಿನ ಭಾರತ ಬ್ಯಾಟಿಂಗ್ ಮಾಡಲು ಸಾಧ್ಯವಾದರೆ ಸೋಲಿನ ಸಾಧ್ಯತೆಯಿಂದ ತಪ್ಪಿಸಿಕೊಳ್ಳಬಹುದು. ಗೆಲ್ಲುವ ಅವಕಾಶವೂ ದಟ್ಟವಾಗಿರುತ್ತದೆ. ಆದರೆ, ಕೆಲ ಬ್ಯಾಟುಗಾರರು ಫಾರ್ಮ್​ನಲ್ಲಿಲ್ಲದೇ ಇರುವುದು ಭಾರತಕ್ಕೆ ಹಿನ್ನಡೆಯಂತೂ ಹೌದು.

    ಸ್ಕೋರು ವಿವರ:

    ಭಾರತ ಮೊದಲ ಇನ್ನಿಂಗ್ಸ್ 61.3 ಓವರ್ 191/10

    ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 84 ಓವರ್ 290/10

    ಭಾರತ ಎರಡನೇ ಇನ್ನಿಂಗ್ಸ್ 92 ಓವರ್ 270/3
    (ರೋಹಿತ್ ಶರ್ಮಾ 127, ಚೇತೇಶ್ವರ್ ಪೂಜಾರ 61, ಕೆಎಲ್ ರಾಹುಲ್ 46, ವಿರಾಟ್ ಕೊಹ್ಲಿ ಅಜೇಯ 22 ರನ್ – ಓಲೀ ರಾಬಿನ್ಸನ್ 67/2)
    Published by:Vijayasarthy SN
    First published: