ರೋಹಿತ್ ಶರ್ಮಾ ಓಡಿಐ ಟೀಮ್​ಗೂ ಕ್ಯಾಪ್ಟನ್; ದಕ್ಷಿಣ ಆಫ್ರಿಕಾ ಸರಣಿಗೆ ಟೆಸ್ಟ್ ತಂಡ ಪ್ರಕಟ

India squad for South Africa Test Series- ರೋಹಿತ್ ಶರ್ಮಾ ಅವರನ್ನ ಟಿ20 ಮತ್ತು ಓಡಿಐ ಎರಡೂ ತಂಡಗಳಿಗೂ ನಾಯಕನಾಗಿ ಆರಿಸಲಾಗಿದೆ. ಟೆಸ್ಟ್ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕರಾಗಿ ಮುಂದುವರಿಯಲಿದ್ದಾರೆ. ದಕ್ಷಿಣ ಆಫ್ರಿಕಾ ಸರಣಿಗೆ ಟೆಸ್ಟ್ ತಂಡವನ್ನೂ ಪ್ರಕಟಿಸಲಾಗಿದೆ.

ರೋಹಿತ್ ಶರ್ಮಾ

ರೋಹಿತ್ ಶರ್ಮಾ

 • Share this:
  ನವದೆಹಲಿ, ಡಿ. 8: ಟಿ20 ತಂಡದ ನಾಯಕತ್ವ ತ್ಯಜಿಸಿದ್ದ ವಿರಾಟ್ ಕೊಹ್ಲಿ ಅವರಿಂದ ಓಡಿಐ ಕ್ಯಾಪ್ಟನ್ಸಿಯನ್ನ ಹಿಂಪಡೆಯಬಹುದು ಎಂದು ಹಲವು ದಿನಗಳಿಂದ ಓಡಾಡುತ್ತಿದ್ದ ಸುದ್ದಿ ನಿಜವಾಗಿದೆ. ಟಿ20 ಮತ್ತು ಏಕದಿನ ಎರಡೂ ಮಾದರಿಯ ಕ್ರಿಕೆಟ್ ತಂಡಗಳಿಗೂ ರೋಹಿತ್ ಶರ್ಮಾ ಅವರೇ ನಾಯಕರಾಗಿರುತ್ತಾರೆ ಎಂದು ಬಿಸಿಸಿಐ ಅಧಿಕೃತವಾಗಿ ಘೋಷಿಸಿದೆ. ಟಿ20 ತಂಡದ ನಾಯಕತ್ವ ತ್ಯಜಿಸಿದಂತೆ ವಿರಾಟ್ ಕೊಹ್ಲಿ ಅವರು ಏಕದಿನ ಕ್ರಿಕೆಟ್ ತಂಡದ ನಾಯಕತ್ವವನ್ನು ತಾವಾಗಿಯೇ ತ್ಯಜಿಸಲಿಲ್ಲ ಎಂಬುದು ಇಲ್ಲಿ ಗಮನಿಸಬಹುದು.

  ಟಿ20 ವಿಶ್ವಕಪ್​ಗೆ ಮುನ್ನವೇ ವಿರಾಟ್ ಕೊಹ್ಲಿ ಅವರು ವಿಶ್ವಕಪ್ ನಂತರ ಟಿ20 ತಂಡದ ನಾಯಕತ್ವ ತ್ಯಜಿಸುವುದಾಗಿ ಹೇಳಿದ್ದರು. ವಿಶ್ವಕಪ್ ಬಳಿಕ ನಡೆದ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿದ್ದರು. ಆಗ ರೋಹಿತ್ ಶರ್ಮಾ ಅವರೇ ಟೀಮ್ ಇಂಡಿಯಾ ನಾಯಕರಾಗಿದ್ದರು. ಆದರೆ, ರೋಹಿತ್ ನಾಯಕನೆಂದು ಬಿಸಿಸಿಐ ಅಧಿಕೃತವಾಗಿ ಘೋಷಣೆ ಮಾಡಿರಲಿಲ್ಲ. ಆದರೆ, ಈಗ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮುನ್ನ ರೋಹಿತ್ ಶರ್ಮಾ ಅವರನ್ನ ಓಡಿಐ ಮತ್ತು ಟಿ20 ತಂಡಗಳಿಗೆ ನಾಯಕರಾಗಿ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಯ ಪ್ರಕಟಿಸಿದೆ.


  ಟೆಸ್ಟ್ ತಂಡ ಪ್ರಕಟ:

  ಇದೇ ವೇಳೆ, ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಟೀಮ್ ಇಂಡಿಯಾವನ್ನು ಬಿಸಿಸಿಐ ಪ್ರಕಟಿಸಿದೆ. ನಿರೀಕ್ಷೆಯಂತೆ ಕರ್ನಾಟಕ ಮಯಂಕ್ ಅಗರ್ವಾಲ್ ಅವರನ್ನ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮಯಂಕ್ ಅಮೋಘ ಆಟ ಆಡಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಅವರ ಆ ಆಟವನ್ನು ಪರಿಗಣಿಸಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆ ಮಾಡಲಾಗಿದೆ.

  ಟೆಸ್ಟ್ ತಂಡದಲ್ಲಿ ಕೆಎಲ್ ರಾಹುಲ್ ಅವರೂ ಇದ್ದಾರೆ. ಒಟ್ಟು ಇಬ್ಬರು ಕನ್ನಡಿಗರು ತಂಡದಲ್ಲಿದ್ದಾರೆ. ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಅವರನ್ನ ಆರಿಸಬಹುದು ಎಂಬಂತಹ ಸುದ್ದಿ ಇತ್ತು. ಆದರೆ, ಹಿರಿಯ ಅನುಭವಿ ವೇಗದ ಬೌಲರ್​ಗಳಿಗೇ ಮಣೆ ಹಾಕಲಾಗಿದೆ.

  ಇದನ್ನೂ ಓದಿ: Vijay Hazare Trophy- ಕರ್ನಾಟಕಕ್ಕೆ ಭಾರೀ ಅಂತರದ ಗೆಲುವು; ಪಾಂಡಿಚೆರಿ 53 ರನ್​ಗೆ ಆಲೌಟ್

  ನ್ಯೂಜಿಲೆಂಡ್ ಸರಣಿಯಲ್ಲಿ ಮಯಂಕ್ ಜೊತೆಗೆ ಉತ್ತಮ ಪ್ರದರ್ಶನ ನೀಡಿದ್ದ ಶ್ರೇಯಸ್ ಅಯ್ಯರ್, ಜಯಂತ್ ಯಾದವ್, ವೃದ್ಧಿಮಾನ್ ಸಾಹ, ಮೊಹಮ್ಮದ್ ಸಿರಾಜ್ ಅವರೂ ದಕ್ಷಿಣ ಆಫ್ರಿಕಾಗೆ ಕ್ರಿಕೆಟ್ ಪ್ರವಾಸ ಹೋಗುವ ತಂಡದಲ್ಲಿದ್ಧಾರೆ.

  ಈಗಾಗಲೇ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ಎ ತಂಡದ ಕೆಲ ಆಟಗಾರರಿಗೂ ಸ್ಥಾನ ಸಿಕ್ಕಿದೆ. ಆಂಧ್ರದ ಹನುಮ ವಿಹಾರಿ ಅವರು ತಂಡಕ್ಕೆ ಆಯ್ಕೆ ಆಗಿದ್ದಾರೆ. ದೀಪಕ್ ಚಾಹರ್, ಸೌರಭ್ ಕುಮಾರ್, ನವದೀಪ್ ಸೈನಿ, ಆರ್ಜನ್ ನಾಗವಸ್ವಲ ಅವರನ್ನ ಮೀಸಲು ಆಟಗಾರರಾಗಿ ಇರಿಸಿಕೊಳ್ಳಲಾಗಿದೆ.

  ಅನುಭವಿಗಳಿಗೆ ಮಣೆ:

  ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಯಶಸ್ಸು ಕಾಣದ ಇಶಾಂತ್ ಶರ್ಮಾ ಅವರನ್ನ ತಂಡಕ್ಕೆ ಆಯ್ಕೆ ಮಾಡಿರುವುದು ಅಚ್ಚರಿ ಹುಟ್ಟಿಸಿದೆ. ದಕ್ಷಿಣ ಆಫ್ರಿಕಾದ ಪಿಚ್​ಗಳಲ್ಲಿ ಇಶಾಂತ್ ಶರ್ಮಾ ಬೌಲಿಂಗ್ ಪರಿಣಾಮಕಾರಿಯಾಗಿರುವ ನಿರೀಕ್ಷೆಯಲ್ಲಿ ಅವರ ಆಯ್ಕೆ ಆಗಿರಬಹುದು. ಹಾಗೆಯೇ, ಬ್ಯಾಟಿಂಗ್​ನಲ್ಲಿ ಲಯ ಕಳೆದುಕೊಂಡಂತಿರುವ ಅಜಿಂಕ್ಯ ರಹಾನೆ ಮೇಲಿನ ನಂಬಿಕೆ ಮುಂದುವರಿದಿದೆ. ಉಮೇಶ್ ಯಾದವ್, ಮೊಹಮ್ಮದ್ ಶಮಿ ಅವರೂ ತಂಡಕ್ಕೆ ಆಯ್ಕೆ ಆಗಿದ್ದಾರೆ.

  ಇದನ್ನೂ ಓದಿ: IPL 2022- ಹರ್ಭಜನ್ ಸಿಂಗ್ ಸೆಕೆಂಡ್ ಇನ್ನಿಂಗ್ಸ್: ಐಪಿಎಲ್​ನಲ್ಲಿ ಭಜ್ಜಿ ಕೋಚಿಂಗ್

  ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ಟೆಸ್ಟ್ ತಂಡ:

  ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆಎಲ್ ರಾಹುಲ್, ಮಯಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಗಗನ ಹನುಮ ವಿಹಾರಿ, ರಿಷಭ್ ಪಂತ್ (ವಿ ಕೀ), ವೃದ್ಧಿಮಾನ್ ಸಾಹ (ವಿ ಕೀ), ಆರ್ ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಸ್​ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್.

  ಸ್ಟ್ಯಾಂಡ್​ವೈ ಆಟಗಾರರು: ನವದೀಪ್ ಸೈನಿ, ಸೌರಭ್ ಕುಮಾರ್, ದೀಪಕ್ ಚಹಾರ್, ಆರ್ಜನ್ ನಾಗವಸ್ವಲ.

  ಆಟಗಾರರಿಗೆ ಗಾಯದ ಸಮಸ್ಯೆ:

  ರವೀಂದ್ರ ಜಡೇಜಾ, ಶುಬ್ಮನ್ ಗಿಲ್, ಅಕ್ಷರ್ ಪಟೇಲ್ ಮತ್ತು ರಾಹುಲ್ ಚಾಹರ್ ಅವರಿಗೆ ಗಾಯದ ಸಮಸ್ಯೆ ಕಾಡುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಅವರನ್ನ ಪರಿಗಣಿಸಲಾಗಿಲ್ಲ. ನ್ಯೂಜಿಲೆಂಡ್ ಸರಣಿ ವೇಳೆಯೇ ಜಡೇಜಾ, ಗಿಲ್ ಮತ್ತು ಅಕ್ಷರ್ ಅವರು ಗಾಯಗೊಂಡಿದ್ದರು.

  ಏಕದಿನ ಸರಣಿಗೆ ಇನ್ನೂ ತಂಡ ಪ್ರಕಟ ಇಲ್ಲ:

  ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೆಸ್ಟ್ ಸರಣಿ ಮತ್ತು ಏಕದಿನ ಸರಣಿ ನಡೆಯಲಿದೆ. ಈಗ ಟೆಸ್ಟ್ ಪಂದ್ಯಗಳಿಗೆ ಮಾತ್ರ ಟೀಮ್ ಅನ್ನು ಪ್ರಕಟಿಸಲಾಗಿದೆ. ಡಿ. 26ರಿಂದ ಟೆಸ್ಟ್ ಸರಣಿ ನಡೆಯುತ್ತದೆ. ಅದಾದ ಬಳಿಕ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಜನವರಿ 19, 21 ಮತ್ತು 23ರಂದು ಈ ಮೂರು ಪಂದ್ಯಗಳು ನಿಗದಿಯಾಗಿವೆ. ಏಕದಿನ ಸರಣಿಗೆ ಟೀಮ್ ಇಂಡಿಯಾವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸುವ ನಿರೀಕ್ಷೆ ಇದೆ.
  Published by:Vijayasarthy SN
  First published: