Robin Uthappa: ರಾಬಿನ್ ಉತ್ತಪ್ಪ ಅಬ್ಬರಕ್ಕೆ ದಂಗಾದ ದೆಹಲಿ..!

ಕೇರಳ 4 ವಿಕೆಟ್ ನಷ್ಟಕ್ಕೆ 218 ರನ್ ಕಲೆಹಾಕಿ ಭರ್ಜರಿ ಜಯವನ್ನು ತನ್ನದಾಗಿಸಿಕೊಂಡಿತು. ಈ ಗೆಲುವಿನೊಂದಿಗೆ ಕೇರಳ ತಂಡವು ಆಡಿರುವ 3 ಪಂದ್ಯಗಳನ್ನು ಗೆದ್ದು ಇಲೈಟ್ ಇ ಗ್ರೂಪ್​ನಲ್ಲಿ ಅಗ್ರಸ್ಥಾನಕ್ಕೇರಿದೆ.

Robin uthappa

Robin uthappa

 • Share this:
  ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಶುಕ್ರವಾರದ ಪಂದ್ಯದಲ್ಲಿ ಕೇರಳ ತಂಡ ದೆಹಲಿ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ದೆಹಲಿ ನೀಡಿದ 213 ರನ್​ಗಳ ಟಾರ್ಗೆಟ್​ನ್ನು ಕೇರಳ ತಂಡ 19 ಓವರ್​ನಲ್ಲೇ ಚೇಸ್ ಮಾಡಿ ಗೆಲುವಿನ ನಗೆ ಬೀರಿತು. ಇದಕ್ಕೂ ಮುನ್ನ ಟಾಸ್ ಗೆದ್ದ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ದುಕೊಂಡರು.

  ಅದರಂತೆ ದೆಹಲಿ ಪರ ಇನಿಂಗ್ಸ್​ ಆರಂಭಿಸಿದ ಶಿಖರ್ ಧವನ್ ಹಾಗೂ ಹಿಟನ್ ದಲಾಲ್ ಭರ್ಜರಿ ಆರಂಭ ಒದಗಿಸಿದ್ದರು. ಅದರಲ್ಲೂ ಧವನ್ ಅನುಭವದ ಮುಂದೆ ಲಯ ತಪ್ಪಿದ ಕೇರಳ ವೇಗಿಗಳು ದಂಡನೆಗೆ ಒಳಗಾದರು. 3 ಭರ್ಜರಿ ಸಿಕ್ಸರ್ ಹಾಗೂ 7 ಬೌಂಡರಿಯೊಂದಿಗೆ ಶಿಖರ್ ಧವನ್ 48 ಎಸೆತಗಳಲ್ಲಿ 77 ರನ್ ಬಾರಿಸಿದರು. ಇನ್ನು ಅಂತಿಮ ಹಂತದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಲಲಿತ್ ಯಾದವ್ ಕೇವಲ 25 ಎಸೆತಗಳಲ್ಲಿ 52 ರನ್ ಸಿಡಿಸುವ ಮೂಲಕ ದೆಹಲಿ ತಂಡದ ಮೊತ್ತವನ್ನು 20 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 212 ಕ್ಕೆ ತಂದು ನಿಲ್ಲಿಸಿದರು.

  ಈ ಬೃಹತ್ ಮೊತ್ತವನ್ನು ಬೆನ್ನತ್ತಲು ಕಣಕ್ಕಿಳಿದ ಕೇರಳ ತಂಡಕ್ಕೆ ದೆಹಲಿ ಆರಂಭಿಕ ಆಘಾತ ನೀಡಿದರು. ಮುಂಬೈ ವಿರುದ್ದ ಶತಕ ಸಿಡಿಸಿ ಅಬ್ಬರಿಸಿದ್ದ ಮೊಹಮ್ಮದ್ ಅಜರ್​ನ್ನು ಶೂನ್ಯಕ್ಕೆ ಪೆವಿಲಿಯನ್​ಗೆ ಕಳಿಸಿ ಮೊದಲ ಓವರ್​ನಲ್ಲೇ ಇಶಾಂತ್ ಶರ್ಮಾ ಯಶಸ್ಸು ತಂದುಕೊಟ್ಟರು. ಇನ್ನೊಂದೆಡೆ ಅನುಭವಿ ರಾಬಿನ್ ಉತ್ತಪ್ಪ ಸಮರ್ಥವಾಗಿ ದೆಹಲಿ ಬೌಲರುಗಳನ್ನು ಎದುರಿಸಿದರು.

  ಒಂದೆಡೆ ವಿಕೆಟ್ ಬೀಳುತ್ತಿದ್ದ ಮತ್ತೊಂದೆಡೆ ಉತ್ತಪ್ಪ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಹಂತದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಷ್ಣು ವಿನೋದ್ ಉತ್ತಪ್ಪಗೆ ಉತ್ತಮ ಸಾಥ್ ನೀಡಿದರು. ಪರಿಣಾಮ 18ನೇ ಓವರ್​ನಲ್ಲೇ ತಂಡದ ಮೊತ್ತ 200ರ ಗಡಿದಾಟಿತು. ಆದರೆ ಈ ಹಂತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಅಷ್ಟರಲ್ಲಾಗಲೇ 8 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ ಉತ್ತಪ್ಪ 54 ಎಸೆತಗಳಲ್ಲಿ 91 ರನ್ ಚಚ್ಚಿದ್ದರು.  ಇನ್ನೊಂದೆಡೆ 38 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 3 ಬೌಂಡರಿಗಳೊಂದಿಗೆ 71 ಬಾರಿಸಿದ್ದ ವಿಷ್ಣು ವಿನೋದ್ ಅಂತಿಮವಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ಕೇರಳ 4 ವಿಕೆಟ್ ನಷ್ಟಕ್ಕೆ 218 ರನ್ ಕಲೆಹಾಕಿ ಭರ್ಜರಿ ಜಯವನ್ನು ತನ್ನದಾಗಿಸಿಕೊಂಡಿತು. ಈ ಗೆಲುವಿನೊಂದಿಗೆ ಕೇರಳ ತಂಡವು ಆಡಿರುವ 3 ಪಂದ್ಯಗಳನ್ನು ಗೆದ್ದು ಇಲೈಟ್ ಇ ಗ್ರೂಪ್​ನಲ್ಲಿ ಅಗ್ರಸ್ಥಾನಕ್ಕೇರಿದೆ.
  Published by:zahir
  First published: