HOME » NEWS » Sports » CRICKET ROAD SAFETY WORLD SERIES 2020 21 SEMI FINAL INDIA LEGENDS VS WEST INDIES LEGENDS ZP

Road Safety World Series 2020-21: ವೆಸ್ಟ್​ ಇಂಡೀಸ್​ನ್ನು​​ ಮಣಿಸಿ ಫೈನಲ್​ ಪ್ರವೇಶಿಸಿದ ಇಂಡಿಯಾ ಲೆಜೆಂಡ್ಸ್​

ಈ ಹಂತದಲ್ಲಿ ಜೊತೆಗೂಡಿದ್ದು ಡೇಂಜರಸ್ ಯೂಸುಫ್ ಪಠಾಣ್ ಹಾಗೂ ಸಿಕ್ಸರ್ ಸಿಂಗ್ ಯುವರಾಜ್. ಸಿಕ್ಸ್, ಫೋರ್​ಗಳೊಂದಿಗೆ ತಮ್ಮ ಸ್ಪೋಟಕ ಇನಿಂಗ್ಸ್ ಆರಂಭಿಸಿದ ಯೂಸುಫ್ ಪಠಾಣ್ ರನ್​ಗತಿಯನ್ನು ಹೆಚ್ಚಿಸಿದರು.

news18-kannada
Updated:March 17, 2021, 11:01 PM IST
Road Safety World Series 2020-21: ವೆಸ್ಟ್​ ಇಂಡೀಸ್​ನ್ನು​​ ಮಣಿಸಿ ಫೈನಲ್​ ಪ್ರವೇಶಿಸಿದ ಇಂಡಿಯಾ ಲೆಜೆಂಡ್ಸ್​
Road Safety World Series 2020-21
  • Share this:
ರಾಯ್‌ಪುರ್‌ನ ಶಾಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಸೆಮಿಫೈನಲ್​ನಲ್ಲಿ ವೆಸ್ಟ್ ಇಂಡೀಸ್ ಲೆಜೆಂಡ್ಸ್ ವಿರುದ್ಧ ಇಂಡಿಯಾ ಲೆಜೆಂಡ್ಸ್  12 ರನ್​ಗಳ ರೋಚಕ ಜಯ ಸಾಧಿಸಿದೆ. ಇಂಡಿಯಾ ಲೆಜೆಂಡ್ಸ್​ ನೀಡಿದ 219 ರನ್​ಗಳ ಟಾರ್ಗೆಟ್​ನ್ನು ಬೆನ್ನತ್ತಿದ ವೆಸ್ಟ್​ ಇಂಡೀಸ್​ ಲೆಜೆಂಡ್ಸ್​ 206 ರನ್​ಗಳಿಸಲಷ್ಟೇ ಶಕ್ತರಾದರು. ಈ ಗೆಲುವಿನೊಂದಿಗೆ ಸಚಿನ್ ಪಡೆ ಫೈನಲ್​ಗೇರಿದೆ.

ಇದಕ್ಕೂ ಮುನ್ನ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಲೆಜೆಂಡ್ಸ್ ನಾಯಕ ಬ್ರಿಯಾನ್ ಲಾರಾ ಬೌಲಿಂಗ್ ಆಯ್ದುಕೊಂಡರು. ಅದರಂತೆ ಟೀಮ್ ಇಂಡಿಯಾದ ಮಾಜಿ ಆರಂಭಿಕರಾದ ವಿರೇಂದ್ರ ಸೆಹ್ವಾಗ್ ಹಾಗೂ ಸಚಿನ್ ತೆಂಡೂಲ್ಕರ್​ ಓಪನರ್​ಗಳಾಗಿ ಕಣಕ್ಕಿಳಿದರು. ಮೊದಲ ಓವರ್​ನಿಂದಲೇ ಬ್ಯಾಟ್ ಪ್ರಹಾರ ಶುರು ಮಾಡಿದ ವೀರು ಬೌಂಡರಿಗಳ ಸುರಿಮಳೆ ಸುರಿಸಿದರು. ಪರಿಣಾಮ ಐದು ಓವರ್​ ವೇಳೆಗೆ ಇಂಡಿಯಾ ಲೆಜೆಂಡ್ಸ್ ಸ್ಕೋರ್ 50ರ ಗಡಿದಾಟಿತು. ಈ ಹಂತದಲ್ಲಿ 17 ಎಸೆತಗಳಲ್ಲಿನ 35 ರನ್​ ಬಾರಿಸಿದ್ದ ಸೆಹ್ವಾಗ್ ಟಿನೊ ಬೆಸ್ಟ್ ಎಸೆತದಲ್ಲಿ ಅವರಿಗೇನೇ ಕ್ಯಾಚ್ ನೀಡಿ ಹೊರನಡೆದರು.

ಸ್ಪೋಟಕ ಬ್ಯಾಟ್ಸ್​ಮನ್ ಸೆಹ್ವಾಗ್ ಔಟ್​ ಆಗುತ್ತಿದ್ದಂತೆ ಮಾಸ್ಟರ್ ಬ್ಲಾಸ್ಟರ್​ ಸಚಿನ್ ಸಿಡಿಯಲಾರಂಭಿಸಿದರು. ವಿಂಡೀಸ್ ಬೌಲರುಗಳನ್ನು ಮನಸೋ ಇಚ್ಛೆ ದಂಡಿಸಿದ ಸಚಿನ್ 3 ಸಿಕ್ಸರ್ ಹಾಗೂ 6 ಬೌಂಡರಿಗಳನ್ನು ಬಾರಿಸಿದರು. ಅಲ್ಲದೆ ಮೊಹಮ್ಮದ್ ಕೈಫ್ ಜೊತೆಗೂಡಿ 10 ವೇಳೆಗಾಗಲೇ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. 2 ಬೌಂಡರಿ ಹಾಗೂ 2 ಸಿಕ್ಸರ್​ಗಳೊಂದಿಗೆ ಅಬ್ಬರಿಸಿದ ಕೈಫ್ 21 ಎಸೆತಗಳಲ್ಲಿ 27 ರನ್​ ಬಾರಿಸಿ ಈ ವೇಳೆ ವಿಕೆಟ್ ಒಪ್ಪಿಸಿದರು.

ಅತ್ತ ಸಚಿನ್ ತೆಂಡೂಲ್ಕರ್ 42 ಎಸೆತಗಳಲ್ಲಿ 65 ರನ್​ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ಈ ವೇಳೆ ಬೌಂಡರಿ ಲೈನ್​ನಲ್ಲಿ ಎಡ್ವರ್ಡ್ಸ್ ಹಿಡಿದ ಸೂಪರ್​ ಕ್ಯಾಚ್​ಗೆ ಸಚಿನ್ ನಿರ್ಗಮಿಸಲೇಬೇಕಾಯಿತು. ಅಷ್ಟರಲ್ಲಾಗಲೇ ಸಚಿನ್ ತಂಡದ ಮೊತ್ತವನ್ನು 14.1 ಓವರ್​ನಲ್ಲಿ 140 ಕ್ಕೆ ತಂದು ನಿಲ್ಲಿಸಿದರು.

ಈ ಹಂತದಲ್ಲಿ ಜೊತೆಗೂಡಿದ್ದು ಡೇಂಜರಸ್ ಯೂಸುಫ್ ಪಠಾಣ್ ಹಾಗೂ ಸಿಕ್ಸರ್ ಸಿಂಗ್ ಯುವರಾಜ್. ಸಿಕ್ಸ್, ಫೋರ್​ಗಳೊಂದಿಗೆ ತಮ್ಮ ಸ್ಪೋಟಕ ಇನಿಂಗ್ಸ್ ಆರಂಭಿಸಿದ ಯೂಸುಫ್ ಪಠಾಣ್ ರನ್​ಗತಿಯನ್ನು ಹೆಚ್ಚಿಸಿದರು. ಈ ವೇಳೆ ಸುಲೈಮಾನ್ ಬೆನ್ ಓವರ್​ನಲ್ಲಿ ಯುವರಾಜ್​ಗೆ ಎರಡು ಜೀವದಾನ ಕೂಡ ಲಭಿಸಿತು. ವೆಸ್ಟ್ ಇಂಡೀಸ್ ಲೆಜೆಂಡ್ಸ್ ಆಟಗಾರರು ಬಿಟ್ಟ ಕ್ಯಾಚ್​ನ ಸಂಪೂರ್ಣ ಲಾಭ ಪಡೆದ ಯುವಿ ಅಬ್ಬರಿಸಲಾರಂಭಿಸಿದರು.

ಅಲ್ಲದೆ ನಾಗಮುತ್ತು ಎಸೆದ 19ನೇ ಓವರ್​ನ ಮೊದಲ 3 ಎಸೆತಗಳಲ್ಲಿ ಯುವರಾಜ್ ಸಿಂಗ್ 3 ಭರ್ಜರಿ ಸಿಕ್ಸರ್ ಸಿಡಿಸಿದರು. 4ನೇ ಬಾಲ್​ ಡಾಟ್ ಮಾಡಿದ ಯುವಿ 5ನೇ ಎಸೆತದಲ್ಲಿ ಮತ್ತೊಂದು ಸಿಕ್ಸ್ ಬಾರಿಸಿದರು. ಹೀಗೆ ಒಂದೇ ಓವರ್​ನಲ್ಲಿ 24 ರನ್​ ಕಲೆಹಾಕಿದರು.

ಅಂತಿಮ ಓವರ್​ನ ಮೊದಲ ಎಸೆತದಲ್ಲಿ ಯೂಸುಫ್ ಪಠಾಣ್  1 ರನ್​ ಕಲೆಹಾಕಿದರು. 2ನೇ ಎಸೆತದಲ್ಲಿ ಯುವರಾಜ್ ಸಿಂಗ್ ಸಿಕ್ಸ್ ಸಿಡಿಸಿದರು. 3ನೇ ಬಾಲ್​ನಲ್ಲಿ ಯಾವುದೇ ರನ್ನಿಲ್ಲ. 4ನೇ ಬಾಲ್​ನಲ್ಲಿ 2 ರನ್ ಓಡಿದ ಯುವಿ ಐದನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದರು. ಇನ್ನು ಅಂತಿಮ ಎಸೆತದಲ್ಲಿ 1 ರನ್​ ಕಲೆಹಾಕುವ ಮೂಲಕ ತಂಡದ ಮೊತ್ತವನ್ನು 218 ಕ್ಕೆ ತಂದು ನಿಲ್ಲಿಸಿದರು.  ಇಂಡಿಯಾ ಲೆಜೆಂಡ್ಸ್ ಪರ ಯೂಸುಫ್ ಪಠಾಣ್ 20 ಎಸೆತಗಳಲ್ಲಿ 3 ಸಿಕ್ಸರ್ 2 ಬೌಂಡರಿಯೊಂದಿಗೆ 37 ರನ್​ ಬಾರಿಸಿದರೆ, ಯುವರಾಜ್ ಸಿಂಗ್ 6 ಸಿಕ್ಸರ್ 1 ಬೌಂಡರಿಯೊಂದಿಗೆ 20 ಎಸೆತಗಳಲ್ಲಿ 49 ರನ್ ಸಿಡಿಸಿದರು.219 ರನ್​ಗಳ ಕಠಿಣ ಗುರಿ ಪಡೆದ ವೆಸ್ಟ್ ಇಂಡೀಸ್​ ಲೆಜೆಂಡ್ಸ್​ಗೆ ಆರಂಭಿಕರಾದ ಡ್ವೇನ್ ಸ್ಮಿತ್ ಹಾಗೂ ವಿಲಿಯಮ್ ಬಿರುಸಿನ ಆರಂಭ ಒದಗಿಸಿದ್ದರು. ಮೊದಲ ಓವರ್​ನಲ್ಲಿ 19 ರನ್​ ಕಲೆಹಾಕಿ ಉತ್ತಮ ಅಡಿಪಾಯ ಹಾಕಿದ್ದರು. ಆದರೆ ಮನ್​ಪ್ರೀತ್ ಗೋನಿ ಎಸೆದ 2ನೇ ಓವರ್​ನ ಮೊದಲ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗುವ ಮೂಲಕ ವಿಲಿಯಮ್ ಹೊರ ನಡೆದರು. ಈ ಹಂತದಲ್ಲಿ ಜೊತೆಯಾದ ಸ್ಮಿತ್-ನರ್​ಸಿಂಗ್ ಸ್ಪೋಟಕ ಆಟವಾಡಿದರು. ಪರಿಣಾಮ ಪವರ್​ಪ್ಲೇ ಮುಕ್ತಾಯದ ವೇಳೆಗೆ ವೆಸ್ಟ್ ಇಂಡೀಸ್ ಸ್ಕೋರ್ 70 ರನ್​ ದಾಟಿತ್ತು.

ಪವರ್​ಪ್ಲೇ ಬಳಿಕ ಕೂಡ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಸ್ಮಿತ್ ಸ್ಪೋಟಕ ಅರ್ಧಶತಕ ಪೂರೈಸಿದರು. ಅಲ್ಲದೆ ನರ್​ಸಿಂಗ್ ಜೊತೆಗೂಡಿ 61 ಎಸೆತಗಳಲ್ಲಿ 99 ರನ್​ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ ಮತ್ತೆ ದಾಳಿಗಿಳಿದ ಇರ್ಫಾನ್ ಪಠಾಣ್ 36 ಎಸೆತಗಳಲ್ಲಿ 63 ರನ್​ ಬಾರಿಸಿದ್ದ ಸ್ಮಿತ್​ಗೆ ಪೆವಿಲಿಯನ್ ಹಾದಿ ತೋರಿಸಿದರು. ಆದರೆ ಅದಾಗಲೇ ವೆಸ್ಟ್ ಇಂಡೀಸ್​ ಲೆಜೆಂಡ್ಸ್​ ತಂಡವು 11 ಓವರ್​ನಲ್ಲಿ 119 ರನ್​ಗಳಿಸಿತ್ತು. ಇದರ ಬೆನ್ನಲ್ಲೇ ಎಡ್ವರ್ಡ್ಸ್​ ವಿಕೆಟ್ ಪಡೆಯುವ ಮೂಲಕ ಪ್ರಗ್ಯಾನ್ ಓಜಾ ಇಂಡಿಯಾ ಲೆಜೆಂಡ್ಸ್​ಗೆ ಮೂರನೇ ಯಶಸ್ಸು ತಂದುಕೊಟ್ಟರು.

ಈ ಹಂತದಲ್ಲಿ ಜೊತೆಗೂಡಿದ ನಾಯಕ ಬ್ರಿಯಾನ್ ಲಾರಾ ಹಾಗೂ ನರ್​ಸಿಂಗ್ 28 ಎಸೆತಗಳಲ್ಲಿ 53 ರನ್​ಗಳ ಜೊತೆಯಾಟವಾಡಿದರು. ಕೊನೆಯ 24 ಎಸೆತಗಳಲ್ಲಿ ವೆಸ್ಟ್ ಇಂಡೀಸ್​ಗೆ ಗೆಲ್ಲಲು 46 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ 2 ಓವರ್​ನಲ್ಲಿ ಲಾರಾ-ನರ್​ಸಿಂಗ್ 26 ರನ್​ ಕಲೆಹಾಕಿದರು. ಕೊನೆಯ ಎರಡು ಓವರ್​ನಲ್ಲಿ 25 ರನ್​ಗಳು ಬೇಕಿತ್ತು.

19ನೇ ಓವರ್ ಎಸೆದ ವಿನಯ್ ಕುಮಾರ್ ಮೊದಲ ಎಸೆತದಲ್ಲಿ 2 ರನ್ ನೀಡಿದರು. 2ನೇ ಎಸೆತದಲ್ಲಿ ಲಾರಾ ಭರ್ಜರಿ ಬೌಂಡರಿ ಬಾರಿಸಿದರು. 3ನೇ ಎಸೆತದಲ್ಲಿ 28 ಎಸೆತದಲ್ಲಿ 46 ರನ್​ ಬಾರಿಸಿದ್ದ ಲಾರಾ ಅವರನ್ನು ಕ್ಲೀನ್ ಬೌಲ್ಡ್​ ಮಾಡಿದರು. ಅಲ್ಲದೆ ಈ ಓವರ್​ನ ಅಂತಿಮ ಎಸೆತದಲ್ಲಿ ಟಿನೋ ಬೆಸ್ಟ್ ವಿಕೆಟ್ ಪಡೆಯುವ ಮೂಲಕ ಮತ್ತೊಂದು ಯಶಸ್ಸು ತಂದುಕೊಟ್ಟರು.

ಕೊನೆಯ ಓವರ್​ನಲ್ಲಿ ವೆಸ್ಟ್​ ಇಂಡೀಸ್​ಗೆ 17 ರನ್​ಗಳ ಅವಶ್ಯಕತೆಯಿತ್ತು. 20ನೇ ಓವರ್ ಎಸೆದ ಇರ್ಫಾನ್ ಪಠಾಣ್ ಮೊದಲ ಎಸೆತದಲ್ಲಿ ಯಾವುದೇ ರನ್ ನೀಡಲಿಲ್ಲ. 2ನೇ ಎಸೆತದಲ್ಲಿ ಕೇವಲ 1 ರನ್ ಮಾತ್ರ. ಮೂರನೇ ಎಸೆತದಲ್ಲಿ ವಿನಯ್ ಕುಮಾರ್ ಮಾಡಿದ ಅತ್ಯುತ್ತಮ ಫೀಲ್ಡಿಂಗ್​​ನಿಂದ 58 ರನ್​ಗಳಿಸಿದ್ದ ನರ್​ಸಿಂಗ್ ರನೌಟ್ ಆದರು. 4ನೇ ಎಸೆತದಲ್ಲಿ ಯಾವುದೇ ರನ್​ ಬರಲಿಲ್ಲ. 5ನೇ ಬಾಲ್​ನಲ್ಲಿ 2 ರನ್​.

ಇನ್ನು ಅಂತಿಮ ಎಸೆತದಲ್ಲಿ ವೆಸ್ಟ್ ಇಂಡೀಸ್​ಗೆ 13 ರನ್​ಗಳ ಅವಶ್ಯಕತೆಯಿತ್ತು. ಆದರೆ ಇರ್ಫಾನ್ ಪಠಾಣ್ ಈ ಬಾಲ್​ನ್ನು ಡಾಟ್ ಮಾಡಿಸುವ ಮೂಲಕ ಇಂಡಿಯಾ ಲೆಜೆಂಡ್ಸ್​ಗೆ 12 ರನ್​ಗಳ ಜಯ ತಂದುಕೊಟ್ಟರು. ಭಾರತ ಪರ ವಿನಯ್ ಕುಮಾರ್ 2 ವಿಕೆಟ್ ಪಡೆದರೆ, ಇರ್ಫಾನ್ ಪಠಾಣ್, ಓಜಾ ಹಾಗೂ ಗೋನಿ ತಲಾ ಒಂದು ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ರೋಡ್ ಸೇಫ್ಟಿ ಸಿರೀಸ್​ನಲ್ಲಿ ಇಂಡಿಯಾ ಲೆಜೆಂಡ್ಸ್​ ಫೈನಲ್​ಗೆ ಪ್ರವೇಶಿಸಿತು.
Published by: zahir
First published: March 17, 2021, 11:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories