R Ashwin- ಮುಂಬೈ ಟೆಸ್ಟ್​ನಲ್ಲಿ ಆರ್ ಅಶ್ವಿನ್ ಬರೆದ ದಾಖಲೆಗಳಿವು

IND vs NZ, 2nd test match at Mumbai- ಆರ್ ಅಶ್ವಿನ್ ಅವರು ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 7ನೇ ವಿಕೆಟ್ ಪಡೆಯುವ ಮೂಲಕ ಕೆಲ ದಾಖಲೆ ಮತ್ತು ಮೈಲಿಗಲ್ಲುಗಳನ್ನ ಮುಟ್ಟಿದ್ದಾರೆ.

ಆರ್ ಅಶ್ವಿನ್

ಆರ್ ಅಶ್ವಿನ್

 • Share this:
  ಮುಂಬೈ: ಭಾರತದ ಅತ್ಯುತ್ತಮ ಸ್ಪಿನ್ ಬೌಲರ್ ಎನಿಸಿರುವ ಆರ್ ಅಶ್ವಿನ್ ತಮ್ಮ ಮೇಲಿಟ್ಟಿದ್ದ ನಿರೀಕ್ಷೆಯನ್ನ ಹುಸಿಗೊಳಿಸಿಲ್ಲ. ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ (India vs NZ Second Test Match) ಪಂದ್ಯದಲ್ಲಿ ಅಶ್ವಿನ್ ತಮ್ಮ ಸ್ಪಿನ್ ಮೋಡಿಯಿಂದ ಎದುರಾಳಿ ಬ್ಯಾಟುಗಾರರನ್ನ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಇನ್ನಿಂಗ್ಸಲ್ಲಿ ಕೇವಲ 8 ರನ್ನಿಗೆ 4 ವಿಕೆಟ್ ಪಡೆದು ಕಿವೀಸ್ ಪಡೆ ಕೇವಲ 62 ರನ್​ಗೆ ಆಲೌಟ್ ಆಗಲು ಪ್ರಧಾನ ಪಾತ್ರ ವಹಿಸಿದ್ದ ಆರ್ ಅಶ್ವಿನ್, ಈಗ ಎರಡನೇ ಇನ್ನಿಂಗ್ಸಲ್ಲಿ ನಿನ್ನೆ 3 ವಿಕೆಟ್ ಪಡೆದು ಎದುರಾಳಿಗಳಿಗೆ ಮಗ್ಗುಲಮುಳ್ಳಾಗಿ ಕಾಡುತ್ತಿದ್ದಾರೆ. ಅಲ್ಲದೇ ಹಲವು ದಾಖಲೆ, ಮೈಲಿಗಲ್ಲುಗಳನ್ನ ಮುಟ್ಟಿದ್ದಾರೆ.

  35 ವರ್ಷದ ಆರ್ ಅಶ್ವಿನ್ ನಿನ್ನೆ 3ನೇ ದಿನದಾಟದಲ್ಲಿ ಮೂರು ವಿಕೆಟ್ ಪಡೆಯುವುದರೊಂದಿಗೆ ಈ 2021ರ ವರ್ಷದಲ್ಲಿ 50 ವಿಕೆಟ್ ಮೈಲಿಗಲ್ಲು ಮುಟ್ಟಿದ್ಧಾರೆ. ಪಾಕಿಸ್ತಾನದ ವೇಗದ ಬೌಲರ್​ಗಳಾದ ಶಾಹೀನ್ ಅಫ್ರಿದಿ ಮತ್ತು ಹಸನ್ ಅಲಿ ತಲಾ 44 ಮತ್ತು 39 ವಿಕೆಟ್​ಗಳೊಂದಿಗೆ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

  ಆರ್ ಅಶ್ವಿನ್ ಸ್ಥಾಪಿಸಿದ ದಾಖಲೆಗಳು:

  1) 2021ರ ವರ್ಷದಲ್ಲಿ 50 ಟೆಸ್ಟ್ ವಿಕೆಟ್ ಗಳಿಸಿದ ವಿಶ್ವದ ಮೊದಲ ಬೌಲರ್.

  2) ಆರ್ ಅಶ್ವಿನ್ ಒಂದು ವರ್ಷದಲ್ಲಿ 50 ವಿಕೆಟ್ ಪಡೆದ ಸಾಧನೆಯನ್ನ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ನಾಲ್ಕು ಬಾರಿ ಮಾಡಿದ್ದಾರೆ.

  3) ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯಗಳಲ್ಲಿ ಆರ್ ಅಶ್ವಿನ್ 65 ವಿಕೆಟ್ ಸಂಪಾದಿಸಿದ್ದಾರೆ. ಈ ಮೂಲಕ ನ್ಯೂಜಿಲೆಂಡ್ ವೇಗಿ ರಿಚರ್ಡ್ ಹ್ಯಾಡ್ಲಿ ಅವರ ದಾಖಲೆ ಸರಿಗಟ್ಟಿದ್ದಾರೆ.

  4) ಆರ್ ಅಶ್ವಿನ್ ಟೆಸ್ಟ್ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇದೂವರೆಗೆ ಅವರು 80 ಪಂದ್ಯಗಳಿಂದ 419 ವಿಕೆಟ್ ಪಡೆದಿದ್ದಾರೆ.

  ಇದನ್ನೂ ಓದಿ: Abu Dhabi T10: ಗ್ಲೇಡಿಯೇಟರ್ಸ್ ಚಾಂಪಿಯನ್- ಟೂರ್ನಿಯಲ್ಲಿ ಹೆಚ್ಚು ರನ್, ವಿಕೆಟ್ ಗಳಿಸಿದವರ ಪಟ್ಟಿ

  ಹ್ಯಾಡ್ಲಿ ದಾಖಲೆ ಬಗ್ಗೆ ಕುತೂಹಲ ಅಂಶ ಎಂದರೆ, ರಿಚರ್ಡ್ ಹ್ಯಾಡ್ಲಿ ಅವರು ಭಾರತ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ 65 ವಿಕೆಟ್ ಪಡೆಯಲು 24 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಆದರೆ, ಆರ್ ಅಶ್ವಿನ್ ಅವರು ಕೇವಲ 17 ಇನ್ನಿಂಗ್ಸಲ್ಲಿ ಈ ಸಾಧನೆ ಮಾಡಿದ್ದಾರೆ. ಇಂದು ಟೆಸ್ಟ್ ಪಂದ್ಯ ಮುಂದುವರಿಯಲಿದ್ದು, ಅಶ್ವಿನ್ ಇನ್ನಷ್ಟು ವಿಕೆಟ್ ಗಳಿಸುವ ಸಾಧ್ಯತೆ ದಟ್ಟವಾಗಿದೆ. ಆ ಮೂಲಕ ಅವರು ಹ್ಯಾಡ್ಲಿ ದಾಖಲೆಯನ್ನೂ ಮುರಿಯುವುದು ನಿಶ್ಚಿತವಾಗುತ್ತದೆ.

  ಗೆಲುವಿನ ಹಾದಿಯಲ್ಲಿ ಟೀಮ್ ಇಂಡಿಯಾ:

  ಕಾನಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ವೀರೋಚಿತವಾಗಿ ಹೋರಾಡಿ ರೋಚಕ ಡ್ರಾ ಮಾಡಿಕೊಂಡಿದ್ದ ನ್ಯೂಜಿಲೆಂಡ್ ತಂಡ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಸೋಲಿನ ಸುಳಿಗೆ ಸಿಲುಕಿದೆ.

  ಇದನ್ನೂ ಓದಿ: ಕ್ಲೀನ್ ಬೌಲ್ಡ್ ಆದರೂ ರಿವ್ಯೂ ಕೊಟ್ಟು ಪೇಚಿಗೆ ಸಿಕ್ಕ ಆರ್ ಅಶ್ವಿನ್; ಕಾರಣ ಇದಿರಬಹುದು

  ನ್ಯೂಜಿಲೆಂಡ್ ತಂಡವನ್ನ 62 ರನ್​ಗೆ ಆಲೌಟ್ ಮಾಡಿ 263 ರನ್​ಗಳ ಬೃಹತ್ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದ ಟೀಮ್ ಇಂಡಿಯಾ ಫಾಲೋ ಆನ್ ಹೇರದೆ ಮತ್ತೆ ಬ್ಯಾಟಿಂಗ್ ಮಾಡಿತು. ಎರಡನೇ ಇನ್ನಿಂಗ್ಸಲ್ಲಿ 7 ವಿಕೆಟ್ ನಷ್ಟಕ್ಕೆ 276 ರನ್ ಗಳಿಸಿದಾಗ ಡಿಕ್ಲೇರ್ ಮಾಡಿಕೊಂಡು ನ್ಯೂಜಿಲೆಂಡ್​ಗೆ ಗೆಲ್ಲಲು 540 ರನ್​ಗಳ ಕಠಿಣಾತಿಕಠಿಣ ಗುರಿ ನೀಡಿದೆ.

  ಈ ಗುರಿಯನ್ನ ಬೆನ್ನತ್ತಿರುವ ನ್ಯೂಜಿಲೆಂಡ್ ತಂಡ ನಿನ್ನೆ 3ನೇ ದಿನಾಂತ್ಯದಲ್ಲಿ 5 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿದೆ. ಇನ್ನೂ ಎರಡು ದಿನದಾಟ ಬಾಕಿ ಇದ್ದು, ನ್ಯೂಜಿಲೆಂಡ್​ಗೆ ಗೆಲುವು ದಕ್ಕಬೇಕಾದರೆ ಅದು ಪವಾಡವೇ ಆಗಬೇಕಾದೀತು.
  Published by:Vijayasarthy SN
  First published: