MS Dhoni- ಎಂಎಸ್ ಧೋನಿ ಕ್ಯಾಪ್ಟನ್ಸಿ ಬಿಟ್ಟಿದ್ದು ಯಾಕೆ? ನಿಜವಾದ ಕಾರಣ ಇದು

Why Dhoni left Captaincy?: 2017ರ ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಎಂಎಸ್ ಧೋನಿ ಏಕದಿನ ಮತ್ತು ಟಿ20 ತಂಡಗಳ ನಾಯಕತ್ವದಿಂದ ಹಿಂದಕ್ಕೆ ಸರಿದಿದ್ದರು. ಇಂಗ್ಲೆಂಡ್ ಸರಣಿಗೆ ಮುನ್ನ ಧೋನಿ ತಮ್ಮ ನಿರ್ಧಾರಕ್ಕೆ ಕಾರಣ ಏನು ಎಂದು ಸುಳಿವು ನೀಡಿದ್ದರು.

ಎಂಎಸ್ ಧೋನಿ

ಎಂಎಸ್ ಧೋನಿ

 • Share this:
  ದುಬೈ: ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾ ಕಂಡ ಅತ್ಯುತ್ತಮ ನಾಯಕರಲ್ಲೊಬ್ಬರು ಎಂಬುದು ನಿರ್ವಿವಾದ. 2014 ಡಿಸೆಂಬರ್ ತಿಂಗಳಲ್ಲಿ ಅವರು ಟೆಸ್ಟ್ ನಾಯಕತ್ವ ತ್ಯಜಿಸಿದ್ದರು. ತಾನು ಚುಟುಕು ಕ್ರಿಕೆಟ್​ನತ್ತ ಹೆಚ್ಚು ಗಮನ ಹರಿಸುವುದಾಗಿ ಅವರು ಕಾರಣ ಕೊಟ್ಟಿದ್ದರು. ಇದಕ್ಕೆ ಹಲವರು ಹುಬ್ಬೇರಿಸಿದರೂ ತರ್ಕ ಸರಿ ಇದ್ದೀತೆಂದು ಸುಮ್ಮನಾದರು. ಆದರೆ, 2017, ಜನವರಿಯಲ್ಲಿ ಧೋನಿ ಭಾರತ ಏಕದಿನ ಮತ್ತು ಟಿ20 ತಂಡದ ನಾಯಕತ್ವ ತ್ಯಜಿಸುವುದಾಗಿ ಘೋಷಣೆ ಮಾಡಿದಾಗ ಕ್ರಿಕೆಟ್ ಪ್ರೇಮಿಗಳು ಅಕ್ಷರಶಃ ಆಶ್ಚರ್ಯಚಕಿತರಾಗಿದ್ದರು. ಅದೃಷ್ಟಕ್ಕೆ ಟೀಮ್ ಇಂಡಿಯಾದ ನಾಯಕತ್ವ ಬದಲಾವಣೆ ಯಾವುದೇ ಗೊಂದಲ ಇಲ್ಲದೇ ಆಗಿತ್ತು. ಧೋನಿ ನಂತರ ಮುಂದ್ಯಾರು ಎಂಬ ಪ್ರಶ್ನೆಯೇ ಉದ್ಭವವವಾಗಲಿಲ್ಲ. ಯಾಕೆಂದರೆ ಧೋನಿಯೇ ಬೆಳೆಸಿದ ವ್ಯಕ್ತಿತ್ವ ವಿರಾಟ್ ಕೊಹ್ಲಿ ರೂಪದಲ್ಲಿ ಇತ್ತು. ಅದಾಗಲೇ ಟೆಸ್ಟ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದ ಕೊಹ್ಲಿ ಹೆಗಲಿಗೆ ಮೂರು ಮಾದರಿಯ ಕ್ರಿಕೆಟ್ ತಂಡಗಳ ನಾಯಕತ್ವದ ಹೊಣೆ ಸಿಕ್ಕಿತು.

  ಆದರೆ, ಎಂಎಸ್ ಧೋನಿ ಏಕದಿನ ಮತ್ತು ಟಿ20 ಕ್ರಿಕೆಟ್​ ತಂಡಗಳ ಕ್ಯಾಪ್ಟನ್ಸಿಯಿಂದ ಯಾಕೆ ಕೆಳಗಿಳಿದರು ಎಂಬ ಪ್ರಶ್ನೆಗೆ ಉತ್ತರ ಸ್ಪಷ್ಟ ಇರಲಿಲ್ಲ. ಕೆಲವರು ಧೋನಿ ನಿವೃತ್ತಿಗೆ ಇದು ಮುನ್ನುಡಿ ಎಂದು ವಿಶ್ಲೇಷಿಸಿದ್ದುಂಟು. 2017ರ ಚಾಂಪಿಯನ್ಸ್ ಟ್ರೋಫಿಗೆ ಮುನ್ನ ನಡೆದ ಇಂಗ್ಲೆಂಡ್ ಕ್ರಿಕೆಟ್ ಸರಣಿಯ ವೇಳೆ ಧೋನಿ ತಾನು ಏಕದಿನ ಮತ್ತು ಟಿ20 ಕ್ರಿಕೆಟ್ ತಂಡಗಳ ನಾಯಕತ್ವ ಯಾಕೆ ತ್ಯಜಿಸುತ್ತಿರುವುದಾಗಿ ಸುಳಿವು ಕೊಟ್ಟಿದ್ದರು.

  ನಾಯಕತ್ವ ವಿಭಜನೆ ಸರಿಯಲ್ಲ ಎಂದರಾ ಧೋನಿ?

  ಏಕದಿನ ಸರಣಿ ಶುರುವಾಗುವ ಎರಡು ದಿನ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಧೋನಿ, “ಬಹು ನಾಯಕತ್ವ (Split Captaincy) ಟೀಮ್ ಇಂಡಿಯಾಗೆ ಹೊಂದಿಕೆ ಆಗುವುದಿಲ್ಲ. ಹೀಗಾಗಿ, ತಾನು ನಾಯಕತ್ವದಿಂದ ಹಿಂದಕ್ಕೆ ಸರಿಯಲು ಸರಿಯಾದ ಸಂದರ್ಭ ಇದು. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಬಹಳ ಯಶಸ್ಸು ಸಾಧಿಸುತ್ತದೆ” ಎಂದು ಹೇಳಿದ್ದರು.

  ಎರಡು ವರ್ಷದ ಹಿಂದೆ ಧೋನಿ ಟೆಸ್ಟ್ ನಾಯಕತ್ವ ತ್ಯಜಿಸಿದ್ದರು. ವಿರಾಟ್ ಕೊಹ್ಲಿ ಆಗ ಟೆಸ್ಟ್ ತಂಡದ ನಾಯಕರಾಗಿದ್ದರೆ, ಎಂಎಸ್ ಧೋನಿ ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದರು. ಈ ಮೂರೂ ತಂಡದಲ್ಲಿ ಹೆಚ್ಚೂಕಡಿಮೆ ಅದೇ ಆಟಗಾರರು ಇರುತ್ತಿದ್ದರಿಂದ ಇಬ್ಬಿಬ್ಬರು ನಾಯಕತ್ವದ ಅಡಿಯಲ್ಲಿ ಆಡುವ ಪ್ರಮೇಯ ಆಟಗಾರರದ್ದಾಗಿತ್ತು. ಈ ಗೊಂದಲವನ್ನು ನಿವಾರಿಸಲು ಧೋನಿ ಟಿ20 ಮತ್ತು ಓಡಿಐ ತಂಡಗಳ ನಾಯಕತ್ವದಿಂದಲೂ ಹಿಂದಕ್ಕೆ ಸರಿಯಲು ತೀರ್ಮಾನ ಮಾಡಿದ್ದಿರಬಹುದು.

  ಇದನ್ನೂ ಓದಿ: Afghani English- ಐದು ನಿಮಿಷದಲ್ಲಿ ಇಂಗ್ಲೀಷ್ ಖತಂ- ಅಫ್ಘಾನಿಸ್ತಾನ್ ಕ್ಯಾಪ್ಟನ್ ವಿಡಿಯೋ ವೈರಲ್

  ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಇಂಗ್ಲೆಂಡ್ ಸರಣಿ ಇತ್ತು. ಚಾಂಪಿಯನ್ಸ್ ಟ್ರೋಫಿಗೆ ವಿರಾಟ್ ಕೊಹ್ಲಿ ನಾಯಕರಾಗಿ ಅಣಿಯಾಗಲು ಇಂಗ್ಲೆಂಡ್ ಸರಣಿ ಒಳ್ಳೆಯ ಅವಕಾಶ ಕೊಡುತ್ತದೆ ಎಂಬ ಕಾರಣಕ್ಕೆ ಅಂದು ಧೋನಿ ಆ ತೀರ್ಮಾನ ಕೈಗೊಂಡಿರುವ ಸಾಧ್ಯತೆ ಇದೆ.

  ಟಿ20 ತಂಡದ ನಾಯಕತ್ವಕ್ಕೆ ಕೊಹ್ಲಿ ರಾಜೀನಾಮೆ?

  ಧೋನಿ ಕ್ಯಾಪ್ಟನ್ಸಿ ತ್ಯಜಿಸಿ ಮೂರು ವರ್ಷಗಳ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾಗಿದ್ದಾರೆ. ವಿರಾಟ್ ಕೊಹ್ಲಿ ಅವರು ಈಗಲೂ ಮೂರು ಮಾದರಿಯ ಕ್ರಿಕೆಟ್​ನಲ್ಲಿ ಭಾರತ ತಂಡಗಳ ನಾಯಕರಾಗಿದ್ದಾರೆ. ಈಗ ಟಿ20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ತಾನು ಟಿ20 ತಂಡದ ನಾಯಕತ್ವದಿಂದ ಇಳಿಯುವುದಾಗಿ ಹೇಳಿದ್ಧಾರೆ.

  ಕಾಕತಾಳೀಯವೆಂದರೆ, ಕೊಹ್ಲಿ ಹೇಳಿದ್ದು ನಿಜವಾದರೆ ಎಂಎಸ್ ಧೋನಿ ಇದ್ದ ಸ್ಥಿತಿಗೆ ಕೊಹ್ಲಿ ಬಂದಂತಾಗುತ್ತದೆ. ವಿರಾಟ್ ಕೊಹ್ಲಿ ತಾನು ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ತಂಡಗಳ ನಾಯಕತ್ವ ಬಿಡುವುದಾಗಿ ಹೇಳಿಲ್ಲ. ಟೀಮ್ ಇಂಡಿಯಾದಲ್ಲಿ ಮತ್ತೆ ಸ್ಪ್ಲಿಟ್ ಕ್ಯಾಪ್ಟನ್ಸಿ ಆಗಬಹುದು.

  ಎಂಎಸ್ ಧೋನಿ ಕ್ಯಾಪ್ಟನ್ಸಿ ದಾಖಲೆ:

  ಅದೇನೇ ಇದ್ದರೂ ಎಂಎಸ್ ಧೋನಿ ಕ್ಯಾಪ್ಟನ್ ಆಗಿ ಸಾಧಿಸಿದ ಮೈಲಿಗಲ್ಲುಗಳು ಅನೇಕ. ಮೂರು ಐಸಿಸಿ ಟೂರ್ನಿಗಳನ್ನ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ಗೆದ್ದಿತ್ತು. ಅಂಥದ್ದೊಂದು ದಾಖಲೆ ಭಾರತದ ಯಾವ ನಾಯಕನಿಂದಲೂ ಸಾಧ್ಯವಾಗಲಿಲ್ಲ. 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್, 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ದಿಗ್ವಿಜಯ ಸಾಧಿಸಿದ್ದ ಟೀಮ್ ಇಂಡಿಯಾದ ನಾಯಕತ್ವ ಎಂಎಸ್ ಧೋನಿಯದ್ದಾಗಿತ್ತು.

  ಇದನ್ನೂ ಓದಿ: Rashid Khan- ಲಸಿತ್ ಮಾಲಿಂಗ ವಿಶ್ವದಾಖಲೆ ಮುರಿದ ಅಫ್ಘಾನ್ ಬೌಲರ್ ರಷೀದ್ ಖಾನ್

  ಕೊಹ್ಲಿ ನಾಯಕತ್ವಕ್ಕೆ ಇದೊಂದೇ ಕೊರತೆ:

  ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕರಾಗಿ ಅಪಾರ ಯಶಸ್ಸು ಸಾಧಿಸಿದರೂ ಅವರ ನಾಯಕತ್ವದಲ್ಲಿ ಭಾರತಕ್ಕೆ ಒಂದೂ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಈಗ ಟಿ20 ವಿಶ್ವಕಪ್​ನಲ್ಲಿ ಭಾರತ ಗೆದ್ದರೆ ಕೊಹ್ಲಿ ನಾಯಕತ್ವಕ್ಕೆ ಒಂದು ಮೆರಗು ಸಿಕ್ಕಂತಾಗುತ್ತದೆ.

  ವಿರಾಟ್ ಕೊಹ್ಲಿ ನಾಯಕರಾಗಿ ವಿಶ್ವಕಪ್ ಗೆಲ್ಲದಿದ್ದರೂ ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾ ಅನೇಕ ಸರಣಿ ಗೆಲುವುಗಳನ್ನ ಗೆದ್ದಿರುವುದು ಸುಳ್ಳಲ್ಲ.

  ಧೋನಿ ಈಗ ಆಟಗಾರನಾಗಿ ನಿವೃತ್ತರಾದರೂ ಟೀಮ್ ಇಂಡಿಯಾಗೆ ಮೆಂಟರ್ ಆಗಿ ಕಂಬ್ಯಾಕ್ ಮಾಡಿದ್ದಾರೆ. ಭಾರತ ಈ ವಿಶ್ವಕಪ್ ಗೆದ್ದರೆ ಧೋನಿ ಮತ್ತು ಕೊಹ್ಲಿ ಇಬ್ಬರಿಗೂ ಗೆಲುವು ಸಿಕ್ಕಂತಾಗುತ್ತದೆ. ಪಾಕಿಸ್ತಾನ ವಿರುದ್ಧ ಸೋತಿರುವ ಟೀಮ್ ಇಂಡಿಯಾ ಇದೀಗ ನಾಳೆಯ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
  Published by:Vijayasarthy SN
  First published: