ಜಡೇಜಾಗೆ ಯಾಕಿಷ್ಟು ಮಹತ್ವ?: ಜಡ್ಡು ಈ ವಿಚಾರದಲ್ಲಿ ವಿಶ್ವದಲ್ಲೇ ದಿ ಬೆಸ್ಟ್ ಎಂದ ಮಾಜಿ ಫೀಲ್ಡಿಂಗ್ ಕೋಚ್

Importance of Ravindra Jadeja: ರವೀಂದ್ರ ಜಡೇಜಾ ಪೂರ್ಣಪ್ರಮಾಣದ ಬೌಲರ್, ಬ್ಯಾಟರ್ ಮತ್ತು ಫೀಲ್ಡರ್ ಆಗಿದ್ದು, ಪಕ್ಕಾ ಆಲ್​ರೌಂಡರ್ ಎನಿಸಿದ್ದಾರೆ. ಈ ಕಾರಣಕ್ಕೆ ಅವರಿಗೆ ಟೀಮ್ ಇಂಡಿಯಾದಲ್ಲಿ ಹೆಚ್ಚು ಪ್ರಾಶಸ್ತ್ಯ ಇದೆ.

ರವೀಂದ್ರ ಜಡೇಜಾ

ರವೀಂದ್ರ ಜಡೇಜಾ

  • Share this:
ನವದೆಹಲಿ: ರವೀಂದ್ರ ಜಡೇಜಾ ಮೈದಾನದಲ್ಲಿ ಇದ್ದರೆ ಅದೊಂಥರ ಜೀವಂತಿಕೆ. ಅವರೊಬ್ಬ ಚೈತ್ಯನ್ಯದ ಚಿಲುಮೆ. ಸೆಕೆಂಡ್​ಗಳನ್ನ ಎಣಿಸುವಷ್ಟರಲ್ಲಿ ಸರಸರನೆ ಓವರ್ ಬೌಲಿಂಗ್ ಮಾಡಿ ಹೋಗಿಬಿಡುತ್ತಾರೆ. ಫೀಲ್ಡಿಂಗ್ ಮಾಡುವಾಗ ಪಕ್ಕಾ ಪಾದರಸ. ಯಾವ ಫೀಲ್ಡಿಂಗ್ ಪೊಸಿಶನ್​ಗೂ ಹೇಳಿಮಾಡಿಸಿದ ಆಟಗಾರ. ಔಟ್ ಫೀಲ್ಡ್​ನಲ್ಲಿ ಇವರ ಬಳಿ ಬಾಲ್ ಬಂದರೆ ಬೌಂಡರೆ ಗೆರೆ ದಾಟಿ ಹೋಗೋದು ತೀರಾ ಅಪರೂಪ. ಅಷ್ಟರಮಟ್ಟಿಗೆ ಇವರದ್ದು ಸುರಕ್ಷಿತ ಕೈ. ಬ್ಯಾಟಿಂಗ್​ನಲ್ಲಿ ಇವರು ಅಬ್ಬರಿಸತೊಡಗಿದರೆ ನೋಡಲು ಬಲು ಚೆಂದ. ಅಂತೆಯೇ, ಟಿ20, ಓಡಿಐ ಮತ್ತು ಟೆಸ್ಟ್ ಈ ಮೂರು ಮಾದರಿ ಕ್ರಿಕೆಟ್​ನಲ್ಲೂ ರವೀಂದ್ರ ಜಡೇಜಾ ಇರುತ್ತಾರೆ.

ಭಾರತದಲ್ಲಿ ಪಕ್ಕಾ ಆಲ್​ರೌಂಡರ್ಸ್ ಬಹಳ ಕಡಿಮೆ. ಇದೇ ಕಾರಣಕ್ಕೆ ಹಾರ್ದಿಕ್ ಪಾಂಡ್ಯ ಮತ್ತು ಆರ್ ಅಶ್ವಿನ್ ಅವರಿಗೆ ಮಹತ್ವ ಹೆಚ್ಚು. ಆರ್ ಅಶ್ವಿನ್ ಟೆಸ್ಟ್ ಕ್ರಿಕೆಟ್​ನಲ್ಲಿ ಮಾತ್ರ ಉತ್ತಮ ಆಲ್​ರೌಂಡರ್ ಆಗಿ ರೂಪುಗೊಂಡಿದ್ಧಾರೆ. ಅಕ್ಷರ್ ಪಟೇಲ್, ಈಗ ವೆಂಕಟೇಶ್ ಅಯ್ಯರ್ ಅವರು ಆಲ್​ರೌಂಡರ್ ಎನಿಸಿರುವ ಆಟಗಾರರು. ಆದರೆ, ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಇಬ್ಬರು ಸದ್ಯ ಜೆನ್ಯೂನ್ ಆಲ್​ರೌಂಡರ್ ಎನಿಸಿದ್ದಾರೆ.

ಜಡೇಜಾ ಒಳ್ಳೆಯ ಬೌಲರ್ ಜೊತೆಗೆ ಪಕ್ಕಾ ಬ್ಯಾಟುಗಾರನೂ ಹೌದು. ಹೀಗಾಗಿ, ಆರ್ ಅಶ್ವಿನ್ ಅವರಿಗಿಂತ ಜಡೇಜಾ ಅವರೇ ಹೆಚ್ಚು ಬಾರಿ ಟೀಮ್ ಇಂಡಿಯಾಗೆ ಆಯ್ಕೆ ಆಗುತ್ತಾರೆ. ಹೀಗೆಂದು ಮಾಜಿ ಬೌಲರ್ ಪ್ರಗ್ಯಾನ್ ಓಝಾ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Cricket: RCB ಪರ ಆಡ್ತಾರಾ ಡೇವಿಡ್ ವಾರ್ನರ್..? ಸುಳಿವು ನೀಡಿದ ಕೊಹ್ಲಿ-ವಾರ್ನರ್ ಚರ್ಚೆ

ಎಲ್ಲರಿಗಿಂತ ಜಡೇಜಾ ಒಂದು ಹೆಜ್ಜೆ ಮುಂದು ಎಂದ ಮಾಜಿ ಫೀಲ್ಡಿಂಗ್ ಕೋಚ್:

ರವೀಂದ್ರ ಜಡೇಜಾ ಅವರ ಪಾದರಸದಂಥ ಫೀಲ್ಡಿಂಗ್ ಸಾಮರ್ಥ್ಯವನ್ನ ಮಾಜಿ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಕೊಂಡಾಡಿದ್ದಾರೆ. ಜಡೇಜಾ ವಿಶ್ವದ ಅತ್ಯುತ್ತಮ ಫೀಲ್ಡರ್ ಎಂದು ಶ್ರೀಧರ್ ಬಣ್ಣಿಸಿದ್ಧಾರೆ.

“ಜಡೇಜಾ ಅವರು ಫೀಲ್ಡಿಂಗ್ ಮಾಡುವುದನ್ನ ನೋಡುವುದೇ ಕಣ್ಣಿಗೆ ಹಬ್ಬವಿದ್ದಂತೆ. ಅವರು ಬೌಂಡರಿ ಬಳಿ ಚೆಂಡು ಹಿಡಿಯಲು ಓಡುವಾಗಲೂ ಅವರನ್ನ ನೋಡಿದರೆ ಖುಷಿ ಎನಿಸುತ್ತದೆ. ವಿಶ್ವ ಕ್ರಿಕೆಟ್​ನಲ್ಲಿ ಉಳಿದೆಲ್ಲರಿಗಿಂತ ಒಂದು ಒಂದು ಹಂತ ಮೇಲೆಯೇ ಇದ್ದಾರೆ” ಎಂದಿದ್ದಾರೆ ಶ್ರೀಧರ್.

ಅಜರ್​ಗೆ ಜಡೇಜಾರನ್ನ ಹೋಲಿಸಿದ ಶ್ರೀಧರ್:

ಭಾರತ ತಂಡದಲ್ಲಿರುವ ಅತಿ ಕ್ಷಿಪ್ರ ಫೀಲ್ಡರ್ ಹಾಗೂ ಅತ್ಯುತ್ತಮ ಫೀಲ್ಡರ್​ಗಳ ಪೈಕಿ ಜಡೇಜಾ ಅಗ್ರಮಾನ್ಯರು ಎಂದು ಅಭಿಪ್ರಾಯಪಟ್ಟ ಆರ್ ಶ್ರೀಧರ್, ಮಾಜಿ ಟೀಮ್ ಇಂಡಿಯಾ ಕ್ಯಾಪ್ಟನ್ ಮೊಹಮ್ಮದ್ ಅಜರುದ್ದೀನ್ ಅವರನ್ನ ಸ್ಮರಿಸಿದರು.

“ವಿವಿಧ ಕಾಲಘಟ್ಟಗಳಲ್ಲಿನ ಆಟಗಾರರನ್ನ ಹೋಲಿಸುವುದು ಕಷ್ಟ. ಎಂಬತ್ತರ ದಶಕದಲ್ಲಿ ಅಜ್ಜು ಭಾಯ್ (ಮೊಹಮ್ಮದ್ ಅಜರುದ್ದೀನ್) ಟೀಮ್ ಇಂಡಿಯಾಗೆ ಬಂದಾಗ ಅಲ್ಲಿ ತಂಡದಲ್ಲಿ ಫಿಟ್ನೆಸ್ ಪದದ ಸುಳಿವೇ ಇರಲಿಲ್ಲ…

ಇದನ್ನೂ ಓದಿ: ಮಯಂಕ್ ಮರಳಿ ಫಾರ್ಮ್ ಕಂಡುಕೊಳ್ಳುವಂತೆ ಮಾಡಿತ್ತು ದ್ರಾವಿಡ್ ಇತ್ತ ಈ ಸಲಹೆ

”ತೊಂಬತ್ತರ ದಶಕದಲ್ಲಿ ಅಜ್ಜು ಭಾಯ್ ತಮ್ಮ ದೈಹಿಕ ಕ್ಷಮತೆ ಹಾಗೂ ಉತ್ತಮ ಫೀಲ್ಡಿಂಗ್ ಕಾರಣಕ್ಕೆ ವಿಶೇಷ ಎನಿಸಿದ್ದರು… ಜಡೇಜಾರಂತೆ 80ರ ದಶಕದಲ್ಲಿ ಅಜರುದ್ದೀನ್ ಅವರ ಫೀಲ್ಡಿಂಗ್ ನೋಡುವುದೇ ಸೊಗಸಾಗಿರುತ್ತಿತ್ತು. 1985ರಿಂದ 1990ರವರೆಗಿನ ಕಾಲಘಟ್ಟದಲ್ಲಿ ಅಜರುದ್ದೀನ್ ಮಾಡುತ್ತಿದ್ದ ಫೀಲ್ಡಿಂಗ್ ಈಗಲೂ ಅದ್ಭುತ ಎನಿಸುತ್ತದೆ” ಎಂದು ಆರ್ ಶ್ರೀಧರ್ ಹೇಳಿದರು.

ಆರ್ ಶ್ರೀಧರ್ ಅವರು 2014ರಿಂದ 2021ರವರೆಗೆ ಭಾರತ ತಂಡದ ಫೀಲ್ಡಿಂಗ್ ಕೋಚ್ ಆಗಿದ್ದರು. ರಾಹುಲ್ ದ್ರಾವಿಡ್ ಅವರು ಹೆಡ್ ಕೋಚ್ ಆಗಿ ಬಂದ ವೇಳೆಯೂ ಆರ್ ಶ್ರೀಧರ್ ಅವರು ಫೀಲ್ಡಿಂಗ್ ಕೋಚ್ ಆಗಿ ಮುಂದುವರಿಯಲು ಪ್ರಯತ್ನ ಮಾಡಿದರಾದರೂ ಸಾಧ್ಯವಾಗಲಿಲ್ಲ.

ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳ್ತಾರಾ ಜಡ್ಡು?

ಇದೇ ವೇಳೆ, ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್​ನಿಂದ ನಿವೃತ್ತರಾಗಬಹುದು ಎಂಬಂತಹ ಸುದ್ದಿಗಳು ಹರಿದಾಡುತ್ತಿವೆ. ಏಕದಿನ ಮತ್ತು ಟಿ20 ಕ್ರಿಕೆಟ್​ಗೆ ಹೆಚ್ಚು ಗಮನ ಕೊಡುವ ದೃಷ್ಟಿಯಿಂದ ಟೆಸ್ಟ್ ಕ್ರಿಕೆಟ್​ಗೆ ಅವರು ವಿದಾಯ ಹೇಳಬಹುದು ಎನ್ನುತ್ತಿವೆ ಈ ವರದಿಗಳು.
Published by:Vijayasarthy SN
First published: