Ravi Shastri- ‘ಅತಿಥಿ ಹೆಚ್ಚು ದಿನ ಇರಬಾರದು’- ರಾಜೀನಾಮೆ ಸುಳಿವು ನೀಡಿದರಾ ಕೋಚ್ ರವಿಶಾಸ್ತ್ರಿ?

Stepping down as Coach- ಈ ತಂಡದಿಂದ ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚೇ ನನಗೆ ಸಿಕ್ಕಿದೆ. ನನಗಿಷ್ಟೇ ಸಾಕು. ಮನೆಗೆ ಬಂದ ಅತಿಥಿ ಅನಗತ್ಯವಾಗಿ ಹೆಚ್ಚು ದಿನ ಇರಬಾರದು ಎಂಬುದು ನನ್ನ ಭಾವನೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ. ಈ ಮೂಲಕ ಕೋಚ್ ಸ್ಥಾನಕ್ಕೆ ರಾಜೀನಾಮೆ ಕೊಡುವ ಸುಳಿವು ನೀಡಿದ್ಧಾರೆ.

ರವಿಶಾಸ್ತ್ರಿ

ರವಿಶಾಸ್ತ್ರಿ

 • Cricketnext
 • Last Updated :
 • Share this:
  ಲಂಡನ್, ಸೆ. 18: ಭಾರತೀಯ ಕ್ರಿಕೆಟ್​ನಲ್ಲಿ ಏನೋ ವ್ಯತ್ಯಾಸಗಳಾಗುತ್ತಿರುವುದು ಇತ್ತೀಚೆಗೆ ಮಾಧ್ಯಮಗಳಲ್ಲಿ ಗಾಸಿಪ್​ಗಳಾಗಿ ವರದಿಯಾಗುತ್ತಿತ್ತು. ಈಗ ಬಹುತೇಕ ಗಾಸಿಪ್​ಗಳು ನಿಜವಾಗುತ್ತಿರುವಂತಿದೆ. ಟೀಮ್ ಇಂಡಿಯಾದಲ್ಲಿ ಸ್ಪ್ರಿಟ್ ಕ್ಯಾಪ್ಟನ್ಸಿ (Split Captaincy) ಇರುತ್ತದೆ. ವಿರಾಟ್ ಕೊಹ್ಲಿ (Virat Kohli) ಕೆಲ ಮಾದರಿಯ ಕ್ರಿಕೆಟ್​ಗೆ ಮಾತ್ರ ಕ್ಯಾಪ್ಟನ್ ಆಗಿರುತ್ತಾರೆ ಎನ್ನಲಾಗುತ್ತಿತ್ತು. ಅದರಂತೆ ಮೊನ್ನೆ ವಿರಾಟ್ ಕೊಹ್ಲಿ ಅವರು ಟಿ20 ಕ್ರಿಕೆಟ್ ತಂಡದ ನಾಯಕತ್ವದಿಂದ ಹಿಂದಕ್ಕೆ ಸರಿಯುತ್ತಿರುವ ವಿಚಾರವನ್ನು ನಿನ್ನೆ ಪ್ರಕಟಿಸಿದ್ದರು. ಇನ್ನು, ರವಿಶಾಸ್ತ್ರಿ ಅವರು ಕೋಚ್ ಸ್ಥಾನದಿಂದ ಕೆಳಗಿಳಿಯುತ್ತಾರೆ (Ravi Shastri stepping down as Team India Head Coach) ಎಂಬ ಸುದ್ದಿ ಹಲವು ದಿನಗಳಿಂದ ದಟ್ಟವಾಗಿ ಹಬ್ಬುತ್ತಿದೆ. ಈ ಸುದ್ದಿಯೂ ನಿಜವಾಗಬಹುದು ಎಂದನಿಸುವ ಬೆಳವಣಿಗೆಗಳಾಗುತ್ತಿವೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಬಳಿಕ ರವಿ ಶಾಸ್ತ್ರಿ ಅವರು ಕೋಚ್ ಸ್ಥಾನಕ್ಕೆ ವಿದಾಯ ಹೇಳುವುದು ಬಹುತೇಕ ಖಚಿತವೆನ್ನಲಾಗುತ್ತಿದೆ. ಖುದ್ದು ರವಿಶಾಸ್ತ್ರಿ ಅವರೇ ಇದರ ಸುಳಿವು ನೀಡಿದ್ದಾರೆ. “ಅತಿಥಿಯಾಗಿ ಬಂದವರು ಹೆಚ್ಚು ಕಾಲ ಇರಬಾರದು ಎಂಬುದು ನನ್ನ ಅನಿಸಿಕೆ” ಎಂದು ರವಿಶಾಸ್ತ್ರಿ ನೀಡಿರುವ ಹೇಳಿಕೆ ಬಹಳ ಕುತೂಹಲ ಮೂಡಿಸಿದೆ. ಇದು ಅವರು ರಾಜೀನಾಮೆ ಕೊಡುವ ಉದ್ದೇಶ ಹೊಂದಿರುವುದರ ಸುಳಿವು ನೀಡುತ್ತಿದೆ.

  ಮಾಧ್ಯಮಗಳೊಂದಿಗೆ ಸಂವಾದದಲ್ಲಿ ಇದ್ದ ವೇಳೆ ರವಿಶಾಸ್ತ್ರಿ ಅವರು ಅತಿಥಿ ವಿಚಾರವನ್ನು ಪ್ರಸ್ತಾಪಿಸಿದರು. ಈ ಬಾರಿ ಟಿ20 ವಿಶ್ವಕಪ್ ನಿಮಗೆ ಟೀಮ್ ಇಂಡಿಯಾ ಕೋಚ್ ಆಗಿ ಕೊನೆಯ ಜವಾಬ್ದಾರಿ ಆಗುತ್ತದೆಯೇ ಎಂದು ಮಾಧ್ಯಮದವರು ನೇರವಾಗಿ ಕೇಳಿದ ಪ್ರಶ್ನೆಗೆ ರವಿಶಾಸ್ತ್ರಿ ಹೌದು ಎಂದು ಪರೋಕ್ಷವಾಗಿ ಹೇಳಿದ್ದಾರೆ. “ನನಗೆ ಗುರಿಯನ್ನೆಲ್ಲಾ ಸಾಧಿಸಿದ್ದೇನೆ. ಇನ್ನೇನು ಬೇಕಿಲ್ಲ. ಅಷ್ಟೇ ಅಲ್ಲ, ಅತಿಥಿಯಾಗಿ ಬಂದವರು ಅನಗತ್ಯವಾಗಿ ಹೆಚ್ಚು ದಿನ ಉಳಿದುಕೊಳ್ಳಬಾರದು” ಎಂದು ಮಾರ್ಮಿಕವಾಗಿ ತಿಳಿಸಿದ್ದಾರೆ.

  ಪರಮೋಚ್ಚ ಸಾಧನೆ:

  “ಟೆಸ್ಟ್ ಕ್ರಿಕೆಟ್​ನಲ್ಲಿ ಐದು ವರ್ಷ ನಂಬರ್ ಒನ್ ತಂಡವಾಗಿ ಇರುವುದು; ಆಸ್ಟ್ರೇಲಿಯಾದಲ್ಲಿ ಎರಡು ಬಾರಿ ಗೆದ್ದಿರುವುದು, ಇಂಗ್ಲೆಂಡ್​ನಲ್ಲಿ ಗೆದ್ದಿರುವುದು. ಕೆಲ ತಿಂಗಳ ಹಿಂದೆ ನಾನು ಮೈಕೇಲ್ ಅಥರ್ಟನ್ (ಇಂಗ್ಲೆಂಡ್ ಮಾಜಿ ಕ್ರಿಕೆಟಿಗ) ಜೊತೆ ಮಾತನಾಡುತ್ತಾ ಹೇಳಿದ್ದೆ: ‘ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವುದು, ಇಂಗ್ಲೆಂಡ್​ನಲ್ಲಿ ಗೆಲುವು ಸಾಧಿಸುವುದು ನನ್ನ ಪ್ರಕಾರ ಪರಮೋಚ್ಚವಾದುದು’ ಎಂದು ಹೇಳಿದೆ. ನಾವು ಇಂಗ್ಲೆಂಡ್​ನಲ್ಲಿ 2-1ರಿಂದ ಮುಂದಿದ್ದೇವೆ. ಲಾರ್ಡ್ಸ್ ಮತ್ತು ಓವಲ್​ನಲ್ಲಿ ನಾವು ಆಡಿದ ರೀತಿ ಬಹಳ ವಿಶೇಷವಾಗಿತ್ತು” ಎಂದು ದಿ ಗಾರ್ಡಿಯನ್ ಪತ್ರಿಕೆಗೆ ರವಿಶಾಸ್ತ್ರಿ ಹೇಳಿದ್ಧಾರೆ.

  ನಿರೀಕ್ಷಿಸಿದ್ದಕ್ಕಿಂತ ಹೆಚ್ಚೇ ಸಿಕ್ಕಿದೆ:

  “ಟೆಸ್ಟ್ ಕ್ರಿಕೆಟ್​ನಲ್ಲಿ ನಾವು ಎಲ್ಲಾ ತಂಡಗಳ ವಿರುದ್ಧ ಅವುಗಳ ತವರಿನಲ್ಲೇ ಸೋಲಿಸಿದ್ದೇವೆ. ನಾವು ಟಿ20 ವಿಶ್ವಕಪ್ ಗೆದ್ದರೆ ಇನ್ನೂ ವಿಶೇಷ ಇರುತ್ತದೆ. ಇದಕ್ಕಿಂತ ಬೇರಿನ್ನೇನೂ ಬೇಕಿಲ್ಲ. ನಿಮ್ಮ ಅತಿಥಿಗೆ ಇಷ್ಟಕ್ಕೆ ವಿರುದ್ಧವಾಗಿ ಹೆಚ್ಚು ದಿನ ಯಾವತ್ತೂ ಇರಬಾರದು ಎಂಬ ನಂಬಿಕೆ ನನ್ನದು. ನನಗೆ ಈ ತಂಡದಿಂದ ಏನೇನು ನಿರೀಕ್ಷಿಸಿದ್ದೆನೋ ಅದನ್ನ ಮೀರಿದಷ್ಟು ನನಗೆ ಸಿಕ್ಕಿದೆ. ಕೋವಿಡ್ ಸಂದರ್ಭದಲ್ಲಿ ಆಸ್ಟ್ರೇಲಿಯಾದಲ್ಲಿ ಗೆಲ್ಲುವುದು, ಇಂಗ್ಲೆಂಡ್​ನಲ್ಲಿ ಟೆಸ್ಟ್ ಸರಣಿಯಲ್ಲಿ ಮೇಲುಗೈ ಸಾಧಿಸುವುದು ಇತ್ಯಾದಿ ಸಾಧನೆಗಳು ನನ್ನ ನಾಲ್ಕು ದಶಕಗಳ ಕ್ರಿಕೆಟ್ ವೃತ್ತಿ ಜೀವನದಲ್ಲಿ ಬಹಳ ತೃಪ್ತಿದಾಯಕ ಕ್ಷಣವಾಗಿದೆ” ಎಂದು ರವಿಶಾಸ್ತ್ರಿ ಅವರು ಅಭಿಪ್ರಾಯ ಹಂಚಿಕೊಂಡಿದ್ಧಾರೆ.

  ಇದನ್ನೂ ಓದಿ: Chetana kohli: ಯಾರಿದು ಚೇತನಾ ಕೊಹ್ಲಿ? ಕೊಹ್ಲಿ ಫ್ಯಾಮಿಲಿಗೆ ಏನು ಸಂಬಂಧ? ಇಲ್ಲಿದೆ ಮಾಹಿತಿ

  ಪುಸ್ತಕ ಬಿಡುಗಡೆ ಕಾರ್ಯಕ್ರಮದ ಎಡವಟ್ಟು:

  ಇಂಗ್ಲೆಂಡ್ ಪ್ರವಾಸದ ವೇಳೆ ರವಿಶಾಸ್ತ್ರಿ ಹಾಗೂ ಇತರ ಕೋಚ್ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಬಂದಿತ್ತು. ಅದಕ್ಕೆ ಮುನ್ನ ಅವರು ತಂಡದ ಹೋಟೆಲ್ ರೂಮ್ ಬಳಿ ತಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅಲ್ಲಿಯೇ ಅವರಿಗೆ ಕೋವಿಡ್ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ನಿಯಮಗಳನ್ನ ಮೀರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಮೊದಲಿಗೆ ರವಿಶಾಸ್ತ್ರಿಗೆ ಕೋವಿಡ್ ದೃಢಪಟ್ಟಿತು. ಬಳಿಕ ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್​ಗಳಿಗೆ ಸೋಂಕು ಇರುವುದು ತಿಳಿದುಬಂತು. ಆ ನಂತರ ಸಹಾಯಕ ಫಿಸಿಯೋ ಯೋಗೇಶ್ ಪಾರ್ಮರ್ ಅವರಿಗೂ ಕೋವಿಡ್ ಪಾಸಿಟಿವ್ ಕನ್​ಫರ್ಮ್ ಆದಾಗ ಟೀಮ್ ಇಂಡಿಯಾ ಆಟಗಾರರಲ್ಲಿ ಆತಂಕ ಸೃಷ್ಟಿಯಾಯಿತೆನ್ನಲಾಗಿದೆ. ಹೀಗಾಗಿ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಐದನೇ ಹಾಗೂ ಕೊನೆಯ ಪಂದ್ಯದಲ್ಲಿ ಭಾರತದ ತಂಡ ಕಣಕ್ಕಿಳಿಯಲೇ ಇಲ್ಲ. ಅದು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಆಗಿದೆ. ಪಂದ್ಯ ಬಹುತೇಕ ರದ್ದುಗೊಂಡಂತೆಯೇ ಆಗಿದೆ. ಭಾರತದ ಆಟಗಾರರ ಈ ನಿರ್ಧಾರಕ್ಕೆ ಇಂಗ್ಲೆಂಡ್ ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಫುಲ್ ಡೋಸ್ ಲಸಿಕೆಯಿಂದ ತಪ್ಪಿತು ಅಪಾಯ:

  ಅದೃಷ್ಟಕ್ಕೆ ಕೋವಿಡ್ ಪಾಸಿಟಿವ್ ದೃಢಪಟ್ಟ ರವಿಶಾಸ್ತ್ರಿ ಹಾಗೂ ಇತರ ಮೂವರಿಗೆ ಸೋಂಕಿನ ತೀವ್ರತೆ ಇರಲಿಲ್ಲ. ಎಲ್ಲರೂ ಫುಲ್ ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡಿದ್ದರಿಂದ ಯಾರೂ ಗಂಭೀರ ಹಂತಕ್ಕೆ ಹೋಗಲಿಲ್ಲವೆನ್ನಲಾಗಿದೆ. ರವಿಶಾಸ್ತ್ರಿ ಕೂಡ ಅದನ್ನ ಪುನರುಚ್ಚರಿಸಿದ್ದಾರೆ. “ಫಿಸಿಯೋಗೆ ದಿಢೀರನೇ ಕೋವಿಡ್ ಪಾಸಿಟಿವ್ ಬಂತು. ಅವರು ಐದರಿಂದ ಆರು ಆಟಗಾರರಿಗೆ ದೈಹಿಕವಾಗಿ ನಿಂತು ತರಬೇತಿ ನೀಡಿದ್ದರು. ಅಲ್ಲಿಂದ ಪ್ರಕರಣ ಗಂಭೀರವಾಯಿತು. ಪಂದ್ಯದ ಮಧ್ಯೆ ಯಾರಿಗಾದರೂ ಕೋವಿಡ್ ಪಾಸಿಟಿವ್ ಬರುವ ಅಪಾಯ ಎದುರಾಗಿತ್ತು. ಹಲವು ಆಟಗಾರರ ಜೊತೆ ಕುಟುಂಬ ಸದಸ್ಯರೂ ಇದ್ದರು. ಪುಟ್ಟ ಮಕ್ಕಳೂ ಇದ್ದವು. ಯಾವ ಆಟಗಾರನ ಮನಸಲ್ಲಿ ಏನು ಆತಂಕ ಇತ್ತೋ ಗೊತ್ತಿಲ್ಲ” ಎಂದು ರವಿಶಾಸ್ತ್ರಿ ಹೇಳಿದ್ದಾರೆ.
  Published by:Vijayasarthy SN
  First published: