ಐಪಿಎಲ್ ಇತಿಹಾಸದಲ್ಲಿ ಕಪ್ ಗೆಲ್ಲದ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಒಂದು. ಪ್ರತಿ ಬಾರಿ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಕಾಣಿಸಿಕೊಂಡರೂ ಟ್ರೋಫಿ ಎಂಬುದು ಆರ್ಸಿಬಿಗೆ ಮರೀಚಿಕೆಯಾಗಿ ಉಳಿದಿದೆ. ಅತಿರಥ ಮಹಾರಥರಂತಹ ಆಟಗಾರರೇ ಆರ್ಸಿಬಿ ತಂಡವನ್ನು ಮುನ್ನಡೆಸಿದರೂ ಕಪ್ ಗೆದ್ದು ಕೊಡುವಲ್ಲಿ ಯಶಸ್ವಿಯಾಗಿರಲಿಲ್ಲ. ಇದಾಗ್ಯೂ ಮೂರು ಬಾರಿ ಫೈನಲ್ ಪ್ರವೇಶಿಸಿದರೂ ಅಂತಿಮ ಹಂತದಲ್ಲಿ ಎಡವಿ ಚೊಚ್ಚಲ ಬಾರಿ ಚಾಂಪಿಯನ್ ಆಗುವ ಅವಕಾಶವನ್ನು ಕೈ ತಪ್ಪಿಸಿಕೊಂಡಿತ್ತು. ಇದೀಗ ಕೊಹ್ಲಿ ಪಡೆ 14ನೇ ಸೀಸನ್ನಲ್ಲಿ ಚೊಚ್ಚಲ ಬಾರಿ ಪ್ರಶಸ್ತಿಗೆ ಮುತ್ತಿಕ್ಕುವ ವಿಶ್ವಾಸದಲ್ಲಿದೆ. ಇದು ಸಾಧ್ಯವಾದರೆ ಆರ್ಸಿಬಿ ಐದನೇ ನಾಯಕನ ಮೂಲಕ ಕಪ್ ಗೆದ್ದ ತಂಡ ಎಂದೆನಿಸಿಕೊಳ್ಳಲಿದೆ. ಹೌದು, ಇದುವರೆಗೆ ಆರ್ಸಿಬಿ ತಂಡವನ್ನು ಐವರು ಮುನ್ನಡೆಸಿದ್ದಾರೆ. ಅವರಲ್ಲಿ ಯಾರು ಬೆಸ್ಟ್ ನಾಯಕನ ಎಂದು ನೋಡುವುದಾದರೆ...
ರಾಹುಲ್ ದ್ರಾವಿಡ್: ಚೊಚ್ಚಲ ಸೀಸನ್ ಐಪಿಎಲ್ನಲ್ಲಿ ಆರ್ಸಿಬಿ ತಂಡವನ್ನು ರಾಹುಲ್ ದ್ರಾವಿಡ್ ಮುನ್ನಡೆಸಿದ್ದರು. 2008ರಲ್ಲಿ 14 ಪಂದ್ಯಗಳಲ್ಲಿ ಆರ್ಸಿಬಿಯನ್ನು ಮುನ್ನಡೆಸಿದ ದ್ರಾವಿಡ್ ಕೇವಲ 4 ಗೆಲುವು ತಂದುಕೊಡುವಲ್ಲಿ ಮಾತ್ರ ಯಶಸ್ವಿಯಾಗಿದ್ದರು.
ಕೆವಿನ್ ಪೀಟರ್ಸನ್: ನಾಯಕನಾಗಿ ವಿಫಲರಾಗಿದ್ದ ರಾಹುಲ್ ದ್ರಾವಿಡ್ ಅವರನ್ನು 2009 ರಲ್ಲಿ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಅಲ್ಲದೆ ತಂಡದ ಸಾರಥಿಯಾಗಿ ಇಂಗ್ಲೆಂಡ್ ಆಟಗಾರ ಕೆವಿನ್ ಪೀಟರ್ಸನ್ ಅವರನ್ನು ಆಯ್ಕೆ ಮಾಡಲಾಗಿತ್ತು. 6 ಪಂದ್ಯಗಳಲ್ಲಿ ಆರ್ಸಿಬಿ ತಂಡವನ್ನು ಮುನ್ನಡೆಸಿದ್ದ ಪೀಟರ್ಸನ್ ಕೇವಲ 2 ಜಯ ಮಾತ್ರ ಸಾಧಿಸಿದ್ದರು. ಆ ಬಳಿಕ ಅಂತಾರಾಷ್ಟ್ರೀಯ ಪಂದ್ಯಗಳಿದ್ದರಿಂದ ಅವರು ಐಪಿಎಲ್ ತೊರೆದಿದ್ದರು. ಉಳಿದ ಪಂದ್ಯಗಳಲ್ಲಿ ಅನಿಲ್ ಕುಂಬ್ಳೆ ಆರ್ಸಿಬಿ ತಂಡವನ್ನು ಮುನ್ನಡೆಸಿ ಫೈನಲ್ ಪ್ರವೇಶಿಸಿತ್ತು. ಆದರೆ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ.
ಅನಿಲ್ ಕುಂಬ್ಳೆ: 2009 ರಲ್ಲಿ ಅನಿಲ್ ಕುಂಬ್ಳೆ ಅವರ ನಾಯಕತ್ವದಲ್ಲಿ ಆರ್ಸಿಬಿ ಭರ್ಜರಿ ಪ್ರದರ್ಶನ ನೀಡಿತ್ತು. ಹೀಗಾಗಿ 2010ರಲ್ಲೂ ಕುಂಬ್ಳೆ ಅವರನ್ನೇ ನಾಯಕನಾಗಿ ಮುಂದುವರೆಸಲಾಗಿತ್ತು. 2009-2010 ರ ನಡುವೆ ಆರ್ಸಿಬಿ ತಂಡವನ್ನು 35 ಪಂದ್ಯಗಳಲ್ಲಿ ಮುನ್ನಡೆಸಿದ್ದ ಕುಂಬ್ಳೆ 19 ಗೆಲುವು ಸಾಧಿಸಿದರೆ, 16 ಪಂದ್ಯಗಳಲ್ಲಿ ಸೋಲಿನ ರುಚಿ ನೋಡಿದ್ದರು.
ಡೇನಿಯಲ್ ವೆಟ್ಟೋರಿ: 2011 ರಲ್ಲಿ ಆರ್ಸಿಬಿಗೆ ಮತ್ತೆ ನೂತನ ನಾಯಕನ ಆಗಮನವಾಯಿತು. ನ್ಯೂಜಿಲೆಂಡ್ ಸ್ಪಿನ್ನರ್ ಡೇನಿಯಲ್ ವೆಟ್ಟೋರಿಗೆ ಹೊಸ ಜವಾಬ್ದಾರಿ ನೀಡಲಾಯಿತು. ಅಲ್ಲದೆ ಇದೇ ವರ್ಷ ಆರ್ಸಿಬಿ ಮತ್ತೊಮ್ಮೆ ಫೈನಲ್ ಪ್ರವೇಶಿಸಿತು. ಆದರೆ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. 2011-12 ರವರೆಗೆ ಆರ್ಸಿಬಿ ತಂಡವನ್ನು 28 ಪಂದ್ಯಗಳಲ್ಲಿ ಮುನ್ನಡೆಸಿದ ವೆಟ್ಟೋರಿ 15 ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.
ವಿರಾಟ್ ಕೊಹ್ಲಿ: 2013 ರಲ್ಲಿ ಯುವ ಕ್ರಿಕೆಟಿಗನಾಗಿದ್ದ ವಿರಾಟ್ ಕೊಹ್ಲಿಗೆ ಆರ್ಸಿಬಿ ನಾಯಕನ ಪಟ್ಟ ನೀಡಿತು. ಕೊಹ್ಲಿಯ ನಾಯಕತ್ವದಲ್ಲಿ ಆರಂಭದಲ್ಲಿ ಆರ್ಸಿಬಿ ತಂಡದಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬಂದಿರಲಿಲ್ಲ. ಇದಾಗ್ಯೂ ಕೊಹ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ್ದರು. ಹೀಗಾಗಿ ಅವರನ್ನೇ ನಾಯಕನಾಗಿ ಮುಂದುವರೆಸಲಾಗಿತ್ತು. ಅಲ್ಲದೆ ಎಬಿಡಿ-ಗೇಲ್ ಅವರಂತಹ ಆಟಗಾರರ ಆಗಮನದೊಂದಿಗೆ ಆರ್ಸಿಬಿ ತಂಡದ ಹೊಸ ಹವಾ ಶುರುವಾಗಿತ್ತು.
ಅದರಂತೆ 2016 ರಲ್ಲಿ ಆರ್ಸಿಬಿ ತಂಡವನ್ನು ಮೂರನೇ ಬಾರಿ ಫೈನಲ್ ಪ್ರವೇಶಿಸಿತು. ಇನ್ನೇನು ಕಪ್ ಗೆದ್ದೇ ಬಿಟ್ಟಿತು ಅನ್ನುವಷ್ಟರಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ದ ಆರ್ಸಿಬಿ ಅಂತಿಮ ಹಂತದಲ್ಲಿ ಎಡವಿತು. ಇದರೊಂದಿಗೆ ಆರ್ಸಿಬಿ ತಂಡದ ಕಪ್ ಗೆಲ್ಲುವ ಕನಸು ಕನಸಾಗಿಯೇ ಉಳಿಯಿತು. ಇದಾಗ್ಯೂ ಕಳೆದ 9 ವರ್ಷಗಳಿಂದ ಆರ್ಸಿಬಿ ತಂಡವನ್ನು ಕೊಹ್ಲಿ ಮುನ್ನಡೆಸುತ್ತಿದ್ದಾರೆ. ಇದುವರೆಗೆ ಕೊಹ್ಲಿ ಆರ್ಸಿಬಿ ತಂಡವನ್ನು 132 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಅದರಲ್ಲಿ 60 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ 65 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ.
ಅಂದಹಾಗೆ ಆರ್ಸಿಬಿ ತಂಡದ ಬೆಸ್ಟ್ ನಾಯಕನ್ಯಾರು ಎಂಬುದನ್ನು ನೋಡುವುದಾದರೆ ವಿನ್ನಿಂಗ್ ಪರ್ಸೆಂಟೇಜ್ನಲ್ಲಿ ಅನಿಲ್ ಕುಂಬ್ಳೆ 57.69 ಪರ್ಸೆಂಟೇಜ್ನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಹಾಗೆಯೇ 54.54 ಪರ್ಸಂಟೇಜ್ ಹೊಂದಿರುವ ಡೇನಿಯಲ್ ವಿಟ್ಟೋರಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಇದಾಗ್ಯೂ ನೂರಕ್ಕೂ ಹೆಚ್ಚು ಬಾರಿ ತಂಡವನ್ನು ಮುನ್ನಡೆಸಿರುವ ವಿರಾಟ್ ಕೊಹ್ಲಿ 48.04 ಪರ್ಸಂಟೇಜ್ ಹೊಂದಿದ್ದು, ಈ ಮೂಲಕ ಆರ್ಸಿಬಿ ತಂಡವನ್ನು ಅತೀ ಹೆಚ್ಚು ಪಂದ್ಯಗಳಲ್ಲಿ ಮುನ್ನಡೆಸಿ ಉತ್ತಮ ವಿನ್ನಿಂಗ್ ಪರ್ಸೆಂಟೇಜ್ ಹೊಂದಿರುವ ನಾಯಕ ಎನಿಸಿಕೊಂಡಿದ್ದಾರೆ.
(
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ