ರಾಜ್ಕೋಟ್ (ಮಾ.11): 2019-20ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಬೆಂಗಾಲ್ ಹಾಗೂ ಸೌರಾಷ್ಟ್ರ ನಡುವೆ ಫೈನಲ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದ ಮೊದಲ ದಿನದಾಟದ ವೇಳೆ ಅಂಪೈರ್ ಸಿ. ಶಂಶುದ್ದೀನ್ ತೀವ್ರವಾಗಿ ಗಾಯಗೊಂಡಿದ್ದು, ಪಂದ್ಯದಿಂದ ಹೊರಗುಳಿದಿದ್ದಾರೆ.
ಮೊದಲ ದಿನದಾಟದ ವೇಳೆ ಬೆಂಗಾಲ್ ತಂಡದ ಆಟಗಾರ ಫೀಲ್ಡಿಂಗ್ ವೇಳೆ ಎಸೆದ ಬಾಲ್ ಶಂಶುದ್ದೀನ್ ಅವರಿಗೆ ತಗುಲಿತ್ತು. ಇದರಿಂದ ಅವರ ಹೊಟ್ಟೆ ಊದಿಕೊಂಡಿತ್ತು. ತೀವ್ರ ನೋವಿನಿಂದಾಗಿ ಬಳಲುತ್ತಿರುವ ಅವರು ಎರಡನೇ ದಿನದಾಟಕ್ಕೆ ಅಲಭ್ಯರಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸೌರಾಷ್ಟ್ರ ಕ್ರಿಕೆಟ್ ಮಂಡಳಿ ಅಧಿಕಾರಿಗಳು, “ಶಂಶುದ್ದೀನ್ಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇವೆ. ಒಂದು ವಾರ ವಿಶ್ರಾಂತಿ ಪಡೆಯುವಂತೆ ಅವರು ಸೂಚಿಸಿದ್ದಾರೆ. ಹೀಗಾಗಿ ಅವರು ಫೈನಲ್ ಪಂದ್ಯಕ್ಕೆ ಅಲಭ್ಯವಾಗಿದ್ದಾರೆ,” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅರ್ಪಿತ್ ಭರ್ಜರಿ ಶತಕ, ಪೂಜಾರ ಅರ್ಧಶತಕ; ಬೃಹತ್ ಮೊತ್ತದತ್ತ ಸೌರಾಷ್ಟ್ರ!
ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಸೌರಾಷ್ಟ್ರ ತಂಡ ಬ್ಯಾಟಿಂಗ್ಗೆ ಇಳಿಯಿತು. ಓಪನರ್ಗಳಾದ ಹರ್ವಿಕ್ ದೇಸಾಯ್ ಹಾಗೂ ಅವಿ ಬರೂತ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್ಗೆ ಈ ಜೋಡಿ 82 ರನ್ಗಳ ಕಾಣಿಕೆ ನೀಡಿತು.
ಹರ್ವಿಕ್ 111 ಎಸೆತಗಳಲ್ಲಿ 38 ರನ್ ಗಳಿಸಿ ಔಟ್ ಆದರೆ, ಬರೂತ್ 142 ಎಸೆತಗಳಲ್ಲಿ 54 ರನ್ಗೆ ನಿರ್ಗಮಿಸಿದರು. ವಿಶ್ವರಾಜ್ ಜಡೇಜಾ ಬಿರುಸಿನ ಬ್ಯಾಟಿಂಗ್ ನಡೆಸಿ ಇವರೂ 54 ರನ್ಗೆ ಔಟ್ ಆದರು. ಶೆಲ್ಡನ್ ಜಾಕ್ಸನ್ ಬಂದ ಬೆನ್ನಲ್ಲೆ 14 ರನ್ಗೆ ಬ್ಯಾಟ್ ಕೆಳಗಿಟ್ಟರೆ, ಚೇತನ್ ಸಕರಿಯಾ ಕೂಡ 4 ರನ್ಗೆ ಸುಸ್ತಾದರು. ಸದ್ಯ, 387ರನ್ಗಳಿಗೆ 9 ವಿಕೆಟ್ ಕಳೆದುಕೊಂಡು ಆಟ ಮುಂದುವರಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ