ಬಾರ್ಡರ್-ಗವಾಸ್ಕರ್ ಸರಣಿಯ ಅಂತಿಮ ಟೆಸ್ಟ್ ಪಂದ್ಯವು ಶುಕ್ರವಾರ ಬ್ರಿಸ್ಬೇನ್ನಲ್ಲಿ ಶುರುವಾಗಲಿದೆ. ಆದರೆ ಈ ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜನವರಿ 16 ರಿಂದ ಬ್ರಿಸ್ಬೇನ್ನ ಗಬಾ ಮೈದಾನದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ಹೀಗಾಗಿ ಮೊದಲ ದಿನದಾಟದ ಬಳಿಕ ಪಂದ್ಯಕ್ಕೆ ಅಡಚಣೆ ಉಂಟಾಗುವ ಸಾಧ್ಯತೆಯಿದೆ.
ಹಾಗೆಯೇ ಅಂತಿಮ ಟೆಸ್ಟ್ ಪಂದ್ಯದ 3ನೇ ಮತ್ತು 4ನೇ ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಒಂದು ವೇಳೆ ಮಳೆಯಿಂದ ಅಡಚಣೆ ಉಂಟಾದರೆ ಓವರ್ಗಳ ಕಡಿತವಾಗಲಿದೆ. ಹಾಗೆಯೇ ಮಳೆ ಬಂದರೂ ಪಂದ್ಯವನ್ನು ನಡೆಸುವ ಸೌಕರ್ಯಗಳು ಆಸ್ಟ್ರೇಲಿಯಾದಲ್ಲಿದೆ. ಏಕೆಂದರೆ ಗಾಬಾ ಮೈದಾನವು ಉತ್ತಮ ಒಳಚರಂಡಿ ವ್ಯವಸ್ಥೆಯನ್ನು ಹೊಂದಿದ್ದು, ಹೀಗಾಗಿ ಮಳೆ ನಿಂತ ಮೇಲೆ ಮೈದಾನವನ್ನು ಸಿದ್ಧಗೊಳಿಸುವುದು ಸುಲಭ. ಹಾಗಾಗಿ ಮಳೆಯ ಭೀತಿ ನಡುವೆಯೂ ಬ್ರಿಸ್ಬೇನ್ ಟೆಸ್ಟ್ ಜರುಗಲಿದೆ ಎಂದು ಹೇಳಲಾಗುತ್ತಿದೆ.
ಇನ್ನು ಮಳೆಯ ನಡುವೆ ಪಂದ್ಯ ನಡೆದರೂ ಫಲಿತಾಂಶ ಹೊರಬೀಳುವುದು ಅನುಮಾನ. ಏಕೆಂದರೆ ಓವರ್ಗಳ ಕಡಿತದಿಂದ ಉಭಯ ತಂಡಗಳು ಹೆಚ್ಚಿನ ರನ್ಗಳಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಉಭಯ ತಂಡಗಳ ಮೊದಲ ಇನಿಂಗ್ಸ್ ಮುಕ್ತಾಯಕ್ಕೆ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು. ಒಂದು ವೇಳೆ ಮಳೆ ಅಡ್ಡಿಯಿಂದ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡರೆ ಟ್ರೋಫಿ ಭಾರತದ್ದಾಗಲಿದೆ.
ಹೌದು, ಈಗಾಗಲೇ ಉಭಯ ತಂಡಗಳು 1-1 ಸಮಬಲ ಸಾಧಿಸಿದ್ದು, ಅಂತಿಮ ಪಂದ್ಯ ಕೂಡ ಡ್ರಾನಲ್ಲಿ ಅಂತ್ಯವಾದರೆ ಬಾರ್ಡರ್-ಗವಾಸ್ಕರ್ ಟ್ರೋಫಿ ಭಾರತಕ್ಕೆ ಸಿಗಲಿದೆ. ಏಕೆಂದರೆ 2018-2019ರ ಕೊನೆಯ ಸರಣಿಯಲ್ಲಿ ಭಾರತ ತಂಡ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದುಕೊಂಡಿತ್ತು. ಹೀಗಾಗಿ ಡ್ರಾನಲ್ಲಿ ಮುಕ್ತಾಯವಾದ ಸರಣಿಯಲ್ಲಿ ಈ ಹಿಂದೆ ಸರಣಿ ಗೆದ್ದ ತಂಡಕ್ಕೆ ಟ್ರೋಫಿ ನೀಡಲಾಗುತ್ತದೆ. ಅದರಂತೆ ಭಾರತವೇ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಉಳಿಸಿಕೊಳ್ಳಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ