ರಾಯಚೂರು ಮೂಲದ ಹುಡುಗ ಅಂಡರ್ -19 ಕ್ರಿಕೆಟ್ ವಿಶ್ವಕಪ್‍ಗೆ ಆಯ್ಕೆ

ಈ ಹಿಂದೆ ರಾಯಚೂರಿನ ಯರೇಗೌಡ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದು ಬಿಟ್ಟರೆ ವಿದ್ಯಾಧರ್ ಪಾಟೀಲ್ ವಿಶ್ವಕ್ರಿಕೆಟ್ ನಲ್ಲಿ ಭಾಗವಹಿಸುತ್ತಿರುವ ಜಿಲ್ಲೆಯ ಎರಡನೇ ಕ್ರಿಕೆಟ್ ಆಟಗಾರರಾಗಿದ್ದಾರೆ

G Hareeshkumar | news18-kannada
Updated:December 6, 2019, 7:29 AM IST
ರಾಯಚೂರು ಮೂಲದ ಹುಡುಗ ಅಂಡರ್ -19 ಕ್ರಿಕೆಟ್ ವಿಶ್ವಕಪ್‍ಗೆ ಆಯ್ಕೆ
ವಿದ್ಯಾಧರ್ ಪಾಟೀಲ್
  • Share this:
ರಾಯಚೂರು(ಡಿ.06) : ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಅಂಡರ್ 19 ಕಿರಿಯರ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಗೆ ರಾಯಚೂರಿನ ಕ್ರಿಕೆಟ್ ಆಟಗಾರ ವಿದ್ಯಾಧರ್ ಪಾಟೀಲ್ ಆಯ್ಕೆಯಾಗಿದ್ದಾರೆ. ರಾಯಚೂರು ತಾಲೂಕಿನ ಯರಮರಸ್ ಕ್ಯಾಂಪ್ ನ ನಿವೃತ್ತ ಕರ್ನಾಟಕ ಜಲ ಮಂಡಳಿಯ ಅಧಿಕಾರಿ ಸೋಮಶೇಖರ್ ಪಾಟೀಲ್ ,ಕವಿತಾ ದಂಪತಿಗಳ ಪುತ್ರ ವಿದ್ಯಾಧರ್ ಪಾಟೀಲ್ ವಿಶ್ವಕಪ್ ಗೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿತಂದಿದ್ದಾರೆ.

ತನ್ನ ಹತ್ತನೇ ವಯಸ್ಸಿನಲ್ಲಿಯೇ ರಾಯಚೂರು ಸಿಟಿ ಇಲೆವೆನ್ಸ್ ಕ್ಲಬ್ ಮೂಲಕ ಕ್ರಿಕೆಟ್ ಆರಂಭಿಸಿದ ವಿದ್ಯಾಧರ್ ಬೆಂಗಳೂರಿನ ಕರ್ನಾಟಕ ಇನ್ಸ್​​ಸ್ಟಿಟ್ಯೂಟ್ ಆಫ್ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ. ಪ್ರಾರಂಭದಲ್ಲಿ ಪ್ರತಿದಿನ ಬೆಳಗ್ಗೆ ಸೈಕಲ್ ಮೇಲೆ 10 ಕಿ.ಮೀ ಪ್ರಯಾಣಿಸಿ ಅಭ್ಯಾಸ ನಡೆಸುತ್ತಿದ್ದ ವಿದ್ಯಾಧರ್ ಪಾಟೀಲ್ ಪಾಠಕ್ಕಿಂತ ಆಟದಲ್ಲೇ ಹೆಚ್ಚು ಆಸಕ್ತಿ ಹೊಂದಿದ್ದ ತನ್ನ ಕಠಿಣ ಪರಿಶ್ರಮದಿಂದ ರಾಜ್ಯ ಮಟ್ಟದ ಹತ್ತಾರು ಪಂದ್ಯಾವಳಿಗಳನ್ನು ಆಡಿದ್ದಾರೆ.

ಇದೇ ವರ್ಷ ಜುಲೈನಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ಕಿರಿಯರ ತ್ರಿಕೋನ ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದ್ದರು. ಇನ್ನೂ ವಿದ್ಯಾಧರನ ಈ ಸಾಧನೆಗೆ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದು, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಇನ್ನೂ ಜನವರಿ 17 ರಿಂದ ಫೆಬ್ರವರಿ 9 ರ ವರೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಕಿರಿಯರ ವಿಶ್ವಕಪ್ ನಲ್ಲಿ, ಬಿಸಿಸಿಐ ನಿಂದ ಪ್ರಕಟವಾಗಿರುವ 15 ಜನ ಆಟಗಾರರ ತಂಡದಲ್ಲಿ ವಿದ್ಯಾಧರ್ ಪಾಟೀಲ್ ಆಯ್ಕೆಯಾಗಿದ್ದಾರೆ. ವಿಶ್ವಕಪ್ ಗೆ ಕರ್ನಾಟಕದಿಂದ ಇನ್ನೋರ್ವ ಆಟಗಾರ ಶುಭಾಂಗ್ ಹೆಗ್ಡೆ ಸಹ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ : ಅಂಡರ್-19 ವಿಶ್ವಕಪ್​ಗೆ ಭಾರತ ತಂಡ ಪ್ರಕಟ; ರನ್ ಮೆಷಿನ್ ಪ್ರಿಯಂ ಗರ್ಗ್ ಕ್ಯಾಪ್ಟನ್; ದಾಖಲೆವೀರ ಜೈಸ್ವಾಲ್, ಕರ್ನಾಟಕ ಕುಡಿ ಶುಭಾಂಗ್​ಗೆ ಸ್ಥಾನ

ಈ ಹಿಂದೆ ರಾಯಚೂರಿನ ಯರೇಗೌಡ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದು ಬಿಟ್ಟರೆ ವಿದ್ಯಾಧರ್ ಪಾಟೀಲ್ ವಿಶ್ವಕ್ರಿಕೆಟ್ ನಲ್ಲಿ ಭಾಗವಹಿಸುತ್ತಿರುವ ಜಿಲ್ಲೆಯ ಎರಡನೇ ಕ್ರಿಕೆಟ್ ಆಟಗಾರರಾಗಿದ್ದಾರೆ. ಮುಂದೆ ಅವರು ಟೀಮ್ ಇಂಡಿಯಾದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವ ವಿಶ್ವಾಸವಿದ್ದು, ಇದು ಜಿಲ್ಲೆಗೆ ಸಿಕ್ಕಿರುವ ಅತೀ ದೊಡ್ಡ ಕೀರ್ತಿ ಎಂದು ತರಬೇತುದಾರರು ಸಂತಸ ವ್ಯಕ್ತಪಡಿಸಿದ್ದಾರೆ.

ವಿದ್ಯಾಧರ್ ಪಾಟೀಲ್ ಅಂಡರ್ -19 ವಿಶ್ವಕಪ್ ಗೆ ಆಯ್ಕೆಯಾಗಿರುವುದಕ್ಕೆ ಜಿಲ್ಲೆಯ ಕ್ರಿಕೆಟ್ ಅಸೋಸಿಯೇಷನ್, ಕ್ರಿಕೆಟ್ ಅಭಿಮಾನಿಗಳು ಹಾಗೂ ಇಡೀ ಜಿಲ್ಲೆಯ ಜನ ಸಂತಸ ವ್ಯಕ್ತಪಡಿಸಿದ್ದಾರೆ.'

 
First published:December 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ