ರಾಹುಲ್ ದ್ರಾವಿಡ್ ಬಾಯಿಂದ ಇಂಥ ಮಾತು ಬರೋದೇ ಇಲ್ಲ: ರವಿಶಾಸ್ತ್ರಿಗೆ ಗಂಭೀರ್ ತರಾಟೆ

Ravi Shastri vs Gautam Gambhir- ಈಗಿನ ಭಾರತ ತಂಡ ವಿಶ್ವದ ಅತ್ಯುತ್ತಮ ಟೀಮ್ ಎಂದು ಮಾಜಿ ಕೋಚ್ ರವಿಶಾಸ್ತ್ರಿ ಹೊಗಳಿರುವುದಕ್ಕೆ ಗಂಭೀರ್ ಆಕ್ಷೇಪ ವ್ಯಕ್ತಪಡಿಸಿದ್ಧಾರೆ. ನಮ್ಮನ್ನು ನಾವು ಹೊಗಳಿಕೊಳ್ಳುವುದು ಸರಿಯಲ್ಲ ಎಂದಿದ್ದಾರೆ.

ಗೌತಮ್ ಗಂಭೀರ್

ಗೌತಮ್ ಗಂಭೀರ್

 • Share this:
  ನವದೆಹಲಿ, ನ. 22: ಹೊಸ ಕೋಚ್ ರಾಹುಲ್ ದ್ರಾವಿಡ್ (Team India Coach Rahul Dravid) ಅವರಿಗೆ ಒಳ್ಳೆಯ ಟೀಮ್ ಸಿಕ್ಕಿದೆ. ಈಗಿನ ಟೀಮ್ ಇಂಡಿಯಾ ವಿಶ್ವದಲ್ಲೇ ಅತ್ಯುತ್ತಮ ತಂಡ ಎಂದು ಮಾಜಿ ಕೋಚ್ ರವಿಶಾಸ್ತ್ರಿ (Former Coach Ravi Shastri) ಒಂದೆರಡು ಬಾರಿ ಹೇಳಿದ್ದುಂಟು. ಅವರ ಈ ಹೇಳಿಕೆಗೆ ಮಾಜಿ ಆಟಗಾರ ಗೌತಮ್ ಗಂಭೀರ್ (Gautam Gambhir) ಆಕ್ಷೇಪಿಸಿದ್ದಾರೆ. ನಮ್ಮ ಸಾಧನೆಯನ್ನ ಬೇರೆಯವರು ಹೊಗಳಬೇಕು, ಆತ್ಮರತಿ ಸರಿಯಲ್ಲ ಎಂದು ಗಂಭೀರ್ ಹೇಳಿದ್ದಾರೆ.

  ರವಿಶಾಸ್ತ್ರಿ ಕೋಚ್ ಆಗಿದ್ದ ಅವಧಿಯಲ್ಲಿ ಮತ್ತು ವಿರಾಟ್ ಕೊಹ್ಲಿ ಕ್ಯಾಪ್ಟನ್ ಆಗಿರುವ ಅವಧಿಯಲ್ಲಿ ಭಾರತ ತಂಡ ಹಲವು ಮಹತ್ವದ ಗೆಲುವುಗಳನ್ನ ಪಡೆದಿದೆ. ಆಸ್ಟ್ರೇಲಿಯಾ ನೆಲದಲ್ಲಿ ಎರಡು ಬಾರಿ ಟೆಸ್ಟ್ ಸರಣಿ ಗೆದ್ದಿತು. ಇದು ಕ್ರಿಕೆಟ್ ಇತಿಹಾಸದಲ್ಲೇ ಆಸ್ಟ್ರೇಲಿಯಾ ವಿರುದ್ಧ ಮೊದಲ ಬಾರಿಗೆ ಟೀಮ್ ಇಂಡಿಯಾ ಎರಡು ಬಾರಿ ಸರಣಿ ಪಾರಮ್ಯ ಸಾಧಿಸಿದ್ದು. ಹಾಗೆಯೇ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ಅವಿಸ್ಮರಣೀಯ ಗೆಲುವುಗಳನ್ನ ದಾಖಲಿಸಿದೆ. ಈ ವಿದೇಶೀ ನೆಲದಲ್ಲಿ ಈ ಹಿಂದೆ ಭಾರತ ಯಶಸ್ಸು ಸಾಧಿಸಿದ್ದು ಬಹಳ ಕಡಿಮೆ.

  ರವಿಶಾಸ್ತ್ರಿ ಅವರು ಈ ಸಾಧನೆಯನ್ನ ಉಲ್ಲೇಖಿಸಿ ಟೀಮ್ ಇಂಡಿಯಾವನ್ನು ಶ್ಲಾಘಿಸುವ ಕೆಲಸ ಮಾಡಿದ್ದರು. ಟಿ20 ವಿಶ್ವಕಪ್​ನಲ್ಲಿ ಭಾರತ ಸೋತರೂ ವಿಶ್ವದಲ್ಲಿ ಮೂರೂ ಮಾದರಿ ಕ್ರಿಕೆಟ್​ನಲ್ಲಿ ಬೆಸ್ಟ್ ತಂಡ ಎಂದು ಯಾವುದಾದರೂ ಇದ್ದರೆ ಅದು ಟೀಮ್ ಇಂಡಿಯಾ ಎಂದು ರವಿಶಾಸ್ತ್ರಿ ಎದೆಯುಬ್ಬಿಸಿ ಹೇಳಿದ್ದರು. ಆದರೆ, ಮಾಜಿ ಕೋಚ್​ನ ಹೇಳಿಕೆ ಗೌತಮ್ ಗಂಭೀರ್​ಗೆ ಪಥ್ಯವಾಗಿಲ್ಲ.

  “ನೀವು ಚೆನ್ನಾಗಿ ಆಡಿದಾಗ ಸಾಮಾನ್ಯವಾಗಿ ಹೊಗಳಿಕೊಳ್ಳಲು ಹೋಗುವುದಿಲ್ಲ. ಇತರರು ನಮ್ಮ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರೆ ಪರವಾಗಿಲ್ಲ. ನಾವು 2011ರ ವಿಶ್ವಕಪ್ ಗೆದ್ದಾಗ ಇದು ವಿಶ್ವದಲ್ಲೇ ಅತ್ಯುತ್ತಮ ತಂಡ ಎಂದು ನಮ್ಮವರಾಗಲೀ, ಬೇರೆಯವರಾಗಲೀ ಯಾರೂ ಹೇಳಿಕೆ ಕೊಡಲಿಲ್ಲ” ಎಂದು ಗಂಭೀರ್ ಪ್ರತಿಕ್ರಿಯಿಸಿದ್ಧಾರೆಂದು ಟೈಮ್ಸ್ ನೌ ವರದಿ ಮಾಡಿದೆ.

  ದ್ರಾವಿಡ್ ಬಾಯಿಂದ ಈ ಮಾತು ಬರುತ್ತಿರಲಿಲ್ಲ:

  ರವಿಶಾಸ್ತ್ರಿಯ ಟೀಮ್ ಇಂಡಿಯಾ ಹೊಗಳಿಕೆ ಮಾತುಗಳ ಬಗ್ಗೆ ಖಾರದ ಪ್ರತಿಕ್ರಿಯೆ ಮುಂದುವರಿಸಿದ ರವಿಶಾಸ್ತ್ರಿ, ಈಗಿನ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ಹೆಸರನ್ನ ಎಳೆದುತಂದರು. ರಾಹುಲ್ ದ್ರಾವಿಡ್ ಅವರಿಂದ ಎಂದೂ ಇಂಥ ಹೇಳಿಕೆ ಬರುವುದಿಲ್ಲ ಎಂದು ಗಂಭೀರ್ ಹೇಳಿದ್ದಾರೆ.

  ಇದನ್ನೂ ಓದಿ: Pro Kabaddi ಗೆ ಇನ್ನೊಂದೇ ತಿಂಗಳು; ಬೆಂಗಳೂರಲ್ಲೇ ಏಕೆ ಪಂದ್ಯಗಳು? Live Streaming ಇತ್ಯಾದಿ ವಿವರ

  “ನೀವು ಗೆದ್ದಾಗ ಬೇರೆಯವರು ಅದರ ಬಗ್ಗೆ ಮಾತನಾಡಬೇಕು. ಆಸ್ಟ್ರೇಲಿಯಾದಲ್ಲಿ ಗೆದ್ದಾಗ ಅದು ದೊಡ್ಡ ಸಾಧನೆ ಎನ್ನುವುದರಲ್ಲಿ ಅನುಮಾನ ಇಲ್ಲ. ಇಂಗ್ಲೆಂಡ್​ನಲ್ಲಿ ಚೆನ್ನಾಗಿ ಆಡಿದ್ದೀರಿ, ಗೆದ್ದಿದ್ದೀರಿ, ಹೌದು. ಆದರೆ, ಬೇರೆಯವರು ಈ ಸಾಧನೆಯನ್ನ ಹೊಗಳಲಿ. ರಾಹುಲ್ ದ್ರಾವಿಡ್ ಅವರಿಂದ ನೀವು ಇಂಥ ಹೇಳಿಕೆಗಳನ್ನ ಕೇಳುವುದಿಲ್ಲ. ಭಾರತ ಚೆನ್ನಾಗಿ ಆಡುತ್ತದೋ, ಕೆಟ್ಟದಾಗಿ ಆಡುತ್ತದೋ, ರಾಹುಲ್ ದ್ರಾವಿಡ್ ಹೇಳಿಕೆಗಳು ಯಾವಾಗಲೂ ಸಮತೋಲನದಿಂದ ಕೂಡಿರುತ್ತವೆ. ಅಲ್ಲದೇ, ಈ ಹೇಳಿಕೆಗಳು ಆಟಗಾರರ ದ್ಯೋತಕವಾಗಿರುತ್ತವೆ” ಎಂದು 2007 ಮತ್ತು 2011ರ ವಿಶ್ವಕಪ್​ಗಳಲ್ಲಿ ಭಾರತದ ಹೀರೋ ಆಗಿದ್ದ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ಧಾರೆ.

  ದ್ರಾವಿಡ್ ಅವರಿಂದ ತಂಡದಲ್ಲಿ ಪರಿವರ್ತನೆ: 

  ಆಟಗಾರರಲ್ಲಿ ವಿನಮ್ರತೆ (Humility) ಬಹಳ ಮುಖ್ಯ. ಕೋಚ್ ರಾಹುಲ್ ದ್ರಾವಿಡ್ ಅವರು ಟೀಮ್ ಇಂಡಿಯಾ ಆಟಗಾರರಲ್ಲಿ ಪರಿವರ್ತನೆ ತರಬಲ್ಲರು ಎಂಬುದು ಗಂಭೀರ್ ಅನಿಸಿಕೆ.

  ಇದನ್ನೂ ಓದಿ: MS Dhoni- ಐದು ವರ್ಷವೇ ಆದರೂ ಇದೇ ನಗರದಲ್ಲಿ ನನ್ನ ಕೊನೆ ಪಂದ್ಯ: ಎಂಎಸ್ ಧೋನಿ

  “ನೀವು ಚೆನ್ನಾಗಿ ಆಡಿ ಅಥವಾ ಕೆಟ್ಟದಾಗಿ ಆಡಿ ವಿನಮ್ರತೆ ಬಹಳ ಮುಖ್ಯ. ಕ್ರಿಕೆಟ್ ಎಲ್ಲಿಯೂ ಹೋಗಿಬಿಡುವುದಿಲ್ಲ. ಎಂಬುದು ನೆನಪಿನಲ್ಲಿರಲಿ. ಆಟಗಾರರು ಮೊದಲು ಒಳ್ಳೆಯ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು. ರಾಹುಲ್ ದ್ರಾವಿಡ್ ಅವರ ಗಮನ ಹೆಚ್ಚಾಗಿ ಈ ಮಗ್ಗುಲಿನಲ್ಲೇ ಇರಲಿದೆ” ಎಂದು ಬಿಜೆಪಿ ಸಂಸದರೂ ಆಗಿದ್ದ ಅವರು ಹೇಳಿದ್ದಾರೆ.
  Published by:Vijayasarthy SN
  First published: