Rahul Dravid- ವಿಶ್ವಕಪ್ ನಂತರ ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ಹಂಗಾಮಿ ಕೋಚ್?

Team India Interim Coach- ಪೂರ್ಣಪ್ರಮಾಣದ ಕೋಚ್ ನೇಮಕ ಆಗುವವರೆಗೂ ರಾಹುಲ್ ದ್ರಾವಿಡ್ ಅವರನ್ನ ವಿಶ್ವಕಪ್ ನಂತರದ ಒಂದು ಸರಣಿಗೆ ಟೀಮ್ ಇಂಡಿಯಾಗೆ ಹಂಗಾಮಿ ಕೋಚ್ ಆಗಿ ಆಯ್ಕೆ ಮಾಡುವ ಸಾಧ್ಯತೆ ಇದೆ.

Rahul Dravid

Rahul Dravid

 • Share this:
  ನವದೆಹಲಿ, ಅ. 14: ಟಿ20 ವಿಶ್ವಕಪ್ ಬಳಿಕ ರವಿಶಾಸ್ತ್ರಿ ಅವರ ಕೋಚ್ ಅವಧಿ ಮುಗಿಯುತ್ತದೆ. ಮತ್ತೆ ಅವರು ಮುಂದುವರಿಯುವ ಆಸಕ್ತಿ ತೋರಿಲ್ಲ. ಹೀಗಾಗಿ, ವಿಶ್ವಕಪ್ ನಂತರ ಭಾರತ ತಂಡದ ಕೋಚ್ ಯಾರಾಗ್ತಾರೆ ಎಂಬ ಪ್ರಶ್ನೆ ಇದೆ. ಅದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಅನೇಕರು ಆ ಸ್ಥಾನಕ್ಕೆ ಆಸಕ್ತಿ ತೋರಿದ್ಧಾರಾದರೂ ಬಿಸಿಸಿಐ ಮನಸಲ್ಲಿ ಯಾರಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ವಿಶ್ವಕಪ್ ಬಳಿಕ ಹಲವು ಸರಣಿ ಮತ್ತು ಟೂರ್ನಿಗಳು ಭಾರತದ ವೇಳಾಪಟ್ಟಿಯಲ್ಲಿವೆ. ಭಾರತದ ಕಿರಿಯರ ತಂಡ ಮತ್ತು ಎ ತಂಡಗಳಿಗೆ ಕೋಚ್ ಆಗಿ ಸೈ ಎನಿಸಿರುವ ರಾಹುಲ್ ದ್ರಾವಿಡ್ ಅವರನ್ನ ತಾತ್ಕಾಲಿಕವಾಗಿ ಕೋಚ್ ಮಾಡುವ ಆಲೋಚನೆಯಲ್ಲಿ ಬಿಸಿಸಿಐ ಇದೆ ಎಂಬಂತಹ ಸುದ್ದಿ ಕೇಳಿಬರುತ್ತಿದೆ.

  ಆತುರಬೀಳುವ ಬದಲು ನಿಧಾನವಾಗಿಯಾದರೂ ಸೂಕ್ತ ಕೋಚ್ ಅನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿರುವ ಬಿಸಿಸಿಐ, ಇದಕ್ಕಾಗಿಯೇ ತಾತ್ಕಾಲಿಕವಾಗಿ ಕೆಲ ಕಾಲಕ್ಕೆ ಸೀಮಿತವಾಗಿ ಹಂಗಾಮಿ ಕೋಚ್ ಅನ್ನ ನೇಮಿಸಿಕೊಳ್ಳಲು ಮುಂದಾಗಿದೆ. ಬಿಸಿಸಿಐ ಮೂಲಗಳ ಪ್ರಕಾರ, ಟೀಮ್ ಇಂಡಿಯಾಗೆ ಪೂರ್ಣಪ್ರಮಾಣದ ಕೋಚ್ ನೇಮಕ ಆಗುವವರೆಗೂ ಹಂಗಾಮಿ ಕೋಚ್ ಅನ್ನ ನೇಮಿಸಿಕೊಳ್ಳಲು ಕೆಲವರ ಹೆಸರುಗಳನ್ನ ಪರಿಶೀಲಿಸಲಾಗುತ್ತದೆ. ಅವುಗಳಲ್ಲಿ ರಾಹುಲ್ ದ್ರಾವಿಡ್ ಅವರ ಹೆಸರಿಗೆ ಹೆಚ್ಚು ಒಲವು ವ್ಯಕ್ತವಾಗುತ್ತಿದೆ ಎನ್ನಲಾಗುತ್ತಿದೆ. ವಿಶ್ವಕಪ್ ಮುಗಿದ ಬಳಿಕ ಭಾರತದಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಕ್ರಿಕೆಟ್ ಸರಣಿಗೆ ರಾಹುಲ್ ದ್ರಾವಿಡ್ ಅವರು ಟೀಮ್ ಇಂಡಿಯಾದ ಹಂಗಾಮಿ ಕೋಚ್ ಆಗುವ ಎಲ್ಲಾ ಸಾಧ್ಯತೆಯೂ ಇದೆ ಎನ್ನಲಾಗಿದೆ.

  ದ್ರಾವಿಡ್ ಅವರೇ ಪೂರ್ಣಪ್ರಮಾಣದ ಕೋಚ್ ಆಗಿ ಯಾಕಿಲ್ಲ?

  ಕೋಚ್ ಹುದ್ದೆಗೆ ಬಿಸಿಸಿಐ ಸಾಕಷ್ಟು ಜನರನ್ನು ಪ್ರಯತ್ನಿಸುತ್ತಿದೆ. ಹಿಂದೆ ಟೀಮ್ ಇಂಡಿಯಾ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಅವರನ್ನೇ ಮತ್ತೆ ಕೋಚ್ ಆಗಿ ನೇಮಿಸುವ ಇರಾದೆಯಲ್ಲಿ ಬಿಸಿಸಿಐ ಇತ್ತು. ಆದರೆ, ವಿವಿಧ ಕಾರಣಗಳಿಂದಾಗಿ ಕುಂಬ್ಳೆ ಅವರು ಈ ಆಫರ್ ಅನ್ನು ತಿರಸ್ಕರಿಸಿರುವುದು ತಿಳಿದುಬಂದಿದೆ. ಕುಂಬ್ಳೆಗೂ ಮುನ್ನ ಬಿಸಿಸಿಐ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರನ್ನೇ ಕೋಚ್ ಆಗಿ ಮಾಡಲು ಬಹಳ ಆಸಕ್ತಿ ತೋರಿಸಿತ್ತು. ಆದರೆ, ತನಗೆ ಸೀನಿಯರ್ ಟೀಮ್​ನ ಕೋಚ್ ಆಗುವ ಆಸಕ್ತಿ ಇಲ್ಲ. ಮೇಲಾಗಿ ತನಗೆ ಹೆಚ್ಚು ಪ್ರಯಾಣ ಮಾಡಲು ಇಚ್ಛೆ ಇಲ್ಲ ಎಂದು ರಾಹುಲ್ ದ್ರಾವಿಡ್ ತಮ್ಮ ನಿರ್ಧಾರ ತಿಳಿಸಿದ್ದರು.

  ರಾಹುಲ್ ದ್ರಾವಿಡ್ ಜೂನಿಯರ್ ಟೀಮ್ ಮತ್ತು ಭಾರತ ಎ ತಂಡಗಳಿಗೆ ಕೋಚ್ ಆಗಿ ಕೆಲಸ ಮಾಡಿದ್ದಾರೆ. ಈಗಿರುವ ಬಹುತೇಕ ಕ್ರಿಕೆಟಿಗರನ್ನ ಬೆಳೆಸಿದ್ದೇ ದ್ರಾವಿಡ್. ಹೀಗಾಗಿ ದ್ರಾವಿಡ್ ಅವರನ್ನೇ ಕೋಚ್ ಆಗಿ ಮಾಡಿದರೆ ಸುಸೂತ್ರವಾಗಿ ಟೀಮ್ ವ್ಯವಹಾರ ಸಾಗುತ್ತದೆ ಎಂಬುದು ಬಿಸಿಸಿಐ ಎಣಿಕೆ. ಆದರೆ, ದ್ರಾವಿಡ್ ಅವರ ಆಲೋಚನೆಯೇ ಬೇರೆ ಇದ್ದಂತಿದೆ. ಅವರಿಗೆ ಯುವ ಪ್ರತಿಭೆಗಳನ್ನ ಹೆಕ್ಕಿ ತೆಗೆದು ಅನಾವರಣಗೊಳಿಸುವ ಕಾರ್ಯದಲ್ಲೇ ಹೆಚ್ಚು ತೃಪ್ತಿ ಹೊಂದಿದ್ದಾರೆ. ಹಾಗೆಯೇ, ಕ್ರಿಕೆಟ್ ಕ್ಷೇತ್ರಕ್ಕೆ ಬಹಳ ಮುಖ್ಯವಾಗಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾಗಿಯೂ ಅವರು ಕರ್ತವ್ಯ ನಿಭಾಯಿಸುತ್ತಿದ್ದಾರೆ.

  ಇದನ್ನೂ ಓದಿ: T20 World Cup- ವಿಶ್ವಕಪ್​ನಲ್ಲಿ ಭಾರತದ ಮುನ್ನಡೆಗೆ ಕೆಎಲ್ ರಾಹುಲ್ ಪಾತ್ರ ಮುಖ್ಯ ಎಂದ ಬ್ರೆಟ್ ಲೀ

  ಕೋಚ್ ಬೇಕೆಂದು ಜಾಹೀರಾತು ಯಾಕಿಲ್ಲ?

  ಟೀಮ್ ಇಂಡಿಯಾಗೆ ಹೊಸ ಕೋಚ್ ಹುಡುಕಲಾಗುತ್ತಿದೆ ಎಂಬುದ ಜಗಜ್ಜಾಹೀರಾಗಿರುವ ವಿಚಾರ. ಆದರೂ ಬಿಸಿಸಿಐ ಕೋಚ್ ಸ್ಥಾನ ಖಾಲಿ ಇದೆ ಎಂದು ಬಹಿರಂಗವಾಗಿ ಅರ್ಜಿಗೆ ಆಹ್ವಾನಿಸಿಲ್ಲ. ಇದಕ್ಕೆ ಕಾರಣವೂ ಇದೆ. ಕೋಚ್ ಸ್ಥಾನಕ್ಕೆ ಜಾಹೀರಾತು ಕೊಟ್ಟರೆ ಬಹಳ ಸಂಖ್ಯೆಯಲ್ಲಿ ಅರ್ಜಿಗಳು ಬಂದು ಬೀಳುತ್ತವೆ. ಬಹಳ ದೊಡ್ಡ ಮಟ್ಟದ ವಿದೇಶೀ ತಂಡಗಳ ಕೋಚ್​ಗಳೂ ಅರ್ಜಿ ಗುಜರಾಯಿಸುತ್ತಾರೆ. ಆಗ ಲೋ ಪ್ರೊಫೈಲ್ ಆಗಿರುವ, ತಂಡಕ್ಕೆ ಸೂಕ್ತವೆನಿಸಬಹುದಾದ ಭಾರತೀಯ ಕೋಚ್​ಗಳನ್ನ ಆರಿಸಿಕೊಳ್ಳಲು ಕಷ್ಟವಾಗಬಹುದು ಎಂಬುದು ಬಿಸಿಸಿಐನ ಅಭಿಪ್ರಾಯ.

  ಹೀಗಾಗಿ, ಕ್ರಿಕೆಟ್ ಮಂಡಳಿಯು ತಾನಾಗೇ ಹಲವು ಅಭ್ಯರ್ಥಿಗಳನ್ನ ಸಂಪರ್ಕಿಸಿ ಮಾತುಕತೆ ನಡೆಸುತ್ತಿದೆ. ಹೀಗಾಗಿ, ಕೋಚ್ ಆಯ್ಕೆ ಪ್ರಕ್ರಿಯೆ ಸಾಕಷ್ಟು ವಿಳಂಬಗೊಳ್ಳುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ತಾತ್ಕಾಲಿಕವಾಗಿ ಹಂಗಾಮಿ ಕೋಚ್​ವೊಬ್ಬರನ್ನ ನೇಮಿಸುವ ನಿರ್ಧಾರಕ್ಕೆ ಬಿಸಿಸಿಐ ಬಂದಿದೆ. ಕೆಲ ತಿಂಗಳ ಹಿಂದಷ್ಟೇ ಶ್ರೀಲಂಕಾದಲ್ಲಿ ಕ್ರಿಕೆಟ್ ಪ್ರವಾಸ ಮಾಡಿದ್ದ ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ಅವರು ಕೋಚ್ ಆಗಿ ಹೋಗಿದ್ದರು. ಈಗಲೂ ಅವರು ಅದೇ ಪಾತ್ರ ಮಾಡಬಹುದು. ನ್ಯೂಜಿಲೆಂಡ್ ವಿರುದ್ಧದ ಕ್ರಿಕೆಟ್ ಸರಣಿಗೆ ಭಾರತ ತಂಡದ ಕೋಚ್ ಆಗಿ ಅವರು ಒಪ್ಪಿಕೊಳ್ಳುತ್ತಾರೆ ಎಂಬ ವಿಶ್ವಾಸದಲ್ಲಿ ಬಿಸಿಸಿಐ ಇದೆ. ಆದರೆ, ರಾಹುಲ್ ದ್ರಾವಿಡ್ ಅವರು ಈ ಬಗ್ಗೆ ಏನು ಸ್ಪಂದನೆ ಕೊಟ್ಟಿದ್ದಾರೆ ಎಂಬುದು ಇನ್ನೂ ತಿಳಿದಿಲ್ಲ.
  Published by:Vijayasarthy SN
  First published: