R Ashwin- ರವಿಶಾಸ್ತ್ರಿ ಆವತ್ತು ಆಡಿದ ಮಾತು ಅತೀವ ಘಾಸಿ ಮಾಡಿತ್ತು: ಆರ್ ಅಶ್ವಿನ್

Ravi Shastri vs R Ashwin: ಆಸ್ಟ್ರೇಲಿಯಾದಲ್ಲಿ ಆತಿಥೇಯರ ಎದುರು 2-1ರಿಂದ ಟೆಸ್ಟ್ ಸರಣಿ ಗೆದ್ದ ಭಾರತ ತಂಡದಲ್ಲಿ ಆರ್ ಅಶ್ವಿನ್ ಅವರೂ ಇದ್ದರು. ಆ ವೇಳೆ ತಮ್ಮ ಮನಸಿಗೆ ಘಾಸಿಯಾಗುವಂತಹ ಹೇಳಿಕೆಯನ್ನ ರವಿಶಾಸ್ತ್ರಿ ಆಡಿದ ಪ್ರಸಂಗವನ್ನು ಅಶ್ವಿನ್ ನೆನಪಿಸಿಕೊಂಡಿದ್ಧಾರೆ.

ಆರ್ ಅಶ್ವಿನ್

ಆರ್ ಅಶ್ವಿನ್

 • Share this:
  ರವಿಚಂದ್ರನ್ ಅಶ್ವಿನ್ ಸದ್ಯ ಭಾರತದ ಅಗ್ರಮಾನ್ಯ ಸ್ಪಿನ್ ಬೌಲರ್. ನೇರಾನೇರ ವ್ಯಕ್ತಿತ್ವದವರು. ಯಾವ ಮುಚ್ಚುಮರೆ ಇಲ್ಲದೇ ಮನಸಿನ ಮಾತುಗಳನ್ನ ಹೇಳುವ ಸಾಮರ್ಥ್ಯ ಇರುವವರು. ಅಪ್ಪಟ ಕ್ರಿಕೆಟಿಗ, ಪಕ್ಕಾ ವೃತ್ತಿಪರತೆ. ಇಎಸ್​​ಪಿಎನ್ ಕ್ರಿಕ್ ಇನ್ಫೋ ವೆಬ್​ಸೈಟ್ ಜೊತೆಗಿನ ಸಂದರ್ಶನದಲ್ಲಿ ಆರ್ ಅಶ್ವಿನ್ ತಮ್ಮ ಕ್ರಿಕೆಟ್ ವೃತ್ತಿಜೀವನದ ಕೆಲ ಮಹತ್ವದ ಕ್ಷಣಗಳ ಬಗ್ಗೆ ಮಾತನಾಡಿದ್ದಾರೆ. ಗಾಯದ ಸಮಸ್ಯೆ, ನಿವೃತ್ತಿ ಆಲೋಚನೆ, ಆಸರೆ ಇಲ್ಲದೇ ಹೋದದ್ದು ಇತ್ಯಾದಿ ವಿಚಾರಗಳನ್ನ ಬಿಚ್ಚಿಟ್ಟಿದ್ಧಾರೆ. ರವಿಶಾಸ್ತ್ರಿ ಬಗ್ಗೆ ನೇರಾನೇರ ಮಾತುಗಳನ್ನಾಡಿದ್ಧಾರೆ.

  ಗಾಯ, ಹತಾಶೆ, ನಿವೃತ್ತಿ ಆಲೋಚನೆ:

  ಆರ್ ಅಶ್ವಿನ್ ತಮಗೆ ಗಾಯದ ಸಮಸ್ಯೆ ಹೇಗೆಲ್ಲಾ ಕಾಡಿತು ಎಂದು ಹೇಳಿದ್ಧಾರೆ. ತಾನು ಎಷ್ಟೇ ಪ್ರಯತ್ನ ಹಾಕಿದರೂ ಸರಿಯಾಗಿ ಬೌಲಿಂಗ್ ಮಾಡಲಾಗುತ್ತಿರಲಿಲ್ಲ. ವಿಪರೀತ ನೋವಾಗುತ್ತಿತ್ತು. ಆರು ಬಾಲ್ ಎಸೆದ ನಂತರ ಉಸಿರಾಡಲೂ ಕಷ್ಟ ಎನಿಸುತ್ತಿತ್ತು. ಮಂಡಿ ನೋವು ಹೆಚ್ಚಾದಾಗ ಮುಂದಿನ ಎಸೆತವನ್ನ ಬೌಲಿಂಗ್ ಮಾಡುವಾಗ ಹೆಚ್ಚು ಜಿಗಿಯುತ್ತಿರಲಿಲ್ಲ. ಆದರೆ, ಚೆಂಡನ್ನ ನಿರ್ದಿಷ್ಟ ಬಲದಿಂದಲೇ ಎಸೆಯಬೇಕು. ಜಿಗಿಯಲಿಲ್ಲವೆಂದರೆ ಸೊಂಟ, ಬೆನ್ನು ಮತ್ತು ಭುಜದ ಮೂಲಕ ಶಕ್ತಿಹಾಯಿಸಬೇಕು. ಆಗ ನಡು (Pubalgia) ನೋವು ಉಲ್ಬಣಿಸುತ್ತಿತ್ತು. ಮೂರನೇ ಎಸೆತಕ್ಕೆ ಬೇರೆ ರೀತಿಯ ತಂತ್ರದ ಮೊರೆ ಹೋಗಬೇಕಿತ್ತು. ಆರು ಎಸೆತ ಹಾಕುವಷ್ಟರಲ್ಲಿ ಸಾಕಸಾಕಾಗಿಹೋಗುತ್ತಿತ್ತು ಎಂದು ಅಶ್ವಿನ್ ತಮ್ಮ ಭಯಾನಕ ಗಾಯದ ಸಮಸ್ಯೆಯನ್ನ ನೆನಪಿಸಿಕೊಂಡಿದ್ಧಾರೆ.

  ನಿವೃತ್ತಿ ಆಲೋಚನೆ:

  ಗಾಯದ ಸಮಸ್ಯೆ ಅನೇಕ ಪ್ರತಿಭಾನ್ವಿತ ಕ್ರಿಕೆಟಿಗರ ವೃತ್ತಿಜೀವವನ್ನು ಬಹಳ ಬೇಗನೇ ಅಂತ್ಯಗೊಳಿಸಿದ್ದಿದೆ. ಆರ್ ಅಶ್ವಿನ್ ಕೂಡ ಒಂದು ಹಂತದಲ್ಲಿ ನಿವೃತ್ತಿಯ ಆಲೋಚನೆಯಲ್ಲಿದ್ದರಂತೆ. ಇದಕ್ಕೆ ಗಾಯದ ಸಮಸ್ಯೆ ಮಾತ್ರವೇ ಕಾರಣವಲ್ಲ, ತಮ್ಮನ್ನು ಹುರಿದುಂಬಿಸುವವರು, ನೆರವಿಗೆ ನಿಲ್ಲುವವರು ಯಾರೂ ಇಲ್ಲದ ಅನಾಥ ಪರಿಸ್ಥಿತಿ ಆರ್ ಅಶ್ವಿನ್ ಅವರನ್ನ ಜರ್ಝರಿತಗೊಳಿಸಿತ್ತಂತೆ. ಹಾಗಂತ ಅವರು ಹೇಳಿಕೊಂಡಿದ್ಧಾರೆ.

  ಒಬ್ಬ ಕ್ರಿಕೆಟಿಗ ಫಾರ್ಮ್ ಕಳೆದುಕೊಂಡಾಗ ಆತನಿಗೆ ನಾವಿದ್ದೇವೆ, ನಿಶ್ಚಿಂತೆಯಿಂದಿರು ಎಂದು ಹೇಳುವವರ ಅಗತ್ಯತೆ ಇರುತ್ತದೆ. ಹಲವು ಕ್ರಿಕೆಟಿಗರಿಗೆ ಇಂಥ ಭಾಗ್ಯ ಸಿಕ್ಕಿದೆ. ನನಗೆ ಮಾತ್ರ ಯಾರೂ ಸಂತೈಸುವವರು ಇಲ್ಲವಾಗಿದ್ದರು ಎಂದು ಅಶ್ವಿನ್ ಬೇಸರ ವ್ಯಕ್ತಪಡಿಸಿದ್ದಾರೆ.

  ಇದನ್ನೂ ಓದಿ: ಸೌತ್ ಆಫ್ರಿಕಾದ ಬೌನ್ಸಿ ಪಿಚ್​ನಲ್ಲಿ ಆಡೋದು ಹೇಗೆ? ದ್ರಾವಿಡ್ ಅಂಡ್ ಟೀಮ್ ಬಳಿ ಇದೆ ಉತ್ತರ

  ರವಿಶಾಸ್ತ್ರಿ ಮಾತಿನಿಂದ ಘಾಸಿ:

  ಎರಡು ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದ ಕ್ರಿಕೆಟ್ ಸರಣಿ ವೇಳೆ ಆದ ವಿದ್ಯಮಾನಗಳನ್ನ ಮೆಲುಕು ಹಾಕಿದ ಆರ್ ಅಶ್ವಿನ್, ತಮಗೆ ರವಿಶಾಸ್ತ್ರಿ ಅವರ ಮಾತಿನಿಂದ ಘಾಸಿ ಆಗಿದ್ದ ಸಂಗತಿಯನ್ನ ಹೊರಗೆಡವಿದ್ದಾರೆ.

  2019ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯನ್ನ ಭಾರತ 2-1ರಿಂದ ಗೆದ್ದಿತ್ತು. ಅಡಿಲೇಡ್​ನಲ್ಲಿ ನಡೆದ ಪಂದ್ಯವನ್ನ ಭಾರತ ಗೆದ್ದಿತು. ಆ ಪಂದ್ಯದಲ್ಲಿ ಗಾಯದ ನೋವಲ್ಲೂ ಅಶ್ವಿನ್ ಉತ್ತಮವಾಗಿ ಬೌಲಿಂಗ್ ಮಾಡಿ ಪ್ರತೀ ಇನ್ನಿಂಗ್ಸಲ್ಲೂ 3 ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

  ಸಿಡ್ನಿಯಲ್ಲಿ ನಡೆದ ಸರಣಿಯ ಕೊನೆಯ ಪಂದ್ಯ ಡ್ರಾ ಆಯಿತು. ಕುಲದೀಪ್ ಯಾದವ್ ಐದು ವಿಕೆಟ್ ಪಡೆದು ಗಮನ ಸೆಳೆದರು. ಟೆಸ್ಟ್ ಸರಣಿ ಭಾರತದ ವಶವಾಯಿತು. ಈ ಬಗ್ಗೆ ಮಾತನಾಡಿದ ಆರ್ ಅಶ್ವಿನ್, ತಮ್ಮ ತಂಡದ ಕೋಚ್ ಆಗಿದ್ದ ರವಿಶಾಸ್ತ್ರಿ ಅವರ ಹೇಳಿಕೆಯಿಂದ ತನಗಾದ ನೋವನ್ನ ತೋಡಿಕೊಂಡಿದ್ಧಾರೆ.

  ಇದನ್ನೂ ಓದಿ: IPL Auction- ಐಪಿಎಲ್ ಹರಾಜು ಯಾವಾಗ, ಎಲ್ಲಿ, ಯಾಕೆ ವಿಳಂಬ?; ಇಲ್ಲಿದೆ ವಿವರ

  ವಿದೇಶೀ ವಿಕೆಟ್​ಗಳಲ್ಲಿ ಕುಲದೀಪ್ ಯಾದವ್ ನಮ್ಮ ತಂಡದ ಪ್ರಮುಖ ಸ್ಪಿನ್ನರ್ ಎಂದು ಕೋಚ್ ರವಿಶಾಸ್ತ್ರಿ ಹೇಳಿದ್ದು ಬಹಳ ನೋವು ಕೊಟ್ಟಿತು, ಘಾಸಿ ಮಾಡಿತ್ತು. ಕುಲದೀಪ್ ಯಾದವ್ ಸಿಡ್ನಿ ಮ್ಯಾಚ್​ನಲ್ಲಿ ಐದು ವಿಕೆಟ್ ಪಡೆದದ್ದು ಮಹಾನ್ ಸಾಧನೆಯಂತೂ ಹೌದು. ನಾನೂ ಕೂಡ ನಿಜವಾಗಿಯೂ ಖುಷಿಪಟ್ಟೆ. ಆದರೆ, ರವಿಶಾಸ್ತ್ರಿ ಆಡಿದ ಆ ಮಾತು ನನ್ನ ಖುಷಿಯನ್ನ ಕಿತ್ತುಕೊಂಡಿತು. ನಾನು ಅನಾಥ ಎಂಬಂತೆ ಭಾಸವಾಯಿತು. ತಂಡದೊಂದಿಗೆ ನಾನು ಇಲ್ಲವೇನೋ ಎಂಬಂತೆ ತೋರಿತು. ಅತೀವ ಗಾಯದಲ್ಲೂ ತಂಡದ ಗೆಲುವಿಗಾಗಿ ಆಡಿದ ನನಗೆ ಉತ್ಸಾಹವೇ ಬತ್ತಿಹೋದಂತಾಗಿತ್ತು ಎಂದು ಅಶ್ವಿನ್ ಹೇಳಿದ್ಧಾರೆ.

  ರವಿಶಾಸ್ತ್ರಿ ಬಗ್ಗೆ ಈಗಲೂ ನನಗೆ ಗೌರವ ಇದೆ. ಆದರೆ, ಆವತ್ತು ಅವರು ಹಾಗೆ ಹೇಳಿದ್ದು ನನಗೆ ನೋವು ಉಂಟು ಮಾಡಿತ್ತು ಅಷ್ಟೇ. ಸೋತು ಹೋದ ಆಟಗಾರನಿಗೆ ಹುರಿದುಂಬಿಸುವ ಮಾತುಗಳು ಅಗತ್ಯ ಇರುತ್ತವೆ. ನನಗೆ ಅದು ಸಿಗಲಿಲ್ಲ ಎಂಬುದಷ್ಟೇ ಬೇಸರ ಎಂದೂ ಅಶ್ವಿನ್ ಸ್ಪಷ್ಟಪಡಿಸಿದ್ಧಾರೆ.
  Published by:Vijayasarthy SN
  First published: