R Ashwin- ಆರ್ ಅಶ್ವಿನ್ ಯಶಸ್ಸಿನ ಗುಟ್ಟೇನು? ಟಿ20 ಬೌಲರ್ ಆಗಿ ರೂಪುಗೊಂಡ ಕಥೆ ರೋಚಕ

T20 World Cup- ನನ್ನ ಬೌಲಿಂಗ್​ನಲ್ಲಿ ಕೆಲ ಸೂಕ್ಷ್ಮ ಬದಲಾವಣೆಗಳು ಆಗಿವೆ. ಆದರೂ ಕೂಡ ನಾನು ಎಸೆಯೋದು ಕೇರಮ್ ಬಾಲ್ ಅಂತಾರೆ. ಆಟ ಗೊತ್ತಿಲ್ಲದವರು ಮಾಡುವ ಟೀಕೆಗೆ ನಾನು ಕೇರ್ ಮಾಡಲ್ಲ ಎಂದಿದ್ದಾರೆ ಆರ್ ಅಶ್ವಿನ್.

ಆರ್ ಅಶ್ವಿನ್

ಆರ್ ಅಶ್ವಿನ್

 • Share this:
  ರವಿಚಂದ್ರನ್ ಅಶ್ವಿನ್… ಭಾರತೀಯ ಕ್ರಿಕೆಟ್ ಕ್ಷೇತ್ರದಲ್ಲಿ ಇದು ಇತ್ತೀಚೆಗೆ ಬಹಳ ಚಾಲನೆಯಲ್ಲಿರುವ ಹೆಸರು. ಹೆಚ್ಚು ವಿವಾದಗಳಿಗೂ ಗುರಿಯಾದ ಹೆಸರು. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದಿಂದ ಇವರ ಸುತ್ತ ಏನಾದರೂ ಸುದ್ದಿ, ವಿವಾದ ಸುತ್ತುತ್ತಲೇ ಇದೆ. ಆರ್ ಅಶ್ವಿನ್ (R Ashwin) ಅವರನ್ನ ಹೊಗಳುವವರು ಎಷ್ಟು ಮಂದಿ ಇದ್ದಾರೋ, ಜರಿಯುವವರೂ ಅಷ್ಟೇ ಮಂದಿ ಇದ್ದಾರೆ. ಆದರೆ, ಯಾವುದಕ್ಕೂ ಆರ್ ಅಶ್ವಿನ್ ಅವರದ್ದು ಡೋಂಟ್ ಕೇರ್. ತನಗೆ ಸರಿ ಅನಿಸಿದ್ದನ್ನ ಮಾಡಿ ತೋರಿಸುವ, ಆಡಿ ಹೇಳುವ ವ್ಯಕ್ತಿತ್ವವ ಆರ್ ಅಶ್ವಿನ್ ಅವರದ್ದು.

  ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದರೂ ಮೊದಲೆರಡು ಪಂದ್ಯಗಳಲ್ಲಿ ಆಡಲು ಅವಕಾಶ ಕೊಡಲಿಲ್ಲ. ಎರಡೂ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋತಿತು. ಬಹಳಷ್ಟು ಮಾಜಿ ಆಟಗಾರರು ಇದಕ್ಕೆ ಆಕ್ಷೇಪಿಸಿದರು. ದೇಶದ ಅತ್ಯುತ್ತಮ ಸ್ಪಿನ್ನರ್​ಗೆ ಆಡಲು ಅವಕಾಶ ಕೊಡಲಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ಮೊನ್ನೆ ಅಫ್ಘಾನಿಸ್ತಾನ ವಿರುದ್ಧ ಆಡುವ ಚಾನ್ಸ್ ಸಿಕ್ಕಿತು. 4 ಓವರ್​ನಲ್ಲಿ 14 ರನ್ನಿತ್ತು 2 ವಿಕೆಟ್ ಕಬಳಿಸಿ ತಮ್ಮ ಮೌಲ್ಯವನ್ನು ಜಗಜ್ಜಾಹೀರುಗೊಳಿಸಿದರು.

  ಆರ್ ಅಶ್ವಿನ್ ಅವರಿಗೆ 2017ರ ನಂತರ ಮೊದಲ ಟಿ20 ಅಂತರರಾಷ್ಟ್ರೀಯ ಪಂದ್ಯವಾಗಿತ್ತು ಮೊನ್ನೆಯದ್ದು. ಅವರನ್ನ ಟೆಸ್ಟ್ ಕ್ರಿಕೆಟ್​ನ ಬೌಲರ್ ಎಂದು ಹಲವರು ಬ್ರ್ಯಾಂಡ್ ಮಾಡಿಬಿಟ್ಟಿದ್ದರು. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಆಡಿದ್ದೇ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಿತ್ತು. ಅದಾದ ಬಳಿಕ ಮೊನ್ನೆ ಅವರು ಕಂಬ್ಯಾಕ್ ಮಾಡಿದ್ಧಾರೆ. ಇಂಗ್ಲೆಂಡ್​ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದರೂ ಆರ್ ಅಶ್ವಿನ್ ಅವರಿಗೆ ಆಡಲು ಅವಕಾಶ ಕೊಟ್ಟಿರಲಿಲ್ಲ. ಹಲವರು ಅಶ್ವಿನ್​ರನ್ನ ಆಡಿಸಬೇಕು ಎಂದು ಎಷ್ಟೋ ಹೇಳಿದರೂ ಕೊಹ್ಲಿ ಕಿವಿಗೊಡಲಿಲ್ಲ ಎನ್ನಲಾಗಿದೆ.

  ಅಶ್ವಿನ್ ಆದಿಯಾಗಿ ಒಂದಷ್ಟು ಆಟಗಾರರು ನಾಯಕ ವಿರಾಟ್ ಕೊಹ್ಲಿ ವಿರುದ್ಧ ಸಿಡಿದೆದ್ದು ಬಿಸಿಸಿಐಗೆ ಕಂಪ್ಲೇಂಟ್ ಕೊಟ್ಟಿದ್ದರೆಂಬ ವರದಿಗಳಿವೆ. ಇದರಿಂದಾಗಿಯೇ ಕೊಹ್ಲಿ ಟಿ20 ತಂಡದ ನಾಯಕತ್ವ ಬಿಡಬೇಕಾದ ಪರಿಸ್ಥಿತಿ ಬಂದಿದೆ ಎಂಬ ಮಾತಿದೆ.

  ಇದನ್ನೂ ಓದಿ: T20 World Cup- ಭಾರತ ಮುಂದಿನ ಪಂದ್ಯಗಳನ್ನ ಎಷ್ಟು ಅಂತರದಿಂದ ಗೆಲ್ಲಬೇಕು? ಇಲ್ಲಿದೆ ಲೆಕ್ಕಾಚಾರ

  ಅದೇನೇ ಇರಲಿ, ಆರ್ ಅಶ್ವಿನ್ ತಮಗೆ ಕೊಟ್ಟ ಅವಕಾಶವನ್ನು ಸರಿಯಾಗಿ ಉಪಯೋಗಿಸಿ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಅಂಗಳದಲ್ಲಿದ್ದರೂ ಆಡಲು ಅವಕಾಶ ಸಿಗದೇ ಇದ್ದ ಬಗ್ಗೆ ಆರ್ ಅಶ್ವಿನ್ ಅವರಿಗೆ ಏನನಿಸುತ್ತಿತ್ತು? ಅದಕ್ಕೆ ಅವರೇ ಉತ್ತರ ಕೊಟ್ಟಿದ್ಧಾರೆ:

  ಜೀವನ ಚಕ್ರ:

  “ಜೀವನ ಒಂದು ಚಕ್ರ ಎಂಬುದನ್ನು ನಂಬುವವ ನಾನು. ಕೆಲವರಿಗೆ ಈ ಚಕ್ರ ಚಿಕ್ಕದಿರುತ್ತದೆ. ಕೆಲವರಿಗೆ ದೊಡ್ಡದಿರುತ್ತದೆ. ನಿಮ್ಮ ಸಂಕಷ್ಟದ ಕಾಲದಲ್ಲಿ ಸಾಧ್ಯವಾದಷ್ಟೂ ವಿನಮ್ರತೆಯಿಂದ ಇರುವುದು ಮುಖ್ಯ. ನನಗೆ ಯಾಕೆ ಅವಕಾಶ ಕೊಡಲಿಲ್ಲ ಎಂದು ಹೆಚ್ಚು ಯೋಚಿಸಲು ಹೋಗುವುದಿಲ್ಲ….

  ”…ಉತ್ಸಾಹ ಮತ್ತು ಭರವಸೆ ಕಳೆದುಕೊಂಡು ಬಾಗಿಲು ಮುಚ್ಚಿಕೊಳ್ಳುವುದು, ಅದರ ಹಿಂದೆ ಅಡಗಿಕೊಳ್ಳುವುದು, ಅಸಮಾಧಾನ ವ್ಯಕ್ತಪಡಿಸುತ್ತಾ ಇರುವುದು ಇಂಥವನ್ನು ನಾನು ಖಂಡಿತ ಮಾಡುವುದಿಲ್ಲ” ಎಂದು ಅಶ್ವಿನ್ ಹೇಳಿದ್ಧಾರೆ.

  ಜೀವನದಲ್ಲಿ ಯಶಸ್ಸಿಗಿಂತ ವೈಫಲ್ಯವೇ ಹೆಚ್ಚು ಎನ್ನುವವ ನಾನು:

  ಇಡೀ ವೃತ್ತಿಜೀವನದಲ್ಲಿ ಒಬ್ಬ ವ್ಯಕ್ತಿಗೆ ಯಶಸ್ಸಿಗಿಂತ ವೈಫಲ್ಯವೇ ಹೆಚ್ಚು ಎಂಬ ಶೇನ್ ವಾರ್ನ್ ತತ್ವವನ್ನ ಆರ್ ಅಶ್ವಿನ್ ಇದೇ ವೇಳೆ ಉಲ್ಲೇಖಿಸಿದ್ದಾರೆ.

  “ಯಶಸ್ಸಿನ ಬಗ್ಗೆ ಶೇನ್ ವಾರ್ನ್ ಹೇಳಿದ್ದ ಒಂದು ಮಾತನನ್ನು ನಾನು ಒಪ್ಪುತ್ತೇನೆ. ನಿಮಗೆ ಯಶಸ್ಸು ಸಿಗುವುದು ಕೇವಲ ಶೇ. 33 ಮಾತ್ರ. ಸಚಿನ್ ತೆಂಡೂಲ್ಕರ್ ಕೂಡ ತಮ್ಮ ವೃತ್ತಿಜೀವನದ ಒಂದು ಅವಧಿಯಲ್ಲಿ ಈ ಮಾತನ್ನ ಪುನರುಚ್ಚರಿಸಿದ್ದರು. ಅಂಥವರೇ ಆ ಮಾತು ಹೇಳುತ್ತಿರುವಾಗ ಇಲ್ಲ ಎನ್ನಲು ನಾನ್ಯಾರು?” ಎಂದಿದ್ಧಾರೆ.

  ಇದನ್ನೂ ಓದಿ: Rishabh Single Hand Six- ಒಂದೇ ಕೈಯಲ್ಲಿ ಸಿಕ್ಸರ್; ರಿಷಭ್ ಪಂತ್ ಆಟಕ್ಕೆ ಸಖತ್ ಮೀಮ್ಸ್

  ವಿನಾಕಾರಣ ಬೆಂಚ್ ಕಾಯಿಸಿದರೆ?

  “ಇದಕ್ಕೆ ಸುಲಭ ಪರಿಹಾರ ಎಂದರೆ ನೀವು ಸರ್ವಸನ್ನದ್ಧ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಶ್ರಮ ಪಡುತ್ತಲೇ ಇರಬೇಕು. ಯಾವತ್ತಾದರೂ ಒಂದು ದಿನ ಅವಕಾಶ ನಿಮ್ಮನರಸಿ ಬಂದೇ ಬರುತ್ತದೆ ಎಂಬ ನಿರೀಕ್ಷೆಯಲ್ಲಿರಬೇಕು. ಆ ಅವಕಾಶ ಬಂದರೆ ನಿಮಗೆ ಅಡೆತಡೆಗಳನ್ನ ನಿವಾರಿಸುವ ಸಲಕರಣೆ ನಿಮ್ಮ ಬಳಿಯೇ ಇರುತ್ತದೆ. ಹೀಗಾಗಿ ಅಂಥದ್ದೊಂದು ದಿನಕ್ಕಾಗಿ ನೀವು ಎದುರು ನೋಡುತ್ತಾ ಸನ್ನದ್ಧವಾಗಿರಬೇಕು” ಎಂಬುದು ಭಾರತದ ಆಫ್ ಸ್ಪಿನ್ನರ್ ಅನಿಸಿಕೆ.

  ಆಟ ಗೊತ್ತಿಲ್ಲದವರಿಂದ ಟೀಕೆ:

  ಆರ್ ಅಶ್ವಿನ್ ಬೌಲಿಂಗ್ ಬಗ್ಗೆ ಕೆಲವರು ತೀವ್ರವಾಗಿ ಟೀಕೆ ಮಾಡಿದ್ದಿದೆ. ಅಶ್ವಿನ್ ಟಿ20 ಕ್ರಿಕೆಟ್​ಗೆ ನಾಲಾಯಕ್ ಎಂದು ಸಂಜಯ್ ಮಂಜ್ರೇಕರ್ ಆದಿಯಾಗಿ ಕೆಲ ಮಾಜಿ ಕ್ರಿಕೆಟಿಗರು ಹೇಳಿದ್ದಾರೆ. ಆದರೆ, ಅಶ್ವಿನ್ ಇವರಿಗೆಲ್ಲಾ ತಿರುಗೇಟು ಕೊಟ್ಟಿದ್ಧಾರೆ.

  “ನಾನು ಟಿ20 ಬೌಲರ್ ಆಗಿ ರೂಪುಗೊಂಡ ಬಳಿಕ ಬೌಲಿಂಗ್​ನಲ್ಲಿ ಸೂಕ್ಷ್ಮ ಬದಲಾವಣೆ ಮಾಡಿದ್ದೇನೆ. ಆದರೆ ಅದನ್ನ ಗುರುತಿಸದ ಜನರು ಈಗಲೂ ನನ್ನ ಎಸೆತವನ್ನ ಕೇರಮ್ ಬಾಲ್, ಆರ್ಮ್ ಬಾಲ್ ಎಂದು ಕರೆಯುತ್ತಾರೆ. ಆದರೆ, ಆ ವೇರಿಯೇಶನ್ ಬಹಳ ಸೂಕ್ಷ್ಮ ಸ್ತರದ್ದು. ನಾನು ವಿಭಿನ್ನ ಕೋನಗಳನ್ನ ಮತ್ತು ವೇಗಗಳ ಪ್ರಯೋಗ ಮಾಡುತ್ತಿದ್ದೇನೆ… ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಗುಲ್ಬದಿನ್ ನಯೀಬ್ ಅವರಿಗೆ ನಾನು ಎಸೆದ ಚೆಂಡು ಕೇರಮ್ ಬಾಲ್ ಅಂತೂ ಅಲ್ಲ. ಈಗ ನನ್ನ ಬಳಿ ಆಗಿಗಿಂತಲೂ ಹಲವಾರು ಆಯ್ಕೆಗಳಿವೆ” ಎಂದು ಅವರು ತಿಳಿಸಿದ್ದಾರೆ.

  ಇದನ್ನೂ ಓದಿ: BBL- ಉನ್ಮುಕ್ತ್ ಚಂದ್, ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್​ನಲ್ಲಿ ಆಡಲಿರುವ ಭಾರತದ ಮೊದಲ ಆಟಗಾರ

  ಅಶ್ವಿನ್ ಸಿಂಪಲ್ ಫಾರ್ಮುಲಾ:

  ಬಲಗೈ ಆಫ್ ಸ್ಪಿನ್ನರ್ ಆಗಿರುವ ಆರ್ ಅಶ್ವಿನ್ ಅವರು ಬಲಗೈ ಬ್ಯಾಟರ್​ಗೆ ಯಾವ ರೀತಿ ಬೌಲ್ ಮಾಡುತ್ತಾರೆ? ಎಡಗೈ ಬ್ಯಾಟರ್​ಗೆ ಯಾವ ರೀತಿ ಬೌಲ್ ಮಾಡುತ್ತಾರೆ? ಇದಕ್ಕೆ ಅಶ್ವಿನ್ ಹೇಳುವುದು ಈ ಸಿಂಪಲ್ ಸೂತ್ರ:

  “ನಾನು ಬಲಗೈ ಬ್ಯಾಟುಗಾರನಿಗೆ ಬೌಲ್ ಮಾಡುವಾಗ ಎಡಗೈ ಸ್ಪಿನ್ನರ್​ನಂತೆ ಯೋಚಿಸುತ್ತೇನೆ. ಎಡಗೈ ಬ್ಯಾಟುಗಾರನಿಗೆ ಬೌಲ್ ಮಾಡುವಾಗ ಆಫ್ ಸ್ಪಿನ್ನರ್​ನಂತೆ ಯೋಚಿಸುತ್ತೇನೆ. ಆ ರೀತಿ ಯೋಚಿಸಿದಾಗ ಒಂದು ಉದ್ದೇಶ ಸೃಷ್ಟಿ ಆಗುತ್ತದೆ…” ಎನ್ನುತ್ತಾರೆ.

  ಒಂದು ವಿಕೆಟ್ ಪಡೆಯುವುದರ ಸುತ್ತಲಿನ ಕಥೆ:

  ವಿಕೆಟ್ ಇದ್ದಕ್ಕಿದ್ದಂತೆ ಬೀಳುವುದಿಲ್ಲ. ಅದಕ್ಕೆ ಒಂದು ಪ್ರಕ್ರಿಯೆಯೇ ಇರುತ್ತದೆ. ಒಬ್ಬ ಬೌಲರ್ ಒಂದು ವಿಕೆಟ್ ಪಡೆದರೆ ಅದಕ್ಕೆ ಮುಂಚೆ ಆ ವಿಕೆಟ್ ಬೀಳಲು ಪೂರಕವಾದಂಥ ವಾತಾವರಣ ಸೃಷ್ಟಿಸುವ ಒಂದು ಓವರ್ ಆಗಿರುತ್ತದೆ. ಒಬ್ಬ ಬೌಲರ್​ನ ಓವರ್​ನಲ್ಲಿ ಡಾಟ್ ಬಾಲ್​ಗಳು ಬಂದ ಫಲವಾಗಿ ಇನ್ನೊಬ್ಬ ಬೌಲರ್​ಗೆ ವಿಕೆಟ್ ದೊರಕಿರುತ್ತದೆ ಎಂದು ಅಶ್ವಿನ್ ವಾದ ಮುಂದಿಡುತ್ತಾರೆ.
  Published by:Vijayasarthy SN
  First published: