ವಿಜಯ್ ಹಝಾರೆ ಟೂರ್ನಿಯಲ್ಲಿ ಅಬ್ಬರಿಸುವ ಮೂಲಕ ಪಂಜಾಬ್ ತಂಡ ಆಲ್ರೌಂಡರ್ ಅಭಿಷೇಕ್ ಶರ್ಮಾ ದಾಖಲೆ ಬರೆದಿದ್ದಾರೆ. ಮಧ್ಯಪ್ರದೇಶದ ವಿರುದ್ಧದ ಪಂದ್ಯದಲ್ಲಿ ಕೇವಲ 42 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ದೇಶೀಯ ಏಕದಿನ ಟೂರ್ನಿಯಲ್ಲಿ ಅತೀ ವೇಗದ ಶತಕದ ಸಿಡಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಮಧ್ಯಪ್ರದೇಶ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಬಿರುಸಿನ ಆರಂಭ ಒದಗಿಸಿದ ವೆಂಕಟೇಶ್ ಅಯ್ಯರ್ ಹಾಗೂ ಅಭಿಷೇಕ್ ಭಂಡಾರಿ ಮೊದಲ ವಿಕೆಟ್ಗೆ ಅರ್ಧಶತಕಗಳ ಜೊತೆಯಾಟವಾಡಿದರು. ಇದರ ನಡುವೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಅಯ್ಯರ್ ಸಿಕ್ಸ್ - ಫೋರ್ಗಳ ಸುರಿಮಳೆಗೈದರು.
135 ಎಸೆತಗಳಲ್ಲಿ 20 ಬೌಂಡರಿ ಹಾಗೂ 7 ಸಿಕ್ಸರ್ಗಳೊಂದಿಗೆ 198 ರನ್ ಬಾರಿಸಿದ ವೆಂಕಟೇಶ್ ಅಯ್ಯರ್ ರನೌಟ್ ಆಗುವ ಮೂಲಕ ಡಬಲ್ ಸೆಂಚುರಿಯಿಂದ ವಂಚಿತರಾದರು. ಮತ್ತೊಂದೆಡೆ ರಜತ್ ಪಾಟಿಧಾರ್ (54) ಹಾಗೂ ಆದಿತ್ಯ ಶ್ರೀವಾತ್ಸವ (88) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಮಧ್ಯಪ್ರದೇಶದ ಸ್ಕೋರ್ 400ರ ಗಡಿದಾಟಿತು. ಅಂತಿಮವಾಗಿ 50 ಓವರ್ಗಳಲ್ಲಿ ಮಧ್ಯಪ್ರದೇಶ 3 ವಿಕೆಟ್ ನಷ್ಟಕ್ಕೆ 402 ರನ್ಗಳಿಸಿತು.
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಪಂಜಾಬ್ಗೆ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಭರ್ಜರಿ ಆರಂಭ ಒದಗಿಸಿದರು. ಮೊದಲ ಎಸೆತದಿಂದಲೇ ಹೊಡಿಬಡಿ ಆಟಕ್ಕೆ ಮುಂದಾದ ಅಭಿಷೇಕ್ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ತಲುಪಿಸಿದರು. ಅದರಲ್ಲೂ ಎಡಗೈ ದಾಂಡಿಗ ಸಿಕ್ಸರ್ಗಳ ಮೂಲಕ ಬ್ಯಾಕ್ ಟು ಬ್ಯಾಕ್ ಚೆಂಡನ್ನು ಸ್ಟೇಡಿಯಂನತ್ತ ಸಿಡಿಸಿದರು.
ಪರಿಣಾಮ ಅಭಿಷೇಕ್ ಬ್ಯಾಟ್ನಿಂದ 9 ಭರ್ಜರಿ ಸಿಕ್ಸರ್ ಹಾಗೂ 8 ಬೌಂಡರಿಗಳು ಮೂಡಿಬಂದವು. ಕೇವಲ 42 ಎಸೆತಗಳಲ್ಲಿ ಶತಕ ಪೂರೈಸಿದರು. ಅಲ್ಲದೆ 49 ಎಸೆತಗಳಲ್ಲಿ 104 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಭರ್ಜರಿ ಇನಿಂಗ್ಸ್ ಮೂಲಕ ಇತ್ತೀಚೆಗೆ ಸೂರ್ಯಕುಮಾರ್ ಯಾದವ್ ಬರೆದ 50 ಎಸೆತಗಳ ಶತಕದ ದಾಖಲೆಯನ್ನು ಅಭಿಷೇಕ್ ಅಳಿಸಿಹಾಕಿದರು. ಅಲ್ಲದೆ ವಿಜಯ್ ಹಝಾರೆ ಟೂರ್ನಿಯಲ್ಲಿ ಅತೀ ವೇಗದ ಶತಕ ಬಾರಿಸಿದ 2ನೇ ಆಟಗಾರ ಎಂಬ ಹೆಗ್ಗಳಿಕೆ 20 ವರ್ಷದ ಅಭಿಷೇಕ್ ಪಾತ್ರರಾದರು.
ಇನ್ನು ವಿಜಯ್ ಹಝಾರೆ ಟೂರ್ನಿಯಲ್ಲಿ ಅತೀ ವೇಗದ ಶತಕದ ದಾಖಲೆ ಯೂಸುಫ್ ಪಠಾಣ್ ಹೆಸರಿನಲ್ಲಿದೆ. 2009-10ರ ಸೀಸನ್ನಲ್ಲಿ ಪಠಾಣ್ ಬರೋಡಾ ಪರ 40 ಎಸೆತಗಳಲ್ಲಿ 108 ರನ್ ಸಿಡಿಸಿದ್ದರು. ಇದೀಗ 49 ಎಸೆತಗಳಲ್ಲಿ ಸೆಂಚುರಿ ಬಾರಿಸಿ ಅಭಿಷೇಕ್ ಶರ್ಮಾ ಕೂಡ ದಾಖಲೆ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ