PSL 6: ಇಮ್ರಾನ್ ತಾಹಿರ್ ಸ್ಪಿನ್ ಮೋಡಿ: ಚೊಚ್ಚಲ ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದ ಮುಲ್ತಾನ್ ಸುಲ್ತಾನ್ಸ್

Imran Tahir: 16 ಓವರ್​ನಲ್ಲಿ 150 ರ ಗಡಿದಾಟಿದ್ದ ಪೇಶಾವರ್ ಝಲ್ಮಿ ಅಂತಿಮ ಓವರ್​ವರೆಗೂ ಹೋರಾಟ ಮುಂದುವರೆಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ವೇಳೆ ದಾಳಿಗಿಳಿದ ಇಮ್ರಾನ್ ತಾಹಿರ್ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು.

Multan Sultans' Imran Tahir

Multan Sultans' Imran Tahir

 • Share this:
  ಕೊರೋನಾ ಕಾರಣದಿಂದ ಅಬುಧಾಬಿಯಲ್ಲಿ ಆಯೋಜನೆಗೊಂಡಿದ್ದ ಪಾಕಿಸ್ತಾನ್ ಸೂಪರ್ ಲೀಗ್​ ಸೀಸನ್ 6 ಮುಕ್ತಾಯಗೊಂಡಿದೆ. ಫೈನಲ್​ನಲ್ಲಿ ಬಲಿಷ್ಠ ಪೇಶಾವರ್ ಝಲ್ಮಿ ತಂಡವನ್ನು ಬಗ್ಗು ಬಡಿಯುವ ಮೂಲಕ ಮುಲ್ತಾನ್ ಸುಲ್ತಾನ್ಸ್ ಇದೇ ಮೊದಲ ಬಾರಿಗೆ ಪಿಎಸ್​ಎಲ್​ ಕಿರೀಟಕ್ಕೆ ಮುತ್ತಿಕ್ಕಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಪೇಶಾವರ್ ಝಲ್ಮಿ ತಂಡದ ನಾಯಕ ವಹಾಬ್ ರಿಯಾಝ್ ಬೌಲಿಂಗ್ ಆಯ್ದುಕೊಂಡರು. ಅತ್ತ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಮುಲ್ತಾನ್ ಸುಲ್ತಾನ್ಸ್ ಆರಂಭಿಕರು ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ಬಳಸಿಕೊಂಡರು.

  ಆರಂಭಿಕರಾಗಿ ಕಣಕ್ಕಿಳಿದ ನಾಯಕ ಮೊಹಮ್ಮದ್ ರಿಝ್ವಾನ್ ಹಾಗೂ ಶಾನ್ ಮಸೂದ್ ತಂಡಕ್ಕೆ ಸ್ಪೋಟಕ ಆರಂಭ ಒದಗಿಸಿದರು. ಮೊದಲ 6 ಓವರ್​ನಲ್ಲೇ ತಂಡದ ಮೊತ್ತವನ್ನು 50ರ ಗಡಿದಾಟಿಸಿದ ಈ ಜೋಡಿ ಮುಲ್ತಾನ್ ಸುಲ್ತಾನ್ಸ್​ ಬೃಹತ್ ಸ್ಕೋರ್​ಗೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಈ ಹಂತದಲ್ಲಿ ಇಮ್ರಾನ್ ಎಸೆತದಲ್ಲಿ ಮಸೂದ್ (37) ಕ್ಲೀನ್ ಬೌಲ್ಡ್ ಆದರು. ಇನ್ನೊಂದೆಡೆ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ್ದ ರಿಝ್ವಾನ್ (30) ಮೊದಲ ಹತ್ತು ಓವರ್​ನಲ್ಲಿ ತಂಡದ ಮೊತ್ತವನ್ನು 83ಕ್ಕೆ ತಂದು ನಿಲ್ಲಿಸಿ ವಿಕೆಟ್ ಒಪ್ಪಿಸಿದರು.

  ಈ ಹಂತದಲ್ಲಿ ಕಣಕ್ಕಿಳಿದ ಮಕ್ಸೂದ್ ಹಾಗೂ ರಿಲೀ ರೊಸೊ ಪೇಶಾವರ್​ ಬೌಲರುಗಳ ಬೆಂಡೆತ್ತಿದ್ದರು. ಸಿಕ್ಸ್-ಫೋರ್​ಗಳ ಸುರಿಮಳೆಗೈದ ಈ ಜೋಡಿ ಭರ್ಜರಿ ಜೊತೆಯಾಟವಾಡಿದರು. 35 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ ಮಕ್ಸೂದ್ 65 ರನ್​ ಬಾರಿಸಿದರೆ, ರೊಸೊ 3 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಇಬ್ಬರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಮುಲ್ತಾನ್ ಸುಲ್ತಾನ್ಸ್ ನಿಗದಿತ 20 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 206 ರನ್​ ಕಲೆಹಾಕಿತು.  ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಪೇಶಾವರ್ ಝಲ್ಮಿಗೆ ಉತ್ತಮ ಆರಂಭ ಒದಗಿಸುವಲ್ಲಿ ಕಮ್ರಾನ್ ಅಕ್ಮಲ್ ಹಾಗೂ ಹಝ್ರತುಲ್ಲಾ ಝಝೈ ಯಶಸ್ವಿಯಾಗಿದ್ದರು. ಮೊದಲ ವಿಕೆಟ್​ಗೆ ಸ್ಪೋಟಕ 42 ರನ್​ ಬಾರಿಸಿದ ಈ ಜೋಡಿಯನ್ನು ಬೇರ್ಪಡಿಸಲು ಕೊನೆಗೂ ಮಝ್ರಬಾನಿ ಯಶಸ್ವಿಯಾದರು. ಇದರ ಬೆನ್ನಲ್ಲೇ ಕಮ್ರಾನ್ ಅಕ್ಮಲ್ (36) ಕೂಡ ಇಮ್ರಾನ್ ಖಾನ್​ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಕಣಕ್ಕಿಳಿದ ಶೊಯೇಬ್ ಮಲಿಕ್ 3 ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ ಸ್ಪೋಟಕ 48 ರನ್​ ಚಚ್ಚಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ಆದರೆ ಸೊಹೈಲ್ ತನ್ವೀರ್ ಎಸೆತದಲ್ಲಿ ಇಮ್ರಾನ್ ತಾಹಿರ್ ಹಿಡಿದ ಅತ್ಯುತ್ತಮ ಕ್ಯಾಚ್​ಗೆ ಮಲಿಕ್ ಹೊರನಡೆಯಬೇಕಾಯಿತು.  16 ಓವರ್​ನಲ್ಲಿ 150 ರ ಗಡಿದಾಟಿದ್ದ ಪೇಶಾವರ್ ಝಲ್ಮಿ ಅಂತಿಮ ಓವರ್​ವರೆಗೂ ಹೋರಾಟ ಮುಂದುವರೆಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ವೇಳೆ ದಾಳಿಗಿಳಿದ ಇಮ್ರಾನ್ ತಾಹಿರ್ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು. 17ನೇ ಓವರ್​ನಲ್ಲಿ ಅಪಾಯಕಾರಿ ಬ್ಯಾಟ್ಸ್​ಮನ್ ರುದರ್​ಫೋರ್ಡ್​ (180, ವಹಾಬ್ ರಿಯಾಝ್ ಹಾಗೂ ಮೊಹಮ್ಮದ್ ಇಮ್ರಾನ್ ವಿಕೆಟ್ ಉರುಳಿಸುವ ಮೂಲಕ ಮುಲ್ತಾನ್ ಸುಲ್ತಾನ್ಸ್ ತಂಡದ ಗೆಲುವನ್ನು ಖಚಿತಪಡಿಸಿದರು. ಅಂತಿಮವಾಗಿ ಪೇಶಾವರ್ ಝಲ್ಮಿ ನಿಗದಿತ 20 ಓವರ್​ನಲ್ಲಿ 9 ವಿಕೆಟ್ ನಷ್ಟಕ್ಕೆ 159 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ 47 ರನ್​ಗಳ ಭರ್ಜರಿ ಜಯದೊಂದಿಗೆ ಮುಲ್ತಾನ್ ಸುಲ್ತಾನ್ಸ್ ಚೊಚ್ಚಲ ಬಾರಿ ಪಿಎಸ್​ಎಲ್ ಕಿರೀಟವನ್ನು ತನ್ನದಾಗಿಸಿಕೊಂಡಿತು.
  Published by:zahir
  First published: