ಲಕ್ನೋ, ಅ. 27: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೂರು ದಿನಗಳ ಹಿಂದೆ ದುಬೈ ನಡೆದ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಭರ್ಜರಿ ಗೆಲುವು ಪಡೆದಿತ್ತು. ಆ ವೇಳೆ ಭಾರತದ ಕೆಲವೆಡೆ ಕೆಲವರು ಸಂಭ್ರಮಾಚರಣೆ ನಡೆಸಿದ್ದು ವರದಿಯಾಗಿತ್ತು. ಹಾಗೆಯೇ, ಉತ್ತರ ಪ್ರದೇಶದಲ್ಲಿ ಪಾಕಿಸ್ತಾನದ ಗೆಲುವನ್ನು ಸಂಭ್ರಮಿಸಿದ ಆರೋಪದ ಮೇಲೆ ಇಲ್ಲಿನ ಪೊಲೀಸರು ಐದು ಜಿಲ್ಲೆಗಳಿಂದ ಒಟ್ಟು ಏಳು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಾಲ್ವರನ್ನು ಬಂಧಿಸಿರುವುದು ತಿಳಿದುಬಂದಿದೆ. ಈ ಆರೋಪಿಗಳು ಪಂದ್ಯದ ಬಳಿಕ ಪಟಾಕಿ ಸಿಡಿಸಿದ್ದು, ಪಾಕಿಸ್ತಾನ ಪರ ಘೋಷಣೆ ಕೂಗಿದ್ದು, ವಾಟ್ಸಾಪ್ ಮತ್ತು ಫೇಸ್ಬುಕ್ನಲ್ಲಿ ಪಾಕಿಸ್ತಾನ ಪರ ಫೋಟೋ, ಸ್ಟೇಟಸ್ ಹಾಕಿಕೊಂಡಿದ್ದರೆನ್ನಲಾಗಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ
ಯೋಗಿ ಆದಿತ್ಯನಾಥ್ ಅವರ ಕಚೇರಿಯಿಂದ ಬಂದ ಮಾಹಿತಿ ಪ್ರಕಾರ ಏಳು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಅವರಲ್ಲಿ ನಾಲ್ವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ಧಾರೆ. ಆಗ್ರಾದಲ್ಲಿ ಪಾಕಿಸ್ತಾನ ಪರ ಹಾಗು ಭಾರತ ವಿರೋಧಿ ಘೋಷಣೆ ಕೂಗಿದ ಮೂವರನ್ನು ಬಂಧಿಸಲಾಗಿದೆ. ಇವರ ವಿರುದ್ಧ ಐಪಿಸಿ ಸೆಕ್ಷನ್ 505(1)ಬಿ, 153ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ವಾಟ್ಸಾಪ್ನಲ್ಲಿ ಪಾಕಿಸ್ತಾನ ಪರ ಸ್ಟೇಟಸ್ ಹಾಕಿದ್ದ ಒಬ್ಬ ವ್ಯಕ್ತಿಯನ್ನ ಲಕ್ನೋ ನಗರದಲ್ಲಿ ಬಂಧಿಸಲಾಗಿದೆ. ಇದೇ ಪಾಕ್ ಪರ ವಾಟ್ಸಾಪ್ ಸ್ಟೇಟಸ್ ಹಾಕಿದ್ದ ಬರೇಲಿ ನಗರದ ಇಬ್ಬರ ಮೇಲೂ ಕೇಸ್ ದಾಖಲಾಗಿದೆ. ಫೇಸ್ಬುಕ್ನಲ್ಲಿ ಪಾಕಿಸ್ತಾನದ ದ್ವಜ ಹಾಕಿದ ಕಾರಣಕ್ಕೆ ಬರೇಲಿಯಲ್ಲಿ ಮತ್ತೊಬ್ಬ ವ್ಯಕ್ತಿಯನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮೂವರು ಕಾಶ್ಮೀರಿ ವಿದ್ಯಾರ್ಥಿಗಳು ವಜಾ:
ಟಿ20 ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದ ಬಳಿಕ ಪಾಕಿಸ್ತಾನದ ಆಟಗಾರರನ್ನು ಪ್ರಶಂಸಿಸಿ ವಾಟ್ಸಾಪ್ ಸ್ಟೇಟಸ್ ಹಾಕಿದ್ದ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನ ಕಾಶ್ಮೀರದ ಕಾಲೇಜಿನಿಂದ ಡಿಸ್ಮಿಸ್ ಮಾಡಲಾಗಿತ್ತು. ಈ ಮೂವರ ವಿರುದ್ಧ ಜಗದೀಶಪುರ ಪೊಲೀಸ್ ಠಾಣೆಯಲ್ಲಿ ಸ್ಥಳೀಯ ಬಿಜೆಪಿ ಯುವ ಮುಖಂಡರು ದೂರು ದಾಖಲಿಸಿದ್ದಾರೆ.
ರಾಜಸ್ಥಾನದ ಶಿಕ್ಷಕಿ ಅಮಾನತು:
ಭಾರತದ ಸೋಲನ್ನು ಸಂಭ್ರಮಿಸಿ ವಾಟ್ಸಾಪ್ ಸ್ಟೇಟಸ್ ಹಾಕಿದ್ದ ಶಿಕ್ಷಕಿಯನ್ನು ಕೆಲಸದಿಂದ ಅಮಾನತುಗೊಳಿಸಿರುವ ಘಟನೆ ರಾಜಸ್ಥಾನದಿಂದ ವರದಿಯಾಗಿತ್ತು. ಉದಯಪುರದ ಖಾಸಗಿ ಶಾಲೆಯ ಶಿಕ್ಷಕಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಜೊತೆಗೆ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಭಾರತದ ಸೋಲನ್ನು ಸಂಭ್ರಮಿಸಿದ್ದ ಶಿಕ್ಷಕಿ:
ಉದಯಪುರದ ನೀರಜಾ ಮೋದಿ ಶಾಲೆಯ ಶಿಕ್ಷಕಿ ನಫೀಸಾ ಅಟ್ಟಾರಿ ಅವರು ತಮ್ಮ ವಾಟ್ಸಾಪ್ ಸ್ಟೇಟಸ್ನಲ್ಲಿ ಪಾಕಿಸ್ತಾನಿ ಕ್ರಿಕೆಟ್ ಆಟಗಾರರ ಚಿತ್ರವನ್ನು ಹಾಕಿ ‘ಜೀತ್ ಗಯೀ…’ (ನಾವು ಗೆದ್ದಿದ್ದೇವೆ)" ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದರು.
ಶಿಕ್ಷಕಿ ನಫೀಸಾ ಅಟ್ಟಾರಿ ಅವರ ವಾಟ್ಸಾಪ್ ಸ್ಟೇಟಸ್ನ ಸ್ಕ್ರೀನ್ಶಾಟ್ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಶಾಲೆಯ ಆಡಳಿತ ಮಂಡಳಿ ಅವರನ್ನು ವಜಾಗೊಳಿಸಿದೆ. “ನಾವು ಶಿಕ್ಷಕಿಯನ್ನು ವಜಾಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ” ಎಂದು ಸೋಜಾಟಿಯಾ ಚಾರಿಟೇಬಲ್ ಟ್ರಸ್ಟ್ನ ಸಭೆಯ ಬಳಿಕ ಶಾಲೆಯ ಅಧ್ಯಕ್ಷ ಮಹೇಂದ್ರ ಸೋಜಾಟಿಯಾ ದೃಢಪಡಿಸಿದ್ದಾರೆ.
ಇದನ್ನೂ ಓದಿ: Case Against Kashmir Students| ಭಾರತದ ವಿರುದ್ಧದ ಪಾಕ್ ಗೆಲುವಿಗೆ ಸಂಭ್ರಮ ಅರೋಪ; ಜಮ್ಮು-ಕಾಶ್ಮೀರ ವಿದ್ಯಾರ್ಥಿಗಳ ವಿರುದ್ಧ UAPA ಕೇಸ್!
ಶಿಕ್ಷಕಿ ವಿರುದ್ಧ ಎಫ್ಐಆರ್ ದಾಖಲು:
ಭಾರತೀಯ ದಂಡ ಸಂಹಿತೆ 153 (ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ) ಅಡಿಯಲ್ಲಿ ಶಿಕ್ಷಕಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಂಬಾ ಮಾತಾ ಪೊಲೀಸ್ ಠಾಣೆ ಎಸ್ಎಚ್ಒ ನರ್ಪತ್ ಸಿಂಗ್ ಹೇಳಿದ್ದಾರೆ.
ಘಟನೆ ತೀವ್ರ ಸ್ಪರೂಪ ಪಡೆದುಕೊಂಡ ಬಳಿಕ ಪೋಸ್ಟ್ಗಾಗಿ ಕ್ಷಮೆಯಾಚಿಸುವ ವೀಡಿಯೊ ಹೇಳಿಕೆಯನ್ನು ಶಿಕ್ಷಕಿ ಬಿಡುಗಡೆ ಮಾಡಿ, ಯಾರ ಭಾವನೆಯನ್ನು ನೋಯಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದ್ದರು.
ಶಿಕ್ಷಕಿ ಹೇಳಿದ್ದೇನು?:
"ಯಾರೋ ನನಗೆ ಸಂದೇಶ ಕಳುಹಿಸಿ ‘ನೀವು ಪಾಕಿಸ್ತಾನವನ್ನು ಬೆಂಬಲಿಸುತ್ತೀರಾ’ ಎಂದು ಕೇಳಿದರು. ಸಂದೇಶವು ಎಮೋಜಿಗಳನ್ನು ಹೊಂದಿದ್ದು ತಮಾಷೆಯಾಗಿತ್ತು. ಅದಕ್ಕೆ, ನಾನು ‘ಹೌದು’ ಎಂದು ಉತ್ತರಿಸಿದೆ. ಆದರೆ, ನಾನು ಪಾಕಿಸ್ತಾನವನ್ನು ಬೆಂಬಲಿಸುತ್ತೇನೆ ಎಂದು ಅರ್ಥವಲ್ಲ. ನಾನು ಭಾರತೀಯಳು. ನಾನು ಭಾರತವನ್ನು ಪ್ರೀತಿಸುತ್ತೇನೆ. ನಾನು ತಪ್ಪು ಮಾಡಿದ್ದೇನೆ ಎಂದು ತಿಳಿದುಕೊಂಡ ತಕ್ಷಣ, ನಾನು ಸ್ಟೇಟಸ್ ಅಳಿಸಿದ್ದೇನೆ. ಯಾರ ಭಾವನೆಗಳನ್ನೇನಾದರೂ ನೋಯಿಸಿದ್ದರೆ ಕ್ಷಮಿಸಿ" ಎಂದು ಶಿಕ್ಷಕಿ ತಮ್ಮ ವೀಡಿಯೊ ಸಂದೇಶದಲ್ಲಿ ತಿಳಿಸಿರುವುದು ವರದಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ