ವಿಜಯ್ ಹಜಾರೆ ಟೂರ್ನಿಯಲ್ಲಿ ಮುಂಬೈ ಆಟಗಾರ ಪೃಥ್ವಿ ಶಾ ಹೊಸ ಇತಿಹಾಸ ಬರೆದಿದ್ದಾರೆ. ಈ ಬಾರಿ ಟೂರ್ನಿಯಲ್ಲಿ 4 ಶತಕ ಸಿಡಿಸಿರುವ ಪೃಥ್ವಿ ಕರ್ನಾಟಕದ ಮಯಾಂಕ್ ಅಗರ್ವಾಲ್ ಹೆಸರಿನಲ್ಲಿದ್ದ ಸೀಸನ್ನ ಅತ್ಯಧಿಕ ರನ್ ಸ್ಕೋರರ್ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಮೊದಲ ಪಂದ್ಯದಲ್ಲಿ ಅಜೇಯ 105 (89 ಎಸೆತ), 2ನೇ ಪಂದ್ಯದಲ್ಲಿ 34 (38), ಮೂರನೇ ಪಂದ್ಯದಲ್ಲಿ ಅಜೇಯ 227 (152 ಎಸೆತ), ನಾಲ್ಕನೇ ಪಂದ್ಯದಲ್ಲಿ 36 (30), 5ನೇ ಪಂದ್ಯದಲ್ಲಿ 2 (5), ಆರನೇ ಪಂದ್ಯದಲ್ಲಿ ಅಜೇಯ 185(123 ಎಸೆತ) ರನ್ ಬಾರಿಸಿದ್ದ ಪೃಥ್ವಿ ಶಾ, ಕರ್ನಾಟಕ ವಿರುದ್ಧದ ಸೆಮಿಫೈನಲ್ನಲ್ಲಿ 165 ರನ್ ಸಿಡಿಸಿದ್ದಾರೆ.
ಈ ಮೂಲಕ 754 ರನ್ ಕಲೆಹಾಕುವುದರೊಂದಿಗೆ ಈ ಬಾರಿ ಸೀಸನ್ನಲ್ಲಿ ಟಾಪ್ ಸ್ಕೋರರ್ ಎನಿಸಿಕೊಂಡಿದ್ದಾರೆ. ಅಲ್ಲದೆ ವಿಜಯ್ ಹಜಾರೆ ಟೂರ್ನಿ ಇತಿಹಾಸದಲ್ಲೇ ಸೀಸನ್ವೊಂದರಲ್ಲಿ ಅತ್ಯಧಿಕ ರನ್ ಬಾರಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಈ ಹಿಂದೆ 2018 ರಲ್ಲಿ ಮಯಾಂಕ್ ಅಗರ್ವಾಲ್ 723 ರನ್ ಕಲೆಹಾಕಿದ್ದು ದಾಖಲೆಯಾಗಿತ್ತು.
ಇನ್ನು ಪೃಥ್ವಿ ಶಾ ಈ ದಾಖಲೆಯನ್ನು ಕೇವಲ 7 ಇನ್ನಿಂಗ್ಸ್‌ಗಳಲ್ಲಿ ಮಾಡಿರುವುದು ವಿಶೇಷ. ಮಯಾಂಕ್ ಅಗರ್ವಾಲ್ 8 ಇನ್ನಿಂಗ್ಸ್‌ಗಳ ಮೂಲಕ 723 ರನ್ ಕಲೆಹಾಕಿದ್ದರು. ಕರ್ನಾಟಕದ ವಿರುದ್ಧ ನಡೆದ ವಿಜಯ್ ಹಜಾರೆ ಟೂರ್ನಿಯ ಎರಡನೇ ಸೆಮಿಫೈನಲ್ನಲ್ಲಿ ಪೃಥ್ವಿ ಶಾ ಅಬ್ಬರಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದರು. ಮುಂಬೈ ತಂಡದ ನಾಯಕನಾಗಿರುವ ಪೃಥ್ವಿ ಶಾ ತಮ್ಮ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ತಂಡವನ್ನು ಫೈನಲ್ಗೆ ತಲುಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ