ಕ್ರಿಕೆಟ್ ಹೇಗೆ ಆಡಬೇಕೆಂಬುದನ್ನು ಸ್ಟಾರ್ಕ್ ನೋಡಿ ಕಲಿಯಿರಿ: ಮತ್ತೆ ಸುದ್ದಿಯಲ್ಲಿ ಮಂಕಡ್ ರನೌಟ್

ರಣಜಿ ಪಂದ್ಯದ ವೇಳೆಯು ಈ ನಿಯಮವನ್ನು ಜಾರಿಗೊಳಿಸಲಾಗಿತ್ತು. ಪಶ್ಚಿಮ ಬಂಗಾಳದ ಆಟಗಾರ ಸಂದಿಪನ್ ದಾಸ್ ಬೌಲರ್ ಚೆಂಡೆಸುವ ಮುನ್ನ ಕ್ರೀಸ್​ನಿಂದ ಕಾಲ್ಕಿತ್ತಿದ್ದರು.

news18-kannada
Updated:September 17, 2020, 9:13 PM IST
ಕ್ರಿಕೆಟ್ ಹೇಗೆ ಆಡಬೇಕೆಂಬುದನ್ನು ಸ್ಟಾರ್ಕ್ ನೋಡಿ ಕಲಿಯಿರಿ: ಮತ್ತೆ ಸುದ್ದಿಯಲ್ಲಿ ಮಂಕಡ್ ರನೌಟ್
Ashwin and Mitchell Starc
  • Share this:
2019 ರ ಐಪಿಎಲ್​ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಮಂಕಡ್ ರನೌಟ್ ಇದೀಗ ಮತ್ತೆ ಸುದ್ದಿಯಲ್ಲಿದೆ. ಈ ಬಾರಿ ಸದ್ದು ಮಾಡಲು ಕಾರಣ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್​. ಬುಧವಾರ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಕ್ರೀಸ್ ಬಿಟ್ಟಿದ್ದ ಆದಿಲ್ ರಶೀದ್​ರನ್ನು ಮಂಕಡ್ ರನೌಟ್ ಮಾಡದೇ ಸ್ಟಾರ್ಕ್​ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಆರ್​. ಅಶ್ವಿನ್ ಮಾಡಿದ್ದ ಮಂಕಡ್ ರನೌಟ್ ಬಗೆಗಿನ ಚರ್ಚೆ ಶುರುವಾಗಿತ್ತು. ಅಷ್ಟೇ ಅಲ್ಲದೆ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಯೊಬ್ಬ ನೀವು ಮಿಚೆಲ್ ಸ್ಟಾರ್ಕ್ ಅವರನ್ನು ನೋಡಿ ಕ್ರಿಕೆಟ್ ಹೇಗೆ ಆಡಬೇಕೆಂಬುದನ್ನು ಕಲಿಯಿರಿ ಎಂದು ಅಶ್ವಿನ್​ಗೆ ಟಾಂಗ್ ನೀಡಿದ್ದರು.

ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ಖುದ್ದು ಅಶ್ವಿನ್ ಕೂಡ ಪ್ರತಿಕ್ರಿಯಿಸಿದ್ದಾರೆ. " ಪಂದ್ಯದಲ್ಲಿ ಉತ್ತಮ ಹೋರಾಟದ ಮೇಲೆ ನನಗೆ ನಂಬಿಕೆ ಇದೆ . ಮುಂದಿನ ದಿನಗಳವರೆಗೆ ಕಾಯಿರಿ. ನಾನು ಕೂಡ ನಿನಗಾಗಿ ಒಂದು ದಿನವನ್ನು ಮೀಸಲಿಡದ್ದೇನೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪಿನ್ನರ್ ತಿಳಿಸಿದ್ದಾರೆ. ಇದರೊಂದಿಗೆ ಈ ಬಾರಿ ಕೂಡ ಅಶ್ವಿನ್ ಮಂಕಡ್ ರನೌಟ್ ಮಾಡಲಿದ್ದಾರಾ ಅಥವಾ ಎಚ್ಚರಿಕೆ ನೀಡಲಿದ್ದಾರಾ ಎಂಬ ಪ್ರಶ್ನೆಯೊಂದು ಉದ್ಭವಿಸಿದೆ.

ಏನಿದು ಅಶ್ವಿನ್ ಮಂಕಡ್ ವಿವಾದ?
2019 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿದ್ದ ಆರ್​. ಅಶ್ವಿನ್ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಜೋಸ್ ಬಟ್ಲರ್ ಅವರನ್ನು ಮಂಕಡ್ ಬಲೆಗೆ ಬೀಳಿಸಿದ್ದರು. ಈ ಬಗ್ಗೆ ಅಂಪೈರ್​ಗೆ ಬಲವಾದ ಮನವಿ ಸಲ್ಲಿಸಿ ಬಟ್ಲರ್ ವಿಕೆಟ್ ಪಡೆದಿದ್ದರು. ಆದರೆ ಅಶ್ವಿನ್ ನಡೆ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿತ್ತು ಎಂದು ಭಾರೀ ಟೀಕೆಗಳಿಗೆ ಗುರಿಯಾಗಿದ್ದರು . ಸ್ಪಿನ್ ದಿಗ್ಗಜ ಶೇನ್‌ವಾರ್ನ್ , ಜೇಮ್ಸ್ ಅಂಡರ್ಸನ್ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಈ ನಡೆಯನ್ನು ವಿರೋಧಿಸಿದ್ದರು .

ಮಂಕಡ್ ರನೌಟ್ ಎಂದರೇನು?
ಬೌಲರ್ ಚೆಂಡನ್ನು ಎಸೆಯುವ ಮುನ್ನ ಬ್ಯಾಟ್ಸಮನ್ ಕ್ರೀಸ್ ಬಿಟ್ಟರೆ, ಆಗ ಆತನನ್ನು ರನೌಟ್ ಮೂಲಕ ಔಟ್ ಮಾಡುವುದನ್ನು ಮಂ​ಕಡ್ ರನೌಟ್ ಎನ್ನಲಾಗುತ್ತದೆ.

ಈ ರನೌಟ್​ಗೂ ಭಾರತಕ್ಕೂ ಇದೆ ನಂಟು..!ಈ ರನೌಟ್ ವಿಧಾನವನ್ನು ಮೊದಲು ಪ್ರಯೋಗಿಸಿದ್ದು ಭಾರತೀಯ ಆಟಗಾರ. 1947 ರಲ್ಲಿ ಭಾರತ ತಂಡದ ಆಲ್​ರೌಂಡರ್ ವಿನೂ ಮಂ​ಕಡ್ ಈ ಪ್ರಯೋಗದ ಮೂಲಕ ಆಸ್ಟ್ರೇಲಿಯನ್ ಬ್ಯಾಟ್ಸ್​ಮನ್ ಬಿಲ್​ ಬ್ರೌನ್ ಅನ್ನು ಔಟ್ ಮಾಡಿದ್ದರು. ಮೊದಲು ನಡೆದ ಅಭ್ಯಾಸ ಪಂದ್ಯದಲ್ಲಿ ಬ್ರೌನ್ ಬೌಲಿಂಗ್ ಮಾಡುವ ಮುನ್ನ ಕ್ರೀಸ್ ಬಿಟ್ಟಿದ್ದರು. ಇದನ್ನು ಪ್ರಶ್ನಿಸಿ ಮಂ​ಕಡ್​ ಬ್ರೌನ್​ ವಿಕೆಟ್​ ಅನ್ನು ರನೌಟ್ ಮೂಲಕ ಪಡೆದರು.

ಇದಾದ ಬಳಿಕ 2ನೇ ಟೆಸ್ಟ್​ ಪಂದ್ಯದಲ್ಲೂ ಮತ್ತದೇ ತಪ್ಪು ಮಾಡಿದ್ದ ಕ್ರಿಸ್ ಬ್ರೌನ್​ರನ್ನು ವಿನೂ ಮನ್​ಕಡ್ ಔಟ್ ಮಾಡಿದರು. ಈ ಘಟನೆಯ ಬಳಿಕ ಕ್ರಿಕೆಟ್ ಜಗತ್ತಿನಲ್ಲಿ ಹೊಸ ರೀತಿಯ ರನೌಟ್ ಹೊಸ ಚರ್ಚೆ ಹುಟ್ಟು ಹಾಕಿತು. ಈ ವೇಳೆ ಅನೇಕರು ವಿನೂ ಮಂ​ಕಡ್​ ಅವರ ನಡೆಯನ್ನು ಪ್ರಶ್ನಿಸಿದ್ದರು. ಆದರೆ ಕ್ರಿಕೆಟ್ ದಂತಕಥೆ ಸರ್. ಡಾನ್ ಬ್ರಾಡ್ಮನ್ ಭಾರತೀಯ ಆಟಗಾರನ ಕ್ರಮವನ್ನು ಬೆಂಬಲಿಸಿದ್ದರು.

ಈ ಕುರಿತು ಬ್ರಾಡ್ಮನ್ ತಮ್ಮ ಆತ್ಮಕಥೆಯಲ್ಲೂ ತಿಳಿಸಿದ್ದಾರೆ. ಅಂದು ಏಕೆ ಎಲ್ಲರೂ ಮಂ​ಕಡ್ ಮಾಡಿದ ರನೌಟ್ ಅನ್ನು ಪ್ರಶ್ನಿಸಿದ್ದರು ಎಂದು ಅರ್ಥವಾಗಲಿಲ್ಲ. ನಾನ್​ ಸ್ಟ್ರೈಕರ್ ಆಟಗಾರ ಬಾಲ್ ಬಿಡುವ ಮುನ್ನ ಕ್ರೀಸ್ ಬಿಡುವುದರಿಂದ ಬ್ಯಾಟ್ಸ್​ಮನ್​ಗಳಿಗೆ ಹೆಚ್ಚು ಅನುಕೂಲವಾಗುತ್ತದೆ ಎಂಬುದನ್ನು ಕ್ರಿಕೆಟ್​ ದಿಗ್ಗಜ ಪ್ರಸ್ತಾಪಿಸಿದ್ದರು. ಅಂದು ವಿನೂ ಮಂ​ಕಡ್ ಮಾಡಿದ ರನೌಟ್ ನಂತರ ಮಂ​ಕಡ್ ರನೌಟ್ ಎಂದೇ ಪ್ರಖ್ಯಾತಿ ಪಡೆಯಿತು. ಇದನ್ನೇ ಮುಂದೆ ಕ್ರಿಕೆಟ್ ನಿಯಮದಲ್ಲಿ ಮನ್​ಕಡಿಂಗ್ ರನೌಟ್​ ಎಂದು ಕರೆಯಲಾಯಿತು.

ಮಂ​ಕಡ್ ಅಸ್ತ್ರ ಪ್ರಯೋಗಿಸಿದ ಭಾರತೀಯ ಆಟಗಾರರು:
ಅಶ್ವಿನ್​ಗೂ ಮುನ್ನ ಮಂ​ಕಡ್ ರನೌಟ್ ಮಾಡಿ ಕೆಲ ಭಾರತೀಯ ಆಟಗಾರರು ಸುದ್ದಿಯಾಗಿದ್ದರು. ಅದರಲ್ಲಿ ಪ್ರಮುಖರು ಎಂದರೆ ಭಾರತೀಯ ಕ್ರಿಕೆಟ್ ದಂತಕಥೆ ಕಪಿಲ್ ದೇವ್. 1992 ರಲ್ಲಿ ಭಾರತ ಮತ್ತು ದಕ್ಷಿಣಾ ಆಫ್ರಿಕಾ ನಡುವೆ ಫ್ರೆಂಡ್​ಶಿಪ್ ಸಿರೀಸ್ ನಡೆಯುತ್ತಿತ್ತು. ಈ ವೇಳೆ ಸೌತ್ ಆಫ್ರಿಕಾ ಬ್ಯಾಟ್ಸ್​ಮನ್ ಪೀಟರ್​ ಕಿಸ್ಟರ್ನ್​ ಬೌಲಿಂಗ್ ಮಾಡುವ ಮುನ್ನವೇ ಕ್ರೀಸ್​ ಬಿಡುತ್ತಿದ್ದರು. ಇದನ್ನು ಪ್ರಶ್ನಿಸಿದ ಕಪಿಲ್ ದೇವ್ ಕಿಸ್ಟರ್ನ್​ಗೆ ಎರಡು ಬಾರಿ ಎಚ್ಚರಿಕೆ ನೀಡಿದರು. ಮತ್ತದೇ ತಪ್ಪು ಮಾಡಿದ ದಕ್ಷಿಣ ಆಫ್ರಿಕಾ ಆಟಗಾರನನ್ನು ಕಪಿಲ್ ದೇವ್ ಮನ್​ಕಡ್ ರನೌಟ್ ಮೂಲಕ ಪೆವಿಲಿಯನ್​ಗೆ ಕಳುಹಿಸಿದ್ದರು.

ಇನ್ನು ರಣಜಿ ಪಂದ್ಯದ ವೇಳೆಯು ಈ ನಿಯಮವನ್ನು ಜಾರಿಗೊಳಿಸಲಾಗಿತ್ತು. ಪಶ್ಚಿಮ ಬಂಗಾಳದ ಆಟಗಾರ ಸಂದಿಪನ್ ದಾಸ್ ಬೌಲರ್ ಚೆಂಡೆಸುವ ಮುನ್ನ ಕ್ರೀಸ್​ನಿಂದ ಕಾಲ್ಕಿತ್ತಿದ್ದರು. ಈ ವೇಳೆ ರೈಲ್ವೇಸ್ ಪರ ಬೌಲಿಂಗ್ ಮಾಡುತ್ತಿದ್ದ ಸ್ಪಿನ್ನರ್ ಮುರಳಿ ಕಾರ್ತಿಕ್ ಮಂ​ಕಡ್ ರನೌಟ್ ಮೂಲಕ ದಾಸ್​ರನ್ನು ಔಟ್ ಮಾಡಿದ್ದರು.
Published by: zahir
First published: September 17, 2020, 9:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading