• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • ಕರ್ನಾಟಕ ತೊರೆದ ಕ್ರಿಕೆಟರ್ ಪವನ್; ಅನ್ಯ ರಾಜ್ಯಗಳಿಗೆ ವಲಸೆ ಹೋಗಲಿದ್ದಾರೆ ಇನ್ನೂ ಕೆಲ ಆಟಗಾರರು

ಕರ್ನಾಟಕ ತೊರೆದ ಕ್ರಿಕೆಟರ್ ಪವನ್; ಅನ್ಯ ರಾಜ್ಯಗಳಿಗೆ ವಲಸೆ ಹೋಗಲಿದ್ದಾರೆ ಇನ್ನೂ ಕೆಲ ಆಟಗಾರರು

ಪವನ್ ದೇಶಪಾಂಡೆ

ಪವನ್ ದೇಶಪಾಂಡೆ

ಅಪ್ರತಿಮ ಕ್ರಿಕೆಟ್ ಪ್ರತಿಭೆಗಳಿಂದ ತುಂಬಿಹೋಗಿರುವ ಕರ್ನಾಟಕ ಕ್ರಿಕೆಟ್ ತಂಡದಲ್ಲಿ ಸರಿಯಾದ ಅವಕಾಶ ಸಿಗದ ಹಿನ್ನೆಲೆಯಲ್ಲಿ ಹಲವು ಕ್ರಿಕೆಟಿಗರು ಅನ್ಯ ರಾಜ್ಯಗಳಿಗೆ ವಲಸೆ ಹೋಗಿದ್ಧಾರೆ. ಈ ಪಟ್ಟಿಗೆ ಪವನ್ ದೇಶಪಾಂಡೆ ಸೇರ್ಪಡೆಯಾಗಿದ್ದಾರೆ.

  • Share this:

ಬೆಂಗಳೂರು, ಆ. 20: ಕರ್ನಾಟಕ ಟಿ20 ಕ್ರಿಕೆಟ್ ತಂಡದ ಮಾಜಿ ಉಪನಾಯಕ ಹಾಗೂ ಆಲ್​ರೌಂಡರ್ ಪವನ್ ದೇಶಪಾಂಡೆ ಅವರು ಪುದುಚೆರಿ ತಂಡವನ್ನು ಸೇರಿಕೊಂಡಿದ್ಧಾರೆ. ಕರ್ನಾಟಕ ಕ್ರಿಕೆಟ್ ತಂಡದಲ್ಲಿ ಅತೀವ ಸ್ಪರ್ಧೆ ಇರುವ ಹಿನ್ನೆಲೆಯಲ್ಲಿ ಸ್ಥಾನ ಪಡೆಯುವುದು ಬಹಳ ಕಷ್ಟಕರವಾಗಿದೆ. ಅನೇಕ ಪ್ರತಿಭಾನ್ವಿತ ಕ್ರಿಕೆಟಿಗರು ಆಡುವ ಅವಕಾಶ ಸಿಗದೇ ಕೊರಗುತ್ತಿದ್ದಾರೆ. ಇಂಥವರಲ್ಲಿ ಪವನ್ ದೇಶಪಾಂಡೆ ಕೂಡ ಒಬ್ಬರು. ಇವರು ಕರ್ನಾಟಕದ ಪರ ಎಂಟು ರಣಜಿ ಪಂದ್ಯಗಳು ಹಾಗೂ 20ಕ್ಕೂ ಹೆಚ್ಚು ಟಿ20 ಪಂದ್ಯಗಳನ್ನ ಆಡಿದ್ದಾರೆ. ಮುಷ್ತಾಕ್ ಅಲಿ ಕ್ರಿಕೆಟ್ ಟೂರ್ನಿಯಲ್ಲಿ ಇವರು ಉತ್ತಮ ಪ್ರದರ್ಶನ ನೀಡಿದ್ದರು. ಆದರೆ, ತಂಡದಲ್ಲಿ ಇವರಿಗೆ ಸ್ಥಿರವಾಗಿ ಸ್ಥಾನ ಸಿಗುತ್ತಿಲ್ಲ. ಹೀಗಾಗಿ, 31 ವರ್ಷದ ಇವರು ಪಾಂಡಿಚೆರಿ ಕ್ರಿಕೆಟ್ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ.


ಪವನ್ ದೇಶಪಾಂಡೆ ವಲಸೆ ಹೋಗುವುದಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕಳೆದ ವಾರ ಅನುಮತಿ ನೀಡಿತು. ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದಲ್ಲೂ ಸ್ಥಾನ ಪಡೆದಿರುವ ಅವರು ಯುಎಇಯಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿ ಬಳಿಕ ಅಕ್ಟೋಬರ್ ತಿಂಗಳಲ್ಲಿ ಪಾಂಡಿಚೇರಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. ತಮ್ಮ ತವರು ರಾಜ್ಯವನ್ನು ತೊರೆಯುವುದು ಬಹಳ ಕಷ್ಟಕರ ನಿರ್ಧಾರವಾಗಿದೆ ಎಂದು ಈ ಸಂದರ್ಭದಲ್ಲಿ ಪವನ್ ದೇಶಪಾಂಡೆ ಅವರು ಟೈಮ್ಸ್ ಆಫ್ ಇಂಡಿಯಾಗೆ ಪ್ರತಿಕ್ರಿಯಿಸಿದ್ದಾರೆ.


“ಇದು ನಿಜಕ್ಕೂ ಕಠಿಣ ನಿರ್ಧಾರ. ತವರು ರಾಜ್ಯವನ್ನು ತೊರೆಯುವುದು ಸುಲಭವಂತೂ ಅಲ್ಲ. 15 ದಿನ ನಾನು ಬಹಳಷ್ಟು ಯೋಚಿಸಿ ಈ ನಿರ್ಧಾರ ತೆಗೆದುಕೊಂಡೆ. ನನ್ನ ವೃತ್ತಿಜೀವನವನ್ನು ದೃಷ್ಟಿಯಲ್ಲಿಟ್ಟುಕೊಂಡರೆ ಇದು ಸರಿಯಾದ ನಿರ್ಧಾರ ಎನಿಸುತ್ತದೆ. ಕರ್ನಾಟಕ ತಂಡದೊಳಗೆ ಇರುವ ಸ್ಪರ್ಧೆಯನ್ನ ನೋಡಿದರೆ ಇಲ್ಲಿ ಆಡುವ ಹನ್ನೊಂದರ ತಂಡದಲ್ಲಿ ನನ್ನ ಸ್ಥಾವವನ್ನು ಭದ್ರ ಮಾಡಿಕೊಳ್ಳುವುದು ಕಷ್ಟ ಎನಿಸುತ್ತದೆ” ಎಂದು ದೇಶಪಾಂಡೆ ಹೇಳಿದರೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.


ಇದನ್ನೂ ಓದಿ: ಶಾಲೆಗಳಿಂದ ಭವಿಷ್ಯದ ಒಲಿಂಪಿಕ್ ಸ್ಟಾರ್​ಗಳನ್ನ ಹೆಕ್ಕಿ ತೆಗೆಯಲು ಸರ್ಕಾರ ಯೋಜನೆ


ಪಾಂಡಿಚೆರಿ ತಂಡದ ಬಗ್ಗೆ ಪವನ್ ದೇಶಪಾಂಡೆ ಮೆಚ್ಚುಗೆಯ ಮಾತನಾಡಿದ್ದಾರೆ: “ನಾನು ಮೂರು ವರ್ಷಗಳಿಂದ ಆ ತಂಡವನ್ನ ನೋಡುತ್ತಿದ್ದೇನೆ. ಉಜ್ವಲ ಭವಿಷ್ಯ ಕಾಣುತ್ತಿದೆ. ಎಲ್ಲಾ ಮೂರು ಪ್ರಾಕಾರದ ಕ್ರಿಕೆಟ್​​ನಲ್ಲೂ ಆ ತಂಡಕ್ಕೆ ಕೊಡುಗೆ ನೀಡುವ ತವಕದಲ್ಲಿದ್ದೇನೆ. ನನ್ನ ಸಾಮರ್ಥ್ಯವನ್ನು ತೋರ್ಪಡಿಸಲು ಒಳ್ಳೆಯ ಅವಕಾಶ ಸಿಕ್ಕಿದೆ” ಎಂದು ಪವನ್ ತಿಳಿಸಿದ್ದಾರೆ.


ಕರ್ನಾಟಕ ತೊರೆಯಲು ಇನ್ನೂ ಕೆಲವರು ಸಿದ್ಧ:


ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿ ಶುರುವಾದ ಬಳಿಕ ಕರ್ನಾಟಕ ಕ್ರಿಕೆಟ್ ತಂಡದೊಳಗೆ ಕಾಂಪಿಟೀಶನ್ ಬಹಳ ಜೋರಾಗಿದೆ. ಮೇಲೆ ಹೇಳಿದಂತೆ ತಂಡದಲ್ಲಿ ಸ್ಥಾನ ಸಿಗದೇ ಹತಾಶರಾಗಿರುವ ಹಲವು ಆಟಗಾರರು ಇಲ್ಲಿದ್ದಾರೆ. ಪಾಂಡಿಚೆರಿ, ಕೇರಳ, ಗೋವಾದಂತೆ ಬೇರೆ ಬೇರೆ ಪುಟ್ಟ ತಂಡಗಳು ಕರ್ನಾಟಕದ ಅದ್ಭುತ ಕ್ರಿಕೆಟ್ ಪ್ರತಿಭೆಗಳನ್ನ ಹೆಕ್ಕಿ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಅನಿರುದ್ಧ ಜೋಷಿ, ನಿತಿನ್ ಭಿಲ್ಲೆ, ನಿಹಾಲ್, ಕ್ರಾಂತಿ ಕುಮಾರ್, ಸಿಎ ಕಾರ್ತಿಕ್, ಶಿಶಿರ್ ಭಾವ್ನೆ, ರಿತೇಶ್ ಭಟ್ಕಳ್, ನಾಗಾ ಭರತ್ ಮೊದಲಾದವರು ಅನ್ಯ ರಾಜ್ಯಗಳ ತಂಡಗಳಲ್ಲಿ ಅವಕಾಶ ಹುಡುಕುತ್ತಿದ್ಧಾರೆ. ಸಿಕ್ಕಿಂ, ಮಹಾರಾಷ್ಟ್ರ ಮತ್ತು ಆಂಧ್ರ ತಂಡಗಳು ಈ ಆಟಗಾರರ ಮೇಲೆ ಕಣ್ಣಿಟ್ಟಿದ್ದು, ಅವರನ್ನ ಸೆಳೆದುಕೊಳ್ಳುವ ಸಾಧ್ಯತೆ ಇದೆ. ಈ ತಂಡಗಳು ಈಗಾಗಲೇ ಕೆಲ ಆಟಗಾರರ ಟ್ರಯಲ್ ಅನ್ನು ನಡೆಸಿ ಪರೀಕ್ಷೆ ನಡೆಸಿವೆ.


ಹಿಂದೆ ಕರ್ನಾಟಕ ತೊರೆದಿರುವ ಕ್ರಿಕೆಟಿಗರು: ಈ ಹಿಂದೆ ಕೆಲ ಪ್ರಮುಖ ಕ್ರಿಕೆಟಿಗರು ಸರಿಯಾದ ಅವಕಾಶ ಸಿಗದ ಹಿನ್ನೆಲೆಯಲ್ಲಿ ಕರ್ನಾಟಕ ತಂಡವನ್ನು ತೊರೆದು ಅನ್ಯ ರಾಜ್ಯ ತಂಡಗಳಿಗೆ ವಲಸೆ ಹೋದ ಉದಾಹರಣೆಗಳುಂಟು. ಅವರಲ್ಲಿ ಪ್ರಮುಖವಾಗಿರುವವರು ರಾಬಿನ್ ಉತ್ತಪ್ಪ, ಗಣೇಶ್ ಸತೀಶ್, ಕೆ ಬಿ ಪವನ್, ರೋನಿತ್ ಮೋರೆ ಮತ್ತು ಅಮಿತ್ ವರ್ಮಾ. ಕರ್ನಾಟಕದ ಮಾಜಿ ನಾಯಕ ರಾಬಿನ್ ಉತ್ತಪ್ಪ ಸೌರಾಷ್ಟ್ರ ತಂಡವನ್ನ ಸೇರ್ಪಡೆಯಾದರು. ಗಣೇಶ್ ಸತೀಶ್ ವಿದರ್ಭಕ್ಕೆ, ಕೆ ಬಿ ಪವನ್ ಮತ್ತು ಅಮಿತ್ ವರ್ಮಾ ಕೇರಳಕ್ಕೆ, ರೋನಿತ್ ಮೋರೆ ಹಿಮಾಚಲ ಪ್ರದೇಶ ತಂಡಗಳಿಗೆ ವಲಸೆ ಹೋಗಿದ್ದಾರೆ. ಈಗ ಪವನ್ ದೇಶಪಾಂಡೆ ಪಾಂಡಿಚೇರಿ ತಂಡದ ಪರವಾಗಿ ಆಡಲಿದ್ಧಾರೆ.

Published by:Vijayasarthy SN
First published: