Vinay BhatVinay Bhat
|
news18 Updated:May 24, 2019, 10:45 PM IST
ಅಫ್ಘಾನಿಸ್ತಾನ್ ಕ್ರಿಕೆಟ್ ತಂಡ
- News18
- Last Updated:
May 24, 2019, 10:45 PM IST
ಬೆಂಗಳೂರು (ಮೇ. 24): ಇಂಗ್ಲೆಂಡ್ನ ಬ್ರಿಸ್ಟಾಲ್ನಲ್ಲಿ ನಡೆದ ಐಸಿಸಿ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನಕ್ಕೆ ಕ್ರಿಕೆಟ್ ಶಿಶು ಅಫ್ಘಾನಿಸ್ತಾನ್ ಶಾಕ್ ನೀಡಿದೆ. 3 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿರುವ ಅಫ್ಘಾನ್ ತಂಡ ವಾರ್ಮ್ ಅಪ್ ಪಂದ್ಯದಲ್ಲೇ ವಾರ್ನಿಂಗ್ ನೀಡಿದೆ. ಈ ಮೂಲಕ ಈ ಬಾರಿಯ ವಿಶ್ವಕಪ್ ಗೆಲ್ಲುವ ರೇಸ್ನಲ್ಲಿ ನಾವೂ ಇದ್ದೇವೆ ಎಂಬ ಖಡಕ್ ಸಂದೇಶ ರವಾನಿಸಿದೆ.
ಮೊದಲ ಅಭ್ಯಾಸ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ಬ್ಯಾಟಿಂಗ್ ಆಯ್ಕೆ ಮಾಡಿತು. ಆದರೆ, ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಎಡವಿದ ಪಾಕ್ 100 ರನ್ ಆಗುವ ಹೊತ್ತಿಗೆನೆ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. ಭರವಸೆಯ ಆಟಗಾರ ಇಮಾಮ್ ಉಲ್ ಹಖ್ 32 ರನ್ ಗಳಿಸಿರುವಾಗ ಹಮೀದ್ ಎಸೆತದಲ್ಲಿ ಬೌಲ್ಡ್ ಆದರೆ, ಫಾರುಖ್ ಜಮಾನ್ 19 ರನ್ಗೆ ನಬಿಗೆ ವಿಕೆಟ್ ಒಪ್ಪಿಸಿದರು. ಬಂದ ಬೆನ್ನಲ್ಲೆ ಸೊಹೇಲ್ ಕೇವಲ 1 ರನ್ಗೆ ನಿರ್ಗಮಿಸಿದರೆ, ಮೊಹ್ಮದ್ ಹಫೀಜ್ 12 ರನ್ಗೆ ಸುಸ್ತಾದರು.
ಹೀಗೆ ಒಂದು ಕಡೆ ವಿಕೆಟ್ ಉರುಳುತ್ತಿದ್ದರೆ ಬಾಬರ್ ಅಜಮ್ ಮಾತ್ರ ಕ್ರೀಸ್ ಕಚ್ಚಿ ಆಡಿದರು. ಜೊತೆಗೆ ಅರ್ಧಶತಕ ಬಾರಿಸಿದರು. ಹೀಗೆ ಸತತ ವಿಕೆಟ್ ಕಳೆದುಕೊಂಡು ಸಾಗುತ್ತಿದ್ದ ತಂಡಕ್ಕೆ 5ನೇ ವಿಕೆಟ್ಗೆ ಬಾಬರ್ ಜೊತೆಯಾದ ಅನುಭವಿ ಶೋಯೆಬ್ ಮಲ್ಲಿಕ್ ಉತ್ತಮ ಆಟ ಪ್ರದರ್ಶಿಸಿದರು. ಕುಸಿಯುವ ಹಂತದಲ್ಲಿದ್ದ ತಂಡವನ್ನು ಮೇಲೆಕ್ಕೆತ್ತುವಲ್ಲಿ ಈ ಜೋಡಿ ಯಶಸ್ವಿಯಾಯಿತು. ಆದರೆ, ಮಲಿಕ್ 44 ರನ್ ಗಳಿಸಿರುವಾಗ ನಬಿ ಅವರು ತಮ್ಮ ಸ್ಪಿನ್ ಜಾದುವಿನಿಂದ ಇವರ 103 ರನ್ಗಳ ಜೊತೆಯಾಕ್ಕೆ ಬ್ರೇಕ್ ಹಾಕಿದರು. ನಾಯಕ ಸರ್ಫರಾಜ್ ಅಹ್ಮದ್ ಆಟ 13 ರನ್ಗೆ ಅಂತ್ಯವಾಯಿತು.
ಇದನ್ನೂ ಓದಿ: ICC World Cup 2019 | ನಾಳೆ ಭಾರತ vs ನ್ಯೂಜಿಲೆಂಡ್ ಅಭ್ಯಾಸ ಪಂದ್ಯ; ಕೊಹ್ಲಿಗೆ 4ನೇ ಸ್ಥಾನದ್ದೇ ಸಮಸ್ಯೆ!
ಇದರ ನಡುವೆ ಬಾಬರ್ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದರು. ಸೆಂಚುರಿ ಬಾರಿಸಿ ಬಾಬರ್ ಕೂಡ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. 108 ಎಸೆತಗಳಲ್ಲಿ 112 ರನ್ ಬಾರಿಸಿ ಬಾಬರ್ ಕೂಡ ಔಟ್ ಆದರು. ಅಂತಿಮವಾಗಿ ಪಾಕಿಸ್ತಾನ್ 47.5 ಓವರ್ನಲ್ಲಿ 262 ರನ್ಗೆ ಆಲೌಟ್ ಆಯಿತು. ಅಫ್ಘಾನ್ ಪರ ಮೊಹಮ್ಮದ್ ನಬಿ 3 ವಿಕೆಟ್ ಕಿತ್ತರೆ, ರಶೀದ್ ಖಾನ್ ಹಾಗೂ ದವ್ಲತ್ ಜದ್ರನ್ ತಲಾ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.
ಇತ್ತ 263 ರನ್ಗಳ ಸವಾಲಿನ ಮೊತ್ತ ಬೆನ್ನಟ್ಟಿದ ಅಫ್ಘಾನಿಸ್ತಾನ್ ಬೊಂಬಾಟ್ ಆರಂಭ ಪಡೆದುಕೊಂಡಿತು. ಮೊಹಮ್ಮದ್ ಶಹ್ಜಾದ್ ಹಾಗೂ ಹಜ್ರತುಲ್ಲಾ ಜ್ಹಜ್ಹಯ್ ಸ್ಫೋಟಕ ಆಟ ಪ್ರದರ್ಶಿಸಿ ಮೊದಲ ವಿಕೆಟ್ಗೆ 11 ಓವರ್ ಆಗುವ ಹೊತ್ತಿಗೆನೆ 80 ರನ್ ಪೂರೈಸಿದರು. 28 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಚಚ್ಚಿದ ಹಜ್ರತುಲ್ಲಾ 49 ರನ್ಗೆ ಔಟ್ ಆದರು. ಬಳಿಕ ಶಹ್ಜಾದ್ ಜೊತೆಯಾದ ರೆಹ್ಮತ್ ಶಾ 32 ರನ್ ಗಳಿಸಿದರೆ, ಶಹ್ಜಾದ್ 23 ರನ್ ಗಳಿಸಿರುವಾಗ ಅನಾರೋಗ್ಯದಿಂದ ಮೈದಾನ ತೊರೆದರು. ಬಳಿಕ ಬಂದ ಶೆನ್ವಾರು 22 ಹಾಗೂ ಅಸ್ಗರ್ ಅಫ್ಘನ್ 7 ರನ್ಗೆ ಬ್ಯಾಟ್ ಕೆಳಗಿಟ್ಟರು.
ಈ ಸಂದರ್ಭ ಹಶ್ಮತುಲ್ಲಾ ಶಾಹಿದಿ ಹಾಗೂ ಮೊಹಮ್ಮದ್ ನಬಿ ತಂಡಕ್ಕೆ ಆಸರೆಯಾಗಿ ನಿಂತರು. ಎಚ್ಚರಿಯೆ ಆಟ ಪ್ರದರ್ಶಿಸಿದ ಈ ಜೋಡಿ ತಂಡದ ಗೆಲುವಿಗೆ ಹೋರಾಟ ನಡೆಸಿದರು. ಅದರಂತೆ ಈ ಜೋಡಿಯ ಖಾತೆಯಿಂದ 66 ರನ್ಗಳ ಕಾಣಿಕೆ ಬಂತು. ಚೆನ್ನಾಗಿಯೆ ಆಡುತ್ತಿದ್ದ ನಬಿ 34 ರನ್ಗೆ ಬಲಿಯಾದರು. ಬಂದ ಬೆನ್ನಲ್ಲೆ ನಾಯಕ ಗುಲ್ಬದಿನ್ ನೈಬ್(2) ಹಾಗೂ ನಜಿಬುಲ್ಲ(1) ಪೆವಿಲಿಯನ್ ಸೇರಿಕೊಂಡಿದ್ದು ತಂಡ ಸೋಲಿನ ಸುಳಿಗೆ ಸಿಲುಕಿತು.
ಇದನ್ನೂ ಓದಿ: VIDEO: ಆಂಡ್ರೆ ರಸೆಲ್ ಭಯಂಕರ ಬೌನ್ಸರ್: ವಿಶ್ವಕಪ್ನಿಂದ ಉಸ್ಮಾನ್ ಖ್ವಾಜಾ ಔಟ್?
ಪರಿಣಾಮ ಕೊನೆಯ ಓವರ್ನಲ್ಲಿ ಅಫ್ಘಾನ್ ಗೆಲುವಿಗೆ 4 ರನ್ಗಳ ಅವಶ್ಯಕತೆಯಿತ್ತು. ಅರ್ಧಶತಕ ಸಿಡಿಸಿದ್ದ ಶಾಹಿದಿ ವಿನ್ನಿಂಗ್ ಶಾಟ್ ಹೊಡೆಯುವ ಮೂಲಕ ಇನ್ನೂ 2 ಎಸೆತ ಬಾಕಿ ಇರುವಂತೆಯೆ ಅಫ್ಘಾನ್ 3 ವಿಕೆಟ್ಗಳ ಗೆಲುವು ಸಾಧಿಸಿತು. ಪಾಕ್ ಪರ ವಹಾಬ್ ರಿಯಾಜ್ 3 ಹಾಗೂ ಇಮಾದ್ ವಾಸಿಮ್ 2 ವಿಕೆಟ್ ಪಡೆದರು. ಅಮೋಘ ಆಟ ಪ್ರದರ್ಶಿಸಿದ ಶಾಹಿದಿ 102 ಎಸೆತಗಳಲ್ಲಿ 74 ರನ್ ಗಳಿಸಿ ಅಜೇಯರಾಗಿ ಉಳಿದರು.
ಈ ಮೂಲಕ 3 ವಿಕೆಟ್ಗಳ ಗೆಲುವಿನೊಂದಿಗೆ ಅಫ್ಘಾನಿಸ್ಥಾನ್ ತಂಡ ವಿಶ್ವಕಪ್ನ ಅಭ್ಯಾಸ ಪಂದ್ಯದಲ್ಲೇ ಉತ್ತಮ ಆರಂಭ ಪಡೆದುಕೊಂಡಿದೆ. ಹಿಂದಿಗಿಂತ ಅಫ್ಘಾನ್ ಸದ್ಯ ಸಾಕಷ್ಟು ಬಲಿಷ್ಠವಾಗಿದ್ದು, ಈ ಬಾರಿಯ ವಿಶ್ವಕಪ್ನಲ್ಲಿ ಎದುರಾಳಿಗರನ್ನು ಕಾಡುವುದಂತು ಸುಳ್ಳಲ್ಲ.
First published:
May 24, 2019, 10:45 PM IST