PSL - ಪಾಕಿಸ್ತಾನ ಸೂಪರ್ ಲೀಗ್ ವಿಶ್ವದ ಅತ್ಯುತ್ತಮ ಕ್ರಿಕೆಟ್ ಲೀಗ್ ಎಂದ ಮಾಜಿ ಆಟಗಾರ
ಪಿಎಸ್ಎಲ್ ವಿಶ್ವದ ಅತ್ಯುತ್ತಮ ಕ್ರಿಕೆಟ್ ಲೀಗ್. ಇಲ್ಲಿರುವ ಅತ್ಯುತ್ತಮ ಗುಣಮಟ್ಟದ ಬೌಲರ್ಗಳನ್ನ ಬೇರಾವ ಟೂರ್ನಿಯಲ್ಲೂ ನೋಡಲು ಸಾಧ್ಯವಿಲ್ಲ ಎಂದು ಮಾಜಿ ಪಾಕ್ ಕ್ರಿಕೆಟಿಗ ಮುಷ್ತಾಕ್ ಅಹ್ಮದ್ ಅಭಿಪ್ರಾಯಪಟ್ಟಿದ್ಧಾರೆ.
ಇಸ್ಲಾಮಾಬಾದ್: ಭಾರತದ ಐಪಿಎಲ್ ಮಾದರಿಯಲ್ಲಿ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಿ ಎಸ್ ಎಲ್ ಅನ್ನು ಮಾಜಿ ಪಾಕ್ ಕ್ರಿಕೆಟಿಗ ಮುಷ್ತಾಖ್ ಅಹ್ಮದ್ ವಿಶ್ವದ ಅತ್ಯುತ್ತಮ ಕ್ರಿಕೆಟ್ ಲೀಗ್ ಎಂದು ಬಣ್ಣಿಸಿದ್ದಾರೆ. ಕ್ರಿಕೆಟ್ ಪಾಕಿಸ್ತಾನ್ ವಾಹಿನಿ ಜೊತೆ ಸಂದರ್ಶನದಲ್ಲಿ ಮಾತನಾಡುತ್ತಿದ್ದ ನಿವೃತ್ತ ಲೆಗ್ ಸ್ಪಿನ್ನರ್ ಮುಷ್ತಾಕ್ ಅಹ್ಮದ್, ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಪ್ರದರ್ಶನಗೊಳ್ಳುತ್ತಿರುವ ಕ್ರಿಕೆಟ್ ಗುಣಮಟ್ಟದ ಬಗ್ಗೆ ಶ್ಲಾಘನೆ ವ್ಯಕ್ತ ಪಡಿಸಿದ್ಧಾರೆ. ಈ ಟೂರ್ನಿಯಲ್ಲಿ ಉತ್ತಮ ಗುಣಮಟ್ಟದ ಬೌಲಿಂಗ್ ಎದುರು ಆಡಲು ಬಹಳ ಖುಷಿಯಾಗುತ್ತದೆ ಎಂದು ತನಗೆ ಟೂರ್ನಿಯ ಹಲವು ವಿದೇಶೀ ಆಟಗಾರರು ಹೇಳಿದರೆಂದು ಮುಷ್ತಾಕ್ ಈ ಸಂದರ್ಶನದಲ್ಲಿ ಉಲ್ಲೇಖಿಸಿದ್ದಾರೆ.
“ಪಿಎಸ್ಎಲ್ ವಿಶ್ವದ ಅತ್ಯುತ್ತಮ ಲೀಗ್ ಆಗಿದೆ. ನಾನು ಅನೇಕ ವಿದೇಶೀ ಆಟಗಾರರೊಂದಿಗೆ ಮಾತನಾಡಿದ್ದೇನೆ. ಈ ಟೂರ್ನಿಯಲ್ಲಿ ಇರುವ ಕಠಿಣ ಬೌಲಿಂಗ್ ಅನ್ನು ತಾವು ಬೇರಾವ ಟೂರ್ನಿಯಲ್ಲೂ ಎದುರಿಸಿಲ್ಲ ಎಂದು ಅವರು ನನಗೆ ತಿಳಿಸಿದರು. ಐಪಿಎಲ್ ಇರಲಿ, ಬಿಗ್ ಬಾಷ್ ಅಥವಾ ಇಂಗ್ಲೆಂಡ್ನ ಟಿ20 ಬ್ಲಾಸ್ಟ್ ಇರಲಿ ಅಲ್ಲೆಲ್ಲೂ ಪಿಎಸ್ಎಲ್ನಲ್ಲಿ ಇರುವಂತಹ ಬೌಲರ್ಗಳು ಇಲ್ಲ. ಪಾಕಿಸ್ತಾನ್ ಸೂಪರ್ ಲೀಗ್ನ ಪ್ರತಿಯೊಂದೂ ಫ್ರಾಂಚೈಸಿಯಲ್ಲೂ 135 ಕಿಮೀಗಿಂತ ಹೆಚ್ಚು ವೇಗದಲ್ಲಿ ಬೌಲ್ ಮಾಡಬಲ್ಲ 2-3 ಬೌಲರ್ಗಳಾದರೂ ಇರುತ್ತಾರೆ. ಅಷ್ಟೇ ಅಲ್ಲ, ಹಲವಾರು ಮಿಸ್ಟರಿ ಸ್ಪಿನ್ನರ್ಗಳೂ ವಿವಿಧ ತಂಡ ಗಳಲ್ಲಿದ್ದಾರೆ” ಎಂದು ಮುಷ್ತಾಕ್ ಅಹ್ಮದ್ ಹೇಳಿದ್ದಾರೆ.
“ನನ್ನೊಂದಿಗೆ ಮಾತನಾಡಿರುವ ವಿದೇಶೀ ಆಟಗಾರರು, ತಮಗೆ ಪಿಎಸ್ಎಲ್ನ ಕ್ಲಿಷ್ಟಕರ ಕ್ರಿಕೆಟ್ನಲ್ಲಿ ಆಡುವುದರಿಂದ ತಮ್ಮ ಆಟದ ಗುಣಮಟ್ಟ ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ. ವಿದೇಶೀ ಆಟಗಾರರನ್ನು ಸೆಳೆಯಬಲ್ಲ ಒಳ್ಳೆಯ ಗುಣಮಟ್ಟದ ಬೌಲರ್ಗಳನ್ನ ಹೊಂದಿರುವುದು ಪಿಎಸ್ಎಲ್ನ ಅದೃಷ್ಟವಾಗಿದೆ. ಈ ಲೀಗ್ನಲ್ಲಿ ಬಹಳಷ್ಟು ವೃತ್ತಿಪರತೆಯೂ ಇದೆ. ಈ ವಿಚಾರದಲ್ಲಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹಾಗೂ ಪಿಎಸ್ಎಲ್ನ ಎಲ್ಲಾ ಫ್ರಾಂಚೈಸಿಗಳ ಪಾತ್ರ ಹೆಚ್ಚು. ಈ ಲೀಗ್ ನಿಂದ ಪಾಕಿಸ್ತಾನ ಕ್ರಿಕೆಟ್ಗೆ ಬಹಳಷ್ಟು ಅನುಕೂಲತೆ ಆಗುತ್ತಿದೆ. ಪಿಎಸ್ಎಲ್ನಿಂದ ಹೊರಹೊಮ್ಮುತ್ತಿರುವ ಬಹಳಷ್ಟು ಪ್ರತಿಭೆಗಳ ಆಯ್ಕೆ ರಾಷ್ಟ್ರೀಯ ತಂಡಕ್ಕೆ ಇದೆ. ಪಿಎಸ್ಎಲ್ನಿಂದ ಪಾಕಿಸ್ತಾನಕ್ಕೆ ಸೂಪರ್ ಸ್ಟಾರ್ಗಳು ದೊರಕಬಹುದು” ಎಂದು ಮುಷ್ತಾಕ್ ಬಣ್ಣಿಸಿದ್ದಾರೆ.
ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಒಟ್ಟು ಆರು ಫ್ರಾಂಚೈಸಿಗಳಿವೆ. ಇತ್ತೀಚೆಗೆ ಮುಕ್ತಾಯಗೊಂಡ ಈ ಬಾರಿಯ ಟೂರ್ನಿಯಲ್ಲಿ ಮೊಹಮ್ಮದ್ ರಿಜ್ವಾನ್ ನೇತೃತ್ವದ ಮುಲ್ತಾನ್ ಸುಲ್ತಾನ್ಸ್ ತಂಡವು ವಹಾಬ್ ರಿಯಾಜ್ ನೇತೃತ್ವದ ಪೇಶಾವರ್ ಝಾಲ್ಮಿ ತಂಡವನ್ನು ಫೈನಲ್ನಲ್ಲಿ 47 ರನ್ಗಳಿಂದ ಸೋಲಿಸಿ ಚಾಂಪಿಯನ್ ಎನಿಸಿದೆ.
ಭಾರತದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ನಾವು ಪ್ರಮುಖವಾಗಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ ದೇಶಗಳ ಆಟಗಾರರು ಪ್ರಮುಖವಾಗಿ ಕಾಣಸಿಗುತ್ತಾರೆ. ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲೂ ಈ ದೇಶಗಳ ಆಟಗಾರರು ಪಾಲ್ಗೊಳ್ಳುತ್ತಾರೆ. ಬಾಂಗ್ಲಾದೇಶ, ಆಫ್ಘಾನಿಸ್ತಾನದಿಂದಲೂ ಹಲವು ಆಟಗಾರರನ್ನು ಪಿಎಸ್ಎಲ್ನಲ್ಲಿ ನೋಡಬಹುದು.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ