Babar Azam - ಕೊಹ್ಲಿ ಹಿಂದಿಕ್ಕಿದ ಬಾಬರ್ ಅಜಂ ಮತ್ತೊಂದು ಮೈಲಿಗಲ್ಲು; ಪಾಕಿಸ್ತಾನದಿಂದ ರೆಕಾರ್ಡ್ ಚೇಸಿಂಗ್

ಪಾಕಿಸ್ತಾನದ ಟಿ20 ಕ್ರಿಕೆಟ್ ತಂಡದ ಕ್ಯಾಪ್ಟನ್ ಬಾಬರ್ ಅಜಂ ಅವರ ಭರ್ಜರಿ ಶತಕದ ಸಹಾಯದಿಂದ ಪಾಕಿಸ್ತಾನ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ 203 ರನ್​ಗಳ ಮೊತ್ತವನ್ನು ಚೇಸ್ ಮಾಡಿ ಗೆದ್ದಿದೆ.

ಬಾಬರ್ ಅಜಂ

ಬಾಬರ್ ಅಜಂ

 • Share this:
  ಪಾಕಿಸ್ತಾನದ ಬಾಬರ್ ಅಜಂ ಅವರ ರನ್ ಓಟ ಮುಂದುವರಿದಿದೆ. ಏಕದಿನ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ ಅವರನ್ನ ವಿಶ್ವದ ನಂಬರ್ ಒನ್ ಸ್ಥಾನದಿಂದ ಕೆಳಗಿಳಿಸಿದ್ದ ಪಾಕಿಸ್ತಾನದ ಈ ಕ್ರಿಕೆಟಿಗ ತನ್ನ ರನ್ ದಾಹವನ್ನು ಟಿ20 ಕ್ರಿಕೆಟ್​ನಲ್ಲೂ ಮುಂದುವರಿಸಿದ್ದಾರೆ. ನಿನ್ನೆ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20 ಕ್ರಿಕೆಟ್ ಪಂದ್ಯದಲ್ಲಿ ಬಾಬರ್ ಅಝಂ ಭರ್ಜರಿ ಶತಕ ದಾಖಲಿಸಿದ್ದಾರೆ. ಇದು ಅವರ ಚೊಚ್ಚ ಟಿ20 ಶತಕವಾಗಿದೆ. ಈ ಪಂದ್ಯದಲ್ಲಿ ಬಾಬರ್ ಶತಕದ ಸಹಾಯದಿಂದ ಪಾಕಿಸ್ತಾನವು ದಕ್ಷಿಣ ಆಫ್ರಿಕಾದ 204 ರನ್ ಗುರಿಯನ್ನು ಸುಲಭವಾಗಿ ಹೊಸಕಿಹಾಕಿತು.

  ಇದು ಪಾಕಿಸ್ತಾನದ ಗರಿಷ್ಠ ರನ್ ಚೇಸಿಂಗ್ ಎನಿಸಿದೆ. ಒಂದೇ ಸರಣಿಯಲ್ಲಿ ಎರಡು ಬಾರಿ ಪಾಕಿಸ್ತಾನ ಚೇಸಿಂಗ್ ದಾಖಲೆ ಸ್ಥಾಪಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಈ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 189 ರನ್ ಗುರಿಯನ್ನು ಪಾಕಿಸ್ತಾನ ಯಶಸ್ವಿಯಾಗಿ ಬೆಂಬತ್ತ ಗೆದ್ದಿತ್ತು. ಆಗ ಅದು ಹೊಸ ದಾಖಲೆಯಾಗಿತ್ತು. ಇದೀಗ ಮೂರನೇ ಪಂದ್ಯದಲ್ಲಿ ಆ ದಾಖಲೆಯನ್ನೂ ಪಾಕಿಸ್ತಾನ ಮುರಿದುಹಾಕಿದೆ.

  ಈ ರೆಕಾರ್ಡ್ ಚೇಸಿಂಗ್​ನಲ್ಲಿ ಬಾಬರ್ ಅಜಂ 122 ರನ್ ಗಳಿಸಿದರು. ಇದು ಅವರ ಮೊದಲ ಟಿ20 ಶತಕ ಆಗಿದೆ. ಹಾಗೆಯೇ, ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಪಾಕ್ ಆಟಗಾರ ಎನಿಸಿದ್ದಾರೆ. 2014ರಲ್ಲಿ ಅಜೇಯ 111 ರನ್ ಗಳಿಸಿ ಅಹ್ಮದ್ ಶೆಹಜಾದ್ ಸ್ಥಾಪಿಸಿದ್ದ ದಾಖಲೆಯನ್ನು ಬಾಬರ್ ಮುರಿದಿದ್ದಾರೆ. ಹಾಗೆಯೇ, ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆ ಅವರದ್ದು.

  ಇದನ್ನೂ ಓದಿ: IPL 2021: ಶಭಾಷ್ ಶಹಬಾಜ್: SRH ವಿರುದ್ದ ಗೆದ್ದು ಬೀಗಿದ RCB

  ಟಿ20 ಕ್ರಿಕೆಟ್​ನಲ್ಲಿ ಚೇಸಿಂಗ್ ವೇಳೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಬಾಬರ್ ಅಜಂ ಅವರದ್ದು ಎರಡನೇ ಸ್ಥಾನ. ಆದರೆ, ಚೇಸಿಂಗ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕ್ಯಾಪ್ಟನ್​ಗಳ ಪಟ್ಟಿಯಲ್ಲಿ ಅವರು ಮೊದಲಿಗರಾಗಿದ್ಧಾರೆ.

  ದಕ್ಷಿಣ ಆಫ್ರಿಕಾ ವಿರುದ್ಧದ ಈ ಪಂದ್ಯದಲ್ಲಿ ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ಅವರು ಮೊದಲ ವಿಕೆಟ್​ಗೆ 197 ರನ್ ಜೊತೆಯಾಟ ಆಡಿದ್ದಾರೆ. ಇದು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯದ ಚೇಸಿಂಗ್​ನಲ್ಲಿ ಅತಿ ಹೆಚ್ಚು ಜೊತೆಯಾಟ ಎಂಬ ದಾಖಲೆ ಇವರದ್ದಾಗಿದೆ.

  ದಕ್ಷಿಣ ಆಫ್ರಿಕಾದ ಕ್ರಿಕೆಟ್ ಪ್ರವಾಸದಲ್ಲಿ ಪಾಕಿಸ್ತಾನ ಏಕದಿನ ಕ್ರಿಕೆಟ್ ಸರಣಿಯನ್ನು 2-1ರಿಂದ ಗೆದ್ದಿದೆ. ಟಿ20 ಸರಣಿಯಲ್ಲಿ 2-1ರಿಂದ ಮುಂದಿದೆ. ಇನ್ನೊಂದು ಪಂದ್ಯ ಬಾಕಿ ಇದೆ.
  Published by:Vijayasarthy SN
  First published: